‘ಮಯೂರ’ ಹಾಸ್ಯ - ಭಾಗ ೯೪

‘ಮಯೂರ’ ಹಾಸ್ಯ - ಭಾಗ ೯೪

ಪೆಟ್ರೋಲ್

ಪೆಟ್ರೋಲ್ ಪಂಪಿನಲ್ಲಿ ಒಬ್ಬ ಹುಡುಗಿ ಸಾಲಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ನಿಂತಿದ್ದಳು. ಪೆಟ್ರೋಲ್ ಪಂಪಿನ ಹುಡುಗ ಅವಳನ್ನು ನೋಡಿ ಪದೇ ಪದೇ ನಗ್ತಾ ಇದ್ದ. ಸನ್ನೆ ಮೂಲಕ ಏನೋ ಹೇಳಲು ಪ್ರಯತ್ನಿಸುತ್ತಿದ್ದ. ಹುಡುಗಿಗೆ ನಾಚಿಕೆ. ಅವನು ನೋಡಿದಾಗಲೆಲ್ಲಾ ಆಕೆ ತಲೆ ಕೆಳಗೆ ಹಾಕುತ್ತಿದ್ದಳು. ಕೊನೆಯಲ್ಲಿ ಹುಡುಗಿಯ ಪಾಳಿ ಬಂತು. ನಾಚುತ್ತಲೇ ಅವನ ಕಡೆಗೆ ನೋಡಿದಳು. ಆಗ ಕಡೆಯದಾಗಿ ಹುಡುಗ ಮಾತನಾಡಿದ, ‘ಆಗಲಿಂದ ಹೇಳ್ತಾ ಇದ್ದೀನಿ. ನಿಮ್ದು ಇಲೆಕ್ಟ್ರಿಕ್ ಸ್ಕೂಟಿ, ಇಲ್ಯಾಕೆ ನಿಂತಿದ್ದೀರಿ ಅಂತ…!’

-ಅನುಪಮಾ ವಸ್ತ್ರದ್

***

ರುಜುವಾತು

ಕಾಡಿನ ನಡುವೆ ಒಂದು ದಷ್ಟಪುಷ್ಟವಾದ ಕೋಣ ಗಾಬರಿಯಿಂದ ಓಡೋಡಿ ಬರುತ್ತಿತ್ತು. ಅದರ ಎದುರು ಬಂದ ಇಲಿ, ‘ಯಾಕಣ್ಣಾ? ಈ ರೀತಿ ಗಾಬರಿಗೊಂಡು ಓಡ್ತಾ ಇದ್ದೀಯಾ?’ ಎಂದು ಕೇಳಿತು. ಕೋಣ ‘ಅಯ್ಯೋ,,, ಓಡಿ, ಓಡಿ.. ಪೋಲೀಸರು ಆನೆಯನ್ನು ಹಿಡಿಯಲು ಬರುತ್ತಿದ್ದಾರೆ.’ ಎಂದಾಗ ಇಲಿ ಬಿದ್ದೂ ಬಿದ್ದು ನಗಲಾರಂಭಿಸಿತು. ಕೋಣ, ‘ಅದಕ್ಕೆ ಯಾಕಯ್ಯಾ ಹೀಗೆ ನಗ್ತಿದ್ದಿ?’ ಎಂದು ಕೇಳಿದಾಗ ಇಲಿ, ‘ಅವರು ಆನೆ ಹಿಡಿಯಲು ಬರುತ್ತಿದ್ದಾರೆ… ನೀನೇನು ಆನೆನಾ? ನೀ ಯಾಕೆ ಓಡ್ತಾ ಇದ್ದೀಯಾ? ಅಲ್ಲದೇ ನನಗೂ ಓಡಲು ಹೇಳ್ತಾ ಇದ್ದೀಯಲ್ಲಾ?’ ಎಂದು ಪ್ರಶ್ನಿಸಿತು. ಕೋಣ ‘ಅಯ್ಯೋ ಮಿತ್ರಾ ಒಮ್ಮೆ ಅವರೇನಾದ್ರೂ ಅಪ್ಪಿತಪ್ಪಿ ನನ್ನನ್ನು ಹಿಡಿದು ಜೈಲಿಗೆ ಹಾಕಿ ಬಿಟ್ಟರೆ , ಆಮೇಲೆ ನಾನು ಆನೆ ಅಲ್ಲ ಕೋಣ ಅಂತ ರುಜುವಾತು ಪಡಿಸಲು ಕನಿಷ್ಟ ಇಪ್ಪತ್ತು ವರ್ಷ ಹೋರಾಡಬೇಕಾಗುತ್ತದೆ. ನಿನ್ನ ಕಥೆಯೂ ಅಷ್ಟೇ..’ ಎಂದೆನ್ನುತ್ತ ಅಲ್ಲಿಂದ ಓಡಿ ಹೋಯಿತು.

-ಅರವಿಂದ ಜಿ ಜೋಷಿ

***

ಒಂದು ಪ್ರಶ್ನೇನೂ ಬಿಡದಂಗೆ ಬರಿಬೇಕು

ಸಮಾಜ ವಿಜ್ಞಾನದ ಮೇಷ್ಟ್ರು ಒಂಬತ್ತನೆ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಬರೆದಿದ್ದ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಿದ್ದರು. ಅವುಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು. ಮುರುಳಿಯ ಉತ್ತರ ಪತ್ರಿಕೆ ನೀಡುತ್ತಾ, ‘ಲೇ, ಮುರುಳಿ ಕೊನೆಯಲ್ಲಿ ಆರು ಪ್ರಶ್ನೆಗಳಿಗೆ ಉತ್ತರ ಬರೆಯುವ ಬದಲು ಪ್ರಶ್ನೆಗಳನ್ನೇ ಬರೆದಿದ್ದೀಯಲ್ಲ, ಯಾಕೋ? ‘ ಎಂದರು. ಮುರುಳಿ, ‘ಸರಸ್ವತಿ ಪೂಜೆಯಲ್ಲಿ ನೀವೇ ಹೇಳಿದ್ರಿ ಸರ್, ಪರೀಕ್ಷೇಲಿ ಒಂದ್ ಪ್ರಶ್ನೇನೂ ಬಿಡದಂಗೆ ಬರೀಬೇಕು ಅಂತ’ ಅಂದ.

-ಮಲ್ಲಿಕಾರ್ಜುನ ಸುರಧೇನುಪುರ

***

ನಾಯಿ ತಿನ್ತು ಅನ್ತೇನೆ !

ಹೊಸದಾಗಿ ಶಾಲೆಗೆ ಬಂದ ಯುಕೆಜಿ ಮಗು ಶಾಲೆಯಲ್ಲಿ ಊಟ ಮಾಡಲು ತುಂಬಾ ಹಟ ಮಾಡುತ್ತಿತ್ತು. ಮೇಷ್ಟ್ರು ಚೂಟಿ ಮಗುವನ್ನು ಮಾತನಾಡಿಸುತ್ತಾ, ‘ಊಟಕ್ಕೆ ಏನು ತಂದಿದ್ದೀಯಾ?’ ಎಂದು ಕೇಳಿದರು. ‘ಅಮ್ಮ ಏನು ಕಟ್ಟಿದ್ದಾರೂ ಗೊತ್ತಿಲ್ಲ’ ಎಂದಿತು ಮಗು. ‘ಅಮ್ಮ ಏನು ಕಟ್ಟಿದ್ದಾರೆ ನೋಡೋಣ?’ ಎನ್ನುತ್ತ ಡಬ್ಬಿಯನ್ನು ಬಿಚ್ಚಿ ನೋಡಿದರು. ಚಿತ್ರಾನ್ನ ಇತ್ತು. ‘ಓ… ಚಿತ್ರಾನ್ನ ಇದೆ ! ನಾನು ತಿನ್ನಲಾ?’ ಎಂದು ಕೇಳಿದರು. ‘ತಿನ್ನಿ’ ಎಂದು ಮಗು ಹೇಳಿತು. ‘ಕೇಳಿದ ತಕ್ಷಣ ಕೊಟ್ಟುಬಿಟ್ಟೆ ಅಲ್ಲ. ನಿನಗೆ ಬೇಡವಾ?’ ಎಂದರು. ‘ನನಗೆ ಹಸಿವೆ ಇಲ್ಲ. ಮನೆಗೆ ಹೋಗಿ ತಿಂತೀನಿ’ ಅಂದಳು. ‘ಅದೇನೋ ಸರಿ, ಆದ್ರೆ ಊಟಾನಾ ಮೇಷ್ಟ್ರಿಗೆ ಕೊಟ್ಟೆ ಅಂತ ಹೇಳಿದ್ರೆ ನಿಮ್ಮ ಅಮ್ಮ ಬೈಯಲ್ವಾ? ಆಗೇನು ಮಾಡ್ತೀಯಾ?’ ಕೇಳಿದರು. ಮಗು, ‘ಹೋಗಿ ಸರ್, ನಂಗೆ ಅಷ್ಟೂ ಗೊತ್ತಾಗಲ್ವಾ? ಅಮ್ಮ ಕೇಳಿದ್ರೆ ನಾಯಿ ಬಂದು ಊಟಾನೆಲ್ಲ ತಿಂದು ಹೋಯ್ತು ಅಂದ್ಬಿಡ್ತೀನಿ’ ಎಂದು ಹೇಳಿತು.

-ಪ. ರಾಮಕೃಷ್ಣ ಶಾಸ್ತ್ರಿ

(ಮಯೂರ ಜೂನ್ ೨೦೨೩ರ ಸಂಚಿಕೆಯಿಂದ ಆಯ್ದದ್ದು)