‘ಸಂಪದ’ ನಗೆಬುಗ್ಗೆ - ಭಾಗ ೧೩೨

‘ಸಂಪದ’ ನಗೆಬುಗ್ಗೆ - ಭಾಗ ೧೩೨

ಡಾರ್ಲಿಂಗ್ ಡಾರ್ಲಿಂಗ್

ಹೋಟೇಲ್ ಟೇಬಲ್ ಒಂದರ ಎದುರು ಬದಿಯಲ್ಲಿ ಒಂದು ಕಡೆ ನವ ದಂಪತಿ. ಮತ್ತೊಂದು ಕಡೆ ಎಂಬತ್ತರ ಆಜೂಬಾಜು ವಯಸ್ಸಿನ ದಂಪತಿ ಊಟಕ್ಕೆ ಕುಳಿತಿದ್ದರು. ವಯಸ್ಸಾದ ಗಂಡ, ಹೆಂಡತಿಗೆ ಪದೇ ಪದೆ ‘ಡಾಲಿಂಗ್, ಡಾರ್ಲಿಂಗ್’ ಎಂದು ಕರೆಯುತ್ತಿದ್ದ. ಇದನ್ನು ಗಮನಿಸಿದ ನವದಂಪತಿ ಈ ವಯಸ್ಸಿನಲ್ಲೂ ಅಜ್ಜನಿಗೆ ತನ್ನ ಹೆಂಡತಿಯ ಮೇಲೆ ಎಷ್ಟೊಂದು ಪ್ರೀತಿ. ಹೆಂಡತಿಯನ್ನು ಹೆಸರಿನಿಂದ ಕರೆಯದೇ ‘ಡಾರ್ಲಿಂಗ್ ಡಾರ್ಲಿಂಗ್’ ಎಂದು ಕರೆಯುತ್ತಿದ್ದಾರಲ್ಲಾ ಎಂದು ಖುಷಿ ಪಟ್ಟರು.

ಅಜ್ಜ ಮತ್ತು ಯುವಕ ಇಬ್ಬರೂ ಒಮ್ಮೆಲೆ ಕೈತೊಳೆಯಲು ವಾಶ್ ಬೇಸಿನ್ ಹತ್ತಿರ ಹೋದರು. ಆಗ ಯುವಕ ಅಜ್ಜನನ್ನು ಉದ್ದೇಶಿಸಿ ‘ಸಾರ್, ನಿಮ್ಮ ಹೆಂಡತಿಯ ಮೇಲೆ ಎಷ್ಟೊಂದು ಪ್ರೀತಿ ಇದೆ. ಈ ವಯಸ್ಸಿನಲ್ಲೂ ಡಾರ್ಲಿಂಗ್ ಎಂದು ಕರೆಯುತ್ತೀರಿ’ ಎಂದ. ಆಗ ಅಜ್ಜ ‘ಅಯ್ಯೋ ಎಲ್ಲಿಯ ಪ್ರೀತಿ ಮಾರಾಯ. ಕಳೆದ ಹತ್ತು ವರ್ಷದಿಂದ ಹಾಳಾದ ಮರೆವು ಬಂದು ಅವಳ ಹೆಸರೇ ಮರೆತು ಹೋಗಿದೆ. ಆಗಿನಿಂದಲೂ ಡಾರ್ಲಿಂಗ್, ಡಾರ್ಲಿಂಗ್ ಎಂದು ಕರೆಯುತ್ತಿದ್ದೇನೆ’ ಎಂದಾಗ ಯುವಕ ‘ಭಲೇ ಕಿಲಾಡಿ ತಾತ’ ಎಂದು ನಕ್ಕ.

***

ಅಪ್ಪನ ಥರ ಆಗ್ತೀನಿ !

ಹೊಸದಾಗಿ ಮದುವೆಯಾಗಿದ್ದ ಸೂರಿಯನ್ನು ತಾಯಿ ಭಾಗ್ಯಮ್ಮ ಕರೆದು ‘ನೋಡು ಸೂರಿ ನೀನು ಹೆಂಡತಿ ಹೇಳಿದ ಹಾಗೆ ಕುಣಿದರೆ ಮುಂದೆ ಏನಾಗುತ್ತದೆ ಎಂದು ಗೊತ್ತಾ ನಿನಗೆ?’ ಎಂದು ಕೇಳಿದಳು. 

ಅದಕ್ಕೆ ಅವನು ‘ಅದು ನನಗೆ ಚೆನ್ನಾಗಿ ಗೊತ್ತು ಅಮ್ಮ’ ಎಂದ.

‘ಅಲ್ಲ ಕಣೋ, ಈ ಬಗ್ಗೆ ನಿನಗೆ ಏನು ಗೊತ್ತು?’ ಎಂದು ತಾಯಿ ಮರು ಪ್ರಶ್ನಿಸಿದಾಗ, ಮಗ ಸೂರಿ ‘ಅದೇ ಅಮ್ಮ, ನಾನು ಥೇಟ್ ಅಪ್ಪನ ಥರ ಆಗ್ತೀನಿ ಅಷ್ಟೇ’ ಎಂದು ನೇರವಾಗಿಯೇ ಉತ್ತರ ಕೊಟ್ಟ. ಮಗನ ಮಾತು ಕೇಳಿ ತಾಯಿ ತಬ್ಬಿಬ್ಬಾದಳು.

***

ಪಾಠ

ಶಿಕ್ಷಕ: ‘ನೀವು ಎಷ್ಟು ದುಡ್ಡು ಕೇಳ್ತಿರೋ ಅಷ್ಟು ದುಡ್ಡು ಕೊಡ್ತೀನಿ. ದಯವಿಟ್ಟು ರಾತ್ರಿ ಊಟದ ಬಳಿಕ ನಮ್ಮ ಮನೆಗೆ ಬಂದು ನನ್ನ ಮಗನಿಗೆ ಪಾಠ ಮಾಡಿ ಮೇಷ್ಟ್ರೇ.’ ಅಂತ ಯಾಕ್ರೀ ನನ್ನ ಹತ್ರ ಅಷ್ಟೊಂದು ಬೇಡ್ಕೋತೀರಾ?

ಸೂರಿ: ನನ್ನ ಮಗನಿಗೆ ನಿಮ್ಮ ಪಾಠ ಕೇಳಿದ್ರೇನೇ ನಿದ್ದೆ ಬರೋದ್ದಂತೆ ಮೇಷ್ಟ್ರೇ. ಇಲ್ದೇ ಹೋದ್ರೆ ನಿದ್ದೆ ಇಲ್ಲದೆ ನರಳಾಡುತ್ತಾನೆ.

***

ಅನುಭವ

ಅಪ್ಪ: ನೀನು ಪ್ರೀತಿಸಿದ ಹುಡುಗನಿಗೆ ಯಾವ ಕೆಲಸಾನೂ ಇಲ್ಲ ಅಂತಿಯಲ್ಲ, ಹೋಗ್ಲಿ, ನಾನೇ ಒಂದು ಅಂಗಡಿ ಇಟ್ಟು ಕೊಡುತ್ತೇನೆ. ಅವನಿಗೆ ಮಾರಾಟದ ಬಗ್ಗೆ ಏನಾದ್ರೂ ಅನುಭವ ಇದ್ಯಾ?

ಮಗಳು: ಹೂಂ ಕಣಪ್ಪ. ಅವ್ರ ಅಮ್ಮನ ಒಡವೆ, ಅಪ್ಪನ ಮನೆ, ತಮ್ಮನ ಬೈಕ್, ಮೊಬೈಲ್, ಕಾರು ಎಲ್ಲವನ್ನೂ ಅವ್ರಿಗೆ ಗೊತ್ತಿಲ್ಲದ ಹಾಗೆ ಮಾರಾಟ ಮಾಡಿದ ಅನುಭವ ಇದೆ.

***

ಮದುವೆ

ಚಿಕ್ಕಪ್ಪ: ಹುಡುಗ ತುಂಬಾ ಒಳ್ಳೆಯವನು. ಸಬ್ ಇನ್ಸ್ ಪೆಕ್ಟರ್ ಕೆಲಸ ಬೇರೆ. ನೋಡೋಕೆ ಸುಂದರವಾಗಿದ್ದಾನೆ. ಆದ್ರೂ ಮದುವೆ ಆಗಲ್ಲ ಅಂತಿಯಲ್ಲ ಯಾಕಮ್ಮ?

ಹುಡುಗಿ: ಅಪ್ಪ ಸಾಯುವಾಗ, ‘ಮಗಳೆ, ಏನೇ ಆಗ್ಲಿ, ಪೋಲೀಸ್ ಮೆಟ್ಟಿಲು ಹತ್ತಿದವನನ್ನು ಮಾತ್ರ ಮದುವೆ ಆಗಬೇಡ’ ಅಂತ ಹೇಳಿದ್ರು ಚಿಕ್ಕಪ್ಪ.

***

(ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ