‘ಸಂಪದ' ನಗೆ ಬುಗ್ಗೆ - ಭಾಗ ೬೩

‘ಸಂಪದ' ನಗೆ ಬುಗ್ಗೆ - ಭಾಗ ೬೩

ವಿಮಾನ ಪ್ರಯಾಣ

ಗಾಂಪನ ಅಜ್ಜಿಗೆ ಅದು ಮೊದಲ ವಿಮಾನ ಪ್ರಯಾಣ. ಪ್ರಯಾಣದ ಎಲ್ಲಾ ಹಂತಗಳಲ್ಲೂ ಆಕೆಯದ್ದು ಭಯಮಿಶ್ರಿತ ಕುತೂಹಲ. ವಿಮಾನ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲೇ ಆಕೆ ಗಗನಸಖಿಯನ್ನು ಕರೆದಳು.

“ಎಸ್ ಮೇಡಮ್, ಹೇಳಿ" ಸೌಜನ್ಯದಿಂದ ಕೇಳಿದಳು ಗಗನಸಖಿ.

“ಏನ್ ಹೇಳೋದು? ನನ್ನ ಕಿವಿಯೊಳಗೆ ಗುಂಯ್... ಅಂತ ಸದ್ದಾಗುತ್ತಿದೆ. ಭಾಳ ವಿಚಿತ್ರ ಅನ್ನಿಸುತ್ತಿದೆ. ತಲೆನೋವು ಶುರುವಾಗಿದೆ. ಇದನ್ನು ನಿಲ್ಸೋದು ಹೇಗೆ? ಅಂದಳು ಅಜ್ಜಿ. ಗಗನ ಸಖಿ ನಕ್ಕು ತನ್ನ ಬ್ಯಾಗಿನಿಂದ ಒಂದು ಬಬಲ್ ಗಮ್ ತೆಗೆದು ಅಜ್ಜಿಯ ಕೈಗೆ ಹಾಕಿ ಹೇಳಿದಳು: “ಇದು ವಿಮಾನದಲ್ಲಿ ಪ್ರಯಾಣಿಸುವ ಬಹಳಷ್ಟು ಜನರಿಗೆ ಆಗುವ ಅನುಭವ ಮೇಡಮ್, ನೀವೇನೂ ಹೆದರಬೇಕಾಗಿಲ್ಲ, ಇದು ತಕೊಳಿ, ಆರಾಮ ಅನಿಸುತ್ತೆ"

ಗಗನ ಸಖಿಯ ಸಲಹೆ ಕೆಲಸ ಮಾಡಿತು. ಪ್ರಯಾಣದುದ್ದಕ್ಕೂ ಅಜ್ಜಿ ಕಡೆಯಿಂದ ಯಾವ ತಕರಾರೂ ಬರಲಿಲ್ಲ. ವಿಮಾನ ನೆಲ ಮುಟ್ಟಿದ ಮೇಲೆ ಪ್ರಯಾಣಿಕರು ಇಳಿಯುವ ಸಮಯದಲ್ಲಿ ಅಜ್ಜಿ, ಆ ಗಗನಸಖಿಯ ಬಳಿ ಬಂದು “ತುಂಬಾ ಥ್ಯಾಂಕ್ಸ್, ನೀನು ಕೊಟ್ಟ ಬಬಲ್ ಗಮ್ ಅದ್ಭುತವಾದ ಕೆಲಸ ಮಾಡಿತು. ತಲೆನೋವೂ ಕಡಿಮೆ ಆಯ್ತು. ಈಗ ಬಬಲ್ ಗಮ್ ಅನ್ನು ಕಿವಿಯಿಂದ ಹೊರಗೆ ತೆಗೆಯೋದು ಹೇಗೆ?”

***

ಸಮಸ್ಯೆ ಎಲ್ಲಿದೆ?

ನಲವತ್ತು ವರ್ಷ ವಯಸ್ಸಿನ ಗಾಂಪ ಇಪ್ಪತ್ತು ವರ್ಷ ವಯಸ್ಸಿನ ತರುಣಿಯನ್ನು ಮದುವೆಯಾದದ್ದು ಊರೆಲ್ಲಾ ಚರ್ಚೆಯಾಗುತ್ತಿತ್ತು. ಯಾರೋ ಒಬ್ಬರು ನೇರವಾಗಿ ಗಾಂಪನನ್ನೇ ಕೇಳಿದರು. ‘ಅಲ್ಲಾ ಮಾರಾಯ, ಇಷ್ಟೊಂದು ವಯಸ್ಸಿನ ಅಂತರವನ್ನಿಟ್ಟುಕೊಂಡು ಸಂಸಾರ ಹೇಗೆ ನಡೆಸುತ್ತೀಯಾ?’

“ಅದರಲ್ಲೇನು ದೊಡ್ದ ಸಮಸ್ಯೆ? ಅವಳು ನನ್ನನ್ನು ನೋಡಿದಾಗಲೆಲ್ಲಾ ತನಗೂ ಹತ್ತು ವರ್ಷ ಹೆಚ್ಚು ವಯಸ್ಸಾಗಿದೆ ಅಂದುಕೊಳ್ಳುತ್ತಾಳೆ. ನಾನು ಅವಳನ್ನು ನೋಡಿದಾಗೆಲ್ಲಾ ನನಗೆ ಹತ್ತು ವರ್ಷ ಕಡಿಮೆ ವಯಸ್ಸಾಗಿದೆ ಅಂದುಕೊಳ್ತೇನೆ. ಹಾಗಾಗಿ ಇಬ್ಬರ ವಯಸ್ಸೂ ಮೂವತ್ತು ಅಷ್ಟೇ” ಎಂದು ಸಮಸ್ಯೆಯನ್ನು ಪರಿಹರಿಸಿದ ಗಾಂಪ.

***

ಚಾಲಾಕಿತನ

ಮನೆ ಕಟ್ಟುವ ಸಲುವಾಗಿ ಅರ್ಜಿ ಹಾಕಿದ್ದು, ಬಹಳ ಅನಿರೀಕ್ಷಿತವಾಗಿ ಸಾಲ ಮಂಜೂರಾಗಿ, ಮನೆ ಕಟ್ಟಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡ ಗಾಂಪನಿಗೆ, ಸ್ವತಃ ಮೇಲ್ವಿಚಾರಣೆ ನಡೆಸಲು ಎರಡು ತಿಂಗಳಾದರೂ ರಜೆ ಬೇಕಿತ್ತು. ಎಲ್ಲ ರಜೆಗಳೂ ಮುಗಿದು ಹೋಗಿದ್ದವು. ಯೋಚಿಸಿ ಯೋಚಿಸಿ ಹಣ್ಣಾದ. ‘ಸರ್ವಿಸ್ ಮ್ಯಾಟರ್ಸ್' ಪ್ರಕರಣಗಳನ್ನೆಲ್ಲಾ ತಿರುವಿ ಹಾಕಿದ.

ಮರುದಿನ ಗಾಂಪ ಕಚೇರಿಗೆ ಬಂದಾಗ ೧೨ ಗಂಟೆ. ಹಾಜರಿ ಪುಸ್ತಕ ಸಾಹೇಬರ ಟೇಬಲ್ಲಿನ ಮೇಲಿತ್ತು. ಅಲ್ಲಿಯೇ ರುಜು ಹಾಕಲು ಹೋದ ಗಾಂಪನ ಮೇಲೆ ಸಿಕ್ಕಾಪಟ್ಟೆ ರೇಗಿದ ಸಾಹೇಬರು, ಕಡೆಗೆ ತಡವಾಗಿದ್ದುದಕ್ಕೆ ಕಾರಣ ಕೇಳಿದರು. ಅಲ್ಲಿಯವರೆಗೆ ಸುಮ್ಮನೆ ನಿಂತಿದ್ದ ಗಾಂಪ, ಕೂಡಲೇ ಎಡಗಾಲ ಚಪ್ಪಲಿ ಕೈಗೆತ್ತಿಕೊಂಡ. ಬೆವೆತ ಸಾಹೇಬರು ಏಟು ಬೀಳುವ ಮೊದಲೇ ಅಲ್ಲಿಂದ ಓಡಿ ಹೊರಗೆ ಹೋದ. ಗಾಂಪನನ್ನು ಕೂಡಲೇ ಸಸ್ಪಂಡ್ ಮಾಡಲಾಯಿತು.

ಇಲಾಖಾ ವಿಚಾರಣೆ ಪ್ರಾರಂಭವಾಗುವ ವೇಳೆಗೆ ಮೂರು ತಿಂಗಳು ಕಳೆಯುತ್ತಾ ಬಂದಿತ್ತು. ಅಷ್ಟರವರೆಗೂ ಸಸ್ಪೆಂಡ್ ನಲ್ಲಿದ್ದ ಗಾಂಪನ ಮನೆ ಮುಕ್ತಾಯ ಘಟ್ಟಕ್ಕೆ ಬಂದಿತ್ತು. ವಿಚಾರಣೆ ಪ್ರಾರಂಭವಾಯಿತು. ಗಾಂಪನ ಮೇಲಿದ್ದ ಚಾರ್ಜು ಮೇಲಧಿಕಾರಿಗಳಿಗೆ ಚಪ್ಪಲಿಯಲ್ಲಿ ಹೊಡೆಯಲು ಹೋಗಿದ್ದ ಅಸಭ್ಯ ನಡತೆ. ಗಾಂಪನ ಉತ್ತರ ಹೀಗಿತ್ತು. “ಚಪ್ಪಲಿ ಎತ್ತಿಕೊಂಡದ್ದು ನಿಜ. ಆದರೆ ಅದಕ್ಕೆ ಕಾರಣ ಇಷ್ಟೇ. ಆ ದಿನ ಬಸ್ಸು ಹೊರಡುವ ವೇಳೆಗೆ ಓಡೋಡಿ ಬಂದುದರಿಂದ ಉಂಗುಷ್ಟ ಕಿತ್ತು ಹೋಗಿತ್ತು, ಕಾರ್ಪೋರೇಷನ್ ಬಳಿ ಇಳಿದು ರಿಪೇರಿ ಮಾಡಿಸಿ, ನಡೆದುಕೊಂಡು ಬಂದಾಗ ತಡವಾಗಿತ್ತು. ಸಾಹೇಬರು ನನಗೆ ಮಾತನಾಡಲೂ ಅವಕಾಶ ಕೊಡದೇ ಸಿಕ್ಕಾಪಟ್ಟೆ ರೇಗಿದರು. ಕಡೆಗೆ ಕಾರಣ ಕೇಳಿದರು. ಅದನ್ನು ವಿವರಿಸಲು ಚಪ್ಪಲಿ ಕೈಗೆತ್ತಿಕೊಂಡೆ ಅಷ್ಟೇ. “ ವಿವರಣೆ ನೀಡುವ ಮೊದಲೇ ಸಾಹೇಬರು ಸೀಟಿನಿಂದ ಜಿಗಿದು ಹೊರ ಹೋದರು. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ನಾನು ಮೇಲಧಿಕಾರಿಗಳಿಗೆ ಯಾವಾಗಲೂ ವಿಧೇಯನಾಗಿಯೇ ಇದ್ದೆ, ಇದ್ದೇನೆ, ಮುಂದೆಯೂ ಇರುತ್ತೇನೆ.

ವಿಚಾರಣೆ ಮುಂದುವರೆಸುವ ಅಗತ್ಯವೇ ಇರಲಿಲ್ಲ. ಸಸ್ಪೆಂಡ್ ಪಿರೇಡನ್ನು “ಡ್ಯೂಟಿ" ಎಂದು ಪರಿಗಣಿಸಿ ಗಾಂಪನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಮೂರು ತಿಂಗಳ ಸಂಬಳ ಒಟ್ಟಿಗೆ ತೆಗೆದುಕೊಂಡ ಗಾಂಪ ಭರ್ಜರಿ ‘ಗೃಹ ಪ್ರವೇಶ’ ನಡೆಸಿ, ಎಲ್ಲರಿಗೂ ಸಿಹಿ ಊಟ ಹಾಕಿಸಿದ. ಸಾಹೇಬರಿಗೆ ವಿಶೇಷ ಸತ್ಕಾರ ಮಾಡಿದ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ