‘ಸಂಪದ' ನಗೆ ಬುಗ್ಗೆ - ಭಾಗ ೯೭

‘ಸಂಪದ' ನಗೆ ಬುಗ್ಗೆ - ಭಾಗ ೯೭

ಪಾಪ ಪುಣ್ಯ

ವರ್ಷಾರಂಭದಲ್ಲಿ ಕನ್ನಡ ಮೇಷ್ಟ್ರು ಶಿವಶರಣರ ವಚನಗಳನ್ನು ಹೇಳಿಕೊಡಲು ಪ್ರಾರಂಭಿಸಿದರು. ಅವರು ಹೇಳಿಕೊಟ್ಟ ಮೊದಲ ವಚನ -

ಬಸವನೆಂದರೆ ಪಾಪ ಹೋಗುವುದಯ್ಯ

ಪುಣ್ಯ ಬಪ್ಪುದಯ್ಯ…

ಇದನ್ನೇ ಹತ್ತು ಬಾರಿ ಹೇಳುತ್ತಾ ಬಾಯಿಪಾಠ ಮಾಡಿ ಎನ್ನುತ್ತ ಬೇರೆ ಕೆಲಸದಲ್ಲಿ ಮಗ್ನರಾದರು. ಸ್ವಲ್ಪ ಹೊತ್ತಿನ ನಂತರ ಹಿಂದಿನ ಬೆಂಚಿನಲ್ಲಿ ಕೂತು ಗಲಾಟೆ ಮಾಡುತ್ತಿದ್ದ ಗಾಂಪನನ್ನು ಎಬ್ಬಿಸಿ ತಾವು ಹೇಳಿಕೊಟ್ಟ ವಚನವನ್ನು ಹೇಳಲು ಕೇಳಿದರು. ಆತ,

ಬಸವನೆಂದರೆ ಪಾಪ…

ಹೋಗುವುದಯ್ಯಾ... ಪುಣ್ಯ…

ಬಪ್ಪುವುದಯ್ಯಾ…

ಎಂದು ಒಂದೊಂದೇ ಸಾಲನ್ನು ನೆನಪಿಗೆ ತಂದುಕೊಂಡು ಹೇಳಿದ. ಎಲ್ಲರೂ ಗೊಳ್ಳೆಂದು ನಕ್ಕರು. ಅವನು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಓದುವಾಗ ಸಾಲುಗಳನ್ನು ಒಡೆದುಕೊಂಡು ಓದಿದ್ದು ಮಾತ್ರ ತಪ್ಪಾಗಿತ್ತು. ಅರ್ಥ ಅನರ್ಥವಾಗಿತ್ತು. ಅಷ್ಟೇ !

***

ಗ್ರೀಸ್ ಚಾಕಲೇಟ್

“ಅಪ್ಪಾ, ನೆರೆಮನೆ ಅಂಕಲ್ ಗ್ರೀಸ್ ಚಾಕಲೇಟ್ ಕೊಟ್ಟಿದ್ದಾರೆ. ಛೀ...ನನಗಂತೂ ಬೇಡಪ್ಪ" ಅಂತ ಹೇಳುತ್ತಾ ಮಗ ಮರಿ ಗಾಂಪ ಸಿಲ್ವರ್ ಕಲರ್ ಕವರಿನಲ್ಲಿದ್ದ ಅಷ್ಟೂ ಚಾಕಲೇಟ್ ಗಳನ್ನು ಕೈಗಿತ್ತನು. ಗಾಂಪನಿಗೂ ಶಾಕ್. ಆತ ಅಳುಕಿನಿಂದಲೇ ಅವುಗಳನ್ನೆಲ್ಲಾ ಎಡಗೈನಲ್ಲಿ ಹಿಡಿದು ಬಲಗೈನಿಂದ ನೆರೆಮನೆ ಅಂಕಲ್ ಗೆ ಫೋನ್ ಮಾಡಿ ಮರಿ ಗಾಂಪ ಹೇಳಿದ ಮಾತುಗಳನ್ನು ಹೇಳಿದನು. ಅದಕ್ಕೆ ಅವರು “ ನನ್ನ ಮಗಳು ತನ್ನ ಕಂಪೆನಿಯಿಂದ ಗ್ರೀಸ್ ದೇಶಕ್ಕೆ ಟ್ರೈನಿಂಗ್ ಹೋಗಿದ್ದಳು. ಅಲ್ಲಿಂದ ಬರುವಾಗ ಚಾಕಲೇಟ್ ತಂದಿದ್ದಳು. ಅದಕ್ಕೇ ಗ್ರೀಸ್ ಚಾಕಲೇಟ್ ಅಂತಾ ಕೊಟ್ಟಿದ್ದೆ” ಎಂದು ಹೇಳಿದರು!

***

ಯಾರ ಪಕ್ಕ?

ಗಾಂಪ: ನಿನ್ನ ಹೆಂಡತಿ ಮತ್ತು ನಿನ್ನ ತಾಯಿ ಯಾವಾಗಲೂ ಹೊಡೆದಾಡ್ತಾ ಇರುತ್ತಾರಲ್ಲಾ? ಆವಾಗ ನೀನು ಯಾರ ಪಕ್ಕ ನಿಂತುಕೊಳ್ಳುತ್ತೀಯಾ?

ಸೂರಿ: ಗೋಡೆ ಪಕ್ಕ !

***

ಊಟ

ಗಾಂಪ: ಏಕೋ, ನಿಂತುಕೊಂಡೇ ಊಟ ಮಾಡ್ರಿದೀಯಾ?

ಮರಿ ಗಾಂಪ: ಹೆಂಡ್ತಿ ಸಂಪಾದಿಸಿ ತಂದು ಹಾಕ್ತಾಳೆ, ಕೂತ್ಕೊಂಡು ಊಟ ಮಾಡ್ತಾನೆ ಅಂತ ನೀವೇ ತಮಾಷೆ ಮಾಡ್ತಿದೀರಲ್ಲಾ.. ಅದಕ್ಕೇ ನಿಂತುಕೊಂಡೇ ಊಟ ಮಾಡ್ತಿದೀನಿ !

***

ಎರಡನೇ ಹೆಂಡತಿ

ತಾರಾ: ಏನೇ, ನಿನ್ನ ಗಂಡ ಗಾಂಪ ಎರಡನೇ ಮದುವೆ ಮಾಡ್ಕೊಂಡು, ಹೊಸ ಹೆಂಡತಿಯನ್ನು ನಿಮ್ಮ ಮನೆಗೇ ಕರೆದುಕೊಂಡು ಬರ್ತಾನಂತೆ. ನೀನು ಸುಮ್ನೇ ಇದೀಯಲ್ಲಾ?

ಶ್ರೀಮತಿ: ನಮ್ಮ ಅತ್ತೆ ಎದುರು ವಾದಿಸೋಕೆ ಇನ್ನೊಬ್ಬಳು ಸಿಗುತ್ತಾಳಲ್ಲಾ ಅಂತ ಸುಮ್ಮನೆ ಇದ್ದೇನೆ.

***

ಒಡವೆ

ಗಾಂಪ: ಏನಮ್ಮಾ ನೀನು, ಹೀಗೆ ಮೈತುಂಬಾ ಒಡವೆಗಳನ್ನು ಹಾಕಿಕೊಂಡು ತಿರುಗಾಡುವಾಗ ಕಳ್ಳರು ಅಟ್ಯಾಕ್ ಮಾಡಿದ್ರೆ ಏನ್ ಮಾಡ್ತೀಯಾ?

ತಾರಾ: ನಾನು ಹಾಕಿಕೊಂಡಿರೋ ಎಲ್ಲಾ ಒಡವೆನೂ ಕದ್ದಿರೋದೇ ಅಂಕಲ್!

***

ಪಾನಿಪೂರಿ

ಶ್ರೀಮತಿ: ಯಾಕೆ ಅಳ್ತೀದೀಯಾ?

ತಾರಾ: ಪಾನಿಪೂರಿ ಕೊಡಿಸು ನಿಮ್ಮ ಲವ್ ಮಾಡ್ತೀನಿ ಅಂತ ಆ ಹುಡುಗನಿಗೆ ಹೇಳ್ದೆ. ಅದಕ್ಕೆ ಅವನು ಪಾನಿಪೂರಿ ಏನು, ಪಾನಿಪೂರಿ ಅಂಗಡೀನೇ ಇಡ್ತೀನಿ. ಬಂದು ಪ್ಲೇಟ್ ತೊಳಿ ಬಾ ಅಂತ ಕರೆದ.

***

ಕಾರಣ !

ತಾಯಿ: ಗಾಂಪ, ಮೊದಲು ನಿನ್ನ ತಲೆಕೂದಲು ಕತ್ತರಿಸಿ, ಗಡ್ಡ-ಮೀಸೆ ಬಿಡು

ಗಾಂಪ: ಮಾಮ್, ಇದು ಲೇಟೆಸ್ಟ್ ಫ್ಯಾಷನ್. ನಾನು ಕೂದಲು ಕತ್ತರಿಸಲ್ಲ, ಗಡ್ಡ ಮೀಸೆ ಬಿಡಲ್ಲ. ಅಷ್ಟಕ್ಕೂ ನಾನು ಹೀಗಿದ್ರೆ ನಿನಗೇನು ಕಷ್ಟ?

ತಾಯಿ: ಕಷ್ಟ ಅಂತೀಯಾ... ನಿನ್ನ ತಂಗಿಯನ್ನು ನೋಡೋದಕ್ಕೆ ಬಂದ ಗಂಡು ನಿನ್ನನ್ನು ನೋಡಿ ನೀನೇ ಹುಡುಗಿ ಅಂದುಕೊಂಡು ‘ಓಕೆ' ಹೇಳಿದ್ದಾನೆ!

***

ಕುಡಿಯೋದು ಬಿಟ್ಟರೆ…

ಶ್ರೀಮತಿ: ನೀವು ಕುಡಿಯೋದು ಬಿಟ್ರೆ ನಾವು ಕಾರ್ ತಗೋಬಹುದು.

ಗಾಂಪ: ನೀನು ಮೇಕಪ್ ಮಾಡೋದು ಬಿಟ್ರೆ ನಾವು ಹೆಲಿಕಾಪ್ಟರ್ ಅನ್ನೇ ತಗೋಬಹುದು !

***

ಪೆಟ್ಟು

ಶಿಕ್ಷಕಿ: ಗಾಂಪ, ಶಾಲೆಗೆ ಯಾಕೆ ಇಷ್ಟು ತಡವಾಗಿ ಬಂದಿದ್ದೀಯಾ?

ಗಾಂಪ: ಶಾಲೆ ಬರುವಾಗ ಅಮ್ಮ ಜಾರಿ ಬಿದ್ರು

ಶಿಕ್ಷಕಿ: ಪೆಟ್ಟೇನಾದ್ರೂ ಆಯ್ತಾ?

ಗಾಂಪ: ಹೌದು ಅಪ್ಪನನ್ನು ಆಸ್ಪತ್ರೆಗೆ ಸೇರಿಸಿ ಬರುವುದಕ್ಕೆ ತಡ ಆಯ್ತು !

ಶಿಕ್ಷಕಿ: ಅಮ್ಮ ಜಾರಿ ಬಿದ್ರೆ ಅಪ್ಪನನ್ನು ಯಾಕೆ ಆಸ್ಪತ್ರೆಗೆ ಸೇರಿಸಿದ್ರಿ?

ಗಾಂಪ: ಬಿದ್ದದ್ದು ಅಮ್ಮನೇ ಆದ್ರೂ ಅದನ್ನು ನೋಡಿ ನಕ್ಕಿದ್ದು ಮಾತ್ರ ಅಪ್ಪ ಅದಕ್ಕೇ...!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ