‘ಸಂಪದ' ನಗೆ ಬುಗ್ಗೆ - ಭಾಗ ೯೮

‘ಸಂಪದ' ನಗೆ ಬುಗ್ಗೆ - ಭಾಗ ೯೮

ನಾಯಿಗಳು

ಗಾಂಪ ಬಾಡಿಗೆಗೆ ಹೊಸದಾಗಿ ಒಂದು ಮನೆ ನೋಡಿದ್ದ. ಬಾಡಿಗೆ ಅಡ್ವಾನ್ಸ್ ಕೊಡುವುದಕ್ಕೆ ಮೊದಲು, ಅದೇ ವಠಾರದಲ್ಲಿ ವಾಸ ಮಾಡುತ್ತಿದ್ದ ಮನೆ ಮಾಲೀಕನನ್ನು ಕೇಳಿದ.

“ನನಗೆ ಒಂದೇ ಒಂದು ಸಂದೇಹ. ವಠಾರದಲ್ಲಿ ಬೊಗಳೋ ನಾಯಿ ಇದೆಯಾ?”

ಮನೆ ಮಾಲೀಕ ಅವಸರವಸರವಾಗಿ “ಇಲ್ಲ ಇಲ್ಲ, ನಾಯಿ ಕಂಡರೆ ನನಗಾಗೋಲ್ಲ ಇಲ್ಲಿ ಯಾರ ಮನೇಲೂ ನಾಯಿ ಸಾಕಿಲ್ಲ.” ಅಂತ ಸಮಾಧಾನ ಹೇಳಿದ.

ಗಾಂಪ “ ಸದ್ಯ, ಒಳ್ಳೇದಾಯ್ತು. ನಮ್ಮನೇಲಿ ಎರಡು ನಾಯಿಗಳಿವೆ. ಅವುಗಳು ಅಸಾಧ್ಯವಾಗಿ ಬೊಗಳುತ್ತವೆ. ಅದನ್ನು ಕೇಳಿ ತಡಕೊಳ್ಳೋದರಲ್ಲೇ ನನಗೆ ಸಾಕೋ ಸಾಕು ಅನ್ನಿಸಿದೆ" ಅಂತ ನಿಟ್ಟುಸಿರಿಟ್ಟ.!

***

ಬೆಕ್ಕು

ತಮ್ಮ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಬೆಕ್ಕನ್ನು ಹೊರಗೆ ಹಾಕಿ ಬಾಗಿಲು ಮುಚ್ಚಿಕೊಂಡು ಬಂದು ತಾನು ಮಲಗೋದು ಗಾಂಪನ ಪಾಲಿಗೆ ಬಂದ ನಿತ್ಯದ ಕೆಲಸ. ಒಂದು ದಿನ ಗಾಂಪ ರಾತ್ರಿ ಬಹಳ ಹೊತ್ತಿನವರೆಗೆ ಮಲಗದೆ ಬಾಗಿಲ ಹತ್ತಿರವೇ ಕೂತು ತೂಕಡಿಸುತ್ತಿದ್ದ. ಅಕಸ್ಮಾತ್ ಎಚ್ಚರ ಗೊಂಡ ಅವನ ಅಮ್ಮ ಬಂದು ಅವನನ್ನು ನೋಡಿ “ಗಾಂಪಾ, ಇನ್ನೂ ಮಲಗಿಲ್ಲವೇನೋ? ಯಾಕೋ?” ಅಂತ ಕೇಳಿದಳು.

ಗಾಂಪ “ಬೆಕ್ಕು ಮನೇಲಿಲ್ಲ. ಎಲ್ಲೋ ಹೋಗಿದೆ. ಅದು ಬಂದ ಮೇಲೆ ಅದನ್ನು ಹೊರಗೆ ಕಳುಹಿಸಿ ಬಾಗಿಲು ಹಾಕ್ಕೊಂಡು ಮಲಕ್ಕೋಬೇಕು" ಅಂದ.

***
ಪ್ರವಾಸ ವೆಚ್ಚ 

ಪ್ರವಾಸಿಗಳ ಆಕರ್ಷಣೆಗೆಂದು ಒಂದು ಬಸ್ ಕಂಪೆನಿ ಹೀಗೊಂದು ಸೌಲಭ್ಯಗಳ ಪಟ್ಟಿ ಜಾಹೀರಾತು ಮಾಡಿತು !

“ಸುವ್ಯವಸ್ಥಿತ ಸಾರಿಗೆ ಸಂಸ್ಥೆಯ ಸುಸಜ್ಜಿತ ಬಸ್ಸುಗಳಲ್ಲಿ ಸುಖ ಪ್ರಯಾಣ. ಹೊಯ್ಸಳ ದೇವಾಲಯಗಳ ಮೂರು ದಿನಗಳ ಯಾತ್ರೆ, ವಸತಿ, ಊಟ, ಬಿಸಿ ನೀರು ಸ್ನಾನ ಒಳಗೊಂಡಂತೆ ಪ್ರತಿಯೊಬ್ಬರಿಗೆ ಮೂರು ಸಾವಿರ ರೂಪಾಯಿ ಚಾರ್ಜು !”

ಇದನ್ನು ನೋಡಿದ ಜಿಪುಣ ಗಾಂಪ ಪ್ರವಾಸ ಹೋಗಲು ನಿಶ್ಚಯ ಮಾಡಿದ. ಟಿಕೇಟ್ ಕೊಳ್ಳುವಾಗ ಮಾತ್ರ ಸ್ವಲ್ಪ ಚೌಕಾಶಿ ಮಾಡಿ ಮುನ್ನೂರು ರೂಪಾಯಿ ಕಡಿಮೆ ಮಾಡಿಕೊಳ್ಳಬೇಕೆಂದು ಬಸ್ ಕಂಪೆನಿಯ ಮ್ಯಾನೇಜರನ್ನು ಕೇಳಿಕೊಂಡ. ಮ್ಯಾನೇಜರು, “ಇದೇನ್ರಿ ಹೀಗೆ ಕೇಳ್ತೀರಿ? ಈಗಾಗಲೇ ಸಾಕಷ್ಟು ಕಡಿಮೆ ದರ ನಿಶ್ಚಯ ಮಾಡಿದ್ದೀವಿ!” ಅಂದರು. 

ಗಾಂಪ “ಸ್ನಾನ ಒಳಗೊಂಡು, ಅಂತ ನೀವು ಚಾರ್ಜು ಮಾಡಿದ್ದೀರಿ. ಆ ಸೌಲಭ್ಯ ನನಗೆ ಬೇಕಾಗಿಲ್ಲ. ನಾನು ವಾರಕ್ಕೊಂದೇ ದಿನ ಸ್ನಾನ ಮಾಡೋದು" ಅಂದ!

***

ಕಾರಣ

“ನಮ್ಮ ಗಾಂಪನ ತಲೆಯ ಮೇಲೆ ಅಷ್ಟು ದೊಡ್ದ ಗಾಯ ಹ್ಯಾಗೆ ಆಯ್ತು?”

“ಓ, ಗೊತ್ತಿಲ್ಲವೇ ನಿನಗೆ? ಹೊಸ ವರ್ಷದ ಆರಂಭದ ಮಧ್ಯರಾತ್ರಿ ಅವನು ಮನೆಗೆ ಹಿಂದಿರುಗಿ ಬಂದ. ಅವನಿಗಾಗಿ ಕಾಯುತ್ತಿದ್ದ ಅವನ ಹೆಂಡತಿ ಲಟ್ಟಣಿಗೆಯಿಂದ ತಲೆಗೆ ಬಾರಿಸಿದಳು.”

“ಅಯ್ಯೋ ಪಾಪವೇ ! ನಾವೆಲ್ಲರೂ ಕೂಡಾ ಹೊಸ ವರ್ಷದ ಮೋಜು ಮುಗಿಸಿಕೊಂಡು ಮನೆಗಳಿಗೆ ಬರೋದರಲ್ಲಿ ಬೆಳಗಿನ ಜಾವ ಎರಡು, ಮೂರು ಗಂಟೆ ಆಗಿತ್ತಲ್ಲ ! ಅಂಥಾದ್ದರಲ್ಲಿ ಹನ್ನೆರಡು ಗಂಟೆಗೆಲ್ಲಾ ಮನೆಗೆ ಹಿಂದಿರುಗಿದ ಗಾಂಪನಿಗೆ ಯಾಕೆ ಈ ಲಟ್ಟಣಿಗೆ ಪ್ರಹಾರ?”

“ಗಾಂಪ ಹಿಂದಿರುಗಿ ಬಂದದ್ದು ಹೊಸ ವರ್ಷದ ಪಾರ್ಟಿಯಿಂದ ಅಲ್ಲ. ಅದಕ್ಕೆ ಒಂದು ವಾರದ ಹಿಂದಿನ ಕ್ರಿಸ್ ಮಸ್ ಹಬ್ಬದ ಪಾರ್ಟಿಯಿಂದ!”

***

ಮರೆವು

ಮರೆಗುಳಿ ಪ್ರೊಫೆಸರ್ ಗಾಂಪ ಒಂದು ದೊಡ್ಡ ಕಟ್ಟಡದ ಮುಂದಿನ ತಿರುಗು ಬಾಗಿಲಲ್ಲಿ ಒಳಗೂ ಹೋಗದೇ ಹೊರಗೂ ಬಾರದೇ ಸುತ್ತುತ್ತಲೇ ಇದ್ದರು. ಅವರ ಅವಸ್ಥೆಯನ್ನು ನೋಡಿದ ಮಹನೀಯರೊಬ್ಬರು,

“ಯಾಕೆ ಸ್ವಾಮೀ, ಬಾಗಿಲಿನಿಂದ ಹೊರಕ್ಕೆ ಬರೋದಕ್ಕೆ ಆಗ್ತಾ ಇಲ್ವೇ?”

ಗಾಂಪ ಸುತ್ತುತ್ತಲೇ, “ ಹೊರಕ್ಕೆ ಬರಬಲ್ಲೆ. ಆದರೆ ನಾನೀಗ ಈ ಕಟ್ಟಡದ ಒಳಗೆ ಹೋಗಬೇಕಾಗಿದೆಯೋ, ಹೊರಕ್ಕೆ ಬರಬೇಕಾಗಿದೆಯೋ ಅನ್ನೋದು ಮರೆತುಹೋಗಿದೆ" ಅಂದರು.

***
ಕೋತಿ ಮೂತಿ

ಪಕ್ಕದ ಮನೆಯ ಶ್ರೀಮತಿಯವರು ಒಂದು ದಿನ ಕಾಂಪೌಂಡಿನ ಆಚೆಯಿಂದ ತಾರಾ ಅವರನ್ನು ಕಂಡು “ ರೀ ತಾರಾ ಅವರೇ, ನಿಮ್ಮ ಮಗನಿಗೆ ಇನ್ಮೇಲೆ ನನ್ನ ಹಾಗೆ ಮುಖ ಮಾಡಿ ಅಣಕಿಸಬೇಡ ಅಂತ ಸ್ವಲ್ಪ ಬುದ್ಧಿ ಹೇಳಿ" ಅಂದರು.

ತಾರಾ ತನ್ನ ಮಗನನ್ನು ಕರೆದು ಜೋರಾಗಿ “ ಲೋ ಮರಿ, ಹಾಗೆಲ್ಲ ಕೋತಿ ಮೂತಿ ಮಾಡಬೇಡ ಅಂತ ಎಷ್ಟು ಸಲ ನಿನಗೆ ಹೇಳೋದು? “ ಅಂತ ಗದರಿದರು.

***

ಹತ್ತು ಮಾತ್ರೆಗಳು

ಗಾಂಪ: ಸಾಮಾನ್ಯವಾಗಿ ಮಾತ್ರೆಗಳ ಒಂದು ಶೀಟ್ ನಲ್ಲಿ ಹತ್ತು ಮಾತ್ರೆಗಳು ಮಾತ್ರ ಯಾಕೆ ಇರುವುದು ಗೊತ್ತಾ?

ಸೂರಿ: ಅದು ತ್ರೇತಾಯುಗದಿಂದಲೇ ಹಾಗೆ ಇದೆ. ಯಾಕೆಂದರೆ ರಾವಣನಿಗೆ ತಲೆನೋವು ಬಂದರೆ, ಹತ್ತು ತಲೆಗೂ ಒಟ್ಟಿಗೆ ತೆಗೆದುಕೊಳ್ಳಲಿ ಅಂತ...!

***
ಓಡುತ್ತಿದ್ದ !

ಗಾಂಪ: ನಿನ್ನ ತಮ್ಮನಿಗೆ ಎಷ್ಟು ವರ್ಷ ಈಗ?

ಸೂರಿ: ಅವನಿಗೆ ಈಗ ಒಂದು ವರ್ಷ ಅಷ್ಟೇ.

ಗಾಂಪ: ಹೌದಾ, ನಮ್ಮ ಮನೆಯ ಟಾಮಿಗೂ ಒಂದೇ ವರ್ಷ. ಆದರೆ ಅದು ಚೆನ್ನಾಗಿ ಓಡುತ್ತೆ, ನಿನ್ನ ತಮ್ಮ ಇನ್ನೂ ಅಂಬೆಗಾಲಿಡುತ್ತಾನೆ.

ಸೂರಿ: ನಿಮ್ಮ ಟಾಮಿಗೆ ಇರುವ ಹಾಗೆ ಇನ್ನೆರಡು ಕಾಲು ಜಾಸ್ತಿ ಇದ್ದಿದ್ರೆ ಇವನು ಇನ್ನೂ ಚೆನ್ನಾಗಿ ಓಡುತ್ತಿದ್ದ ...!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ