‘ಸಂಪದ ‘ ನಗೆಬುಗ್ಗೆ - ಭಾಗ ೧೧೩

‘ಸಂಪದ ‘ ನಗೆಬುಗ್ಗೆ - ಭಾಗ ೧೧೩

ಕಾಲಿಗಲ್ಲ ತಲೆಗೆ

ಸಾಧು ಸಂತರೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಅಭಿಮಾನ ಮತ್ತು ಭಕ್ತಿ. ಎಲ್ಲಾದರೂ ಅಂಥವರ ಪ್ರವಚನವಿದೆಯೆಂದಾದರೆ ಸಾಕು ಚಿಕ್ಕವರಿದ್ದ ನಮ್ಮನ್ನು ಎಳೆದುಕೊಂಡೇ ಹೋಗುತ್ತಿದ್ದರು. ತನ್ನ ಕಾವಲಿಗೆ ಒರಲಿ ಎಂಬುದರ ಜೊತೆಗೆ ಮಕ್ಕಳಲ್ಲೂ ಗುರು ಹಿರಿಯರ ಬಗ್ಗೆ ಸ್ವಲ್ಪ ಭಕ್ತಿ ಬೆಳೆಯಲಿ ಎನ್ನುವುದೂ ಇತ್ತು. ಒಂದು ದಿನ ಅಂತಹುದೇ ಸಂತರೊಬ್ಬರ ಪ್ರವಚನ ಕೇಳಿ ಮನೆಗೆ ಹೊರಡುವಾಗ ರಾತ್ರಿಯಾಗಿತ್ತು. ಬೆಳದಿಂಗಳಿರಲಿಲ್ಲ. ಜೊತೆಗೆ ಕೈಯಲ್ಲಿ ಟಾರ್ಚ ಕೂಡಾ ಇಲ್ಲ. ಎಡವುತ್ತ ಸಾಗುತ್ತಿದ್ದ ಅಜ್ಜಿ ಅಷ್ಟೊಂದು ತಡ ಮಾಡಿದ್ದಕ್ಕೆ ಸಂತರನ್ನು ಬೈಯುತ್ತಲೇ ಇದ್ದರು. ಪ್ರವಚನದ ನಂತರ ಪ್ರಸಾದ ಏನಾದರೂ ಸಿಕ್ಕೀತೆಂಬ ಆಸೆಯಿಂದ ಅಲ್ಲಿಯವರೆಗೆ ಬಂದು ಅಲ್ಲಿ ಏನೂ ಸಿಕ್ಕದೆ ನಿರಾಸೆಯಲ್ಲಿದ್ದ ಗುಂಪಿನಲ್ಲೇ ಅತೀ ಕಿರಿಯನಾಗಿದ್ದ ಮೊಮ್ಮಗ ಕೇಳಿಯೇ ಬಿಟ್ಟ. ‘ಅಲ್ಲ ಅಜ್ಜೀ, ಜ್ಞಾನದ ದೀವಿಗೆ ಎಲ್ಲರನ್ನೂ ಎಡವದಂತೆ ಮುನ್ನಡೆಸುತ್ತದೆ ಎಂದರಲ್ಲ ಸಂತರು’ ಎಂದಿದ್ದ. ‘ಅವರು ಹೇಳಿದ್ದು ಕಾಲಿಗಲ್ಲಪ್ಪ… ತಲೆಗೆ. ಇಲ್ಲಿ ಕತ್ತಲಿನಲ್ಲಿ ಎಡವುತ್ತಿರುವುದು ಕಾಲು’ ಎಂದಿತು ಎಡವಿ ಬೀಳುವುದರಲ್ಲಿದ್ದ ಅಜ್ಜಿ ಸಾವರಿಸಿಕೊಳ್ಳುತ್ತ !

***

ಬೇವಿನ ಮರದಲ್ಲಿ ಮಾವು

ತನ್ನನ್ನು ಬಹು ದೊಡ್ಡ ದಾರ್ಶನಿಕನೆಂದುಕೊಂಡಿದ್ದು ಬಹಳ ಕಾಲದಿಂದ ಹುಚ್ಚಾಸ್ಪತ್ರೆಯಲ್ಲಿಯೇ ಇದ್ದ ಒಬ್ಬಾತ ರೌಂಡಿಗೆ ಬಂದ ಡಾಕ್ಟರನ್ನು ಹಿಡಿದು ಕೇಳತೊಡಗಿದ ‘ಅಲ್ಲ ಡಾಕ್ಟರೇ, ಮಾವಿನ ಮರದಲ್ಲಿ ಮಾವು ಬೆಳೆಯುತ್ತದೆ. ಹಾಗೆಯೇ ಬೇವಿನ ಮರದಲ್ಲಿ ಬೇವು. ಮಾವಿನ ಮರದಲ್ಲಿ ಬೇವು, ಬೇವಿನ ಮರದಲ್ಲಿ ಮಾವು ಯಾಕೆ ಬೆಳೆಯಲಾಗದು?’ ಡಾಕ್ಟರು ಕಕ್ಕಾಬಿಕ್ಕಿ. ಉತ್ತರಕ್ಕಾಗಿಯೇ ತಡಕಾಡಿದರು. ಅಷ್ಟರಲ್ಲಿ ಹಾಡು ಹಗಲಿನಲ್ಲಿಯೇ ಆಕಾಶದಲ್ಲಿನ ತಾರೆಗಳನ್ನೆಣಿಸುತ್ತ ಅಲ್ಲಿಯೇ ಪಕ್ಕದ ದಂಡೆಯ ಮೇಲೆ ಕುಳಿತಿದ್ದವನೊಬ್ಬ ಇವರತ್ತ ತಿರುಗಿ ‘ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ? ಬೇವಿನ ಮರವನ್ನು ಮಾವಿನ ಮರವೆಂದೂ ಮಾವಿನ ಮರವನ್ನು ಬೇವಿನ ಮರವೆಂದೂ ಕರೆದರೆ ಆಯ್ತಪ್ಪ’ ಎಂದು ಕೇಳಿ ನಕ್ಕವ ಪುನಃ ಗಂಭೀರವಾಗಿ ತನ್ನ ಕಾಯಕದಲ್ಲಿ ತೊಡಗಿಕೊಂಡ.

***

ಹಾರ್ಟ್ ಅಟ್ಯಾಕ್

ಸೂರಿ: ಲವ್ ಮಾಡುವುದರಿಂದ ಹಾರ್ಟ್ ಅಟ್ಯಾಕ್ ಆಗಲ್ಲವಂತೆ. ಅದಕ್ಕೆ ನಾನು ಲವ್ ಮಾಡ್ತಿದ್ದೀನಿ.

ಗಾಂಪ: ಅದು ಹೇಗೋ ಸಾಧ್ಯ?

ಸೂರಿ: ಲವ್ ಮಾಡುವಾಗ ನಮ್ಮ ಹೃದಯ ನಮ್ಮ ಹತ್ರ ಇರಲ್ಲ್ಕ, ಪ್ರೇಯಸಿಗೆ ಕೊಟ್ಟಿರ್ತೀವಿ. ಹೀಗಾಗಿ ಹಾರ್ಟ್ ಅಟ್ಯಾಕ್ ಆಗೋದಿಲ್ಲ.

***

ತುಂಬಾ ಲೇಟ್

ಸೂರಿ ಬಸ್ ನಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದ.

ಗಾಂಪ: ಸೀಟಿದ್ದರೂ ಯಾಕೆ ನಿಂತುಕೊಂಡಿದ್ದೀರಿ. ಬನ್ನಿ ಕುಳಿತುಕೊಳ್ಳಿ.

ಸೂರಿ: ಬೇಡ ಬಿಡಿ ಸರ್. ಈಗಾಗಲೇ ತುಂಬ ಲೇಟ್ ಆಗಿದೆ. ಕುಳಿತುಕೊಂಡು ಹೋದರೆ ಇನ್ನೂ ಲೇಟ್ ಆಗುತ್ತೆ.

***

ಉಪಾಯ

ಸೂರಿ: ವೈನ್ ಶಾಪಿನಿಂದ ಎಣ್ಣೆ ಬಾಟಲ್ ತರುವಾಗ ಅಪ್ಪ ಎದುರಿಗೆ ಬಂದ್ರು

ಗಾಂಪ: ಸಿಕ್ಕಿಬಿದ್ಯಾ, ಚೆನ್ನಾಗಿ ಒದೆ ಬಿದ್ದಿರಬೇಕಲ್ವಾ?

ಸೂರಿ: ಇಲ್ಲ ಕಣೋ, ಬಾಟಲ್ ಅಪ್ಪನ ಕೈಗೆ ಕೊಟ್ಟು ‘ಹ್ಯಾಪಿ ಫಾದರ್ಸ್ ಡೇ, ಡ್ಯಾಡಿ’ ಅಂತ ಹೇಳ್ದೆ. ಅವರೂ ಸಿಕ್ಕಾಪಟ್ಟೆ ಖುಷಿ ಪಟ್ಟರು ಬಾಟಲ್ ಕೊಟ್ಟಿದ್ದಕ್ಕೆ.

***

ಭೂಲೋಕದ ಶಿಕ್ಷೆ

ಚಿತ್ರಗುಪ್ತ: ನೀನು ಭೂಮಿಯ ಮೇಲೆ ಏನೇನು ಮಾಡಿದೆ?

ಸೂರಿ: ಏನು ಮಾಡಲು ಆಗಲಿಲ್ಲ ಸ್ವಾಮಿ. ಅರ್ಧಾ ಆಯಸ್ಸು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದರಲ್ಲೇ ಕಳೆಯಿತು. ಇನ್ನರ್ಧ ಆಯಸ್ಸು ರೇಷನ್ ಕಾರ್ಡ್ ಗೆ ಕೆ ವೈ ಸಿ ಮಾಡಿಸೋಕೆ, ಮನೆ ಕಟ್ಟೋದಕ್ಕಾಗಿ ಅನುಮತಿಗಾಗಿ, ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಿಸೋಕೆ, ವಿದ್ಯುತ್ ಸಂಪರ್ಕ ಪಡೆಯೋಕೆ ಹೀಗೆ ಅದು ಇದು ಅಂತ ಸರ್ಕಾರಿ ಕಚೇರಿಗಳಿಗೆ ಅಲೆಡಾಡುವುದರಲ್ಲೇ ಕಳೆದು ಹೋಯ್ತು. ಪಾಪ ಪುಣ್ಯದ ಯಾವ ಕೆಲಸಾನೂ ಮಾಡಲಾಗಲಿಲ್ಲ.

ಚಿತ್ರಗುಪ್ತ: ಹೌದಾ, ನಿನ್ನ ನರಕದ ಶಿಕ್ಷೆಯನ್ನೆಲ್ಲಾ ಭೂಲೋಕದಲ್ಲೇ ಕಳೆದಿದ್ದೀಯಾ. ನಡಿ ಸ್ವರ್ಗಕ್ಕೆ !

***

ಹೊಸ ಸೀರೆ

ಶ್ರೀಮತಿ: ರೀ, ಹೊಸ ಸೀರೆ ಕೊಡಿಸಿ.

ಸೂರಿ: ಈಗ ಹೊಸ ಸೀರೆ ಯಾಕೆ? ನಿನ್ ಹತ್ರ ಇರೊವೆಲ್ಲ ಸಾಲಲ್ಲವೇ?

ಶ್ರೀಮತಿ: ಬರೀ ೧೫೦ ಸೀರೆ ಅಷ್ಟೇ ಇರೋದು. 

ಸೂರಿ: ಅವುಗಳನ್ನೆಲ್ಲ ದಿನಕ್ಕೆ ಒಂದೊಂದು ಉಟ್ಟರೂ ಐದು ತಿಂಗಳು ಉಡಬಹುದಲ್ವೇ?

ಶ್ರೀಮತಿ: ಉಳಿದ ಏಳು ತಿಂಗಳಿಗೆ ಏನ್ ಮಾಡ್ಲಿ?

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ