‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೦) - ಅ ಗೌ ಕಿನ್ನಿಗೋಳಿ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೦) - ಅ ಗೌ ಕಿನ್ನಿಗೋಳಿ

ಸಾಹಿತಿ, ಅಧ್ಯಾಪಕ, ಬರಹಗಾರರಾಗಿದ್ದ ಅಚ್ಯುತಗೌಡ ಕಿನ್ನಿಗೋಳಿ (ಅ ಗೌ ಕಿನ್ನಿಗೋಳಿ) ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕಿನ್ನಿಗೋಳಿ. ತಂದೆ ರಘುನಾಥಗೌಡ, ತಾಯಿ ಸುನಾಥಗೌಡ ಲಿಂಗಮ್ಮ. ಅ.ಗೌ.ಕಿ. ಎಂದು ಪರಿಚಿತರಾಗಿದ್ದ ಅವರು ಕಿನ್ನಿಗೋಳಿ ಲಿಟ್ಲ್‌ ಫ್ಲವರ್‌ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ೧೯೭೬ರಲ್ಲಿ ನಿವೃತ್ತರಾದರು.

ಖಂಡಕಾವ್ಯ ರಚನೆಗೆ ಹೆಸರಾದ ಅವರು ಯೋಗಲಹರಿ, ಕ್ಷಾತ್ರದರ್ಶನ, ಶಿವಲೇಸ್ಯೆ ಎಂಬ ಮೂರು ಖಂಡಕಾವ್ಯ ಪ್ರಕಟಿಸಿದ್ದಾರೆ. ಒಡ್ಡಿದ ಉರುಳು, ಸಂಗ್ರಾಮಸಿಂಹ, ಸರಸ-ವಿರಸ, ದಾರಾ ಅವರ ಪ್ರಕಟಿತ ಕಾದಂಬರಿಗಳು. ಬಿಡುಗಡೆಯ ನಾಂದಿ, ಪರಾಶರಸತ್ಯ, ಪತನ, ಪ್ರಾಯಶ್ಚಿತ್ತ, ಮಂತ್ರರಹಸ್ಯ, ಅಜ್ಞಾನಸಂಹಾರ, ಗುಪ್ತ ತೀರ್ಥಾಟನೆ (ದಶ ಲಹರಿಗಳು), ಒಡ್ಡಿದ ಉರುಳು, ವತ್ಸ ವಿಜಯ ಪ್ರಕಟಿತ ಕೃತಿಗಳು.

‘ಹೊಸಗನ್ನಡ ಕಾವ್ಯಶ್ರೀ’ ಸಂಕಲನದಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟ ಮಾಡಲಾಗಿದೆ.

ಭವ ರೋಗಿಗೆ

ಓ, ಭ್ರಾಂತ ಭೋಗಿ

ಕೇಳ ಭವರೋಗಿ

ಅರರೆ ! ಏನಿಂತೇಕೆ ಆಸೆನೋತ?

ಅರಸುತಿಹುದೇನು ಓ, ದೀಪಕೀಟ?

 

ಸಾಕು ಬಿಡು ನಾನರಿತೆ ಮನದ ಮೂಲದ ಚಿಂತೆ;

ಏಕೆನಿತೊ ಕಾಲದಿಂ ಕಾದು ನಿಂತೆ ?

ಲಾಲಸೆಯ ಹೋರಾಟ ಗಾಳಿಗೈಗುದ್ದಾಟ -

ಎಂದ ಹಿರಿಯರ ಮಾತನೇಕೆ ಮರೆತೆ ?

 

ನಿಜದರಿವು ನಿನಗಿನ್ನು ಮೂಡಲಿಲ್ಲ,

ಅದರ ನೆಲೆಯತ್ತ ನೀಂ ನೋಡಲಿಲ್ಲ.

ನಿನ್ನನೇ ನೀಂ ಕೆದಕು ತೋರುವುದು ಸರಿ ಬದುಕು,

ಈ ದುರಾಶೆಯ ಬೋಗುಣಿಯಲಿ ಬಿರುಕು !

ಬಯಕೆಗಳ ಬಾಗಿಲಲಿ, ಸೋಲುಗಳ ಸೋಗಿಲಲಿ

ನಿಂದಿಹುದ ನೀನೆ ನೋಡಯ್ಯ ನಿಜಕ್ಕೂ

ಓ, ಚೆಲುವ ಚೆನ್ನಿಗನೆ ನಾ ಹೇಳಲೇನು?

ನಾಚದಿರು ಕೇಳಯ್ಯ ನಿನ್ನ ಬಯಕೆಯನು-

 

ವೆಚ್ಚಕ್ಕೆ ಕೊಪ್ಪರಿಗೆ, ವಾಸಕ್ಕೆ ಉಪ್ಪರಿಗೆ,

ತನ್ವಿಯರು ತನು ತಳ್ಕೆ, ಹಂಸತೂಲದ ಪಳ್ಕೆ,

ಆಯುಷ್ಯದ ಬಲವು, ಅಚ್ಚಳಿಯದಾ ಚೆಲುವು,

ಜರೆಯಿರದ ತಾರುಣ್ಯ, ನಿರುತ ವಾಜೀಕರಣ

ಮುಗಿಸಲಾರೈ ಇಂತು ಹೇಳಿ ಹರಣದ ತಂತು 

ಕಡಿವನಕ ಕಡೆಯತನಕ-ಬಲ್ಲೆ ಕೇಳ !

 

ಸುಖದ ಸುತ್ತಿನ ಮೂಲದಲ್ಲಿಹುದು ಕೂರ್ಗಾಳ

ಮೀನಂತೆ ನೀನದನು ಅರಿಯಲಿಲ್ಲ

ಓ, ಭ್ರಾಂತ ಭೋಗಿ,

ಕೇಳ ಭವರೋಗಿ !

 

ಬೇಕು - ಎನುವುದೆ ನರಕ, ಸಾಕು - ಎನ್ನಲು ನಾಕ,

ಸಾಕಿನಲ್ಲಡಗಿಹುದು ಮಾರಹಸ್ಯ !

ಮಧುಬಿಂದು ತಾನೊಂದು ಜೀವಹರ ಹನ್ನೊಂದು-

ನೀನಾದೆ ಬೇಕುಗಳಿಗಂತೆ ವಶ್ಯ.

ದೋಹಳದ ಬಲು ಗೀಳು ದೊರೆಯದಾಗಲು ಗೋಳು

ಗೊಳ್ಳುವುದೆ ಬಯಕೆಯೊತ್ತಡದ ಬಾಳು !

ಮಾಗುವುದು ಹೆರರುಣ್ಣುವುದಕೆಂದೆ ತನಿವಣ್ಣು

ಸರಿದಾರಿಯಂತಿಹುದು ತಿಳಿದುಕೊಳ್ಳು

ತೋರಿಕೆಯ ಗುರಿಮೈಮೆ ಮೆರೆದಾಟದೀ ಮೈಮೆ

ಕೂಪಕೂರ್ಮ ನ್ಯಾಯವಿಲ್ಲ ಧ್ಯೇಯ !

ಬೀಸಲಿಹ ಬಿರುಗಾಳಿಗಿದಿರು ಕೆಡೆಯುವ ಕದಳಿ

ಈ ಬಾಳು ; ನೆಚ್ಚಿ ಬಿಡಬೇಡ ಬಾಯ.

ಕೆಸರು ಕುಪ್ಪೆಯ ಮಧ್ಯೆ ಮೊಸರು ಬೆಣ್ಣೆಯ ಮುದ್ದೆ

ಎಂದರಾರೋ ಹಿಂದೆ ಕೇಳಯೇನು?

ಹಸುರು ಹಚ್ಚೆಯ ಹೊಲಕೆ ವಶವಾಗದಿರು ಜೋಕೆ !

ಪಶುವಲ್ಲ, ನೀಂ ಮನುಜನಿರುವೆಯಿನ್ನೂ.

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)