’ಟ್ವೆಂಟಿ ಟೆನ್’ ಕ್ರೀಡಾಕೂಟ : ಭಾರತದ ಶಕ್ತಿಯ ಅನಾವರಣ
೧೯ನೇ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತವು ವಿಶ್ವಕ್ಕೆ ತನ್ನ ಸಂಘಟನಾ ಶಕ್ತಿಯನ್ನು ತೋರಿಸಿದೆ. ಪದಕ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನಕ್ಕೇರುವ ಮೂಲಕ ನಮ್ಮ ಕ್ರೀಡಾ ಶಕ್ತಿಯನ್ನು ವಿಶ್ವಕ್ಕೆ ಜಾಹಿರುಗೊಳಿಸಿದ್ದೇವೆ. ಇಂಗ್ಲೆಂಡನ್ನು ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ, "ನೀವು ನಮ್ಮನ್ನಾಳಿದವರಿರಬಹುದು, ಆದರೆ ಇನ್ನೆಂದೂ ಯಾವ ರೀತಿಯಲ್ಲೂ ಆಳುವವರಲ್ಲ", ಎಂಬ ಸಂದೇಶವನ್ನು ಬ್ರಿಟಿಷರಿಗೆ ರವಾನಿಸಿದ್ದೇವೆ. "ಮುಂದಿನ ದಿನಗಳಲ್ಲಿ ಇಡೀ ವಿಶ್ವವನ್ನಾಳಬಲ್ಲ ರಾಷ್ಟ್ರ ಭಾರತ", ಎಂಬ ಸೂಚನೆಯನ್ನು ಇಡೀ ವಿಶ್ವಕ್ಕೇ ನೀಡಿದ್ದೇವೆ.
ನನ್ನ ಈ ಮಾತು ಕೊಂಚ ಉತ್ಪ್ರೇಕ್ಷೆಯೆನ್ನಿಸಬಹುದು. ಆದರೆ, ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕೆಲವೇ ದಿನಗಳಿರುವವರೆಗೂ ವಿಶ್ವಕ್ಕೆ ನಮ್ಮ ಸಾಮರ್ಥ್ಯದ ಬಗ್ಗೆ ಅನುಮಾನವಿತ್ತು. ಇಡೀ ವಿಶ್ವವೇ ಮೂಗಿನಮೇಲೆ ಬೆರಳಿಟ್ಟುಕೊಳ್ಳುವಂತೆ ಕ್ರೀಡಾಕೂಟವನ್ನು ನಡೆಸುವುದರ ಮೂಲಕ ಆ ಅನುಮಾನ ಸುಳ್ಳೆಂದು ಸಾಬೀತುಪಡಿಸಿದ್ದೇವೆ. ವಿಶ್ವವು ಭಾರತದ ಬಗ್ಗೆ ಇಂದು ಪಡುತ್ತಿರುವ ಈ ಅಚ್ಚರಿಯೇ ಭಾರತದ ವಿಶ್ವನಾಯಕತ್ವದ ಸಾಮರ್ಥ್ಯಕ್ಕೆ ಸಾಕ್ಷಿ.
ಕ್ರೀಡಾ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತಾನು ದಾಪುಗಾಲಿಟ್ಟು ಮುಂದುವರಿಯುತ್ತಿದ್ದೇನೆಂದು ಭ್ರಮಿಸಿರುವ ಚೀನಾ ಕುರಿತು ಈ ಸಂದರ್ಭದಲ್ಲಿ ಒಂದು ಮಾತು ಹೇಳಬೇಕು. ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನಾವು ಕ್ರೀಡಾಳುಗಳನ್ನು ತಯಾರುಮಾಡಿದಹಾಗೆ ನಾವು ಕಾಮನ್ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ಲಕ್ಷಾಂತರ ಎಳೆಯರನ್ನು ವರ್ಷಗಳ ಕಾಲ ಇನ್ನಿಲ್ಲದ ಒತ್ತಡಕ್ಕೊಳಪಡಿಸಿ ಹಿಂಸಿಸಿ ತಯಾರುಮಾಡಲಿಲ್ಲ. ಸ್ವಇಚ್ಛೆಯಿಂದ ಕ್ರೀಡೆಯತ್ತ ಒಲಿದವರನ್ನು ಪ್ರೀತ್ಯಭಿಮಾನಗಳಿಂದ ಈ ಕ್ರೀಡಾಕೂಟಕ್ಕಾಗಿ ಭಾರತವು ಅಣಿಗೊಳಿಸಿತು. ಪದಕಗಳನ್ನು ಗೆದ್ದಾಗ ತರಬೇತುದಾರರು ತೋರುತ್ತಿದ್ದ ಸಂಭ್ರಮ ಸಡಗರಗಳೇ ಇದಕ್ಕೆ ಸಾಕ್ಷಿ. ಅಂತಹ ಸಂಭ್ರಮಭಾವವನ್ನು ಒಲಿಂಪಿಕ್ಸ್ ವೇಳೆ ಚೀನಾದ ತರಬೇತುದಾರರಲ್ಲಿರಲಿ, ಪದಕ ಗೆದ್ದ ಆಟಗಾರರ ಮುಖಗಳಲ್ಲೂ ನಾವು ಕಾಣಲಿಲ್ಲ! ಒತ್ತಡಭರಿತ ಪ್ರಗತಿ ಚೀನಾದ್ದಾದರೆ ನಮ್ಮದು ಮುಕ್ತ ವಾತಾವರಣದಿಂದ ಕೂಡಿದ ಪ್ರಗತಿ ಎಂಬುದನ್ನು ಕಾಮನ್ವೆಲ್ತ್ ಕ್ರೀಡಾಕೂಟದ ಮೂಲಕ ಜಗತ್ತಿಗೆ ನಾವಿಂದು ಸಾರಿದ್ದೇವೆ.
೧೯ನೇ ಕಾಮನ್ವೆಲ್ತ್ ಕ್ರೀಡಾಕೂಟದ ಯಶಸ್ಸು ಮತ್ತು ಪದಕ ಗಳಿಕೆಯ ಸಾಧನೆ ಇವುಗಳಿಂದ ಭಾರತದಲ್ಲಿ ಮೂಡಿರುವ ಅತಿದೊಡ್ಡ ಆಶಾಕಿರಣವೆಂದರೆ ಕ್ರಿಕೆಟ್ಟಿನಂತೆಯೇ ಇತರ ಆಟಗಳಿಗೂ ಇನ್ನಾದರೂ ಇಲ್ಲಿ ಸೂಕ್ತ ಪ್ರೋತ್ಸಾಹ ಸಿಕ್ಕೀತೆಂಬುದು. ಪೋಷಕರು ತಮ್ಮ ಮಕ್ಕಳನ್ನು ವಿವಿಧ ಆಟೋಟಗಳಲ್ಲಿ ಹೆಚ್ಚೆಚ್ಚು ತೊಡಗಿಸಿಯಾರೆಂಬ ನಿರೀಕ್ಷೆಯೂ ಇಂದು ಭಾರತದ್ದಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಇದು ಸಂತಸದ ಸಂಗತಿ.
ಮೂಲದಲ್ಲಿ ನಾನು ಕಾಮನ್ವೆಲ್ತ್ ಕ್ರೀಡಾಕೂಟದ ಪ್ರಸಕ್ತ ರೀತಿರಿವಾಜುಗಳ ವಿರೋಧಿ. ಬ್ರಿಟಿಷರಿಂದ ಆಳ್ವಿಕೆಗೊಳಗಾಗಿದ್ದ ರಾಷ್ಟ್ರಗಳ ಪರಸ್ಪರ ಸ್ನೇಹದ ದ್ಯೋತಕವಾಗಿಯಷ್ಟೇ ನಡೆಯಬೇಕಾದ ಈ ಕ್ರೀಡಾಕೂಟವು ಇಂಗ್ಲೆಂಡಿನ ಅರಸೊತ್ತಿಗೆಗೆ ಈ ರಾಷ್ಟ್ರಗಳ ದಾಸ್ಯದ ಕುರುಹಾಗಿ ನಡೆಯುತ್ತಿರುವುದು ಖಂಡನೀಯ. ಕ್ರೀಡಾಕೂಟನಡೆಯುವ ಆಯಾ ದೇಶದ ಮುಖ್ಯಸ್ಥರು ಕ್ರೀಡಾಕೂಟವನ್ನು ಉದ್ಘಾಟಿಸುವ ಮತ್ತು ಸಮಾರೋಪಗೊಳಿಸುವ ನ್ಯಾಯಯುತ ಕ್ರಮಕ್ಕೆ ಬದಲಾಗಿ ಇಂಗ್ಲೆಂಡಿನ ರಾಣಿಮನೆತನಕ್ಕೆ ಈ ಗೌರವ ಸಲ್ಲುತ್ತಿರುವುದು ಕಾಮನ್ವೆಲ್ತ್ ರಾಷ್ಟ್ರಗಳ ಗತ ದಾಸ್ಯವನ್ನು ನೆನಪಿಸುವ ಮತ್ತು ಒಂದು ರೀತಿಯಲ್ಲಿ ಸಮರ್ಥಿಸುವ ಕ್ರಮವಾಗಿದೆ. ಇದು ಸರಿಯಲ್ಲ. ಆದರೀಗ ಆ ವಿಷಯವನ್ನು ವಾದಕ್ಕೆಳೆಯುವುದಕ್ಕಿಂತ ಭಾರತದ ಅದ್ಭುತ ಯಶಸ್ಸನ್ನು ಆನಂದಿಸುವುದು ಉಚಿತವೆನ್ನಿಸುತ್ತದೆ. ಮುಂದೆ ಕ್ರಮೇಣ ಇಂಗ್ಲೆಂಡಿನ ರಾಣಿಮನೆತನದ ಕೈಯಿಂದ ಯಜಮಾನಿಕೆಯ ಔಪಚಾರಿಕ ದಂಡವು ಕ್ರೀಡಾಕೂಟ ಏರ್ಪಡಿಸುವ ರಾಷ್ಟ್ರದ ಕೈಗೆ ಹೋಗುವಂತೆ ಮಾಡೋಣ ಬಿಡಿ.
ಕೊನೆಯಲ್ಲಿ, ಕ್ರೀಡಾಕೂಟದಲ್ಲಿ ನಾನು ಗಮನಿಸಿದ ಕೆಲವು ಮಿಸಲೇನಿಯಸ್ ಸಂಗತಿಗಳ ಬಗ್ಗೆ ಒಂದೆರಡು ಮಾತು:
* ಸಮಾರೋಪ ಸಮಾರಂಭದ ತನ್ನ ಭಾಷಣದಲ್ಲಿ ಸುರೇಶ್ ಕಲ್ಮಾಡಿ ಮಹಾಶಯನು ಸೋನಿಯಾ ಗಾಂಧಿಯಿಂದ ಮೊದಲ್ಗೊಂಡು ಅನೇಕ ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ಹೊಗಳತೊಡಗಿದ್ದು ಆ ಸಂದರ್ಭಕ್ಕೆ ಉಚಿತವೆನಿಸಲಿಲ್ಲ. ರಾಹುಲ್ ಗಾಂಧಿಯನ್ನು ಹೊಗಳಿ ವಂದಿಸಿದ್ದಂತೂ ಸರಿಯಲ್ಲವೇ ಅಲ್ಲ.
* ಕ್ರೀಡಾಕೂಟಕ್ಕೆ ಮನಮೋಹನ್ ಸಿಂಗ್ ಹಣ ಕೊಟ್ಟದ್ದನ್ನು ಕಲ್ಮಾಡಿ ಹಾಡಿ ಹೊಗಳಿದ್ದು ತರವಲ್ಲ. ಸಿಂಗ್ ಕೊಟ್ಟದ್ದು ದೇಶದ ಪ್ರಜೆಗಳ ಹಣವನ್ನೇ ಹೊರತು ತನ್ನ ಸ್ವಂತ ಹಣವನ್ನಲ್ಲ.
* ಭಾರತವು ೧೦೧ ಪದಕಗಳನ್ನು ಗೆದ್ದಿದೆ. ಈ ಸಂಖ್ಯೆ ಭಾರತೀಯರಿಗೆ, ಮುಖ್ಯವಾಗಿ ಬಹುಸಂಖ್ಯಾತ ಹಿಂದೂಗಳಿಗೆ ಶುಭಸಂಖ್ಯೆ.
* ಇದುವರೆಗೆ ’ಟ್ವೆಂಟಿ ಟ್ವೆಂಟಿ’ ಆಟ ಮಾತ್ರ ಜನಪ್ರಿಯವಾಗಿತ್ತು, ಇನ್ನು ’ಟ್ವೆಂಟಿ ಟೆನ್’ ಕ್ರೀಡಾಕೂಟವೂ ಭಾರತದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆನಿಲ್ಲುತ್ತದೆ. ಜೈಹಿಂದ್.