63. ಗುಲಾಬಿ ಕಿತ್ತವರು ಯಾರು?
ತೇಜಸ್ ದೊಡ್ಡ ಬಂಗಲೆಯ ಕಂಪೌಂಡಿನೊಳಗೆ ವಾಸ ಮಾಡುತ್ತಿದ್ದ - ಮೂರು ಕೋಣೆಗಳ ಪುಟ್ಟ ಮನೆಯಲ್ಲಿ. ಅವನ ತಂದೆತಾಯಿ ಆ ಬಂಗಲೆಯ ಧನಿಕನ ಬಳಿ ಕೆಲಸ ಮಾಡುತ್ತಿದ್ದರು. ಅವನ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳಿಗೆ ಹಾಸಿಗೆಯಿಂದ ಎದ್ದೇಳಲಿಕ್ಕೂ ಕಷ್ಟವಾಗುತ್ತಿತ್ತು. ಅವಳ ಮುಖದಲ್ಲಿ ಯಾತನೆ ಎದ್ದು ಕಾಣುತ್ತಿತ್ತು.
ಅದೊಂದು ದಿನ ಧನಿಕನ ಬಂಗಲೆಯ ಉದ್ಯಾನದಲ್ಲಿ ಗುಲಾಬಿ ಗಿಡವೊಂದರಲ್ಲಿ ಹಲವು ಹೂಗಳು ಅರಳಿದ್ದನ್ನು ಕಂಡ ತೇಜಸ್ನ ಮುಖ ಅರಳಿತು. ಅವನು ಗುಲಾಬಿ ಹೂವೊಂದನ್ನು ಕಿತ್ತುಕೊಂಡ - ತನ್ನ ಅಜ್ಜಿಗೆ ಕೊಡಲಿಕ್ಕಾಗಿ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದವನು ಅಂದುಕೊಂಡ. ಅವನು ಆ ಚಂದದ ಗುಲಾಬಿ ಹೂ ಕೊಟ್ಟಾಗ ಅವನ ಅಜ್ಜಿಯ ಮುಖವೂ ಅರಳಿತು. ಎಷ್ಟೋ ದಿನಗಳ ನಂತರ ಅಜ್ಜಿಯ ಮುಖದಲ್ಲೊಂದು ಮುಗುಳ್ನಗು ಕಂಡ ತೇಜಸ್ ಮರುದಿನವೂ ಗುಲಾಬಿ ಹೂ ಕಿತ್ತು ತಂದು ಅಜ್ಜಿಗಿತ್ತ. ಹೀಗೆ ಅಜ್ಜಿಗೆ ದಿನದಿನವೂ ಗುಲಾಬಿ ಹೂ ತಂದು ಕೊಡುತ್ತಿದ್ದ ತೇಜಸ್.
ಕೆಲವು ದಿನಗಳ ನಂತರ ಉದ್ಯಾನದಿಂದ ಯಾರೋ ಗುಲಾಬಿ ಹೂ ಕೀಳುತ್ತಿರುವುದನ್ನು ಧನಿಕ ಗಮನಿಸಿದ. ಕೋಪಿಸಿಕೊಂಡ ಆತ ಎಲ್ಲ ಕೆಲಸಗಾರರನ್ನೂ ಕರೆಸಿ, ಒಬ್ಬೊಬ್ಬರನ್ನೇ ಗುಲಾಬಿ ಹೂ ಕಿತ್ತಿದ್ದೀರಾ? ಎಂದು ಕೇಳಿದ. ತೇಜಸ್ನನ್ನು ಪ್ರಶ್ನಿಸಿದಾಗ ಅವನು ತಾನು ದಿನಕ್ಕೊಂದು ಗುಲಾಬಿ ಹೂ ಕಿತ್ತದ್ದನ್ನು ಒಪ್ಪಿಕೊಂಡ. ಧನಿಕನಿಗೆ ಬಹಳ ಸಿಟ್ಟು ಬಂತು. ಆದರೆ, ತನ್ನ ಅಜ್ಜಿಯನ್ನು ಗೆಲುವಾಗಿಸಲಿಕ್ಕಾಗಿ ಆಕೆಗೆ ಆ ಗುಲಾಬಿ ಹೂವನ್ನು ಕೊಡುತ್ತಿದ್ದೆ ಎಂದು ತೇಜಸ್ ಹೇಳಿದಾಗ ಧನಿಕನ ಸಿಟ್ಟು ತಣ್ಣಗಾಯಿತು. ಅವನು ತೇಜಸ್ನ ಬೆನ್ನು ತಟ್ಟಿ ಹೇಳಿದ, "ನನ್ನ ಉದ್ಯಾನದ ಗುಲಾಬಿ ಹೂಗಳನ್ನು ಇದಕ್ಕಿಂತ ಒಳ್ಳೆಯ ರೀತಿಯಲ್ಲಿ ಉಪಯೋಗಿಸುವ ಯಾವ ದಾರಿಯೂ ನನಗೆ ಕಾಣಿಸುತ್ತಿಲ್ಲ.”