ಅಂಗೈಲೊಂದು ಪುಸ್ತಕಾಲಯ

ಅಂಗೈಲೊಂದು ಪುಸ್ತಕಾಲಯ

ಇಂದಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ  ನನ್ನ ಲೇಖನದ ಅಂತರ್ಜಾಲ ಪುಟ ಇಲ್ಲಿ ಲಭ್ಯವಿದೆ.

(ಮೂಲ ಪ್ರತಿ)

ಪುಸ್ತಕ ಪ್ರಿಯರಿಗೆ ಹೊಸದೊಂದು ಪುಸ್ತಕ ಕೊಳ್ಳುವುದು ಸಂತಸದ ವಿಷಯ. ಗ್ರಂಥಾಲಯಕ್ಕೋ, ಪುಸ್ತಕ ಮಳಿಗೆಗೋ, ಪುಸ್ತಕ ಮೇಳಕ್ಕೋ ಹೋಗಿ ಹೊಸ ಪುಸ್ತಕ ತಂದು ಓದುವಾಗ ಅದರಿಂದ ಹೊರಸೂಸುವ ಹೊಚ್ಚ ಹೊಸ ಪುಟಗಳ ಸುವಾಸನೆ ಆಘ್ರಾಣಿಸುತ್ತಾ ಓದುವುದು ಚಿಕ್ಕಂದಿನಿಂದಲೂ ಅನೇಕರಿಗೆ ಅಭ್ಯಾಸವಾಗಿರುತ್ತದೆ. ಮತ್ತು ಅದು ಖುಷಿ ಕೊಡುತ್ತದೆ.  ಕಾಲ ಬದಲಾದಂತೆ ಓದುವ ಪುಸ್ತಕಗಳ ಸಂಖ್ಯೆ, ವಿಷಯಗಳ ಪಟ್ಟಿ, ಓದುಗನಿಗೆ ಇರುವ ಪುಸ್ತಕಗಳ ಆಯ್ಕೆ ಪಟ್ಟಿ ಬೆಳೆಯುತ್ತಾ ಬಂದಿದೆ. ತಂತ್ರಜ್ಞಾನ ಬೆಳೆದಂತೆ ನಮಗೆ ಬೇಕಿರುವ ಪುಸ್ತಕಗಳ ಹುಡುಕಾಟಕ್ಕೆ ಅಂತರ್ಜಾಲದ ಪುಟಗಳು ಸಹಾಯ ಮಾಡಿರುವುದೇ ಅಲ್ಲದೆ  ಪುಸ್ತಕಗಳು ನಮ್ಮ ಕಂಪ್ಯೂಟರ್ ತೆರೆ ಅಥವಾ ಹಾಗೂ ಇತರೆ ವಿದ್ಯುನ್ಮಾನ (ಡಿಟಿಟಲ್) ಉಪಕರಣಗಳ ಮೂಲಕ ಇ-ಪುಸ್ತಕದ ರೂಪದಲ್ಲಿ ಕೂಡ ದೊರೆಯುವಂತಾಗಿದೆ. ಇಂತಹ ಇ-ಪುಸ್ತಕಗಳನ್ನು ಓದಲು ಸಹಾಯ ಮಾಡುವ ಇ-ಬುಕ್ ರೀಡರ್ ಗಳೂ ಬಂದಿವೆ. ಅದರಲ್ಲಿ ಮುಖ್ಯವಾಗಿರುವ ಅಮೇಜಾನ್ ನ ಕಿಂಡಲ್ (Kindle) ಮತ್ತು ಅಫಲ್ ಕಂಪನಿಯ ಐ-ಪ್ಯಾಡ್ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. 

ಅಮೆಜಾನ್ ಕಿಂಡಲ್

ಅಮೆಜಾನ್ ಡಾಟ್ ಕಾಂ ತನ್ನ ಇಂಟರ್ನೆಟ್ ತಾಣದಲ್ಲಿ ಬಳಕೆದಾರರು ಕೊಂಡ ಇ-ಪುಸ್ತಕ ಅಥವಾ ಡಿಜಿಟಲ್ ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು ಸುಲಭವಾಗಿ ತಾವಿರುವ ಕಡೆಯಲ್ಲೇ ಓದಲು ಸಾಧ್ಯವಾಗಿಸುವಂತಹ ಕಿಂಡಲ್ ಉಪಕರಣವನ್ನು ತನ್ನ ಸಹಾಯಕ ಸಂಸ್ಥೆ ಲ್ಯಾಬ್ ೧೨೬ ಮೂಲಕ ೨೦೦೭ರ ನವೆಂಬರ್ ೧೯ ರಂದು ಪರಿಚಯಿಸಿತು. ಇ-ಪುಸ್ತಕಗಳನ್ನು ಸಾಮಾನ್ಯ ಪುಸ್ತಕದಂತೆಯೇ ಓದುವ ಅನುಭವವನ್ನು ಕೊಡುವ ಈ ಉಪಕರಣ, ಕಿಂಡಲ್ ತಂತ್ರಾಂಶ ಹಾಗೂ ಕಂಪ್ಯೂಟರ್  ಯಂತ್ರಾಂಶಗಳ (ಹಾರ್ಡ್ವೇರ್ಸ್) ಸವಿ ಮಿಶ್ರಣ. 

ಇ-ಇಂಕ್ (E-Ink) ಎಲೆಕ್ಟ್ರಾನಿಕ್ ಹಾಳೆ ಬಳಸುವ ಕಿಂಡಲ್, ಅಮೇಜಾನ್ ನ ವಿಸ್ಪರ್ ನೆಟ್ ಜಾಲದ ಮೂಲಕ ಎ.ಟಿ & ಟಿ ದೂರಸಂಪರ್ಕ ಸಂಸ್ಥೆಯ ಅಂತರಾಷ್ಟ್ರೀಯ ನಿಸ್ತಂತು ಸೇವೆಯ ಮೂಲಕ ಪುಸ್ತಕಗಳನ್ನು ನಿಮಿಷಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳುತ್ತದೆ. ಹೀಗಾಗಿ ಕಿಂಡಲ್ ಜೊತೆಯಲಿದ್ದರೆ ಹೊಸ ಪುಸ್ತಕಗಳನ್ನು ಇಳಿಸಿಕೊಳ್ಳಲು ಕಂಪ್ಯೂಟರ್  ಅಥವಾ ಇಂಟರ್ನೆಟ್  ಸಂಪರ್ಕ ಇರಬೇಕೆಂದೇನಿಲ್ಲ ಹಾಗೂ ಅಮೇಜಾನ್ ವಿಸ್ಪರ್ ನೆಟ್ ಬಳಕೆಗೆ ಮಾಸಿಕ ಕಂತು ಅಥವಾ ನಿಸ್ತಂತು ಸಂಪರ್ಕಕ್ಕೆ ಖರ್ಚು ಮಾಡಬೇಕಿಲ್ಲ. ಅಮೇರಿಕಾದಾದ್ಯಂತ ಅನೇಕ ದೂರ ಸಂಪರ್ಕಜಾಲಗಳ ಮೂಲಕ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಕಿಂಡಲ್ ನೀಡುತ್ತದೆ ಹಾಗೂ ದಿನೇ ದಿನೇ ಇದರ ವ್ಯಾಪ್ತಿ ಇತರೆ ದೇಶಗಳಿಗೂ ಹಬ್ಬುತ್ತಿದೆ. ಕೇವಲ ಪುಸ್ತಕಗಳನ್ನು ಓದುವುದಷ್ಟೇ ಅಲ್ಲದೆ ಆಡಿಯೋ ಬುಕ್, ಎಂ.ಪಿ೩ ಸಂಗೀತವನ್ನು ಕೂಡ ಇದರಲ್ಲಿ ಕೇಳಬಹುದಾಗಿದೆ. ಇತ್ತೀಚಿನ ಕಿಂಡಲ್ ಆವೃತ್ತಿಗಳಲ್ಲಿ ಪಿಡಿಎಫ್ ಹಾಗೂ ಇತರೆ ಕಡತಗಳನ್ನು ಓದಬಹುದು. ಇದರಲ್ಲಿ ಇಂಟರ್ನೆಟ್ ಸಂಪರ್ಕ ಬಳಸಿಕೊಳ್ಳುವ ವ್ಯವಸ್ಥೆಯನ್ನೂ ಕೂಡ ಬ್ರೌಸರ್ ಮೂಲಕ ಕಲ್ಪಿಸಿಕೊಡಲಾಗಿದೆ. 

ಕಿಂಡಲ್ ಮೂಲತಹ: ಲಿನಕ್ಸ್ ತಂತ್ರಾಂಶ ಬಳಸುತ್ತದೆ. ಕಿಂಡಲ್ ೨ ಆವೃತ್ತಿ ೪ ಗಿಗಾಬೈಟ್ ಪ್ಲಾಶ್ ಮೆಮೋರಿ, ಸುತ್ತಳತೆ ೬", ೯.7" ಸುತ್ತಳತೆಯ ಸ್ಕ್ರೀನ್ ಆಯ್ಕೆ , ಕಂಪ್ಯೂಟರ್ ಗೆ  ಹೊಂದಿಸಲು ಯು.ಎಸ್.ಬಿ ಪೋರ್ಟ್, ಆಡಿಯೋ ಬುಕ್ ಗಳನ್ನು ಓದಲು ೩.೫ ಮಿಮಿ ಸ್ಟೀರಿಯೋ ಹೆಡ್ಫೋನ್ ಜಾಕ್ ಅಲ್ಲದೇ ಸ್ಟೀರಿಯೋ ಸ್ಪೀಕರ್ ಗಳನ್ನೂ ತನ್ನಲ್ಲೇ ಹುದುಗಿಸಿಟ್ಟು ಕೊಂಡಿದೆ. ಅಮೇಜಾನ್ ವಿಸ್ಪರ್ ನೆಟ್ ಜಾಲಕ್ಕೆ ಇದು EVDO/CDMA ಮೋಡೆಮ್ ನ ಮೂಲಕ  ಸಂಪರ್ಕ ಕಲ್ಪಿಸಿಕೊಳ್ಳುತ್ತದೆ. 

ಕಿಂಡಲ್ ಗೆ ೫ ಲಕ್ಷ ಪುಸ್ತಕಗಳ ಆಯ್ಕೆಯನ್ನು ಅಮೆಜಾನ್ ತನ್ನ್ ಅ ವೆಬ್ ಸ್ಟೋರ್ ಮೂಲಕ ಕೊಡುತ್ತದೆ, ಐ ಪ್ಯಾಡ್ ನಲ್ಲಿ ಇದರ ಸಂಖ್ಯೆ ೬೦೦೦೦ ಮಾತ್ರ.  6" ಸುತ್ತಳತೆಯ ಪರದೆ ಇರುವ ಕಿಂಡಲ್ ಅನ್ನು ಭಾರತಕ್ಕೆ ತರಿಸಿಕೊಳ್ಳುವುದಕ್ಕೆ 16900 ರೂಪಾಯಿಗಳಷ್ಟು , ೯.೭" ನದಕ್ಕೆ ೩೧೦೦೦ ರೂಪಾಯಿ ಖರ್ಚಾಗುತ್ತದೆ (ಅಂಚೆ, ತೆರಿಗೆ ಇತ್ಯಾದಿಗಳ ಸಹಿತ). ಎರಡು ವಾರಗಳ ಬ್ಯಾಟರಿ ಮೂಲಕ ಕಿಂಡಲ್ ಅನ್ನು ನಿರಾಯಸವಾಗಿ ಬಳಸಬಹುದು. ತನ್ನ ಪರದೆಯ ಹಿಂಬದಿಯಿಂದ ಬೆಳಕನ್ನು ಸೂಸುವ ಕಿಂಡಲ್ ಸೂರ್ಯನ ಬೆಳಕಿನಲ್ಲೂ ಪುಸ್ತಕ ಓದುವ ಅವಕಾಶ ಮಾಡಿಕೊಡುತ್ತದೆ. ಇತ್ತೀಚೆಗೆ ಅಮೆಜಾನ್ ತನ್ನ ಪುಸ್ತಕಗಳ ಮಾರಾಟ ಹೆಚ್ಚಿಸಲು ಕಿಂಡಲ್ ತಂತ್ರಾಂಶವನ್ನು ಕಿಂಡಲ್ ಅಲ್ಲದೇ ಐ-ಫೋನ್, ಕಂಪ್ಯೂಟರ್ ಇತ್ಯಾದಿಗಳಲ್ಲಿ ಬಳಸುವ ಆಯ್ಕೆಯನ್ನೂ ಕೊಟ್ಟಿದೆ. ನಿಮ್ಮ ಕೈನಲ್ಲಿರುವ ಮೊಬೈಲ್ ಇತ್ಯಾದಿಗಳಲ್ಲಿ ಕಿಂಡಲ್ ಸಾಪ್ಟ್ವೇರ್ ಬಳಸಿದರೆ ಅದೇ ಕಿಂಡಲ್ ಉಪಕರಣವಾಗಿ ಪರಿವರ್ತನೆಯಾಗುತ್ತದೆ ಅದೂ ಉಚಿತವಾಗಿ. 


ಅಫಲ್ ಐ-ಪ್ಯಾಡ್

 ಮ್ಯಾಕ್ ಕಂಪ್ಯೂಟರ್, ಐ-ಪಾಡ್, ಐ-ಫೋನ್ ಗಳಿಂದ ಮನೆಮಾತಾಗಿರುವ ಆಫಲ್, ಇತ್ತೀಚೆಗೆ ತನ್ನ ಹೊಸ ಅವಿಷ್ಕಾರವಾದ ಐ-ಪ್ಯಾಡ್ ಅನ್ನು ಜಗತ್ತಿನಾದ್ಯಂತ ಬಿಡುಗಡೆ ಮಾಡಿತು. ದೊಡ್ಡ ಐ-ಪ್ಯಾಡ್ಕಿಂಡಲ್ ನ ಬೆಲೆಗಿಂತ ಕೇವಲ $10 ರಷ್ಟೇ ಹೆಚ್ಚು ಬೆಲೆಯ ಐ-ಪ್ಯಾಡ್ ಇ-ಬುಕ್ ಪ್ರಿಯರಷ್ಟೇ ಅಲ್ಲದೇ ಮತ್ತೂ ಅನೇಕರ ಹುಬ್ಬೇರಿಸುವಂತೆ ಮಾಡಿದ್ದಂತೂ ನಿಜ. ಅಫಲ್ ಉತ್ಪನ್ನಗಳಿಗೆ ಮತ್ತು ಅದರ ಹೊಸ ತಂತ್ರಾಂಶಗಳಿಗೆ ಯಾವಾಗಲೂ ಬೇಡಿಕೆ ಕಡಿಮೆಯಾಗಿಲ್ಲ. ತನ್ನ ಬಳಕೆದಾರರು ಮನಸೋಲುವಂತಹ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಗಳನ್ನು ತಯಾರಿಸುವುದರಲ್ಲಿ, ಹೊಸತನವನ್ನು ಅಳವಡಿಸಿಕೊಳ್ಳುವ ಆಫಲ್ ಎತ್ತಿದ ಕೈ. ಈ ಬಾರಿ ಐ-ಪ್ಯಾಡ್ ನೊಂದಿಗೆ ಮಾಡಿದ್ದೂ ಅದನ್ನೇ. ಇದು ಬರೀ ಇ-ಬುಕ್ ರೀಡರ್ ಅಲ್ಲ, ಸಣ್ಣದೊಂದು ಲ್ಯಾಪ್ ಟಾಪ್ ಎನ್ನಬಹುದು. 

ಇ-ಪುಸ್ತಕಗಳನ್ನು ಓದುವುದರ ಜೊತೆ, ಕಂಪ್ಯೂಟರ್ ಆಟಗಳನ್ನು ಆಡಲು, ಸಿನೆಮಾ, ಇಂಟರ್ನೆಟ್, ಆಫೀಸ್ ಕಡತಗಳನ್ನು ವಿಲೇವಾರಿಗೆ ಐ-ಪ್ಯಾಡ್ ಬಳಸ ಬಹುದು. ಈಗಾಗಲೇ ಲಭ್ಯವಿರುವ ಸಾವಿರಾರು ಐ-ಫೋನ್/ಐ-ಪಾಡ್ ತಂತ್ರಾಂಶಗಳ ಬಳಕೆ ಇದರ ಉಪಯೋಗವನ್ನು ಇಮ್ಮಡಿಗೊಳಿಸುತ್ತದೆ. ಇದೆಲ್ಲವೂ ಈಗ 'gadget freaks' (ಹೊಸ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಆಸಕ್ತಿ  ತೋರಿಸುವವ ಯುವ ಪೀಳಿಗೆ) ಗಳ ಕೊಳ್ಳುವ ಪಟ್ಟಿಯಲ್ಲಿ ಐ-ಪ್ಯಾಡ್ ಮೊದಲನೇ ಸ್ಥಾನ ಪಡೆಯುವಂತೆ ಮಾಡಿದೆ. 

ಐ-ಪ್ಯಾಡ್ ನ ಇತರೆ ವೈಶಿಷ್ಟ್ಯತೆಗಳೆಂದರೆ ಆಫಲ್ ನ ಮ್ಯಾಕ್ ಓ ಎಸ್ ನ ಮೊಬೈಲ್ ಆವೃತ್ತಿ, ಬಣ್ಣದ ೯.೭" ಪರದೆ ಮಲ್ಟಿ ಟಚ್ ಜೊತೆಗೆ, ೦.೫" ದಪ್ಪ, ಸ್ಲೈಡ್ ಮಾಡಬಹುದಾದ ಕೀಲಿ (lock), ವರ್ಚುಅಲ್ ಕೀಲಿ ಮಣೆ (ಸಾಫ್ಟ್ವೇರ್ ನಲ್ಲೇ ಹುದುಗಿರುವಂತದ್ದು), ಹೆಡ್ ಸೆಟ್ , ೧೪೦೦೦೦ ಹೆಚ್ಚು ಐ-ಪೋನ್ ಮತ್ತು ಐಪ್ಯಾಡ್ ಅಪ್ಲಿಕೇಷನ್ ಗಳನ್ನು ಬಳಸುವ ಅವಕಾಶ, ಐ-ಬುಕ್ ಮಳಿಗೆ, ೧೬, ೩೨, ೬೪ ಗಿಗಾಬೈಟ್ (GB) ಮೆಮೋರಿಯ ಆಯ್ಕೆ (ಕಿಂಡಲ್ ನಲ್ಲಿ ಇದು ಕೇವಲ ೪ GB ಮಾತ್ರ), ವೈ, ಫೈ ಮತ್ತು ೩ಜಿ, ಜಿಎಸ್ ಎಮ್/ಜಿ.ಪಿಽಅರ್ ಎಸ್/ಎಡ್ಜ್ 850/900/1800/1900, ಬ್ಲೂ- ಟೂತ್ ಹೀಗೆ ಅನೇಕ ನೆಟ್ವರ್ಕ್ ಗಳ ಆಯ್ಕೆ ಸೌಲಭ್ಯ, ಲೈಟ್ ಸೆನ್ಸರ್, ಆಸ್ಸಿಲೆರೋಮೀಟರ್, ಲೈಟ್ ಸೆನ್ಸಾರ್, ೧೦ ಘಂಟೆಗಳು ನೆಟ್ವರ್ಕ್ ಸಹಿತ ಕೆಲಸ ಮಾಡುವ ಕಾರ್ಯಕ್ಷಮತೆ ಇದೆಲ್ಲವನ್ನು ಸಾಧ್ಯವಾಗಿಸಲಿಕ್ಕೆ ೧ ಗಿಗಾ ಹರ್ಟ್ಸ್ (Ghz) ನ ಸಿ.ಪಿಯು (CPU) ಅನ್ನು ತನ್ನಲ್ಲಿರಿಸಿ ಕೊಂಡಿದೆ. ಎಲ್ಲ ಕೇವಲ ಹತ್ತು ಡಾಲರ್ ಎಂದರೆ ೫೦೦ ರೂಪಾಯಿಗಳ ಹೆಚ್ಚುವರಿ ಖರ್ಚಿನಲ್ಲಿ. 

ಇ-ಪುಸ್ತಕಗಳ ಜೊತೆ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಇ-ಪಬ್ ಕಡತಗಳನ್ನೂ ಕೂಡ ಐ-ಪ್ಯಾಡ್ ನಲ್ಲಿ ಬಳಸಬಹುದಾಗಿದ್ದು, ಕಿಂಡಲ್ ಇದರ ಬಗ್ಗೆ ಇನ್ನೂ ಚಿಂತಿಸುತ್ತಿದೆ. ಕಿಂಡಲ್ ಓದುಗರಿಗೆ ಬೇಕಿರುವ ಉಪಕರಣವನ್ನು ನೀಡಿದರೆ, ಐ-ಪ್ಯಾಡ್  ಒಂದು ಹೆಜ್ಜೆ ಮುಂದೆ ಹೋಗಿ ಬಳಕೆದಾರನಿಗೆ  ಬೇಕೆನಿಸಬಹುದಾದ ಎಲ್ಲ ಅನುಭವಗಳನ್ನು ಕೊಡುತ್ತದೆ. ಹಾಳೆಯನ್ನು ಮಡಿಚುವ ಸೌಲಭ್ಯ ಐ-ಪ್ಯಾಡ್ ನಲ್ಲಿ ನೋಡಿ, ಕಿಂಡಲ್ ನ ಸಾಮಾನ್ಯ ಕೀ-ಬೋರ್ಡ್ ನೋಡಿದಾಗ ಇದು ಹಳತಾಯಿತು ಎನ್ನಿಸುವುದು ಸಹಜವೇ. 

ಅಮೇಜಾನ್ ನ ಪುಸ್ತಕ ಮಳಿಗೆ ಯಲ್ಲಿನ ೫ಲಕ್ಷ ಪುಸ್ತಕಗಳ ಸ್ಯಾಂಪಲ್ ಗಳನ್ನು ಓದಿ, ಪುಸ್ತಕ ಕೊಂಡು ಓದುವ ಅವಕಾಶ ಬಳಕೆದಾರನಿಗಿದೆ. ಐ-ಪ್ಯಾಡ್ ತನ್ನ ಪ್ರಕಾಶಕರ ಪುಸ್ತಕಗಳ ಜೊತೆಗೆ ಐ-ಫೋನ್ ಕಿಂಡಲ್ ತಂತ್ರಾಂಶದ ಮೂಲಕ ಅಮೇಜಾನ್ ನ ಅಷ್ಟೂ ಪುಸ್ತಕಗಳ ಬಳಕೆಗೆ ಸೌಲಭ್ಯ ಒದಗಿಸುತ್ತದೆ. ಐ-ಬುಕ್ ನಲ್ಲಿನ ಬಣ್ಣದ ಪುಸ್ತಕಗಳು ಹೆಚ್ಚಾದಂತೆಲ್ಲಾ ಕಿಂಡಲ್ ನ ಕಪ್ಪು-ಬಿಳುಪಿನ ಪುಸ್ತಕಗಳು ಮಾಸಿದಂತೆ ಕಾಣುವುದನ್ನು ಅಮೇಜಾನ್ ಅರಿತು ಹೊಸ ಅನ್ವೇಷಣೆಯ ಗೋಜಿಗೆ ಹೋಗಬೇಕಿರುವ ಕಾಲ ಈಗ ಬಂದಾಗಿದೆ.  

ಅದೇನೇ ಇದ್ದರೂ ಕಿಂಡಲ್ ನ ಚಿಕ್ಕ ಆವೃತ್ತಿ ಐ-ಪ್ಯಾಡ್ ನ ಅರ್ಧ ಬೆಲೆಗೆ ಲಭ್ಯವಿದ್ದು, ಕೇವಲ ಪುಸ್ತಕಗಳನ್ನು ಮಾತ್ರ ಓದಲಿಕ್ಕೆ ಇಚ್ಚೆ ಪಡುವವರಿಗೆ ಈ ಕಿಂಡಲ್ ಸಾಕಾಗಬಹುದು. ಸ್ವಲ್ಪ ಹೆಚ್ಚು ಹಣವಿದ್ದು ದೊಡ್ಡ ಕಿಂಡಲ್ ತೆಗೆದು ಕೊಳ್ಳಲು ಸಾಧ್ಯವಿರುವವರು ಸ್ವಲ್ಪ ಯೋಚಿಸಿ ಐಪ್ಯಾಡ್ ಗೆ ಖಂಡಿತ ವಾಲುವುದು ಖಚಿತವಾಗುತ್ತಿರುವುದಕ್ಕೆ ಆಪಲ್ ಈಗಾಗಲೇ ಮಾರಿರುವ ಐ-ಪ್ಯಾಡ್ ನ ಸಂಖ್ಯೆ ಸಾಕ್ಷಿಯಾಗಿದೆ. ಮುವತ್ತೈದು ಸಾವಿರ ಕೊಟ್ಟು ಲ್ಯಾಪ್ ಟಾಪ್ ಪಡೆಯುತ್ತಿರುವ ನಮ್ಮಲ್ಲನೇಕರು ಐ-ವರ್ಕ್ ಇತ್ಯಾದಿ ತಂತ್ರಾಂಶಗಳನ್ನು ಅಳವಡಿಸಿಕೊಂಡಲ್ಲಿ ಐ-ಪ್ಯಾಡ್ ಬೇರೆಲ್ಲಾ ಮೊಬೈಲ್ ಉಪಕರಣಗಲಿಗಿಂತ ಹೆಚ್ಚಿನ ಸವಲತ್ತು ನಮಗೆ ಕೊಡಬಲ್ಲದು. ಇದರ ಸಾಧ್ಯಾಸಾಧ್ಯತೆಗಳನ್ನು ಇಂಟರ್ನೆಟ್ ನ ಅನೇಕ ಬ್ಲಾಗ್ ಗಳೂ ಇಂದಿಗೂ ಚರ್ಚಿಸುತ್ತಿವೆ. 

ಐ-ಪ್ಯಾಡ್ ಅಂಗೈನಲ್ಲೇ ಜಗತ್ತು ನೋಡಬಯಸುವವರಿಗೆ ಆಟಿಕೆ ಆಗಬಲ್ಲುದು, ಕಂಪ್ಯೂಟರ್, ಲ್ಯಾಪ್ಟಾಪ್ ಇತ್ಯಾದಿಗಳನ್ನು ದೂರವಿಟ್ಟು ಸಂಪೂರ್ಣ ಮೊಬೈಲ್ ಲೋಕದಲ್ಲಿ 'ಸ್ಟೈಲ್' ಆಗಿ ಮಿಂಚಬಹುದು. 


ಇನ್ಫಿಭೀಮ್ ಫೈ



ಹೊರ ದೇಶದ ಇ-ಬುಕ್ ರೀಡರ್ ಗಳ ಬಗ್ಗೆ ಇಷ್ಟೆಲ್ಲಾ ಹೇಳಿದ ಮೇಲೆ, ಭಾರತದ ಅಧಿಕೃತ ಭಾಷೆಗಳಲ್ಲೂ  ಇ-ಪುಸ್ತಕ ಓದಲು ಸಾಧ್ಯವಾಗಿಸಿರುವ , ಭಾರತದ ಮೊದಲ ಇ-ಬುಕ್ ರೀಡರ್ ಇನ್ಫಿಭೀಮ್ ಫೈ ಬಗ್ಗೆ ಹೇಳಲೇಬೇಕು. ಭಾರತದ ಅತಿದೊಡ್ಡ ಆನ್ಲೈನ್ ಮಳಿಗೆ ಇನ್ಫಿ ಭೀಮ್ ಸಂಸ್ಥೆ ಇದರ ನಿರ್ಮಾತೃವಾಗಿದ್ದು, ಕೇವಲ ೧೦೦೦೦ ರೂಗಳಿಗೆ ಈ ಉಪಕರಣವನ್ನು ತನ್ನ ವೆಬ್ ಸೈಟ್ ನಿಂದ ಮಾರಾಟ ಮಾಡುತ್ತಿದೆ. 



ಇನ್ಪಿ ಭೀಮ್ ಕಂಪೆನಿ ಅಮೇಜಾನ್ ಮಾದರಿಯಲ್ಲಿ ತನ್ನ ಮಳಿಗೆಯಲ್ಲಿನ ಒಂದು ಲಕ್ಷಕ್ಕೂ ಹೆಚ್ಚಿನ ಇ-ಪುಸ್ತಕಗಳನ್ನು ಕೊಂಡು ಓದಲು ಇದರಲ್ಲಿ ಸೌಲಭ್ಯ ಒದಗಿಸಿದೆ.  ಕಿಂಡಲ್  ನಂತೆ ೬" ನ ಇ-ಇಂಕ್ ಸ್ಕ್ರೀ ಹೊಂದಿರುವ ಇನ್ಫಿ ಭೀಮ್ "ಪೈ", PDF, EPUB, HTML, TXT, MOBI, DOC ಇತ್ಯಾದಿ ಕಡತಗಳನ್ನು ಓದಲಿಕ್ಕೆ ಇದರಲ್ಲಿ ಸಾಧ್ಯವಾಗುತ್ತದೆ. ಎಂ.ಪಿ೩ ಸಂಗೀತ ಕೇಳುವುದು, ಸುಡೋಕೊ ಇತ್ಯಾದಿ ಆಟಗಳನ್ನು ಆಡುವ ಅವಕಾಶ  ಇದೆ. ಇನ್ಫಿಭೀಮ್ ಪೈ ಐದುನೂರು ಪುಸ್ತಕಗಳನ್ನಿರಿಸಲು ಸಾಧ್ಯವಾಗುವ ೫೧೨ ಎಂಬಿ (MB) ಮೆಮೊರಿಯನ್ನು ಇದು ತನ್ನ ಒಳಗೇ ಇರಿಸಿಕೊಂಡಿದ್ದು, ೪ಜಿ.ಬಿ (GB) ವರೆಗಿನ SD ಕಾರ್ಡ್ ಅನ್ನು ಮೆಮೊರಿ ಸ್ಲಾಟ್ ಮೂಲಕ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಎಸ್.ಡಿ ಕಾರ್ಡ್ ಗೆ ನಮ್ಮದೇ ಕಡತಗಳನ್ನು ಕಾಪಿ ಮಾಡಿ ಹಾಕಿಕೊಳ್ಳಬಹುದು. ಆದ್ದರಿಂದ ಇ-ಪುಸ್ತಕಗಳ ಜೊತೆ ನಮ್ಮಲ್ಲಿರುವ ಇತರೆ ಪುಸ್ತಕಗಳನ್ನೂ ಓದಬಹುದು. ಇದರ ಜೊತೆ ಬರುವ ಯು.ಎಸ್.ಬಿ ಅಡ್ಯಾಪ್ಟರ್ ಬಳಸಿ ಕಂಪ್ಯೂಟರ್ ಜೊತೆ ಸಂಪರ್ಕವಿರಿಸಿಕೊಳ್ಳಬಹುದು ಹಾಗೂ ಬ್ಯಾಟರಿ ಚಾರ್ಚ್ ಕೂಡ ಮಾಡಿಕೊಳ್ಳಬಹುದು. ೪ ತಾಸು ಚಾರ್ಜ್ ಮಾಡಿದರೆ ಒಂದು ವಾರ ಪೂರ್ತಿ ಪುಸ್ತಕಗಳನ್ನು ಓದಬಹುದು. ಸದ್ಯಕ್ಕೆ ಇನ್ಫಿ ಭೀಮ್ ವೈರ್ಲೆಸ್ ಜಾಲಗಳಿಂದ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಕೊಡುತ್ತಿಲ್ಲವಾದರೂ ಮುಂಬರುವ ಆವೃತ್ತಿಗಳಲ್ಲಿ ಇವುಗಳನ್ನು ಒದಗಿಸುವ ಭರವಸೆಯನ್ನು ಕಂಪನಿ  ವ್ಯಕ್ತಪಡಿಸುತ್ತದೆ. ಇನ್ಫಿಭೀಮ್ ನ ವೆಬ್ಸೈಟ್ ಮತ್ತು ಫೈ ನ ಚಿತ್ರ ನೋಡಿದಾಗ ಅವುಗಳಲ್ಲಿ ಬಹಳ ಸಾಮ್ಯತೆ ಇರುವುದನ್ನು ನೀವು ಕಾಣಬಹುದು.
 
ದಿನಗಳೆದಂತೆ ತಂತ್ರಜ್ಞಾನದ ಬೆಳವಣಿಗೆ ಪುಸ್ತಕಾಲಯವನ್ನೇ ನಮ್ಮ ಅಂಗೈಯಲ್ಲಿಡುತ್ತಿರುವ ಪರಿ ಅದ್ಭುತ.

ಕೊಂಡಿಗಳು
http://apple.com
http://amazon.com
www.infibeam.com/Pi/

 

Rating
No votes yet

Comments