ಅಂತೂ ಆವರಣವನ್ನು ಓದಿದ್ದಾಯಿತು!

ಅಂತೂ ಆವರಣವನ್ನು ಓದಿದ್ದಾಯಿತು!

ನಾಕುದಿನದ ಹಿಂದೆ ಆವರಣ ಬಂದು ಸೇರಿತು...

ಬೇರೊಂದು ಕಡೆ, ಟಿಪ್ಪಣಿ ಸೇರಿಸಿದ ನಂತರ, ಇಲ್ಲಿಯೂ ಅದನ್ನೇ ಹಾಕೋಣ ಎನ್ನಿಸಿತು. ಮೋಹನ ರಾಗದ ಮೂರನೆ ಭಾಗವನ್ನು ಬರೆಯದೇ ಹೋದದ್ದಕ್ಕೆ ಇದೂ ಒಂದು ಕಾರಣ ತಾನೇ, ಅದಕ್ಕೆ ಇಲ್ಲಿಯೂ ಇರಲಿ ಎಂದುಕೊಂಡೆ :)

ಆವರಣ ಬ್ಯಾನ್ ಆಗುವ ಮಾತೆಲ್ಲ ಬಂದಿರುವುದು, ಕಥೆಯಲ್ಲಿ ಲಕ್ಷ್ಮಿ ಬರೆಯುವ ಕಾದಂಬರಿಯನ್ನು ಪೋಲೀಸರು ಮುಟ್ಟುಗೋಲು ಹಾಕಿಕೊಳ್ಳುವ ಸಂದರ್ಭ ಬಂದಿರುವುದರಿಂದ ಎನಿಸುತ್ತದೆ. ನಿಜ ಹೇಳಬೇಕೆಂದರೆ, ತೀರಾ ಏನನ್ನೂ ಓದದಿದ್ದವರಿಗೆ ಕಥೆ ಆಘಾತಕಾರಿ ಎನಿಸಬಹುದಾದರೂ, ಸ್ವಲ್ಪ ಚರಿತ್ರೆಯ ಬಗ್ಗೆ ಕಾಮಾಲೆ ಕಣ್ಣಿಲ್ಲದೇ ಓದಿಕೊಂಡಿದ್ದವರಿಗೆ ಆವರಣ ತುಂಬಾ ಹೊಸ ವಿಷಯಗಳನ್ನೇನೂ ಹೇಳುವುದಿಲ್ಲ. ಹೇಳುವುದೇನಿದ್ದರೂ, ನಮ್ಮಲ್ಲಿ ನಡೆಯುತ್ತಿರುವ ಆವರಣ ಕ್ರಿಯೆಯನ್ನಷ್ಟೆ. ಬ್ಯಾನ್ ಮಾಡಬೇಕೆಂದಿರುವವರು, ಕಥೆಯನ್ನು ಓದಿದರೆ, ಆ ಆಲೋಚನೆಯನ್ನು ಖಂಡಿತಾ ಬಿಡಬೇಕಾಗುತ್ತದೆ Eye-wink Bibliography (ಪಠ್ಯ ಸೂಚಿ) ಯನ್ನು ಕಾದಂಬರಿಕಾರರು ಕಥೆಯ ಅಂಗವಾಗಿ ಜಾಣತನದಿಂದ ಹೆಣೆದಿದ್ದಾರೆ.

ಇದು ಬಿಟ್ಟರೆ, ಈ ಕಾದಂಬರಿ ನನಗೆ ಭೈರಪ್ಪನವರ ಸಾಮಾನ್ಯ ಕಾದಂಬರಿಗಳಲ್ಲಿ ಒಂದು ಎನಿಸುತ್ತದೆ. ವಂಶವೃಕ್ಷ, ಪರ್ವ, ಧರ್ಮಶ್ರೀ ಗೃಹಭಂಗ ಅಥವಾ ತಂತು, ಇಂತಹ ಕಾದಂಬರಿಗಳಲ್ಲಿ ಇರುವಂತಹ ಪಾತ್ರಪೋಷಣೆ ಆವರಣದಲ್ಲಿ ಕಾಣುತ್ತಿಲ್ಲ. ಎಲ್ಲೋ ಓದುತ್ತಿದ್ದಾಗ, ಮತ್ತೆ ಪುಟ ಹಿಂತಿರುಗಿಸಿ ಓದಬೇಕಾದಂತಹ ಒಂದು ಸಂದರ್ಭವೂ ನನಗೆ ಆಗಲಿಲ್ಲ. ಆ ಮಟ್ಟಿಗೆ, ಇದು ಇತರ ಕಾದಂಬರಿಗಳಿಗಿಂತ ಸರಳವಾಗಿದೆ ಎನ್ನಬಹುದು. ಆ ವಿಷಯದಲ್ಲಿ ಕಾದಂಬರಿಕಾರರು ಅವರೇ ಹೇಳಿರುವ ಉದ್ದೇಶದಲ್ಲಿ ಸಫಲವಾಗಿದ್ದಾರಾದರೂ, (ಸತ್ಯ ಮತ್ತು ಸೌಂದರ್ಯದಲ್ಲಿ, ಸತ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ಸೌಂದರ್ಯವನ್ನು ಗೌಣವನ್ನಾಗಿ ಮಾಡಿರುವುದು) ಎಲ್ಲಾ ಓದುಗರಿಗೆ ಅದು ಹತ್ತಿರವಾಗುವುದೆಂದು ಹೇಳಲಾರೆ.

ಒಮ್ಮೆ ಓದಿ ನೋಡಬೇಕಾದಂತಹ ಕಾದಂಬರಿ. ಆದರೆ, ಮೇಲೆ ನಾನು ಹೇಳಿದ ಕಾದಂಬರಿಗಳಂತೆ, ಆವರಣವನ್ನು ಮತ್ತೆ ಮತ್ತೆ ಓದಬೇಕೆಂದೆನಿಸದು.

ಕಾರಣಾಂತರಗಳಿಂದ ಭೈರಪ್ಪನವರಿಗೆ ಹೊಸ ಓದುಗರನ್ನು ತಂದುಕೊಟ್ಟಿರುವುದು ಇದರ ಹೆಚ್ಚಾಯ ಎನ್ನಬಹುದು :)

-ಹಂಸಾನಂದಿ

Rating
No votes yet

Comments