ಅಂದಿನ ಮಾತು - ಇಂದಿನ ಮಾತು...!!!

ಅಂದಿನ ಮಾತು - ಇಂದಿನ ಮಾತು...!!!

ಸಖೀ,
ಅಂದು ಆಕೆಗೂ ಹೊಸತು, ಆತನಿಗೂ ಹೊಸತು,
ಆಗೆಲ್ಲಾ ಅವರ ನಡುವೆ ಬರೇ ಪ್ರೀತಿ - ಪ್ರೇಮದ
ಮಧುರವಾದ ಮಾತು,

ನೀಲ ಆಗಸದಲಿ ತೇಲುವ ಬೆಳ್ಳಿಮೋಡಗಳ ಮಾತು,
ಆ ಮೋಡಗಳೊಂದಿಗೆ ಕಣ್ಣ - ಮುಚ್ಚಾಲೆ ಆಡುವ
ಹುಣ್ಣಿಮೆಯ ಚಂದ್ರನ ಮಾತು,

ಆ ಚಂದ್ರ ಭೂಮಿಯುದ್ದಗಲಕೂ ಚೆಲ್ಲಿದ ಬೆಳದಿಂಗಳ ಮಾತು,
ನವಿರೇಳಿಸಿ ಅವರನ್ನು ಇನ್ನೂ ಹತ್ತಿರಕ್ಕೆಳೆವ ತಂಗಾಳಿಯ ಮಾತು,
ಆ ಗಾಳಿಗೆ ಓಲಾಡುತ್ತಿದ್ದ ಆಕೆಯ ಮುಂಗುರುಳ ಮಾತು,

ಆತನ ರೂಪವನೇ ಬಿಂಬಿಸುತ್ತಿದ್ದ ಆ ಕಾಂತಿಯುತ ಕಣ್ಣುಗಳ ಮಾತು,
ಆ ಕೆಂದುಟಿಗಳಲಿ ಮೂಡಿ ಮರೆಯಾಗುವ ಹೂನಗೆಯ ಮಾತು,
ಆಕೆ ಆತನಲಿ ಮೆಚ್ಚಿಕೊಂಡ ಆ ದಟ್ಟನೆಯ ಮೀಸೆಯ ಮಾತು,
ಆ ಮೀಸೆಯ ಮರೆಯಲ್ಲಿ ಆತ ಬೀರುತ್ತಿದ್ದ ಕಿರುನಗೆಯ ಮಾತು,
ಆಕೆಗಷ್ಟೇ ಅರಿವಾಗುತ್ತಿದ್ದ ಆತನ ಕಣ್ಣು ಮಿಟುಕಾಯಿಸುವ ಮಾತು,

ರಾತ್ರಿ ಹೊತ್ತು ಮೀರಿದರೂ ಇನ್ನೂ ಬೆಳಗಾಗಿಲ್ಲವೆಂಬ ಸಮಾಧಾನದ ಮಾತು,
ಕೆಲವೊಮ್ಮೆ ಯಾಕೆ ಬೆಳಗಾಗುತ್ತದೋ ಎನ್ನುವ ಅಸಮಾಧಾನದ ಮಾತು,
ಬರೇ ಮೊಸರನ್ನ - ಉಪ್ಪಿನಕಾಯಿಯ ಉಂಡು ತೇಗಿದ ಆ ತೃಪ್ತಿಯ ಮಾತು,
ಓಹೋ .. .. ಮುಗಿದೂ .. .. ಮುಗಿಯದ ನೂರಾರು ಅನುಬಂಧದ ಮಾತು;

ಆದರೆ ಇಂದು,
ನಡು ನಡುವೆ ಬಿಳಿ ಗೆರೆ ಮೂಡಿಸಿಕೊಂಡು ವಿರಳವಾಗಿರುವ ಆಕೆಯ ಕೂದಲ ಮಾತು,
ಎಷ್ಟೇ ನಕ್ಕರೂ ಸಿಡುಕಿದಂತೇ ಕಾಣುವ ಆತನ ಒರಟು ಮುಖದ ಮಾತು,

ಆತನ ವರ್ತನೆಗಳೆಲ್ಲಾ ಅಪಾರ್ಥಗೊಂಡು ಮೂಡಿಸುವ ಅನುಮಾನದ ಮಾತು,
ಒಂದೇ ಒಂದು ಬಾರಿ ಗೊಣಗಿ ತೆಪ್ಪಗಾಗುವ ಫೋನಿನ ಕರೆಯಿಂದ
ಆತನ ಮುಖದಲೇನಾದರೂ ಓದಲು ಸಿಗಬಹುದೇನೋ ಎಂದು ನೋಡುವ
ಆಕೆಯ ಪತ್ತೇದಾರೀ ಮನದ ಮಾತು,

ಹತ್ತಿರ ಬಂದರೆ ಬಿಡದೆ ಚುಚ್ಚುವುದೆನ್ನುವ ಆತನ ಗಡಸು ಮೀಸೆಯ ಮಾತು,
ಅಂಗಿ ತೆಗೆದರೆ ಅಸಹ್ಯ ಕಾಣುವುದೆನ್ನುವ ಆ ಬೊಜ್ಜು ಹೊಟ್ಟೆಯ ಮಾತು,

ಚಿಂತೆ - ಚಿಂತನೆಗಳಿಂದ ನಿದ್ದೆ ಬಾರದಾದಾಗ ಏಕೆ ರಾತ್ರಿಯಾಗುತ್ತದೆ
ಎಂದೆನ್ನುವ ಆತನ ಬೇಸರದ ಮಾತು,
ದಿಂಬಿಗೆ ತಲೆಕೊಡುವ ಮೊದಲೇ ಗೊರಕೆ ಹೊಡೆಸುವಷ್ಟು ಸುಸ್ತಾಗಿಸುವ
ಬಿಡುವಿಲ್ಲದ ಮನೆಗೆಲಸದ ಮಾತು,
ಆ ಚೆಲ್ಲಾಟವೆಲ್ಲ ಇನ್ನು ಸಲ್ಲದೆಂದು ಮಕ್ಕಳು ಬೆಳೆದಿರುವ ನೆನಪು ತರಿಸುವ
ಆಕೆಯ ಅಸಹಕಾರದ ಮಾತು,

ಮನಬಯಸುವ ತಿನಿಸ ಬಡಿಸಿದರೂ ಅಸಮಾಧಾನದಿಂದಲೇ ತಿಂದೇಳುವ
ಆತನ ತಿರಸ್ಕಾರದ ಮಾತು,

ದಿನವೂ ಮುಂಜಾನೆ ಸಹಸ್ರ ನಾಮ ಕೇಳಿಸಿಕೊಂಡೇ ಹೊರಡುವ
ಆ ಹಳೇ ಸ್ಕೂಟರಿನ ಮಾತು,
ಕೊನೇ ಮನೆಯವರು ಹೊಸದಾಗಿ ಕೊಂಡ ಮಾರುತಿ ಕಾರಿಗಾಗಿ ಮರುಗುವ ಮಾತು,
ಅಕ್ಕ ಪಕ್ಕದವರು ಸಾಲ - ಸೋಲ ಮಾಡಿ ಕಟ್ಟಿಸಿರುವ ಮಹಡಿ ಮನೆಗಳ
ಕಂಡು ಆಗುವ ಹೊಟ್ಟೆ ನೋವಿನ ಮಾತು,

ಹಿಂಬದಿ ಮನೆ ಹುಡುಗಿ ತನ್ನ ಗೆಳೆಯನೊಂದಿಗೆ ಓಡಿಹೋದ ಸುದ್ದಿಗೆ ಅಚ್ಚರಿ ಪಡುವ ಮಾತು,
ಎದುರು ಮನೆಯವಳು ಹಗಲೆಲ್ಲಾ ಫೋನು ಕೈಗೆತ್ತಿಕೊಂಡು ಕಿಲಕಿಲನೆ
ನಗುತ್ತಿರುವಳೆಂಬ ಸಂದೇಹದ ಮಾತು,
ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಹಗಲೆಲ್ಲಾ ಊರೂರು ಸುತ್ತಿ ಬರುವ ಮೂರನೇ
ಮನೆಯವಳ ಬಗೆಗೆ ಆಡುವ ಪಿಸು ಮಾತು,
ಮದುವೆಯಾಗಿ ವರುಷ ಮೂರಾದರೂ ಆಚೆ ಮನೆ ಆಂಟಿಯ ಸೊಸೆಗೆ ಮಕ್ಕಳಾಗಿಲ್ಲವೆಂದು
ಮೂಗಿನ ಮೇಲೆ ಬೆರಳಿರಿಸುವ ಮಾತು,

ಉಫ್.. .. ಇದೂ ಕೂಡ, ಸಖೀ,
ಮುಗಿದೂ .. .. ಮುಗಿಯದಂತೆ ಅನವರತ ನಡೆಯುವ ಮಾತು;
ಆದರೆ ಎಲ್ಲಿದೆ ಅವರ ಅಂದಿನ ಆ ಮಾತು?
ಎಲ್ಲಿದೆ ಪ್ರೀತಿ - ಪ್ರೇಮದ ಮಾತು? ಎಲ್ಲಿದೆ ಅನುಬಂಧದ ಮಾತು?

Rating
No votes yet

Comments