ಅಕ್ಟೋಬರ್ ಒಂದು, ೧೯೬೨
ಈ ದಿನ ಅಮೆರಿಕೆಯ ಕರಿಯರ ಪಾಲಿಗೆ ವಿಶೇಷ ದಿನ. ಇಂದು ಅಮೆರಿಕೆಯ ಮಿಸ್ಸಿಸಿಪ್ಪಿ ವಿಶ್ವ ವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಕಪ್ಪು ಜನಾಂಗಕ್ಕೆ ಸೇರಿದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಯಿತು. ಅಮೆರಿಕೆಯ ಚರಿತ್ರೆ ಬಲ್ಲವರಿಗೆ ಕರಿಯ - ಬಿಳಿಯ ಜನಾಂಗದ ನಡುವಿನ ಕಂದಕ, ತಾರತಮ್ಯದ ಅರಿವು ಇದ್ದೇ ಇರುತ್ತದೆ. ಅಮೆರಿಕೆಯ ಈ ಜನಾಂಗ ಬೇಧ ನೀತಿ ೧೯೬೨ ರ ಲ್ಲಿ ಮಾತ್ರವಲ್ಲ ಈಗಲೂ ಕೂಡ ಪ್ರಸ್ತುತ. ವ್ಯತ್ಯಾಸವೆಂದರೆ ಈಗಿನ ನೀತಿ ಅಲಿಖಿತ ಎನ್ನಬಹುದು. ಅಂದರೆ ಸರಕಾರ ಮತ್ತು ವ್ಯವಸ್ಥೆ ಜನಾಂಗ ಬೇಧ ಒಳ್ಳೆಯದಲ್ಲ ಎಂದು ಎಷ್ಟೇ ಸಾರಿದರೂ ಜನ ಮಾತ್ರ ಕೇಳಲೊಲ್ಲರು. ಎಲ್ಲರೂ ಅಲ್ಲ. ಸಾಕಷ್ಟು ಮಂದಿ. ಹುಟ್ಟು ಗುಣ....
ಮಿಸ್ಸಿಸಿಪ್ಪಿ ಪ್ರಾಂತ್ಯ ಜನಾಂಗ ಬೇಧ ನೀತಿಗೆ ಹೆಸರುವಾಸಿ.
segregationist ಗಳ ತವರೂರು. ಇಲ್ಲಿನ ವಿಶ್ವ ವಿದ್ಯಾಲದಲ್ಲಿ ಕಪ್ಪು ವಿರೋಧಿ ನೀತಿ ಅಂತ್ಯಗೊಂಡ ಸಂಭ್ರಮ ಈಗ ಅಮೆರಿಕೆಯಲ್ಲಿ.
ಅಮೆರಿಕೆಯ ಈಗಿನ ಅಧ್ಯಕ್ಷ ಬರಾಕ್ ಒಬಾಮ ಕಪ್ಪು ಜನಾಂಗಕ್ಕೆ ಸೇರಿದವರು. ನಾಲ್ಕು ವರ್ಷಗಳ ಹಿಂದೆ ನೆಡದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವನ್ನು ಸಾಧಿಸಿದವರು. ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಮರು ಆಯ್ಕೆಗಾಗಿ ರಿಪಬ್ಲಿಕನ್ ಪಕ್ಷದ ಮಿಟ್ ರಾಮ್ನಿ ಯವರೊಂದಿಗೆ ಸೆಣಸುತ್ತಿದ್ದಾರೆ. ಒಬಾಮ ಡೆಮಾಕ್ರಾಟ್.
ಅಮೆರಿಕೆಯಲ್ಲಿ ಈಗ ಚುನಾವಣೆಯ ಬಿಸಿ, ಅದರೊಂದಿಗೇ ಹಣಕಾಸು ತಾಪತ್ರಯಗಳ ಬಿಸಿ, ಸಲಿಂಗಿಗಳ ವಿವಾಹದ ಬಿಸಿ, ವಲಸಿಗರ ಬಿಸಿ,....ತರಾವರಿ ಬಿಸಿ. ಈ ಬಿಸಿ ಸಾಲದು ಎನ್ನುವಂತೆ ಒಬಾಮಾರನ್ನು ಹೇಗಾದರೂ ಸೋಲಿಸಲು ರಿಪಬ್ಲಿಕನ್ ಪಕ್ಷ ಎಲ್ಲಾ ಅಸ್ತ್ರಗಳನ್ನೂ ಬಳಸುತ್ತಿದೆ. ಒಬಾಮಾ ಕರಿಯ, ಒಬಾಮ ಸಲಿಂಗಿ ಪರ, ಒಬಾಮ ಉದಾರವಾದೀ, ಒಬಾಮ
anti-christ, ಕೊನೆಗೆ ಮಹಾಅಸ್ತ್ರಗಳಲ್ಲೇ ಘನ ಘೋರ ಅಸ್ತ್ರ ಎನ್ನಬಹುದಾದ ಒಬಾಮ ಬಹುಶಃ ಓರ್ವ ಮುಸ್ಲಿಂ ಎನ್ನುವ ಶಂಕೆ. ಶಂಕೆ, ಗುಮಾನಿ, ಬಹುಶಃಗಳೇ ಇಂದು ಪ್ರಪಂಚವನ್ನು ನಿಷ್ಕಾರುಣ್ಯವಾಗಿ ಹುರಿಯುತ್ತಿರುವುದು. ಒಬಾಮ ಮುಸ್ಲಿಂ ಎನ್ನುವ ಈ ಶಂಕೆ ಜನರಲ್ಲಿ ಬಿತ್ತಿದರೆ ಒಬಾಮ ಚಳ್ಳೆ ಹಣ್ಣು ತಿನ್ನುವುದು ಖಚಿತ ಎನ್ನುವುದು ರಿಪಬ್ಲಿಕನ್ ಪಂಡಿತರ ಲೆಕ್ಕಾಚಾರ. ಶಂಕೆಗಳು, ಬಹುಶಃಗಳು ಸರ್ವನಾಶವಾಗಿ ಜನ ತಿಳಿವಳಿಕೆ ಪ್ರದರ್ಶಿಸಿ ಯಾರೇ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.