ಅದೇ ಚಂದ್ರನಡಿ ಭಾವನೆಗಳ ಭಿತ್ತಿ ...

ಅದೇ ಚಂದ್ರನಡಿ ಭಾವನೆಗಳ ಭಿತ್ತಿ ...

ಇತ್ತೀಚೆಗೆ ನಾನು ನೋಡಿದ ಸ್ಪಾನಿಷ್ ಚಿತ್ರ.

LA MISMA LUNA ( Under the same moon )
- Director: Patricia Riggen .

ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ.
ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ ಅಮೇರಿಕಾಗೆ ಪ್ರಯಾಣ ಬೆಳೆಸುತ್ತಾನೆ. ಆತನ ತಾಯಿ ರೊಸಾರಿಯೊ ಮಗನ ಉತ್ತಮ ಭವಿಷ್ಯಕ್ಕಾಗಿ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಅಮೇರಿಕಾದಲ್ಲಿ ದುಡಿಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದಾಗಿ ತಾಯಿ, ಮಗ ಪರಸ್ಪರರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ.
But, It becomes an emotional journey and a love story between a mother and a son.

ರೊಸಾರಿಯೊಗೆ , ಮಗನನ್ನೂ ಸಹ ಅಮೇರಿಕಾಗೆ ಕರೆದುಕೊಂಡು ಬರುವ ಯೋಚನೆ. ಆದರೆ ತಾನು ಅಮೇರಿಕಾಗೆ ಬಂದಿರುವುದೇ ಕಾನೂನು ಬಾಹಿರ. ಯಾವುದೇ documentಗಳೂ ಆಕೆಯಲ್ಲಿಲ್ಲ. ಇನ್ನು ಮಗನನ್ನು ಕರಕೊಂಡು ಬರುವುದಾದರೂ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿರುತ್ತದೆ.

ಇತ್ತ ಮೆಕ್ಸಿಕೋದಲ್ಲಿರುವ ಕಾರ್ಲಿತೋಸ್‍ಗೆ , ತನ್ನ ಅಜ್ಜಿಯ ಆರೈಕೆಯಲ್ಲಿ ತಾನು ಚೆನ್ನಾಗಿದ್ದರೂ ತಾಯಿಯನ್ನು ಬಿಟ್ಟು ಇರಬೇಕಾದ ನೋವು. ತಂದೆ ಇಲ್ಲದ ಕೊರಗು ಬೇರೆ.
ಅಜ್ಜಿಯ ಅನಿರೀಕ್ಷಿತ ಸಾವಿನಿಂದ , ಕಾರ್ಲಿತೋಸ್‍ ಏಕಾಂಗಿಯಾಗುತ್ತಾನೆ. ಆಗ ಆತನಿಗೆ ಹೊಳೆಯುವುದೇ ... ಗಡಿ ದಾಟಿ ತಾಯಿಯನ್ನು ಸೇರುವ ಯೋಚನೆ. ಯಾವ ಅಪಾಯ , ತೊಂದರೆಗಳನ್ನೂ ಲೆಕ್ಕಿಸದೆ ಹೊರಟೇ ಬಿಡುತ್ತಾನೆ ಕಾರ್ಲಿತೋಸ್. ತನ್ನ ತಾಯಿ ಎಂದಿನಂತೆ ಭಾನುವಾರ ತನಗೆ phone ಮಾಡುವ ಮೊದಲು ತಾನು ಆಕೆಯನ್ನು ಭೇಟಿ ಮಾಡುವ ಆತುರ.ಇಬ್ಬರು ಅಮೇರಿಕನ್ ವಿದ್ಯಾರ್ಥಿಗಳ ಸಹಾಯದಿಂದ ಅವರ ಕಾರಿನ ಸೀಟಿನಡಿಯಲ್ಲಿ ಅಡಗಿ ಕುಳಿತು ಗಡಿ ದಾಟುವುದರಲ್ಲಿ ಸಫಲನಾಗುತ್ತಾನೆ. ಆದರೆ, ಅಮೇರಿಕನ್ ವಿದ್ಯಾರ್ಥಿಗಳು immigrant officer ಗಳ ಕೈಗೆ ಸಿಕ್ಕಿಬೀಳುತ್ತಾರೆ.
ಮತ್ತೆ ಕಾರ್ಲಿತೋಸ್ ಒಬ್ಬಂಟಿ.
ಕಾರ್ಲಿತೋಸ್‍ನ ಪ್ರಯಾಣದಲ್ಲಿ ಜತೆಯಾಗುತ್ತಾನೆ ಎನ್ರಿಕ್. ಆತನೂ ಅನಧಿಕೃತ ವಲಸೆಗಾರ. ಅಮೇರಿಕ ಪೋಲಿಸರ ಕಣ್ಣು ತಪ್ಪಿಸಿ ಓಡಾಡಬೇಕಾದ ಪರಿಸ್ಥಿತಿ ಇಬ್ಬರದೂ. ಎನ್ರಿಕ್ ಗೆ ಕಾರ್ಲಿತೋಸ್‍ನ ಜತೆ ಅಸಹನೀಯವಾಗುತ್ತದೆ. ತನಗೆ ಗಂಟು ಬಿದ್ದಿರುವ ಸಣ್ಣ ಹುಡುಗನನ್ನು ಆತನ ತಾಯಿಯ ಜತೆ ಸೇರಿಸುವ ಅನಿವಾರ್ಯ ಜವಾಬ್ದಾರಿ . ಕೈಯಲ್ಲಿ ಬೇರೆ ಕಾಸಿಲ್ಲ. ಕಾರ್ಲಿತೊಸ್‍ನ ಪ್ರಯತ್ನ ದಿಂದ ಇಬ್ಬರೂ ಪಿಝಾ ರೆಸ್ಟೋರಂಟ್ ಒಂದರಲ್ಲಿ ಎರಡು ದಿನ ಕೆಲಸ ಮಾಡಿ ಸ್ವಲ್ಪ ಹಣ ಗಳಿಸುತ್ತಾರೆ.
ಇತ್ತ , ರೊಸಾರಿಯೊಗೆ ತನ್ನ ಮಗ ಮೆಕ್ಸಿಕೋ ಗಡಿ ದಾಟಿ ಬಂದಿರುವ ವಿಷಯ ತಿಳಿಯುತ್ತದೆ. ಮಗ ಎಲ್ಲಿದ್ದಾನೋ , ಸುರಕ್ಷಿತವಾಗಿದ್ದಾನೋ ಎನ್ನುವ ಭಯ ಆಕೆಗೆ. ಖಂಡಿತವಾಗಿ ಆತ ಪೋಲೀಸರ ಕೈಗೆ ಸಿಕ್ಕಿ ಬಿದ್ದು , ಪೋಲೀಸರು ಆತನನ್ನು ಮೆಕ್ಸಿಕೊಗೆ ಕಳುಹಿಸಿ ಬಿಡುತ್ತಾರೆ ಎನ್ನುವ ಆತಂಕ. ತನ್ನನ್ನು ಇಷ್ಟ ಪಡುತ್ತಿದ್ದ ಪೇಕ್‍ ( ಆತ ಅಮೇರಿಕನ್ ) ನನ್ನು ರೊಸಾರಿಯೊ , ಗ್ರೀನ್ ಕಾರ್ಡ್ ಸವಲತ್ತಿಗಾಗಿ ಮದುವೆ ಮಾಡಿಕೊಳ್ಳಲು ಈ ಹಿಂದೆ ಒಪ್ಪಿದ್ದಳು. ಆದರೆ, ಈಗ ತನ್ನ ಮಗ ಒಬ್ಬಂಟಿ. ಆತ ಕ್ಷೇಮವಾಗಿದ್ದಾನೆ ಎನ್ನುವುದೂ ಆಕೆಗೆ ತಿಳಿದಿಲ್ಲ. ತನ್ನ ಮದುವೆಯನ್ನು ರದ್ದು ಮಾಡಿ , ಮೆಕ್ಸಿಕೋಗೆ ಹಿಂತಿರುಗುವ ನಿರ್ಧಾರ ಮಾಡುತ್ತಾಳೆ.
ತಾಯಿಯನ್ನು ಹುಡುಕುತ್ತಿರುವ ಕಾರ್ಲಿತೋಸ್‍ಗೆ ಆಕೆಯ ವಿಳಾಸ ಗೊತ್ತಿಲ್ಲ. ತಿಳಿದಿರುವುದು ಒಂದೇ. ಆಕೆ ಪ್ರತಿ ಭಾನುವಾರ ತನಗೆ phone ಮಾಡುತ್ತಿದ್ದ ಜಾಗದ ವಿವರ. ಒಂದು ಪಿಝಾ ರೆಸ್ಟೊರೆಂಟ್, ಒಂದು ಗೋಡೆ ಚಿತ್ರ , ನಾಲ್ಕು ದಾರಿಗಳು ಸಂಧಿಸುವ ಜಾಗ ಮತ್ತು phone booth . ಇವಿಷ್ಟನ್ನು ಇಡೀ ಲಾಸ್ ಎಂಜಲೀಸ್‍ನಲ್ಲಿ ಹುಡುಕುವುದೆಂದರೆ. ಮರುದಿನ ಭಾನುವಾರ. ಎನ್ರಿಕ್ ಮತ್ತು ಕಾರ್ಲಿತೋಸ್ ದಿನವಿಡೀ ವಿಳಾಸ ಪತ್ತೆ ಹಚ್ಚುವುದರಲ್ಲೇ ಸುಸ್ತು.
ಮರುದಿನ ಅನಿರೀಕ್ಷಿತವಾಗಿ ಎನ್ರಿಕ್ ಪೋಲೀಸರಿಗೆ ಸಿಕ್ಕಿ ಬೀಳುತ್ತಾನೆ. ಕಾರ್ಲಿತೋಸ್ ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಾನೆ.

ಚಿತ್ರದ ಕೊನೆ , ನಿರೀಕ್ಷಿತ ಅನ್ನಿಸಿದರೂ ... ಮನ ಮುಟ್ಟುವ ರೀತಿಯಲ್ಲಿ ಅನಿರೀಕ್ಷಿತ frame ನಲ್ಲಿ ಚಿತ್ರ ಕೊನೆಗೊಳ್ಳುತ್ತದೆ. ವಾಚ್ಯವಾಗದೆ , ತಾಯಿ ಮತ್ತು ಮಗ ಸಂಧಿಸುವ ಕ್ಷಣದ ಕಲ್ಪನೆಯನ್ನು ಪ್ರೇಕ್ಷಕರಿಗೇ ಬಿಟ್ಟುಕೊಡುತ್ತದೆ.
ಕಾನೂನು , ಆಡಳಿತ, ರಾಜಕಾರಣ, ಅನಧಿಕೃತ ವಲಸೆಗಾರರ ಪಾಡು , ಸ್ಥಿತಿ ... ಅವರ ನೋವು - ಆತಂಕ - ತೊಂದರೆಗಳನ್ನು ಎಲ್ಲಿಯೂ ಗಟ್ಟಿಯಾಗಿ ಹೇಳದೆ ಮಾನವ ಸಂಬಂಧಗಳ ಮಿಡಿತವನ್ನು ನವಿರಾಗಿ ಈ ಚಿತ್ರ ಬಿಂಬಿಸುತ್ತದೆ.

ತಾಯಿ ಮತ್ತು ಮಗ ಬೇರೆ ಬೇರೆಯಾಗಿದ್ದರೂ ಒಂದೇ ಚಂದ್ರನ ಅಡಿ ಇಬ್ಬರ ನೋವೂ ಒಂದೇ.
ಜತೆಯಾಗಿರಬೇಕೆನ್ನುವ ಹಂಬಲ , ಅದಕ್ಕಿರುವ ಅಡ್ಡಿಗಳು , ಅವನ್ನು ಲೆಕ್ಕಿಸದೆ ಕಾರ್ಲಿತೋಸ್ ಕೈಗೊಳ್ಳುವ ನಿರ್ಧಾರ ಎಲ್ಲವನ್ನೂ ಚಿತ್ರದ ನಿರ್ದೇಶಕಿ ಪೆಟ್ರೀಷಿಯಾ ರಿಗ್ಗೇನ್ ಸಮರ್ಥವಾಗಿ ನಿರೂಪಿಸುತ್ತಾರೆ. ಕಾರ್ಲಿತೋಸ್ , ಧಿಡೀರೆಂದು ಗಡಿ ದಾಟುವ ಯೋಚನೆ ಮಾಡುವುದು ಸ್ವಲ್ಪ ನಾಟಕೀಯ ಅನ್ನಿಸಿದರೂ ಬೇರೆಲ್ಲಿಯೂ ಅತಿಯಾದ ಭಾವುಕತೆ ಚಿತ್ರದಲ್ಲಿ ಕಾಣುವುದಿಲ್ಲ. ಈ ಕಾರಣಕ್ಕಾಗೇ , ಚಿತ್ರದ ಹಲವು ಸನ್ನಿವೇಶಗಳು ಮನಸ್ಸಲ್ಲಿ ಉಳಿಯುತ್ತವೆ.
ತನ್ನ ತಾಯಿಯನ್ನು ನೆನಪಿಸಿಕೊಳ್ಳುವ ದೃಶ್ಯದಲ್ಲಿ , ಕಾರ್ಲಿತೋಸ್ - " ನನ್ನ ತಾಯಿ ಯಾವಾಗಲೂ ಹೇಳುತ್ತಾಳೆ. ಆಕೆಯ ನೆನಪಾದಾಗಲೆಲ್ಲಾ... ಆಕಾಶದಲ್ಲಿನ ಚಂದ್ರನನ್ನು ನೋಡುವಂತೆ. ಯಾಕಂದ್ರೆ. ಅವಳು ಕೂಡ ಅದೇ ಚಂದ್ರನನ್ನು ನೋಡುತ್ತಿರುತ್ತಾಳೆ ". ಎನ್ನುತ್ತಾನೆ. ಚಿತ್ರದ ಒಟ್ಟು ಆಶಯವನ್ನು ಈ ದೃಶ್ಯ ಕಟ್ಟಿಕೊಡುತ್ತದೆ. ಅಜ್ಜಿಯ ಸಾವನ್ನು ಕಾರ್ಲಿತೋಸ್ ಅರಗಿಸಿಕೊಳ್ಳುವ ದೃಶ್ಯದಲ್ಲಿ ಆತನ ಮನಸ್ಸಿನ maturity , ತನ್ನ ತಂದೆಯ ಕುರಿತು ಸತ್ಯ ಅರಿವಾದಾಗಿನ ನೋವು, ಎನ್ರಿಕ್ ಮತ್ತು ಕಾರ್ಲಿತೋಸ್ ನಡುವಿನ ಸ್ನೇಹ - ಜಗಳದ ಕಣ್ಣು ಮುಚ್ಚಾಲೆ ... ಹೀಗೆ ಭಾವನೆಗಳನ್ನು ಸರಳವಾಗಿಸುತ್ತಾ, ಚಿತ್ರ , ಮನಸ್ಸನ್ನು ನಾಟುತ್ತದೆ.

Rating
No votes yet