ಅನಾಮಧೇಯರಾಗಿರುವ ಖುಷಿ!

ಅನಾಮಧೇಯರಾಗಿರುವ ಖುಷಿ!

ಒಮ್ಮೆ ಸುಮ್ಮನೇ ಯೋಚಿಸಿ ನೋಡಿ!

ನೀವು ಯಾವುದೋ ಜಾಗಕ್ಕೆ ಹೋಗುತ್ತೀರಿ. ಅಲ್ಲಿ ಜನ ನಿಮ್ಮನ್ನು ಮುತ್ತಿಕೊಳ್ಳುತ್ತಾರೆ. ನಿಮ್ಮ ಬಗ್ಗೆ ವಿಚಾರಿಸುತ್ತಾರೆ. ಆಟೊಗ್ರಾಫ್‌ ತೆಗೆದುಕೊಳ್ಳುತ್ತಾರೆ. ಫೋಟೊ ತೆಗೆಸಿಕೊಳ್ಳುತ್ತಾರೆ. ಕಾರ್ಯಕ್ರಮಗಳಿಗೆ ಬರುವಂತೆ ಒತ್ತಡ ಹೇರುತ್ತಾರೆ. ಅವರ ಪ್ರೀತಿ ಮೊದಮೊದಲು ಸಂತಸ ತಂದರೂ, ಕ್ರಮೇಣ ಕಿರಿಕಿರಿ ಶುರುವಾಗುತ್ತದೆ. ಯಾವ ಉದ್ದೇಶಕ್ಕೆ ನೀವು ಹೋಗಿರುತ್ತೀರೋ, ಅದನ್ನು ಬಿಟ್ಟು ಉಳಿದೆಲ್ಲದೂ ನಡೆಯುತ್ತಿರುತ್ತದೆ.

ಆದರೆ, ಈ ಜಾಗದಲ್ಲಿ ಇನ್ನೊಂದು ಚಿತ್ರಣ ಊಹಿಸಿ ನೋಡಿ!

ನೀವು ಹೋದ ಜಾಗದಲ್ಲಿ ಯಾರೂ ನಿಮ್ಮನ್ನು, ’ನೀವೇ’ ಎಂದು ಗುರುತಿಸುವುದಿಲ್ಲ. ನೀವು ಎಲ್ಲರನ್ನೂ ಸುಮ್ಮನೇ ಗಮನಿಸುತ್ತ ಹೋಗುತ್ತೀರಿ. ಅದರಲ್ಲಿ ಎಷ್ಟೋ ಜನರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೂ, ನೀವು ಅವರೊಂದಿಗೆ ಮಾತನಾಡುವುದಿಲ್ಲ. ಪರಿಚಯ ಮಾಡಿಕೊಳ್ಳುವುದಿಲ್ಲ. ಸುಮ್ಮನೇ ವಾತಾವರಣವನ್ನು ಅನುಭವಿಸುತ್ತ, ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುತ್ತ, ಹೋದ ಕೆಲಸವನ್ನು ಮುಗಿಸಿಕೊಂಡು ವಾಪಸ್ಸಾಗುತ್ತೀರಿ.

ಯಾವುದು ನಿಮಗೆ ಇಷ್ಟ?

ಆಯ್ಕೆ ನಿಮ್ಮದು. ನನ್ನನ್ನು ಕೇಳಿದರೆ, ಎರಡನೆಯದೇ ನನಗೆ ಇಷ್ಟ. ಜನ ಗುರುತಿಸುವುದು ಖುಷಿ ಕೊಡುತ್ತದೆ ನಿಜ. ಆದರೆ, ಕ್ರಮೇಣ ಅದು ನಮ್ಮ ಖಾಸಗಿತನವನ್ನು ಕಿತ್ತುಕೊಂಡು ಬಿಡುತ್ತದೆ. ಹಾಗಂತ, ಜನರಿಂದ ದೂರವಾಗಿ ಇರುವುದೂ ಸಾಧ್ಯವಿಲ್ಲ. ಪರಿಚಯದ ನಡುವೆ ಒಂದಿಷ್ಟು ಅನಾಮಧೇಯತೆ, ಸಂತೆಯೊಳಗೆ ಒಂಟಿತನ, ಗುಂಪಿನ ನಡುವೆ ಒಬ್ಬಂಟಿಯಾಗಿರುವುದು ಖುಷಿ ಕೊಡುತ್ತದೆ. ಯಾರೂ ನಮ್ಮನ್ನು ವಿಶೇಷವಾಗಿ ಗುರುತಿಸಲಿಲ್ಲ ಎಂಬ ನೋವಿಗಿಂತ, ಹಾಗೆ ದೂರವಾಗಿದ್ದುಕೊಂಡೇ ಎಲ್ಲವನ್ನೂ ಮನ ತಣಿಯೇ ಆಸ್ವಾದಿಸಬಹುದು.

ಏಕೋ ಇತ್ತೀಚೆಗೆ ಈ ವಿಚಾರವೇ ಮನಸ್ಸನ್ನು ತುಂಬಿಕೊಂಡಿದೆ.

ಯಾರೂ ಯಾರನ್ನೂ ವಿಶೇಷವಾಗಿ ಗುರುತಿಸುವುದು ಬೇಕಿಲ್ಲ ಅನಿಸುತ್ತದೆ. ಪರಿಚಯ ಇರಲಿ, ಗೌರವ ಇರಲಿ, ಆದರೆ ಅತ್ಯುತ್ಸಾಹ ಬೇಡ. ಅವರವರ ಖಾಸಗಿತನ ಅವರವರಿಗೆ ಇರಲಿ. ಅಭಿಮಾನ ವ್ಯಕ್ತಪಡಿಸಲು ಬೇರೆ ಮಾರ್ಗಗಳು ಸಾಕಷ್ಟಿವೆ.

ಟಿವಿ ತಾರೆಯರು, ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು ಅನಗತ್ಯ ಗಮನಕ್ಕೆ ಸಿಲುಕುತ್ತಾರೆ. ಅವರನ್ನು ಮುತ್ತಿಕೊಂಡು ಹಿಂಸಿಸುವುದಕ್ಕಿಂತ, ಅಭಿಮಾನ ಇದ್ದರೆ, ದೂರ ನಿಂತು ಮುಗುಳ್ನಗುವುದು ಉತ್ತಮವಲ್ಲವೆ?

- ಪಲ್ಲವಿ ಎಸ್‌.

Rating
No votes yet

Comments