ಅನ್ವೇಷಣೆ ಭಾಗ ೧೫

ಅನ್ವೇಷಣೆ ಭಾಗ ೧೫

ಸ್ಟೇಷನ್ ನಿಂದ ಮನೆಗೆ ಬಂದಾಗ ಅಪ್ಪ ಅಮ್ಮ, ಜಾನಕಿಯ ತಂದೆ ತಾಯಿ ಎಲ್ಲರೂ ಹಾಲಿನಲ್ಲಿ ಕೂತು ಮಾತಾಡುತ್ತಿದ್ದರು. ನನ್ನನ್ನು ಕಂಡ ಕೂಡಲೇ ಅಮ್ಮ ಅಪ್ಪ ಇಬ್ಬರೂ ಒಟ್ಟಿಗೆ ಅರ್ಜುನ್... ಏನೋ ಇದು ಹೀಗೆ ಆಗಿದ್ದೀಯ? ಜಾನಕಿಯ ಅಗಲಿಕೆ ನಮಗೂ ನೋವು ತಂದಿದೆ. ಆದರೆ ನೀನು ಹೀಗೆ ವಾರಗಟ್ಟಲೆ ಮನೆ ಮುಟ್ಟದೆ, ಊಟ ತಿಂಡಿ ಇಲ್ಲದೆ, ಹೀಗೆ ಒದ್ದಾಡುತ್ತಿದ್ದರೆ ನಮ್ಮ ಕೈಲಿ ನೋಡಲು ಆಗುವುದಿಲ್ಲ. ಒಮ್ಮೆ ಹೋಗಿ ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೋ, ಹೇಗಾಗಿದ್ದೀಯ ಎಂದು...

ಹೌದು...ನಾನು ಮನೆ ಸೇರಿ ಹೆಚ್ಚುಕಡಿಮೆ ಹತ್ತು ದಿನ ಆಗಿತ್ತು. ಮನೆಗೆ ಬಂದರೆ ಜಾನಕಿಯ ನೆನಪುಗಳು ಕಾಡುತ್ತದೆಂದು, ಒಂದೊಂದು ದಿನ ಆಫೀಸಿನಲ್ಲಿ, ಒಂದೊಂದು ದಿನ ಸ್ನೇಹಿತನ ಮನೆಯಲ್ಲಿ, ಒಂದೊಂದು ದಿನ ಹೋಟೆಲಿನಲ್ಲಿ ಕಾಲ ಕಳೆದಿದ್ದೆ. ಬಚ್ಚಲು ಮನೆಗೆ ಹೋಗಿ ಕನ್ನಡಿಯಲ್ಲಿ ಮುಖ ನೋಡಿದಾಗ, ಅದು ನನ್ನದೇ ಮುಖ ಎಂದು ನನಗೇ ಅನುಮಾನ ಕಾಡಿತು. ಕೆದರಿದ ತಲೆಗೂದಲು, ತಿಂಗಳಿನಿಂದ ಶೇವ್ ಮಾಡದ ಗಡ್ಡ, ನಿದ್ರೆಯಿಲ್ಲದೆ ಕೆಂಪಾದ ಕಣ್ಣುಗಳು, ಬಿಸಿಲಿಗೆ ಬಾಡಿದ ಮುಖ... ಸೊರಗಿದ ದೇಹ....

ಹಿಂದಿನಿಂದ ಬಂದ ಜಾನಕಿಯ ತಂದೆ ನನ್ನ ಹೆಗಲಿನ ಮೇಲೆ ಕೈ ಇಟ್ಟು, ಅರ್ಜುನ್.... ಈಗಾಗಲೇ ಜಾನಕಿಯನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ನಿನ್ನನ್ನೇ ನಾವು ಮಗ ಎಂದು ಭಾವಿಸಿದ್ದೇವೆ. ಇನ್ನು ಮುಂದೆ ನಮಗೆ ನೀನೇ ದಿಕ್ಕು. ಹೀಗಿರುವಾಗ ನೀನೂ ಹೀಗಾದರೆ ನಮಗೆ ಗತಿ ಯಾರು ಹೇಳು. ಅರ್ಜುನ್... ಈಗ ನಿನಗೆ ಇಬ್ಬರು ಅಪ್ಪ ಅಮ್ಮಂದಿರ ಜವಾಬ್ದಾರಿ ಇದೆ. ಇದರ ಮೇಲೆ ನಾವು ಏನೂ ಹೇಳಲು ಇಚ್ಛಿಸುವುದಿಲ್ಲ. ಇನ್ನು ನಿನ್ನಿಷ್ಟ.

ಅಂಕಲ್.... ಇನ್ನೊಂದು ಸ್ವಲ್ಪ ದಿವಸ ನನ್ನನ್ನು ಹೀಗೆ ಬಿಟ್ಟು ಬಿಡಿ, ಆಮೇಲೆ ಎಲ್ಲಾ ಸರಿ ಹೋಗುತ್ತೆ.

ಏನೋಪ್ಪಾ... ನೀನು ಮೊದಲಿನಂತಾದರೆ ಅಷ್ಟೇ ಸಾಕು. ಅರ್ಜುನ್... ನಿನ್ನನ್ನು ನೋಡುತ್ತಿದ್ದರೆ ನಿಜಕ್ಕೂ ಹೆಮ್ಮೆ ಆಗುತ್ತಿದೆ. ಜಾನಕಿಯನ್ನು ನೀನು ಪ್ರೀತಿಸುತ್ತಿದ್ದೆ ಎಂದು ಗೊತ್ತಿತ್ತು, ಆದರೆ ಇಷ್ಟು ಪ್ರೀತಿಸುತ್ತಿದ್ದೆ ಎಂದು ನಮಗೆ ಗೊತ್ತಿರಲಿಲ್ಲ. ನಮಗಿಂತ ಹೆಚ್ಚು ಪ್ರೀತಿ ಮಾಡುತ್ತಿದ್ದೆ ಎಂದು ಈಗ ಗೊತ್ತಾಗುತ್ತಿದೆ. ಆದರೆ ಏನು ಮಾಡೋದು, ನಿನ್ನ ಪ್ರೀತಿಯನ್ನು ಪಡೆಯುವಷ್ಟು ಅದೃಷ್ಟ ಜಾನಕಿ ಮಾಡಿರಲಿಲ್ಲ ಎನಿಸುತ್ತದೆ. ದೇವರು ಯಾಕೆ ಅವಳ ಬಾಳಿನಲ್ಲಿ ಈ ರೀತಿಯ ಆಟ ಆಡಿದನೋ.... ಹುಟ್ಟುವಾಗಲೇ ಅವಳನ್ನು ಅನಾಥಳನ್ನಾಗಿ ಮಾಡಿ, ಈಗ ಆಯಸ್ಸೇ ಮುಗಿಸಿಬಿಟ್ಟ.....

ಹ್ಮ್.... ಸರೀನಪ್ಪ ನಾವಿನ್ನು ಹೊರಡುತ್ತೇವೆ. ನಾವು ಹೇಳಿದ ವಿಷಯ ನಿಧಾನವಾಗಿ ಯೋಚನೆ ಮಾಡಿ ನಿನ್ನ ಆರೋಗ್ಯದ ಕಡೆ ಗಮನ ಕೊಡು. ನಿಮ್ಮ ಅಪ್ಪ ಅಮ್ಮನಂತೆಯೇ ನಮ್ಮನ್ನೂ ತಿಳಿದುಕೋ.... 

ಜಾನಕಿಯ ಅಪ್ಪ ಅಮ್ಮ ಹೊರಟ ಮೇಲೆ ಅವರು ಹೇಳಿದ ಮಾತುಗಳನ್ನೇ ಯೋಚಿಸುತ್ತಾ ಕಣ್ಮುಚ್ಚಿದೆ. ಹಿಂದೊಮ್ಮೆ ಜಾನಕಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅರ್ಜುನ್... ನಿನ್ನ ಬಳಿ ಒಂದು ವಿಷಯ ಮಾತಾಡಬೇಕು ಕಣೋ.... ನೀನೇನೂ ತಪ್ಪು ತಿಳಿಯುವುದಿಲ್ಲ ಎಂದರೆ ಮದುವೆ ಆದ ಮೇಲೆ ಎಲ್ಲರೂ ಅಂದರೆ ನಮ್ಮ ಕುಟುಂಬ ಮತ್ತು ನಿಮ್ಮ ಕುಟುಂಬ ಒಟ್ಟಿಗೆ ಇರೋಣ ಕಣೋ. ಪಾಪ ಅಮ್ಮ ಅಮ್ಮನಿಗೆ ನನ್ನನ್ನು ಬಿಟ್ಟರೆ ಇನ್ಯಾರೋ ಇಲ್ಲ. ಆಮೇಲೆ ನಾನಿಲ್ಲಿ ಬಂದು ಬಿಟ್ಟರೆ, ಅವರಿಗೆ ಹುಷಾರಿಲ್ಲ ಎಂದರೂ ಯಾರೂ ಕೇಳುವುದಿಲ್ಲ ಕಣೋ. ಪ್ಲೀಸ್ ಕಣೋ.... ಎಂದ ಮಾತು ನೆನಪಿಗೆ ಬಂದು ಇಂದು ಜಾನಕಿಯ ಅಪ್ಪ ಅಮ್ಮನೂ ಅದೇ ಮಾತು ಹೇಳಿದ್ದು ನೆನಪಾಗಿ ಕಣ್ಣು ತೇವವಾದವು.

ಜಾನಕಿಯ ಫೋಟೋ ಕೈಯಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಮುತ್ತು ಕೊಟ್ಟು, ಜಾನು ಆ ಕೊಲೆಗಡುಕರನ್ನು ಕಂಡು ಹಿಡಿತ ತಕ್ಷಣ, ನಾನು ಮೊದಲಿನಂತಾಗಿ ನಿಮ್ಮಪ್ಪ ಅಮ್ಮನನ್ನು ಇಲ್ಲಿಯೇ ಕರೆದುಕೊಂಡು ಬರುತ್ತೇನೆ ಎಂದು ಕಣ್ಣನ್ನು ಒರೆಸಿಕೊಂಡೆ.

ಒಂದೆರೆಡು ದಿನ ಆಗಿತ್ತು, ಇನ್ಸ್ಪೆಕ್ಟರ್ ತ್ರಿವಿಕ್ರಂ ಕರೆ ಮಾಡಿ ಅರ್ಜುನ್ ಅರ್ಜೆಂಟಾಗಿ ಸ್ಟೇಶನ್ ಗೆ ಬನ್ನಿ. ನಿಮ್ಮ ಬಳಿ ಮಾತಾಡಬೇಕು ಎಂದು ಫೋನ್ ಇಟ್ಟು ಬಿಟ್ಟರು. ಓಹೋ ಆ ಕೊಲೆಗಾರ ಬಾಯಿ ಬಿಟ್ಟಿರಬೇಕು ಎಂದುಕೊಂಡು ಸ್ಟೇಷನ್ ಗೆ ಬಂದಾಗ ತ್ರಿವಿಕ್ರಂ ಯಾವುದೋ ಫೈಲ್ ನೋಡುವುದರಲ್ಲಿ ಮಗ್ನರಾಗಿದ್ದರು. ನನ್ನನ್ನು ಕಂಡ ಕೂಡಲೇ ಫೈಲ್ ಪಕ್ಕಕ್ಕಿಟ್ಟು ನನ್ನನ್ನು ಕೂಡಿಸಿ, ಅರ್ಜುನ್.... ನಾನು ಹೇಳಿರಲಿಲ್ಲವ... ಅವನ ಕೈಲಿ ಬಾಯಿ ಬಿಡಿಸುತ್ತೇನೆ ಎಂದು. ಎರಡನೇ ರೌಂಡ್ ಊಟ ಮಾಡಿಸಿದ ಕೂಡಲೇ ಎಲ್ಲಾ ಬಾಯಿ ಬಿಟ್ಟಿದ್ದಾನೆ. ಆದರೆ ಅವನೇ ಮೂಲ ವ್ಯಕ್ತಿ ಹೌದೋ ಅಲ್ಲವೋ ಎಂದು ಇವನಿಗೆ ಗೊತ್ತಿಲ್ಲ. ಇವನಿಗೆ ಡೀಲ್ ಒಪ್ಪಿಸಿದ ವ್ಯಕ್ತಿಯನ್ನು ಇವನು ನೋಡಿದ್ದಾನೆ, ಆದರೆ ಅವನು ಎಲ್ಲಿರುತ್ತಾನೆ, ಅವನ ಸಂಪರ್ಕ ಯಾವುದೂ ಇವನಿಗೆ ಗೊತ್ತಿಲ್ಲ. ಅವನಿಗೆ ಏನಾದರೂ ಕೆಲಸ ಆಗಬೇಕೆಂದರೆ ಅವನೇ ಇವನನ್ನು ಸಂಪರ್ಕಿಸಿ ಒಂದು ಜಾಗದಲ್ಲಿ ಭೇಟಿ ಮಾಡಿ ಹಣವನ್ನು ಒಪ್ಪಿಸುತ್ತಾನೆ. ಆ ವ್ಯಕ್ತಿಯನ್ನು ಸಂಪರ್ಕಿಸಿದರೆ ನಮಗೆ ಮೂಲ ವ್ಯಕ್ತಿ ಸಿಗುತ್ತಾನೆ. ಆದರೆ ಅದಕ್ಕೆ ನಾವು ಆ ವ್ಯಕ್ತಿ ಮತ್ತೆ ಇವನನ್ನು ಸಂಪರ್ಕಿಸುವವರೆಗೂ ಕಾಯಬೇಕು.

ಸರ್.... ಇದೇನು ಸರ್ ವಿಚಿತ್ರ, ಒಳ್ಳೆ ಯಾವುದೋ ಫಿಲಂ ಕಥೆ ಓಡಿದ ಹಾಗೆ ಓಡುತ್ತಿದೆ, ಒಬ್ಬರಿಂದ ಒಬ್ಬರು, ಅವರಿಂದ ಇನ್ನೊಬ್ಬರು, ಇನ್ನೊಬ್ಬರಿಂದ ಮತ್ತೊಬ್ಬರು....

ಅರ್ಜುನ್... ಕೊಲೆ ಕೇಸ್ ಎಂದರೆ ತಮಾಷೆ ಎಂದುಕೊಂಡಿರ.... ಇದು ಫಿಲಂ ರೀತಿ ಅಲ್ಲ, ಫಿಲಂಗಳೇ ಈ ರೀತಿ ಇರುತ್ತದೆ. ಅಷ್ಟು ಸುಲಭವಾಗಿ ಕೊಲೆ ಮಾಡುವವರು ದೊರಕುವ ಹಾಗಿದ್ದರೆ, ನಾವೆಲ್ಲಾ ಇಷ್ಟೆಲ್ಲಾ ಯಾಕೆ ಪರಿಶ್ರಮ ಪಡಬೇಕಿತ್ತು ಹೇಳಿ...

ಸರಿ ಸರ್... ಆದರೆ ಮತ್ತೆ ಆ ವ್ಯಕ್ತಿ ಇವರನ್ನು ಸಂಪರ್ಕಿಸುವುದು ಯಾವಾಗ? ನಾವು ಅವನನ್ನು ಹಿಡಿಯುವುದು ಯಾವಾಗ? ಅವನು ಮತ್ತೆ ಇನ್ಯಾರನ್ನೋ ಹೇಳಿದರೆ, ಮತ್ತೆ ಅವನನ್ನು ಹುಡುಕುವುದು ಹೇಗೆ?

ಅರ್ಜುನ್... ಏನೂ ಮಾಡುವ ಹಾಗಿಲ್ಲ.... ನಾವು ಕಾಯಲೇ ಬೇಕು... ನಮ್ಮ ಸಮಯ ಚೆನ್ನಾಗಿದ್ದರೆ ಅವನು ನಾಳೆಯೇ ಇವನನ್ನು ಸಂಪರ್ಕಿಸಬಹುದು, ಇಲ್ಲವಾದರೆ ಇನ್ನೊಂದು ವರ್ಷದವರೆಗೂ ಸಂಪರ್ಕಿಸುವುದಿಲ್ಲ.... ಇನ್ನೂ ಒಂದು ಸಾಧ್ಯತೆ ಇದೆ, ಒಂದು ವೇಳೆ ನಾವು ಇವನನ್ನು ಅರೆಸ್ಟ್ ಮಾಡಿರುವುದು ಒಂದು ವೇಳೆ ಅವನಿಗೆ ಏನಾದರೂ ತಿಳಿದು ಹೋಗಿದ್ದರೆ ಅವನು ಖಂಡಿತ ಇವರನ್ನು ಸಂಪರ್ಕಿಸುವುದಿಲ್ಲ... ಹೀಗೇ ಆಗುತ್ತದೆ ಎಂದು ಹೇಳಲು ಬರುವುದಿಲ್ಲ ನೋಡೋಣ. 

Rating
No votes yet

Comments