ಅಮ್ಮ ಉರುಳಿಸಿ ಬಿಡುವ ಗೋಡೆಯ

ಅಮ್ಮ ಉರುಳಿಸಿ ಬಿಡುವ ಗೋಡೆಯ

ಅಮ್ಮಾ ನೆನಪಿದೆ ನಾ ನೋವೆಂದು
ಕೂಗಿದಾಗಲೆಲ್ಲಾ ಅತ್ತದ್ದು
ನಿನ್ನ್ ಕಣ್ಣು, ನರಳಿದ್ದು ನಿನ್ನ
ಹೃದಯ

ಅಮ್ಮಾ ನೆನಪಿದೆ ದೀವಳಿಗೆಯ
ದೀಪಗಳ ಸಾಲಿನಲ್ಲೂ
ನಿನಗೆ ನಾ ದೀಪವಾಗಿ ಕಂಡು
ಬಿಗಿದಪ್ಪಿ ಸುರಿಸಿದ ಕಣ್ಣೀರು

ಅಮ್ಮ ನೆನಪಿದೆ , ನಿನ್ನ ಬಾಳ
ಇರುಳಿನಲ್ಲೂ ,ನನ್ನ ಜೀವಕೆ
ಜ್ಯೋತಿಯಾಗಿ ತೋರಿದ ಮಮತೆ

ಅಮ್ಮ ನೆನಪಿದೆ ವೈಫಲ್ಯಗಳ
ಸರಮಾಲೆಯಲ್ಲಿಯೂ ನಾ ನಿನಗೆ
ಸಾಧಕಿಯಾಗಿಯೇ ಕಂಡಿದ್ದು

ಅಮ್ಮ ನೆನಪಿದೆ ಹೆಜ್ಜೆ ಇಡುವ
ಮೊದಲ ದಿನಗಳಲ್ಲಿ
ನಿನ್ನ ಕಣ್ಣಲ್ಲಿ ಕಂಡ ಸಂತಸ

ಅಮ್ಮ ನೆನಪಿದೆ ನಿದ್ದೆ
ಬರದ ರಾತ್ರಿಗಲಲ್ಲಿ ನೀ
ಹೇಳುತ್ತಿದ್ದ ಕತೆಗಳ

ಅಮ್ಮ ನೆನಪಿದೆ ಕಷ್ಟಗಳ
ಬೆಂಕಿ ಮಳೆಯಲೂ ನೀ ಎರೆದ
ತಂಪು ಗಾಳಿಯ ಮಮತೆ

ಅಮ್ಮಾ
ನಿನ್ನ ಮನದಾಳವ ನಾ ಬಲ್ಲೆ
ನನಗಿಂತ ಎನ್ನ ನೀ ಬಲ್ಲೆ
ಏಕೆ ಕಟ್ಟುತ್ತಿರುವೆ ಇಂದು
ಮೌನ ಗೋಡೆಯ ನಮ್ಮಿಬ್ಬರನಡುವಲ್ಲಿ,
ಉರುಳಿಸಿ ಬಿಡುವ ಗೋಡೆಯ
ಮತ್ತೇಕೆ ತಡ

ನೀನಿತ್ತ ಅನಂತ ವಾತ್ಸಲ್ಯಕ್ಕೆ
ನಾ ನೀಯುತ್ತಿರುವ ಪ್ರೀತಿ
ಆದಾವ ರೀತಿಯಲ್ಲೂ
ಅಲ್ಲ ಸರಿ ಸಾಟಿ

ಏನಮ್ಮ ಮಾಡಲಿ
ಹರಿದು ಹಂಚಿ ಹೋಗಿದೆ
ಪ್ರೀತಿ
ಕರುಳ ಬಳ್ಳಿ, ಕಟ್ಟಿಕೊಂಡ ಒಲವು
ಹಿಡಿ ಹಿಡಿದು ಕೇಳಲು ,ಕೊಡೆನೆಂದು
ಹೇಗೆ ಹೇಳಲಿ

ಮನದಾಳದಿ ಹೇಳಲಾರದ
ನೋವದನೇಂದು ನಾ ಬಲ್ಲೆ
ಕೊಟ್ಟ ಹೆಣ್ಣು ಕುಲಕ್ಕೆಹೊರಗು
ಎಂಬ ಮಾತಿನ ಜಪವೇಕೆ

ಮಗನಾದರೂ ಮಗಳಾದರೂ
ನಾ ,ನೀ ಎನ್ನ ತಾಯಿಯೇ
ಸಾಕುವಾಗ ಇಲ್ಲದಿದ್ದ
ಭೇದ ಈಗೇಕೆ

ಸಾಕು ಮಾಡು ಅಮ್ಮಯೋಚನೆಗಳ
ನಾ ನಿನ್ನ ಮಗಳಲ್ಲ ಮಗನೆಂದೇ ತಿಳಿ
ಇನ್ನಾದರೂ ಮೌನ ಹಂದರದಿಂದ
ಆಚೆ ಬಂದೆನ್ನ ನೋಡಮ್ಮ
ಕಾಯುತ್ತಿದ್ದೆ ನಿನ್ನ ಕರುಳಕುಡಿ

(ಯಾವುದೋ ಕಾರಣಕ್ಕೆಬೇಸರಿಸಿಕೊಂಡಿದ್ದ ಅಮ್ಮನಿಗೆ ಬರೆದದ್ದು.ಅಮ್ಮನಿಗೆ ತೋರಿದ ಕೂಡಲೆ ಅವಳ ಮುಖ ಅರಳಿತು)

Rating
No votes yet

Comments