ಇಂತದ್ದೊಂದು ಪುಸ್ತಕ ಓದಿದೆ!!

ಇಂತದ್ದೊಂದು ಪುಸ್ತಕ ಓದಿದೆ!!

ಭೈರಪ್ಪನವರ ಯಾವುದೇ ಕಾದಂಬರಿ ನನ್ನನ್ನು ಕಾಡದೇ ಬಿಟ್ಟಿಲ್ಲ. ಪ್ರತಿ ಬಾರಿಯೂ ಅವರ ಬರಹಗಳನ್ನು ಓದಿದಾಗ, ಒಂದೆರೆಡು ದಿನಗಳು ಏನೂ ಓದದೆ ಅದರಲ್ಲೇ ಮುಳುಗಿರುತ್ತಿದ್ದೆ. ಸುತ್ತಮುತ್ತಲಿನ ಜನರಲ್ಲಿ ಕಾದಂಬರಿಯ ಪಾತ್ರಗಳನ್ನು ಹುಡುಕ ತೊಡಗುತ್ತಿದ್ದೆ. ಯಾವುದೋ ಹೋಲಿಕೆ ಸಿಕ್ಕಂತಾಗಿ, ಓದುವಾಗ ಹೊಳೆಯದ್ದು ಇದ್ದಕ್ಕಿದ್ದಂತೆ ನೆನಪಾದಂತಾಗಿ ರೋಮಾಂಚನಗೊಳ್ಳುತ್ತಿದ್ದೆ.

’ವಂಶವೃಕ್ಷ’ ಇತ್ತೀಚೆಗೆ ನಾನು ಓದಿದ ಪುಸ್ತಕ. ಮನುಷ್ಯನ ಧಾರ್ಮಿಕ ನಂಬಿಕೆಗಳ ಬಗ್ಗೆ, ಅವುಗಳ ಸಾಧ್ಯಾಸಾಧ್ಯತೆಗಳ ಬಗ್ಗೆ, ಧರ್ಮ ಸೂಕ್ಷ್ಮಗಳು- ಅವು ಆಸ್ತಿಕನಿಗೆ ಈಡು ಮಾಡುವ ಗೊಂದಲಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಡುವ ಕಾದಂಬರಿ ವಂಶವೃಕ್ಷ. ಕಾದಂಬರಿ ಇತಿಹಾಸ ಪರಿಚಯದಿಂದ ಶುರುವಾಗುತ್ತದಾದರೂ ಕತೆ ಮುಂದುವರೆಯುತ್ತ ಹೋದಂತೆ ಹೊಸ ಹೊಸ ಮಗ್ಗುಲನ್ನು ಪಡೆಯುತ್ತ ಹೋಗಿ ನಾವು ಯೋಚಿಸಿರದ ತಿರುವುಗಳನ್ನು ಪಡೆದುಕೊಂಡು ಭೈರಪ್ಪನವರ ಕಾದಂಬರಿಗಳಲ್ಲಿ ಯಾವಾಗಲೂ ಆಗುವಂತೆ ಓದುಗರು ಯಾವುದೇ ಕನ್ ಕ್ಲೂಶನ್ನಿಗೂ ಬರಲಾಗದ ಘಟ್ಟದಲ್ಲಿ ಮುಕ್ತಾಯ ಕಂಡುಬಿಡುತ್ತದೆ. ಭೈರಪ್ಪನವರ ಈ ಶೈಲಿಯನ್ನು ನಾನು ಮತ್ತೆ ಮತ್ತೆ ಮೆಚ್ಚುತ್ತೇನೆ. ಪ್ರತಿ ಕಾದಂಬರಿಯಲ್ಲು ಭೈರಪ್ಪನವರು ಇನ್ನಷ್ಟು ಆಪ್ತರಾಗುತ್ತಾರೆ.

ಕತೆಯಲ್ಲಿ ಬಹಳಷ್ಟು ಪ್ರಧಾನ ಪಾತ್ರಗಳಿವೆಯಾದರೂ ಶ್ರೀನಿವಾಸ ಶೋತ್ರಿಗಳದ್ದು ಕಾದಂಬರಿಯಲ್ಲಿ ವಿಶಿಷ್ಟ ಸ್ಥಾನ. ಭೈರಪ್ಪನವರ ಹೆಚ್ಚು ಚಿಂತನೆಗಳು ಈ ಪಾತ್ರದ ಮೂಲಕ ಹೊಮ್ಮುತ್ತವೆ. ತಮ್ಮ ಜೀವನದ ಕೊನೆ ದಿನಗಳವರೆಗೆ ಧರ್ಮನಿಷ್ಠರಾಗಿ ಬದುಕಿದ ಶೋತ್ರಿಗಳ ಬದುಕಿನಲ್ಲಿ ಅವರ ನಂಬಿಕೆಗಳನ್ನೆ ಪರೀಕ್ಷೆಗೊಡ್ಡುವ, ಕಾದಂಬರಿಯಿಡೀ ಆಶ್ಚರ್ಯವೆನಿಸುವಂತಹ ಅವರ ವ್ಯಕ್ತಿತ್ವಕ್ಕೇ ಸವಾಲೆಸಗುವ ಸನ್ನಿವೇಶವನ್ನು, ಅದನ್ನು ಶೋತ್ರಿಗಳು ನಿಭಾಯಿಸುವ ರೀತಿಯನ್ನು. ಆ ಸನ್ನಿವೇಶ ಶೋತ್ರಿಗಳಿಗೆ ಉಂಟುಮಾಡುವ ಗೊಂದಲಗಳನ್ನು ಓದುಗರ ಮನಸ್ಸಿನಲ್ಲಿ ಮೂಡಿಸುತ್ತಾ ಹೋಗುತ್ತಾರೆ ಭೈರಪ್ಪ. ಎಲ್ಲಿಯೂ ಕೃತಕವೆನಿಸದೆ, ಆಸ್ತಿಕತೆಗೂ ನಾಸ್ತಿಕ ಲೇಪನವನ್ನು ಮಾಡಿ ಅದೊಂದು ಲಾಜಿಕಲ್ ವೀವ್ ಇಟ್ಟುಕೊಂಡೇ ಕಾದಂಬರಿಯು ಮುಂದುವರೆಯುತ್ತದೆ.

ನಾಸ್ತಿಕರಾದವರಿಗೆ ಆಸ್ತಿಕರ ವಿಚಾರಗಳು ಯಾವಾಗಲೂ ಕ್ಷುಲ್ಲಕವೇ. ಅಥವ ನಾನು ನಾಸ್ತಿಕಳಾದ್ದರಿಂದ ನನಗೆ ಹಾಗನ್ನಿಸುವುದೇನೋ? ಇರಲಿ. ಆದರೆ ಆಸ್ತಿಕತೆಯಲ್ಲಿ ಯಾವುದೇ ಗೊಂದಲಗಳಿರುವುದಿಲ್ಲವೆಂದು ನಾಸ್ತಿಕರು (ನಾನು) ನಂಬುತ್ತಾರೆ. ವಂಶವೃಕ್ಷವು ಈ ಕಲ್ಪನೆಗಳನ್ನು ಮೀರಿ ವಿಭಿನ್ನವಾದ ಆಸ್ತಿಕತೆಯನ್ನು ಅದರಲ್ಲಿನ ಗೊಂದಲಗಳನ್ನು ಪರಿಚಯಿಸುತ್ತದೆ. ಧರ್ಮದ ಉಲ್ಲಂಘನೆ ಅಥವಾ ಪಾಲನೆಯ ಸೂಕ್ಷ್ಮ ತಂತುಗಳನ್ನು ತಾಕುತ್ತದೆ. ಕಾದಂಬರಿಯ ಬಗ್ಗೆ ಇನ್ನೂ ಹೆಚ್ಚಿನ ಸಂಗತಿಗಳನ್ನು ಬರಯಬೇಕಿನಿಸಿದರೂ ಅವೆಲ್ಲವೂ ನಿರರ್ಥಕ. ನೀವೊಮ್ಮೆ ಆ ಕಾದಂಬರಿ ಓದಿ. ಅಥವಾ ಇದಕ್ಕೂ ಮೊದಲೇ ಓದಿರುವಿರಾದರೆ ನಿಮ್ಮ ಅನುಭವ ಹಂಚಿಕೊಳ್ಳಿ.

Rating
No votes yet

Comments