ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗ
ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗಮುಂದೆ ಹೋಗಬೇಕಿತ್ತು. "ಉಜ್ಜಯಿನಿ ದರ್ಶನ"ಕ್ಕೆ ಮೃಚ್ಛಕಟಿಕದವರು ಏನಾದರೂ ತೀರ್ಥ ಕುಡಿಸಿಬಿಟ್ಟರೆ ಎಂಬ ಆತಂಕದಿಂದ ಸಹವಾಸ ಬೇಡ ಅಂದುಕೊಂಡು ಒಬ್ಬ ಮುಸಲ್ಮಾನ ವ್ಯಕ್ತಿಯ ಮೂರು ಚಕ್ರದ ರಿಕ್ಷಾ ಏರಲಾಯಿತು. ಆತನ ಹೆಸರು ಶಕೀಲ್ ಅಬ್ಬಾಸ್. 250 ರೂಪಾಯಿಗೆ ಉಜ್ಜಯಿನಿ ದರ್ಶನ ಮಾಡಿಸುವುದಾಗಿ ಒಪ್ಪಿಕೊಂಡಾಗ ಮೂರು ಲೋಕದ ದರ್ಶನವಾದ ಅನುಭವವಾಯಿತು. (ಚಿತ್ರ ಸಹಿತ ಇಲ್ಲಿದೆ : bogaleragale.blogspot.com)
ಮೊದಲು ತೆರಳಿದ್ದು ಗಢಕಾಳಿಕಾ ದೇವಿಯ ಮಂದಿರಕ್ಕೆ. ಕಾಳಿದಾಸನಿಗೊಲಿದ ಮಹಾಕಾಳಿಯು ನೆಲೆನಿಂತ ತಾಣವಿದು. ಬಸ್ಸಿನಲ್ಲಿ ಧೂಳಿದಾಸನಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಬಂದಾಗಿದೆ, ಅಲ್ಲೇ ರಿಕ್ಷಾದಿಂದಿಳಿದು , ಕಾಲಿದೋಸೆ ಸೇವಿಸಿ ಕಾಳಿದಾಸನ ಕೋಟಿಯ ಒಂದು ಭಾಗದಷ್ಟು ಜ್ಞಾನವನ್ನಾದರೂ ಕೊಡು ತಾಯಿ ಎಂದು ಪ್ರಾರ್ಥಿಸಿದಾಗ, ಇದುವೇ ಕೋಲ್ಕತಾದ ಕಾಳಿಯ ಮೂಲ ಸ್ಥಾನ ಎಂಬ ವಿವರಣೆ ದೊರೆಯಿತು.
ಮುಂದೆ ಸಾಗಿದ್ದು, ಮದ್ಯ ಸೇವಿಸುವ ದೇವತೆಯಿರುವ ತಾಣ ಕಾಳಭೈರವ ಕ್ಷೇತ್ರಕ್ಕೆ. ಇಲ್ಲಿ ಬಾಟಲಿ ರಮ್ ವಿಸ್ಕಿಯೆಲ್ಲವನ್ನು ಕಾಳಭೈರವನ ಬಾಯಲ್ಲಿರಿಸಿದರೆ, ಅದು ಹರಿದುಹೋಗುತ್ತಿತ್ತು. ಮಹಾಕಾಳೇಶ್ವರನ ದರ್ಶನ ಮಾಡಿದವರು, ಶಿವ ಗಣವಾದ ಕಾಳಭೈರವನನ್ನೂ ಒಂದು ಕೈ ನೋಡಿಬರಬೇಕೆಂಬುದು ಪ್ರತೀತಿ ಅಂತ ಆ ಮುಸಲ್ಮಾನ ವಿವರಿಸಿದ.
ಖಂಡಿತವಾಗಿಯೂ ಇದೊಂದು ತೀರ್ಥಯಾತ್ರೆ ಎಂಬುದು ಖಚಿತವಾಯಿತು. ಸುತ್ತಮುತ್ತ ನೋಡಿದಾಗ ಕೆರ್ರ್.... ಎಂಬ ಕಿರುಚಾಟದೊಂದಿಗೆ ನನ್ನ ಕೈಯಲ್ಲಿದ್ದ ಪ್ರಸಾದದ ಗಂಟನ್ನು ಎಳೆದೊಯ್ದಿತು ನನ್ನ ಪ್ರೀತಿಯ ಮಂಗ! ಎಲ್ಲಿ ನೋಡಿದರಲ್ಲಿ ಈ ನಮ್ಮ ಸಂತಾನದವರು! ನಮ್ಮದೇ ಬುದ್ದಿ, ನಮ್ಮದೇ ತುಂಟಾಟ, ನಮ್ಮದೇ ನಗು... ಮರ್ಕಟ ಮನಸಿನ ನಮಗೂ ಅದಕ್ಕೂ ಎಷ್ಟೊಂದು ಹೋಲಿಕೆ! (ಬಲಚಿತ್ರ: ಕಾಲಭೈರವ ಮಂದಿರ ಎದುರು ಪ್ರವಾಸಿಗರನ್ನು "ಸುಲಿಯುವ" ಜಾತಿಬಾಂಧವರು!)
ಬಳಿಕ ಮಂಗಗಳ ಗ್ರಹದಲ್ಲಿರುವ ನಮ್ಮಂಥವರಿಗೆ ಮಂಗಳಕಾರಕನಾಗಿರುವ ಮಂಗಳನ ಉತ್ಪತ್ತಿ ಸ್ಥಾನ ಎಂದು ಕರೆಯಲಾಗುವ ಮಂಗಲನಾಥ ಮಂದಿರ. ಮಂಗಳ ಗ್ರಹ ಶಾಂತಿ ಇಲ್ಲಿ ವಿಶೇಷ. ಖಗೋಳಶಾಸ್ತ್ರೀಯವಾಗಿಯೂ ಈ ಸ್ಥಾನಕ್ಕೆ ಬಹಳ ಮಹತ್ವವಿದೆ. ಅಲ್ಲಿಂದ ರಾಮಘಾಟ್ ಎಂಬ ಸರೋವರ ತಟ. ಸುತ್ತ 1000 ಮಂದಿರಗಳಿವೆ ಎಂಬ ಮಾಹಿತಿ ದೊರೆಯಿತು ರಿಕ್ಷಾವಾಲ ಶಕೀಲ್‌ನಿಂದ.
ಮೂರು ಚಕ್ರದ ಗಾಡಿಯಲ್ಲಿ ಕುಳಿತಾಗ ಮೃಚ್ಛಕಟಿಕದ್ದೇ ನೆನಪು. ಮುಂದೆ ಸಾಗಿದೆವು. ಕ್ಷಿಪ್ರಾ ನದಿಯನ್ನು ಶಿಪ್ರಾ ನದಿಯೆಂದೂ ಇಲ್ಲಿ ಕರೆಯಲಾಗುತ್ತಿದ್ದು, ಇದು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತಾ ಚಂಬಲ್ ನದಿಯನ್ನು ಸೇರಿ ಆ ಮೂಲಕ ಸಮುದ್ರ ಪಾಲಾಗುತ್ತದೆ. ಮಧ್ಯಭಾರತದ ಗಂಗೆ ಎಂಬ ಹೆಗ್ಗಳಿಕೆಯ, ವಿಷ್ಣುವಿನ ಬೆರಳಿನಿಂದ ಹುಟ್ಟಿದ ಕ್ಷಿಪ್ರೆಯ ತಟದಲ್ಲಿಯೇ ವಿಕ್ರಮಾದಿತ್ಯನನ್ನು ಕಾಡಿದ ಬೇತಾಳ ನೇತುಕೊಂಡಿರುವ ವಟವೃಕ್ಷವಿದೆ. ಇದುವೇ ಸಿದ್ಧವಟ ಕ್ಷೇತ್ರ. ಇಲ್ಲಿ ಪಿತೃಗಳ ಮೋಕ್ಷಕ್ಕೆ ವಿಶೇಷ ಸೌಕರ್ಯವಿದೆ.
ಉತ್ತಮ ಮಾತುಗಾರ ಅರ್ಚಕರೊಬ್ಬರು ಎಲ್ಲಾ ಮಾಹಿತಿ ನೀಡಿದರು. ಆದರೆ ಬಲವಂತವಾಗಿ ಕೀಳುವುದಿಲ್ಲ ಎನ್ನಬಹುದು. ನಿಮ್ಮ ಶಕ್ತ್ಯಾನುಸಾರ ಕೊಡಿ, ಪಿತೃಗಳಿಗೆ ಮುಕ್ತಿ ದೊರಕಿಸುತ್ತೇವೆ ಎಂದರು.
ಮುಂದೆ ಹೊಕ್ಕಿದ್ದು ಎರಡು ಗುಹೆಗಳನ್ನು. ಅದರಲ್ಲೊಂದು ವಿಕ್ರಮಾದಿತ್ಯನ ಅಣ್ಣ ಭರ್ತೃಹರಿ ಅಲಿಯಾಸ್ ಭಟ್ಟಿ ತಪಸ್ಸು ಮಾಡಿದ ತಾಣ. ಅಲ್ಲಿ ಭಟ್ಟಿಯ ತಪಸ್ಸು ಹಾಳುಗೆಡಹಲು ಇಂದ್ರನು ಶಿಲೆಕಲ್ಲನ್ನು ಎಸೆದಾಗ, ಅದನ್ನು ಭಟ್ಟಿಯು ಭದ್ರವಾಗಿ ಎತ್ತಿ ಹಿಡಿದ. ಆಗ ಮೂಡಿದ ಆತನ ಕೈಯ ಪಡಿಯಚ್ಚು, ಮತ್ತು ಆ ಆಘಾತಕ್ಕೆ ತುಂಡಾದ ಶಿಲೆಯನ್ನು ಅದರೊಳಗಿರುವ ಮಹಾತ್ಮರು ತೋರಿಸಿದರು, ವಿವರಿಸಿದರು. ಭಟ್ಟಿಯ ಮೂರ್ತಿಯೂ ಅಲ್ಲಿತ್ತು.
ಸಮಯವಿಲ್ಲದ ಕಾರಣ, ಓಡೋಡಿದಾಗ ಸಾಗಿದ್ದು, ಶ್ರೀಕೃಷ್ಣ-ಬಲರಾಮ ಎಂಬ ಯಾದವ ಬ್ರದರ್ಸ್, LKG ವಿದ್ಯಾಭ್ಯಾಸ ಮಾಡಿದ ಮತ್ತು Friend ಸುದಾಮನ ಜತೆಗೆ ಆಟವಾಡಿದ ಸಾಂದೀಪನಿ ಆಶ್ರಮಕ್ಕೆ. ಅಲ್ಲಿರುವ ಗೋವುಗಳ ಮೈದಡವಿ ಸುಂದರ ವಾಸ್ತುಶಿಲ್ಪ ಕಲೆಯ ಚಾರ್‌ಧಾಮ ಮಂದಿರ, ಬಡೇ ಗಣೇಶ್‌ಜಿ, ಪಂಚಮುಖಿ ಹನುಮಾನ್, ವಿಕ್ರಮಾದಿತ್ಯನ ಆರಾಧ್ಯ ದೇವಿಯಾದ ಹರಸಿದ್ಧಿದೇವಿ ಮಂದಿರ ಇವೆಲ್ಲಕ್ಕೂ ಕಣ್ನೋಟ ಹರಿಸಿದಂತೆ ಸಾಗಿದ್ದು. ಯಾಕೆಂದರೆ ಅದಾಗಲೇ ಕತ್ತಲಾಗಿತ್ತು.
ಮತ್ತೆ ಕೊನೆಯ ನನ್ನ ಪ್ರಯತ್ನವೆಂದರೆ ವಿಕ್ರಮಾದಿತ್ಯನ ಬಹುನಿರೀಕ್ಷಿತ ಸಿಂಹಾಸನ ಏರಲು ಯತ್ನಿಸಿದ್ದು! ಆದರೆ ಇದು ಪ್ರತಿಕೃತಿಯಷ್ಟೇ. ಅವನ ಸಿಂಹಾಸನವೇರುವ ಅರ್ಹತೆಯುಳ್ಳವರು ಯಾರೂ ಈ ಜಗತ್ತಿನಲ್ಲಿ ಇಲ್ಲದಿರುವುರಿಂದ ಅದು ಪಾತಾಳಕ್ಕೆ ಹೋಯಿತು ಎಂಬ ಕಥೆ ಕೇಳಿಬರುತ್ತದೆ. ಹಾಗಾಗಿ ಸಿಂಹಾಸನ ಏರುವ ಚಪಲ ವಿಫಲವಾಗಿ ಮರಳಿ ಇಂದೋರಿಗೆ ಕತ್ತಲಲ್ಲಿ ತಡಕಾಡುತ್ತಾ ತೆರಳಿದಾಗ ಏನನ್ನೋ ಕಳೆದುಕೊಂಡ ಭಾವ. (ಮೇಲಿನಚಿತ್ರ: ಸಾಂದೀಪನಿ ಆಶ್ರಮದಲ್ಲಿ ಶಿವಲಿಂಗದೆದುರು ಎದ್ದು ನಿಂತಿರುವ ನಂದಿ. ಇದು ವಿಶೇಷವಿರಬಹುದು.
ಬೆಂಬಿಡದಂತೆ ಕಾಡುವ ಆ ಮೃಚ್ಛಕಟಿಕ, ಬಸ್ಸು ತುಂಬಿದರೂ ಖಾಲಿ ಖಾಲಿ ಎನ್ನುತ್ತಾ ಪ್ರಯಾಣಿಕರನ್ನು ರಾಶಿ ಹಾಕುವ ಕಂಡಕ್ಟರುಗಳು ನೆನಪಾಗುವುದರೊಂದಿಗೆ ಕಾಳಿದಾಸ, ವಿಕ್ರಮಾದಿತ್ಯರು ಮನದಲ್ಲಿ ಅಚ್ಚಳಿಯದೆ ಕುಳಿತಿದ್ದರು.