ಉಳ್ಳವರು ಕಾಲ್ ಮಾಡುವರು !
ಉಳ್ಳವರು ಕಾಲ್ ಮಾಡುವರು ,
ನಾನೇನ ಮಾಡಲಿ ಬಡವನಯ್ಯಾ ,
ಮಿಸ್ ಕಾಲೇ ನನ್ನ ಆಸ್ತಿ ,
ಎಸ್ ಎಮ್ ಎಸ್ ನನ್ನ ಪಾಸ್ತಿ ,
ಕರೆನ್ಸಿ ಇದ್ದರೆ ಅದೇ ಜಾಸ್ತಿಯಯ್ಯಾ
ಮತ್ತು
ಕಳಬೇಡ, ಕೊಲಬೇಡ ,
ಕಾಲ್ ಮಾಡದೇ ಇರಬೇಡ ,
ಮಿಸ್ ಕಾಲ್ ಕೊಡಬೇಡ ,
ಎಸ್ ಎಮ್ ಎಸ್ ಕಳಿಸಲು ಮರೀಬೇಡ .
ಇದೇ ನನ್ನ ಅಂತರಂಗದ ಸುದ್ದಿ ,
ಬರಲಿ ನಿನಗೆ ಫೋನ್ ಮಾಡುವ ಬುದ್ಧಿ!
ಇವು ಸುಧಾ- ಯುಗಾದಿ ವಿಶೇಷಾಂಕ (೨೦೦೬) ರಲ್ಲಿ ಪ್ರಕಟವಾದ ಅನೇಕ ಖುಶಿ ಕೊಡುವ ಎಸ್ಸೆಮ್ಮೆಸ್ಸುಗಳಲ್ಲಿ ಎರಡು.
ಮಕ್ಕಳ ಶಿಕ್ಷಣ ಪದ್ದತಿಯ ಕುರಿತಾದ ವೈಚಾರಿಕ ಲೇಖನದಲ್ಲಿ ಹೀಗೆ ಹೇಳಲಾಗಿದೆ-ನಮ್ಮ ಮಕ್ಕಳಿಗೆ ಭಾಷೆ ಕಲಿಸಲು ಶಾಲೆಗಳಿರುವಂತೆ ನಡೆಯುವದನ್ನು ಕೂಡ ಕಲಿಸಲು ಶಾಲೆಗಳಿದ್ದರೆ ಅವರೆಲ್ಲ ಹೆಳವರಾಗಿರುತ್ತಿದ್ದರು.
ಇಲ್ಲಿ ಅನೇಕ ಕವಿಗಳು ಕಾವ್ಯ ಎತ್ತ ಸಾಗುತ್ತಿದೆ ಎಂಬ ಬಗ್ಗೆ ತಂತಮ್ಮ ಅಭಿಪ್ರಾಯ ಕೊಟ್ಟಿದಾರೆ. . ಈ ಅಭಿಪ್ರಾಯ ಗಮನಾರ್ಹವಾಗಿದೆ - ಉಳಿದ ಭಾರತೀಯ ಭಾಷೆಗಳಲ್ಲಿ ಕಾವ್ಯ ಪ್ರಕಾರ ಕನ್ನಡದಷ್ಟು ಶಕ್ತವಾಗಿಲ್ಲದಿರುವದು ಸತ್ಯ. ಮರಾಠಿಯಲ್ಲಿ ಆತ್ಮಕಥೆ, ತಮಿಳಿನಲ್ಲಿ ಕಥೆ , ಹಿಂದಿಯಲ್ಲಿ ವೈಚಾರಿಕ ಹೆಚ್ಚು ಜನಪ್ರಿಯವಾಗಿವೆ. ಕನ್ನಡದಲ್ಲಿ ಪ್ರಾತಿನಿಧಿಕವೆನಿಸಬಹುದಾದ ಕಾವ್ಯ ಪ್ರಬುದ್ಧತೆಯನ್ನು ಮೆರೆಯುತ್ತಿದೆ.
ಸುನಂದಾ ಪ್ರಕಾಶ ಕಡಮೆ ಎಂಬುವರು ಬರೆದ ಜರಿಯಂಚಿನ ಫ್ರಾಕು ಅತ್ಯಂತ ಸಮಕಾಲೀನ ಕಥೆಯಾಗಿತೆ . ರಸ್ತೆಯ ಅಗಲೀಕರಣ , ಅನಧಿಕೃತ ಕಟ್ಟಡಗಳ ನಿರ್ನಾಮದಲ್ಲಿ ಹೊಲಿಗೆ ಮಶೀನನ್ನು ಕಳೆದುಕೊಂಡ ಬಡವ ತನ್ನಂತೆ ತೊಂದರೆಗೊಳಗಾಗುವ ಇನ್ನೊಬ್ಬ ಬಡವನ ಕಬ್ಬಿನ ರಸ ತೆಗೆವ ಯಂತ್ರವನ್ನು ಉಳಿಸುವ ಕಥೆ ಹೃದಯಸ್ಪರ್ಶಿಯಾಗಿದೆ. ಎದೆಯಾಳದಿಂದೆದ್ದ ಗೋವು . ಇನ್ನೊಂದು ಕುತೂಹಲಕಾರಿ ಕಥೆ. ಸೋಮನಾಥಪುರದ ದೇವಾಲಯದಲ್ಲಿ ವಿಗ್ರಹಗಳಲ್ಲಿ ಸ್ಪಷ್ಟವಾಗಿ ಕಂಡು ಬರುವ ಗೋವಿನ ಮುಖಗಳ ಬಗ್ಗೆ ಡಾ. ಕೆ. ಎನ್. ಗಣೇಶಯ್ಯ ಬರೆದಿರುವ ಕಥೆ ರೋಚಕವಾಗಿದೆ. ಅದಕ್ಕೆ ಬಹಳಷ್ಟು ಆಧಾರ , ಉಲ್ಲೇಖಗಳು , ಆಕರಗಳನ್ನು ಒದಗಿಸಿದ್ದಾರೆ. ( ತೀರ ಇತ್ತೀಚೆಗೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ , ಹೊಯ್ಸಳ ಶಿಲ್ಪಗಳಲ್ಲಿ ಗೋವಿನ ಜೋಳ ಕಂಡು ಬರುವದರ ಹಿನ್ನೆಲೆಯಲ್ಲಿ ರೋಚಕ ಧಾರಾವಾಹಿಯೊಂದು ಪ್ರಕಟವಾಗಿತ್ತು . ಅದನ್ನು ಬರೆದವರೂ ಬಹುಃಶ ಇವರೇ- ಅದೂ ಕೂಡ ಬಹಳ ಚೆನ್ನಾಗಿತ್ತು ) .
ಎಸ್ ಎಫ್ ಯೋಗಪ್ಪನವರ್ ಅವರ ಕಥೆ ಕಲ್ಸಕ್ರಿ ಹೆಸರಿಗೆ ತಕ್ಕ ಹಾಗಿದೆ . ಈ ಕಥೆಯ ಸಂಗ್ರಹವನ್ನು kalsakri.blogspot.com ನಲ್ಲಿ ಓದಬಹುದು. ಕೆ.ವಿ. ತಿರುಮಲೇಶ್ ಅವರ ಗಾಲಿಕುರ್ಚಿ , ಮತ್ತು ಶ್ರೀಧರ ಬಳೆಗಾರ ಅವರ ತೊಟ್ಟಿಲು ಕಥೆಗಳೂ ಚೆನ್ನಾಗಿವೆ.
ಕರ್ನಾಟಕಲ್ಲಿ ಸದ್ಯಕ್ಕೆ ಯಾವ ಜನಪರ ಚಳುವಳಿಗಳೂ ಇಲ್ಲ. ಹೀಗೇಕೆ ? ಅಂಥ ಚಳುವಳಿಗಳಲ್ಲಿ ಹಿಂದೆ ಸಕ್ರಿಯ ಪಾತ್ರ ವಹಿಸಿದವರ ಅಭಿಪ್ರಾಯಗಳ ಸಂಗ್ರಹವೂ ಈ ಸಂಚಿಕೆಯಲ್ಲಿದೆ.
ಒಟ್ಟಿನಲ್ಲಿ ಸುಧಾ ವಿಶೇಷಾಂಕ ಚೆನ್ನಾಗಿದೆ.
Comments
ಚೆನ್ನಾದ ಸಂಗ್ರಹ