ಏಪ್ರಿಲ್ ಒಂದರ ವ್ಯಕ್ತಿ: ನಾಡಿನ ಮತದಾರ!

ಏಪ್ರಿಲ್ ಒಂದರ ವ್ಯಕ್ತಿ: ನಾಡಿನ ಮತದಾರ!


ಈ ಹಿಂದೆ ಯಾರೂ ಮಾಡಿರದಿದ್ದ ಪ್ರಯತ್ನಕ್ಕೆ ‘ನಗೆ ನಗಾರಿ ಡಾಟ್ ಕಾಮ್’ ಕೇವಲ ಕೈಯನ್ನು ಮಾತ್ರ ಹಾಕಿರುವ ವಿಚಾರವನ್ನು ಹಿಂದೆ ತಿಳಿಸಿದ್ದೆವು.
ಪ್ರತಿಷ್ಠಿತ ಸಂಸ್ಥೆಗಳು ಪೀಟಿಕಾ ವರ್ಷದ ವ್ಯಕ್ತಿ, ಸನ್ ಫಾಸ್ಟ್ ಉತ್ತಮ ನಟ, ಸಾಯಿ
ನೀರಾ ಅತ್ಯುತ್ತಮ ನಿರ್ದೇಶಕ ಹೀಗೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಕೊಡುತ್ತಾ
ಪ್ರಶಸ್ತಿಗಳ ಹೆಸರಿನ ಹಿಂದೆ ತಮ್ಮ ಹೆಸರನ್ನು ಹೆಸರನ್ನು ಸೇರಿಸಿಕೊಂಡು ತಮಗೂ
ಪ್ರಶಸ್ತಿಯನ್ನು ಕೊಟ್ಟುಕೊಂಡು ಬೆನ್ನು ಚಪ್ಪರಿಸಿಕೊಳ್ಳುತ್ತಾ ಇರಬೇಕಾದರೆ ನಗೆ ನಗಾರಿ ಡಾಟ್ ಕಾಮ್ ತೀರಾ ಅಸಾಧ್ಯ ಎಂಬುದಕ್ಕೆ ಮೂರು ಕಿ.ಮೀ ಹತ್ತಿರವಿರುವಂತಹ ಕೆಲಸಕ್ಕೆ ಕೈ ಹಾಕಿತ್ತು.

ಏಪ್ರಿಲ್ ಒಂದರ ವ್ಯಕ್ತಿಯನ್ನು ಆಯ್ಕೆ ಮಾಡುವ ಗುರಿಯನ್ನು ನಗೆ ಸಾಮ್ರಾಟರು ತಮ್ಮ
ಮುಂದೆ ಹೊಂದಿದ್ದರು. ಅದಕ್ಕಾಗಿ ಹಗಲು ರಾತ್ರಿಯೆನ್ನದೆ, ಮನೆ, ಬೀದಿಯೆನ್ನದೆ,
ಪಬ್ಬು-ಬಾರು ಎನ್ನದೆ, ಭೂಮಿ-ಅಂತರಿಕ್ಷವೆನ್ನದೆ ಎಲ್ಲೆಡೆ ತಿರುಗಾಡಿ, ತಿರುಗಾಡಿಸಿ
ಕಡೆಗೂ ಏಪ್ರಿಲ್ ಒಂದರ ವ್ಯಕ್ತಿಯ ಬಹುಮಾನಕ್ಕೆ ಆಯ್ಕೆಯನ್ನು ಮಾಡಿದ್ದಾರೆ. ನಗೆ ನಗಾರಿ ಕೊಡ ಮಾಡುವ ಈ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನವಾಗಿರುವುದು ‘ಈ ನಾಡಿನ ಪ್ರಜ್ಞಾಹೀನ ಮತದಾರ’!

ನಗಾರಿಯು ಇಂಥದ್ದೊಂದು ಪ್ರಶಸ್ತಿಯನ್ನು ಕೊಡ ಮಾಡುತ್ತಿದೆ ಎಂಬ ವಾರ್ತೆಯ
ವಾಸನೆಯನ್ನು ಹಿಡಿದು ಅನೇಕ ಬುದ್ಧಿವಂತರು ಸಂದಿ ಮೂಲೆಗಳನ್ನು ಹುಡುಕಿಕೊಂಡು ಹೋಗಿ ತಲೆ
ಮರೆಸಿಕೊಂಡಿದ್ದರು. ನಗೆ ನಗಾರಿಯ ಕಣ್ಣಿಗೆ, ನಗೆ ಸಾಮ್ರಾಟರ ಪೆನ್ನಿಗೆ ಬೀಳಬಾರದು
ಎಂದು ಪಾತಾಳವನ್ನೂ ಸಹ ಪ್ರವೇಶಿಸಿ ಅಡಗಿ ಕೂರಲು ತಯಾರಿ ನಡೆಸಿದ್ದರು. ಮರ್ಯಾದಸ್ಥರು,
ಸಭ್ಯರು, ಪ್ರಜ್ಞಾವಂತರು ಎಂಬ ಬೋರ್ಡುಗಳನ್ನು ಕುತ್ತಿಗೆಗೆ ನೇತು ಹಾಕಿಕೊಂಡ
ಬಹುಸಂಖ್ಯಾತರು ತಮ್ಮನ್ನು ನಗಾರಿಯ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಲು ಸರಕಾರದ
ನೆರವನ್ನೂ ಬೇಡಿದ್ದು ವರದಿಯಾಗಿದೆ. ಇಂಥ ಬುದ್ಧಿವಂತರು, ಸಭ್ಯಸ್ಥರು ಒಂದೆಡೆಯಾದರೆ
ನೀವು ಕೊಡಮಾಡುವ ಯಾವುದೇ ಬಹುಮಾನವನ್ನಾಗಲೀ ನನಗೇ ಕೊಡಿ ಎಂದು ಮೈಮೇಲೆ ಏರಿಬರುವಂತಹ
ಮೂರ್ಖರು ಮತ್ತೊಂದೆಡೆ. ಕೆಲವರು ನಗೆ ಸಾಮ್ರಾಟರಿಗೆ ಬ್ಲಾಕ್ ಮೇಲ್, ವೈಟ್ ಮೇಲ್,
ಆಂಥ್ರಾಕ್ಸ್ ಮೇಲ್ ಕಳುಹಿಸುವುದರ ಮೂಲಕ ತಮ್ಮನ್ನು ಆಯ್ಕೆ ಮಾಡಲೇ ಬೇಕೆಂದು ಒತ್ತಾಯ
ಹೇರಿದ್ದರು. ಆದರೆ ಪತ್ರಿಕೋದ್ಯಮದ ಮೊದಲ ಆದರ್ಶವಾದ, ಹಾಗೂ ಇತ್ತೀಚಿಗೆ ಎಲ್ಲಾ
ಪತ್ರಕರ್ತರ ಕಟ್ಟ ಕಡೆಯ ಆದ್ಯತೆಯಾಗಿರುವ ‘ವಸ್ತುನಿಷ್ಠತೆ, ನಿಷ್ಠುರತೆ’ಯನ್ನು ತುಂಬಾ
ಸ್ಟಿಕ್ಕಾಗಿ ಪಾಲಿಸುವವರಾದ್ದರಿಂದ ನಗೆ ಸಾಮ್ರಾಟರು ಇಂತಹ ಬೆದರಿಕೆಗಳಿಗೆ ಒಣ
ಸೊಪ್ಪನ್ನೂ ಹಾಕಲಿಲ್ಲ.

ಆಯ್ಕೆಯ ಪ್ರಕ್ರಿಯೆಯನ್ನು ಶುರುಮಾಡಿದಾಗ ಹಲವು ಹೆಸರುಗಳು ನಗಾರಿಯ ಕಛೇರಿಯನ್ನು
ತಲುಪಿಕೊಂಡಿದ್ದವು. ಅವುಗಳಲ್ಲಿ ಬಹು ಹೆಚ್ಚಿನ ಜನಮನ್ನಣೆಯನ್ನು ಪಡೆದುಕೊಂಡು ಮೊದಲ
ಸ್ಥಾನದಲ್ಲಿದ್ದದ್ದು ಶ್ರೀಮಾನ್ ಸರ್ದಾರ್ಜಿಯವರ ಹೆಸರು. ಆದರೆ ಜಗತ್ತಿನಾದ್ಯಂತ
ಜನಾಂಗೀಯ ನಿಂದನೆಯೆಂಬುದು ತೀವ್ರವಾದ ವಿವಾದ, ಕೋಲಾಹಲ, ಹಾಲಾಹಲವನ್ನು
ಎಬ್ಬಿಸುತ್ತಿರುವುದರಿಂದ, ಹಾಗೂ ಹಾಗೆ ಏಳುವ ವಿವಾದದ ಅಲೆಯಲ್ಲಿ ತಮ್ಮ ನಾವೆಯನ್ನು
ತೇಲಿಸಿಬಿಡುವ ಅವಕಾಶವಾದಿಗಳು ಎಲ್ಲೆಡೆಯೂ ಕಾಣುತ್ತಿರುವರಾದ್ದರಿಂದ ಸಾಮ್ರಾಟರು ಹೀಗೆ
ವಿವಾದವೆಬ್ಬಿಸಿ ಅದರ ಕಾವಿನಲ್ಲಿ ಬೇಳೆ ಬೇಯಿಸಿಕೊಳ್ಳುವುದು ಮಹಾ ಪಾತಕ ಎಂಬುದನ್ನು
ಯೋಚಿಸಿ ಮೊದಲ ಸುತ್ತಿನಲ್ಲೇ ಸರ್ದಾರ್ಜಿಯವರನ್ನು ಗೌರವ ಪೂರ್ವಕವಾಗಿ
ನಿರ್ಗಮಿಸಿಕೊಳ್ಳಲು ಕೋರಲಾಯ್ತು.

ನಂತರ ಸ್ಥಾನದಲ್ಲಿ ವಿರಾಜಮಾನರಾಗಿದ್ದು ಕನ್ನಡ ನಾಡಿನ ಹೆಮ್ಮೆಯ ‘ಮಾಜಿ’
ಮುಖ್ಯಮಂತ್ರಿ ಶ್ರೀಮಾನ್ ಚೆಡ್ಯೂರಪ್ಪನವರು. ಕುರ್ಚಿ ಯಾವುದೇ ಇರಲಿ ಮೊದಲು ಕರ್ಚೀಫು
ಒಗೆದುಬಿಡುವ ಖಯಾಲಿಗೆ ಬಿದ್ದಿರುವ ಚೆಡ್ಡ್ಯೂರಪ್ಪನವರಿಗೆ ನಗಾರಿ ಏಪ್ರಿಲ್ ಒಂದರ
ವ್ಯಕ್ತಿ ಎಂದು ಒಂದು ಕುರ್ಚಿಯನ್ನು ಇಟ್ಟಿದೆ ಎಂಬುದು ತಿಳಿಯುತ್ತಿದ್ದಂತೆಯೇ
ಶಿಕಾರಿಪುರದಿಂದ ಓಡೋಡಿ ಬಂದು ಕರ್ಚೀಫು ಒಗೆದರು. ಅನಂತರ ಅವರ ಆಪ್ತರು, ಸಲಹೆಗಾರರೂ ಆದ
ಕೋಭಾ ಶರಂದ್ಲಾಜೆಯವರು ಈ ಕುರ್ಚಿಯಿಂದ ತಮ್ಮ ಅಸಲು ಬಣ್ಣ ಬಯಲಾಗುತ್ತದೆಯೆಂದೂ, ಇದರಿಂದ
ವಿರೋಧಿ ಪಕ್ಷಗಳಿಗೆ ವಿಪರೀತವಾದ ಮೈಲೇಜ್ ಸಿಕ್ಕುತ್ತದೆಯೆಂದೂ ತಿಳಿಯಪಡಿಸಿದ್ದರಿಂದ
ಅವರು ತಮ್ಮ ಸಫಾರಿ ಸಮೇತ ಓಡಿ ಹೋದರು. ಆದರೆ, ಅವರ ಪ್ರತಿಭೆಯ, ಸಾಧನೆಯ, ಅರ್ಹತೆಯ
ಅರಿವಿದ್ದ ಸಾಮ್ರಾಟರು ತಮ್ಮ ಆಫೀಸಿನ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿಸಿ ಅವರನ್ನು
ಓಡಿಹೋಗದಂತೆ ಮಾಡಿದರು. ಈ ಹಿಂದೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ
ಹೆಚ್ಚಿನ ಬಾರಿ ಮೂರ್ಖನಾದವನು ಎಂಬ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿ ಸರ್ದಾರ್ಜಿಯನ್ನು
ಹಿಂದಿಕ್ಕಿದ್ದ ಸಾಧನೆ ಚೆಡ್ಯೂರಪ್ಪನವರ ಸಫಾರಿ ಜೇಬಿನಲ್ಲಿರುವುದನ್ನು
ನೆನೆಸಿಕೊಳ್ಳಬಹುದು.

ಅನಿರೀಕ್ಷಿತವೆಂಬಂತೆ ನಾವು ನಿರೀಕ್ಷಿಸಿರದಿದ್ದ (ಅದಕ್ಕೆ ಅಲ್ಲವೇ ಅನಿರೀಕ್ಷಿತ
ಎನ್ನುವುದು!) ಹೆಸರೊಂದು ತೂರಿಕೊಂಡು ಬಂದಿದೆ. ಜಗತ್ತಿನ ಅತ್ಯಂತ ಶ್ರೇಷ್ಠ ಮೂರ್ಖ
ಎಂದು ಶಿಫಾರಸ್ಸುಗೊಂಡಿರುವವ ‘ಆ ದೇವರು’! ಇಡೀ ಜಗತ್ತನ್ನು ಸೃಷ್ಟಿ ಮಾಡಿದ ದೇವರೇ ನಗೆ
ನಗಾರಿಯ ಕಛೇರಿಯ ಎದುರು ಅರ್ಜಿ ಹಾಕಿಕೊಂಡು ನಿಂತಿರುವುದನ್ನು ಕಂಡು ನಿಜಕ್ಕೂ
ಸಾಮ್ರಾಟರಿಗೆ ಪಿಚ್ಚೆನಿಸಿತು. ಆತನನ್ನು ಕರೆದು ಒಂದು ಚೇರಿನಲ್ಲಿ ಕೂರಿಸಿ ಕುಡಿಯಲು
ನೀರು ಕೊಟ್ಟು, ‘ಭಗವಂತಾ, ನೀನೇಕಪ್ಪಾ ಇಲ್ಲಿಗೆ ಬಂದೆ?’ ಎಂದು ಕೇಳಿದರು. ಅದಕ್ಕೆ
ಭಗವಂತನು, ‘ಏನು ಮಾಡಲಯ್ಯಾ? ಈ ನಿಮ್ಮ ಮನುಷ್ಯ ಸಂತತಿಯ ಹಾವಳಿಯನ್ನು ಕಂಡು ಇಡೀ
ಜಗತ್ತಿನಲ್ಲಿ ನನಗಿಂಥಾ ಹೆಚ್ಚಿನ ಮೂರ್ಖ ಇಲ್ಲ ಅನ್ನಿಸಿತು. ಇಡೀ ಸೃಷ್ಟಿಯಲ್ಲಿರುವ
ಸೌಂದರ್ಯವೇ ನಾನು ಎಂಬ ಸಂದೇಶವನ್ನು ಕೊಟ್ಟು ಕಳುಹಿಸಿದ್ದರೂ ಈ ಮನುಷ್ಯರು ನನ್ನ
ಹೆಸರನ್ನು ಹಿಡಿದು ಜಗ್ಗಾಡಿ, ನನಗೆ ಇಲ್ಲದ ಗುಣ ಆರೋಪಿಸಿ, ದಕ್ಷಿಣೆ, ಪ್ರಸಾದ,
ಹರಕೆಗಳ ಆಸೆ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಎಷ್ಟು ಸಲ ಇವರು , ‘ದೇವರೇ
ನನ್ನನ್ನ ಇಲ್ಲಿಂದ ಪಾರು ಮಾಡು ಆಮೇಲೆ ನಾನು ಯಾವ ಕೆಟ್ಟ ಕೆಲಸವನ್ನೂ ಮಾಡುವುದಿಲ್ಲ.’
ಎನ್ನುತ್ತಾರೆ. ಹಣ ಕದ್ದು ಸಿಕ್ಕಿಬಿದ್ದ ಹುಡುಗ ಒಂದು ಸಲ ತನ್ನನ್ನಿಲ್ಲಿಂದ ಪಾರು
ಮಾಡು ಇನ್ನೆಂದೂ ಹಣ ಕದಿಯುವುದಿಲ್ಲ ಎಂದು ನನಗೆ ಅಪ್ಲಿಕೇಶನ್ ಹಾಕುತ್ತಾನೆ. ನಾನು
ಆತನನ್ನು ನಂಬಿ ಅವನನ್ನು ಪಾರು ಮಾಡಿದರೆ ಆತ ಪಕ್ಕದ ಬೀದಿಗೆ ಹೋಗುತ್ತಲೇ ಮತ್ತೆ
ಕಳ್ಳತನಕ್ಕಿಳಿಯುತ್ತಾನೆ. ಇಂಥ ಅದೆಷ್ಟು ಪ್ರಸಂಗಗಳು ಬೇಕು ಕೇಳಿ… ಇನ್ನು ನನ್ನನ್ನು
ಗಾಳಿ ಬೆಳಕಿಲ್ಲದ ಕೋಣೆಯಲ್ಲಿ ಕೂಡಿಹಾಕಿ ಹೂವು, ಹಾರ ತುರಾಯಿಗಳ ತುಂಬು ನನ್ನನ್ನು
ಚುಚ್ಚುವಂತೆ ಹಾಕಿ ತಾವು ಕಣ್ತುಂಬ ನೋಡಿಕೊಂಡು, ನನ್ನ ಹೆಸರು ಹೇಳಿ ಹಣ
ಎತ್ತುತ್ತಾರಲ್ಲ, ನೈವೇದ್ಯ ಅಂತ ಪಂಚ ಭಕ್ಷ್ಯಗಳನ್ನು ನನ್ನೆದುರಿಗಿಟ್ಟು ‘ಇವೆಲ್ಲಾ
ನಿಂಗೇ ಅನ್ಕೋ… ನಿಂಗೇ ಅನ್ಕೋ…’ ಅಂತ ಮೂರು ಸಾರಿ ಅಂದು ತಾವು ಗುಳುಂ ಮಾಡಿ ದೇವರು
ಸ್ವೀಕರಿಸಿದ ಅಂತ ಹೇಳಿದರೂ ಕೇಳಿಕೊಂಡು ಸುಮ್ಮನಿರುತ್ತೇನಲ್ಲಾ, ನನಗಿಂತ ಮೂರ್ಖ
ಇದ್ದಾನಾ, ಈ ಭೂಮಿಯ ಮೇಲೆ?’ ಎಂದ. ದೇವರು ಮೂರ್ಖನೇ ಆದರೂ ಆತನಿಗೆ ಉಪಾಧಿ
ಸ್ವೀಕರಿಸುವಷ್ಟು ಅರ್ಹತೆಯಿಲ್ಲವೆಂದು ತೀರ್ಮಾನಿಸಿ ನಗೆ ಸಾಮ್ರಾಟರು ಆತನನ್ನು
ಕಳುಹಿಸಿಕೊಟ್ಟರು.

ಇಷ್ಟೇ ಅಲ್ಲದೆ ಲಕ್ಷಾಂತರ ಅಭ್ಯರ್ಥಿಗಳನ್ನು ಸಂದರ್ಶಿಸಿ ಅವರ ಅರ್ಹತೆ, ಪ್ರತಿಭೆ, ಸಾಧನೆಗಳನ್ನು ಗಮನಿಸಿ ಅವರೆಲ್ಲರ ನಡುವಿಂದ ನಗೆ ನಗಾರಿಯ ಏಪ್ರಿಲ್ ಒಂದರ ವ್ಯಕ್ತಿಯನ್ನು ಆಯ್ಕೆ ಮಾಡಿದರು ನಗೆ ಸಾಮ್ರಾಟರು. ಆತ ಈ ನಾಡಿನ ಮತದಾರ!
ದರಿದ್ರ ರಾಜಕಾರಣಿಗಳು… ಇವ್ರನ್ನೆಲ್ಲಾ ಲೈನಾಗಿ ನಿಲ್ಲಿಸಿ ಶೂಟ್ ಮಾಡಬೇಕು…
ಇಂಥವರಿಂದಲೇ ನಮ್ಮ ನಾಡು ಕುಲಗೆಟ್ಟು ಹೋಗಿರುವುದು.. ಎಂದೆಲ್ಲಾ ವೀರಾವೇಷದ
ಮಾತುಗಳನ್ನಾಡುತ್ತಾ ತಮ್ಮ ಹೊಟ್ಟೆ ಕೆಟ್ಟು ಬೇಸ್ ಮೆಂಟಿನಿಂದ ಅಪಾನವಾಯು ಹೊರಹೋದರೂ
ಅದಕ್ಕೆ ರಾಜಕಾರಣಿಗಳೇ ಕಾರಣ ಎನ್ನುವ ನಾಡಿನ ಪ್ರಜ್ಞಾವಂತ ಮತದಾರರಷ್ಟು ಮೂರ್ಖರು
ಬೇರಾರೂ ಇಲ್ಲ ಎನ್ನುವುದು ನಗೆ ಸಾಮ್ರಾಟರ ತೀರ್ಪು. ಐದು ವರ್ಷಕ್ಕೊಮ್ಮೆ ಮನೆಯ
ಬಾಗಿಲಿಗೆ ಬಂದು ನಿಲ್ಲುವ ಪ್ರಜಾಪ್ರತಿನಿಧಿಗಳನ್ನು ಜಾಡಿಸಿ, ಜನ್ಮ ಜಾಲಾಡಿ ನಾಡಿಗೆ
ಯೋಗ್ಯನಾದವನನ್ನು ಆರಿಸಿಕಳುಹಿಸುವ ಬದಲು, ‘ಓಟು ಕೋಡಿ’ ಅಂತ ಬೋರ್ಡು ಹಾಕಿಕೊಂಡು
ಬರುವವರಿಗೆ ರತ್ನಗಂಬಳಿ ಹಾಸಿ, ಆರತಿ ಎತ್ತಿ ಕಾಲಿಗೆ ಬಿದ್ದು ಆತನನ್ನು ಆರಿಸಿಕಳುಹಿಸಿ
ಆತ ಕುರ್ಚಿಯಲ್ಲಿ ಕುಳಿತ ನಂತರ ಬಯ್ಯುತ್ತಾ ಕೂರುವಂಥ ಮೂರ್ಖರು ಬೇರೆಲ್ಲೂ ಇಲ್ಲ.
ರಾಜಕಾರಣಿಗಳ ಆಶ್ವಾಸನೆಗಳೆಲ್ಲವೂ ಸುಳ್ಳು ಎಂದು ತಿಳಿದಿದ್ದರೂ ಅವರ ಭಾಷಣದಲ್ಲಿನ
ಪ್ರತಿ ಹೊಸ ಆಶ್ವಾಸನೆಗಳಿಗೂ ಕಿವಿಗಡಕ್ಕಿಚ್ಚುವಂತೆ ಚಪ್ಪಾಳೆ ತಟ್ಟುತ್ತಾರಲ್ಲ,
ಇವರಿಗಿಂತ ಅರ್ಹ ಮೂರ್ಖರು ಯಾರಿದ್ದಾರೆ ಎನ್ನುತ್ತಾರೆ ಸಾಮ್ರಾಟ್. ಲಂಚಾವತಾರದ ಸಹಸ್ರ
ನಾಮಾರ್ಚನೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುವಾಗ ಮೆಲ್ಲಗೆ ಲಂಚ ಕೊಟ್ಟು
ನಿರುಮ್ಮಳರಾಗುತ್ತಾರಲ್ಲಾ, ಏಪ್ರಿಲ್ ಒಂದರ ವ್ಯಕ್ತಿಯಾಗಲು ಇವರಿಗಿಂತಾ ಹೆಚ್ಚಿನ
ಹಕ್ಕು ಯಾರಿಗಿದೆ?

ಈ ವರ್ಷದ ಏಪ್ರಿಲ್ ಒಂದರ ವ್ಯಕ್ತಿಯಾಗಿರುವ ‘ಮತದಾರ’ನಿಗೆ ನಗೆ ನಗಾರಿಯ ಪರವಾಗಿ ಹ್ಯಾಪಿ ಫೂಲ್ಸ್ ಡೇ!

Rating
No votes yet

Comments