ಒಂದಿಷ್ಟು ನೀಲುಗಳು

ಒಂದಿಷ್ಟು ನೀಲುಗಳು

"ಮುಂದಿನ ಜನ್ಮ ಅಂತ ಒಂದಿದ್ದರೆ

ಗಂಡಿನ ಚಪಲ ಇರುವ ಹೆಣ್ಣಾಗಿ ಹುಟ್ಟಿಸಯ್ಯಾ"

ಅಂತ ಗಂಡ ಬರೆದ ಪದ್ಯ ಸಿಕ್ಕು

ಮದುವೆ ರ್ರೇಷ್ಮಸೀರೆಗಳ ನಡುವೆ ಅಡಿಗಿಸಿಟ್ಟ

ನೂರಾರು ಗ್ರೀಟಿಂಗ್ ಕಾರ್ಡುಗಳನ್ನು ನೆನೆಸಿಕೊಂಡು

ಮುಸಿ ಮುಸಿ ನಕ್ಕಳು

-----------------------------------------------------------

ಪಾಂಡಿತ್ಯದ ಭಾರದಿಂದ ಹತ್ತು ಓದಿಗೂ ದಕ್ಕದ ಕವಿತೆ

ಬಿ.ಎಫ್.ಗಳಲ್ಲಿ ಗಂಟೆಗಟ್ಟಲೇ ನಡೆಯುವ ನೀರಸ ಸಂಭೋಗದಂತೆ

ಎಂದು

ಇನ್ನೂ ಹಲ್ಲುಜ್ಜಿರದ ನನ್ನ ಬಾಯಿಗೆ ಗಟ್ಟಿ ಚುಂಬಿಸಿ

ಇದು ಕವಿತೆ ಎಂದಳು

-------------------------------------------------------------------------------- 

ಏಕಾಂತ ಮತ್ತು ಮೌನವಿಲ್ಲದೇ ಹೊಸದೇನೂ ಸೃಷ್ಟಿಯಾಗುವುದಿಲ್ಲ

ಎಂದು ಕವಿ ಹೇಳಿದ್ದಕ್ಕೆ

ನಾನಿಲ್ಲದೇ ಮಗುವನ್ನು ಸೃಷ್ಟಿಸು ನೋಡೋಣ

ಎಂದು ಕಣ್ಣುಮಿಟುಕಿಸಿದಳು

----------------------------------------------------------------------------------- 

ಜಾತಿ ಧರ್ಮ ವರ್ಣ ಗಡಿ

ಇತಿಹಾಸದುದ್ದಕ್ಕೂ

ಚೆಲ್ಲಿದ ರಕ್ತ ದ್ವೇಷ ವೈಷಮ್ಯ

ಕುರಿತು ತಲ್ಲಣಗೊಂಡು ಮಾತಾಡುತ್ತಿದ್ದರೆ

ತನ್ನ ತುಂಬಿದ ಹೊಟ್ಟೆಯ ಮೇಲೆ ನನ್ನ ಕೈಯಿಟ್ಟು

'ಭವಿಷ್ಯ' ಎಂದು ನಿದ್ದೆ ಹೋದಳು

------------------------------------------------------------------------------- 

ದಿನ ಪೂರ್ತಿ ಕೂತು ಬರೆದ ಕವನ

ಓದೇ ಅಂದರೆ

ಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತು

ಈ ಮುತ್ತಿಗಿಂತ ನಿನ್ನ ಕವನ ಚೆನ್ನ

ಎಂದರೆ ಮಾತ್ರ ಓದುತ್ತೇನೆ

ಎಂದು ಮಾಯವಾದಳು

----------------------------------------------------------------------------------- 

ತಲೆಕೂದಲು ಡೈ ಮಾಡಿಕೊಳ್ಳುವಾಗ

ಕನ್ನಡಿಯಲ್ಲಿ

ಎದೆಯ ಬಿಳಿ ಕೂದಲು ಕಂಡು

ಗಾಬರಿಯಾದ

---------------------------------------------------------------------------------------

Rating
No votes yet