ಕಂಬನಿಯ ಮಹಲು ( ಗುಲ್ಜಾರ್ ರವರಿಗೆ ಪ್ರೀತಿ ಪೂರ್ವಕ ಅರ್ಪಣೆ)

ಕಂಬನಿಯ ಮಹಲು ( ಗುಲ್ಜಾರ್ ರವರಿಗೆ ಪ್ರೀತಿ ಪೂರ್ವಕ ಅರ್ಪಣೆ)

ಕಂಬನಿಯ ಮಹಲು
(ಗುಲ್ಜಾರ್ ರವರಿಗೆ ಪ್ರೀತಿ ಪೂರ್ವಕ ಅರ್ಪಣೆ)
                  - ಲಕ್ಷ್ಮೀಕಾಂತ ಇಟ್ನಾಳ
ಕಂಬನಿಯು ಮಹಲೊಂದು ಕಣ್ಣಲ್ಲಿ ಕಟ್ಟಿಹುದು
ತಡೆತಡೆದು ತಡೆಹಿಡಿದು ತುಟಿಗಳನು ಬಿಗಿಹಿಡಿದು
ಪುಟಿಪುಟಿದು ಜಿನುಗಿದ ಹನಿಗಳನು ಹಿಡಿದಿಡಿದು
ಮಹಲಿನ ಒಂದೊಂದು ಕಣವನ್ನು ಕಟ್ಟಿಹುದು

ಮಹಲಿನ ಕೋಣೆಯಲಿ ಮುದುಡಿರುವ ವಿರಹದ
ಅಂದಿನ ಕಣ್ಣೀರ ನಮಿಯಾರದ ಆ ಬಯಕೆ
ಚುಂಬನದ ಕ್ಷಣವನ್ನು ಇಂದಿಗೂ ಹಿಡಿದಿಹುದು
ಕಾದಿಹುದು ಮೃದು ಹೃದಯ ಸಿಂಚನದ ಸ್ಪರ್ಶಕೆ

ಸಖ ಹೋದ ದಾರಿಯು ದೂರ ಕರಗಿ ಹೋದರೂ
ಕಣ್ಣುಕಿರಿದಾಗಿಸಿ ಹಿಂಗಾಲನೆತ್ತಿ ನೋಡುವುದು ದಾರಿ
ಚಂದಿರನ ಶೀತಲ ಕಿರಣಗಳೊಳ ಪ್ರತಿಫಲಿಸಿ ಜಗವೆಲ್ಲ
ಹುಡುಕಿಹುದು ಅರ್ಪಿಸಲು ಪ್ರೀತಿಯೊಲ ಧಾರೆ

ಹಠದಿಂದಲೊವ್ಮೊಮ್ಮೆ ಒಳಹೋಗಿ ಮಲಗುವುದು
ಮುಲುಗಿ ಕಾಯುವುದು ಬಂದು ಸಂತೈಸಲೆಂದು
ಸಂಜೆರಂಗಿನಲಿ ಎದ್ದೋಡಿ ಹುಡುಕಿಹುದು ಕಣ್ಣ ಕದಲಿಸದೇ
ಒಂದೊಮ್ಮೆ ದಿಗಿಲಾಗಿ ಹತ್ತುವುದು ಊರ ಏರಿಯೊಂದು

ಭೃಂಗಕೆ ಮುತ್ತೊಂದು ಗಾಳಿಯಲಿ ತೂರಿಸಿ
ಸಂದೇಶಕೆ ಕಾತರಿಸಿ ಹಾತೊರೆದ ನಿರೀಕ್ಷೆ
ಬೆಳಕೆಲ್ಲ ಕತ್ತಲೆಯ ಮುಸುಕಿನಲಿ ಮಸಕಾಗಿ
ಸುಳಿವ ಸುಳಿಗಾಳಿಯಲಿರದ ಒಲವ ಸಮೀಕ್ಷೆ
 
ಒಂದು ಹನಿ ಕರಗಿದರೂ ಸೌಧವದು ಕುಸಿಯುವುದು
ಹನಿ ಹಿಡಿದು ಮಹಲನು ಕಟ್ಟುತಿಹುದು
ನಂಬಿಕೆಯ ನೆಟ್ಟಿಹುದು ಹನಿಹನಿಯಲಿಟ್ಟಿಹುದು
ಇಂದಲ್ಲ ನಾಳೆ ಬರುವನೆಂದು ಎದೆ ತಟ್ಟುತಿಹುದು

ಕಂಬನಿಯು ಮಹಲೊಂದು ಕಣ್ಣಲ್ಲಿ ಕಟ್ಟಿಹುದು
ತಡೆತಡೆದು ತಡೆಹಿಡಿದು ತುಟಿಗಳನು ಬಿಗಿಹಿಡಿದು
ಪುಟಿಪುಟಿದು ಜಿನುಗಿದ ಹನಿಗಳನು ಹಿಡಿದಿಡಿದು
ಮಹಲಿನ ಒಂದೊಂದು ಕಣಕೂ ಉಣಿಸಿಹುದು
 

Rating
No votes yet

Comments

Submitted by H A Patil Mon, 11/05/2012 - 12:44

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
" ಕಂಬನಿಯ ಕುಯಿಲು " ತಾವು ಕವಿ ಗುಲ್ಝಾರರಿಗೆ ಅರ್ಪಿಸಿದ ಸಮರ್ಥ ಕಾಣಿಕೆ, ಈ ಕವನಕ್ಕಿಂತ ಬೆಲೆಬಾಳುವ ಅರ್ಪಣೆ ಬೇರೊಂದಿಲ್ಲ.
<<<< ಕಂಬನಿಯ ಮಹಲೊಂದು ಕಣ್ಣಲ್ಲಿ ಕಟ್ಟಿಹುದು ............ಮಹಲಿನ ಒಂದೊಂದು ಕಣಕೂ ಉಳಿಸಿಹುದು >>>> ಇಡೀ ಜೀವನದ ಸಾರ ಈ ನಾಲ್ಕು ಸಾಲುಗಳಲ್ಲಿ ಅಡಗಿದೆ. ಉತ್ತಮ ಕವನ ಧನ್ಯವಾದಗಳು.

Submitted by lpitnal@gmail.com Mon, 11/05/2012 - 14:02

In reply to by H A Patil

ಪ್ರಿಯ ಹೆಚ್ ಎ ಪಾಟೀಲ ಸರ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಗುಲ್ಜಾರ್ ರವರ ಬಗ್ಗೆ ಅಧ್ನಯನ ಮಾಡುವ ಸಂದರ್ಭದಲ್ಲಿ ಹೊಳೆದ ಎಳೆಗಳನ್ನು ಜೋಡಿಸಿದ ಪದ್ಯವಿದು. ಅವರ ಅಧ್ಯಯನ ಸಂದರ್ಭದಲ್ಲಿ ಒಡಮೂಡಿದ ಈ ಕವನವನ್ನು ಅಂತಹ ಧೀಮಂತ ಕವಿಗೆ ಅರ್ಪಿಸಿ ಧನ್ಯವಾಯಿತು ಮನ. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಸರ್. ಐ ಆಮ್ ರಿಯಲಿ ಆನರ್ಡ್.