ಕತೆ ಹೇಳಿದ ಕತೆ
ಒಂದು ಕತೆ ಹೇಳ್ತೀನಿ ಅಂತ ಗೆಳೆಯ ಶುರು ಮಾಡಿದ. ಅವನು ಎಷ್ಟೋ ವರ್ಷಗಳ ಹಿಂದೆ ಯಾವುದೋ ಊರಿನಲ್ಲಿ ಕಗ್ಗತ್ತಲ ನಡುರಾತ್ರಿ ಗೊತ್ತಿಲ್ಲದ ಊರೊಂದರ ಹೊರಗೆ ಬಸ್ಸು ಕೆಟ್ಟು ಹೋದಾಗ ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಗುಡಿಸಿಲಿನಂದ ಹೊರಬಂದ ಒಬ್ಬ ಮುದುಕನ ಬಗ್ಗೆ.
ತನ್ನ ಹೆಸರು ಹೇಳದೆ ಮುದುಕ ಆ ಕೊರೆಯುತ್ತಿದ್ದ ರಾತ್ರಿ ಬಸ್ಸಿಂದ ಇಳಿದವರಿಗೆಲ್ಲಾ ಚಳಿಯಾಗತ್ತದೆಂದು ಅಲ್ಲೇ ಬೆಂಕಿ ಹಾಕಿ ಕೂಡಿಸಿದನಂತೆ. ಆಮೇಲೆ ಎಲ್ಲರೂ ಮೈಯೆಲ್ಲಾ ಕಿವಿಯಾಗಿ ಕೂತು ಕೇಳುವಂಥ ಕತೆ ಹೇಳಿದನಂತೆ. ಮುದುಕ ಸಣ್ಣವನಿದ್ದಾಗ ಅವನ ಹಳ್ಳಿಯಲ್ಲಿ ಅಂಥದೇ ರಾತ್ರಿ ಅಪ್ಪನಿಂದ ಜಗಳ ಆಡಿಕೊಂಡು ಊರು ಬಿಟ್ಟು ಹೊರಟಿದ್ದನಂತೆ. ಊರ ಹೊರಗೆ ಬಂದಾಗ ಯಾರೋ ಯಾರನ್ನೋ ಅಟ್ಟಿಸಿಕೊಂಡು ಹೋಗೋದು ಕಾಣಿಸ್ತಂತೆ. ದೂರದಲ್ಲಿ ಅಟ್ಟಿಸಿಕೊಂಡು ಹೋದವನು ಮುಂದೆ ಹೋಗ್ತಿದ್ದವಳನ್ನು ಕೈಯಲ್ಲಿದ್ದ ಮಚ್ಚಿಂದ ಕೊಚ್ಚಿ ಹಾಕಿದನಂತೆ. ಅವನ ಮೈಯೆಲ್ಲಾ ರಕ್ತ ಆಗಿತ್ತಂತೆ. ಮುದುಕ ಹೆದರಿಕೆಯಾಗಿ ಗರಬಡಿದವನಂತೆ ಕೂತಿರುವಾಗ ಇವನತ್ತಲೇ ಓಡಿಬಂದು ಕೊಲೆಗಾರ ಇವನನ್ನು ನೋಡಿದನಂತೆ. ಇವನಿಗೆ ಆ ಕೊಲೆಗಾರ ಗೊತ್ತಿದ್ದನಂತೆ. ಅವನು ಕೊಂದಿದ್ದು ಅವನ ಹೆಂಡಿತಿಯನ್ನಂತೆ. ಸಣ್ಣ ಹುಡುಗನಾಗಿದ್ದ ಮುದುಕನನ್ನು ಕೊಲೆಗಾರ ಕೂರಿಸಿಕೊಂಡು ಅವನ ಮತ್ತು ಹೆಂಡತಿಯ ಕತೆ ಹೇಳಿದನಂತೆ. ಕೊಲೆಗಾರನ ಹೆಂಡತಿ ಇವನ ಬೆನ್ನ ಹಿಂದೆ ಇನ್ನಾರನ್ನೋ ಒಲಿದಿದ್ದು ಅವನೊಡನೆ ಸಂಬಂಧ ಇಟ್ಟುಕೊಂಡದ್ದಿಳಂತೆ. ಅದು ಊರಿಗೆಲ್ಲಾ ಗೊತ್ತಿದ್ದರೂ ಕೊಲೆಗಾರನಿಗೆ ಗೊತ್ತಾಗಿದ್ದು ಮಾತ್ರ ತುಂಬಾ ತಡವಾಗಿಯಂತೆ. ಅದು ಕೂಡ ಕೊಲೆಗಾರನ ಗೆಳೆಯ ಅವನಿಗೆ ಹೇಳಿದ ಒಂದು ಕತೆಯ ಮೂಲಕವಂತೆ. ಕೊಲೆಗಾರನ ಗೆಳೆಯ ಒಂದು ಸಂಜೆ ಹೊಲದಿಂದ ಕೆಲಸ ಮುಗಿಸಿ ಹಳ್ಳಿಗೆ ವಾಪಸು ಬರುತ್ತಿದ್ದಾಗ ಗಂಡನಿಗೆ ಮೋಸಮಾಡಿ ಅವನ ಗೆಳೆಯನೊಡನೆ ಚಕ್ಕಂದ ಆಡುತ್ತಿದ್ದ ಒಬ್ಬ ಹೆಂಗಸಿನ ಕತೆ ಹೇಳಿದನಂತೆ. ಆ ಹೆಂಗಸು ಅವಳ ಕತೆಯನ್ನು ಕೊಲೆಗಾರನ ಗೆಳೆಯನ ತಂಗಿಗೆ ಹೇಳಿದ್ದಳಂತೆ. ಆ ಹೆಂಗಸು ಗಂಡನ ಸಿಟ್ಟು ಸೆಡವು ದರ್ಪದಿಂದ ಬೇಸತ್ತು ಹೋಗಿದ್ದಳಂತೆ. ಆವಾಗ ಒಂದು ದಿನ ನೀರು ಕೇಳಿಕೊಂಡು ಮನೆಯ ಬಾಗಿಲಿಗೆ ಬಂದ ಒಬ್ಬ ಸುಂದರಾಂಗ ಅಲ್ಲೇ ಕೂತು ಮಾತಿಗೆ ತೊಡಗಿದ್ದನಂತೆ. ಅವನ ಮಾತು ಹಾವಭಾವ ಕತೆ ಹೇಳುವ ಉತ್ಸಾಹ ಇವಳ ಮೇಲೆ ಮೋಡಿ ಹಾಕಿತಂತೆ. ಅವನನ್ನು ಮನೆಯ ಒಳಗೆ ಬರಮಾಡಿಕೊಂಡಳಂತೆ. ಎಲ್ಲಿಂದಲೋ ಎಲ್ಲಿಗೋ ಹೋಗುತ್ತಿದ್ದ ಅವನು ಆ ಊರಿಗೆ ಬಂದ ಬಗ್ಗೆ ತುಂಬಾ ಕುತೂಹಲಕಾರಿಯಾದ ಕತೆ ಹೇಳಿದನಂತೆ. ಅವನಿಗೆ ಹಿಂದಿನ ರಾತ್ರಿ ಬಿದ್ದ ಕನಸಿನಲ್ಲಿ ಆ ಊರಲ್ಲಿ ಬೇಸತ್ತಿರುವ ಒಬ್ಬ ಮದುವೆಯಾದ ಹೆಂಗಸಿರುವುದು ಕಂಡಿತಂತೆ. ಅದೇ ಕನಸಿನಲ್ಲಿ ಆ ಹೆಂಗಸು ಸತ್ತಿದ್ದಳಂತೆ. ಅದಕ್ಕೇ ಅವನು ಅವಳು ಸಾಯುವ ಮುಂಚೆ ತನ್ನ ಕತೆ ಹೇಳಬೇಕಂದು ಕೊಂಡು ಅವಳಲ್ಲಿಗೆ ಬಂದಿದ್ದನಂತೆ....
ಬಸ್ಸು ರಿಪೇರಿಯಾಗಿತ್ತು. ಬಸ್ಸು ಹತ್ತಬೇಕು ಅಂತ ಡ್ರೈವರ್ ಹಾರ್ನ್ ಮಾಡಿದ ಎಂದು ಗೆಳೆಯ ಕತೆ ಮುಗಿಸಿದ...