(ಕಥೆ) ಟ್ರೈನ್ ಸು೦ದರಿ

(ಕಥೆ) ಟ್ರೈನ್ ಸು೦ದರಿ

ಹಲೋ..ಹಲೋ ಹಾ ನನಗೆ ಕೇಳಿಸ್ತಿದೆ ಹೇಳಿ ಅಪ್ಪ. ಆಟೋದಲ್ಲಿ ಇದ್ದೀನಿ ಇನ್ನೇನು ಐದು ನಿಮಿಷ ರೈಲ್ವೆ ನಿಲ್ದಾಣದಲ್ಲಿ ಇರ್ತೀನಿ. ಹೌದು ೧೧ ಗಂಟೆಗೆ ಹೊರಡತ್ತೆ ಟ್ರೈನು. ಬೆಳಿಗ್ಗೆ ಒಂದು ೧೦ ಗಂಟೆ ಅಷ್ಟೊತ್ತಿಗೆ ರಾಯಚೂರಿನಲ್ಲಿ ಇರುತ್ತೇನೆ.

ಸರಿ ಹಾ ಹಾ ಸೂಟ್ ಕೇಸ್ ಬ್ಯಾಗ್ ಎಲ್ಲದಕ್ಕೂ ಬೀಗ ಹಾಕಿದೀನಿ, ಅಪ್ಪ ನಾನೇನು ಚಿಕ್ಕ ಹುಡುಗನ ನಾಳೆ ಹುಡುಗಿ ಬೇರೆ ತೋರಿಸ್ತಾ ಇದ್ದೀರಾ ಮದುವೆಗೆ ಅಂತ ಇಷ್ಟೆಲ್ಲಾ ಹೇಳ್ತೀಯ ನಂಗೆ. ನಾನು ಬೆಳಿಗ್ಗೆ ಅಲ್ಲಿಗೆ ಬಂದು ಫೋನ್ ಮಾಡ್ತೀನಿ ಸರಿ ಇಡ್ತೀನಿ ಬೈ.

ಅಷ್ಟರಲ್ಲಿ ರೈಲ್ವೆ ನಿಲ್ದಾಣ ಬಂದಿತ್ತು. ಆಟೋದಿಂದ ಇಳಿದು ಒನ್ ಅಂಡ್ ಹಾಫ್ ಮೀಟರ್ ದುಡ್ಡು ಕೊಟ್ಟು ನಿಲ್ದಾಣದ ಒಳಗೆ ಹೋದೆ. ಬೆಂಗಳೂರಿನಿಂದ -ನಾ೦ದೇಡ್ ಗೆ ಹೋಗುವ ಟ್ರೈನ್ ಪ್ಲಾಟ್ ಫಾರ್ಮ್ ನಂಬರ್ ಒಂದರಲ್ಲಿ ಅದಾಗಲೇ ಬಂದು ನಿಂತಿತ್ತು. ಇನ್ನೇನು ಟ್ರೈನ್ ಹೊರಡಲು ಹದಿನೈದು ನಿಮಿಷ ಬಾಕಿ ಇತ್ತು. S5 ಬೋಗಿಯ ಒಳಗೆ ಹೋಗಿ ನನ್ನ ಬರ್ತ್ನಲ್ಲಿ ಬ್ಯಾಗಿಟ್ಟು, ಸೂಟ್ ಕೇಸ್ ಅನ್ನು ಸೀಟಿನ ಅಡಿ ಇತ್ತು ಒಮ್ಮೆ ಟಾಯ್ಲೆಟ ಗೆ ಹೋಗಿ ಬಂದು ಬರ್ತ್ ನಲ್ಲಿ ಕುಳಿತೆ. .

ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿ ಎರಡು ವರ್ಷವಾಗಿತ್ತು. ಅಪ್ಪ ಅಮ್ಮ ಎಲ್ಲ ರಾಯಚೂರಿನಲ್ಲೇ ಇದ್ದರು. ನಾನು ತಿಂಗಳಿಗೊಮ್ಮೆ ಹೋಗಿ ಬರುತ್ತಿದ್ದೆ. ಈ ಬಾರಿ ಹೋಗುತ್ತಿದ್ದ ಉದ್ದೇಶ ಬೇರೆ ಇತ್ತು. ಅಪ್ಪ ಅಮ್ಮ ನನಗೆ ಮಾಡುವೆ ಮಾಡಲು ನಿರ್ಧರಿಸಿದ್ದರು. ಅದರ ಸಲುವಾಗಿ ಹುಡುಗಿಯ ಮನೆಯವರಿಗೆ ಬರಲು ಹೇಳಿದ್ದರು. ಕೊನೆಯ ಸಮಯದಲ್ಲಿ ಹೇಳಿದ್ದರಿಂದ ಟ್ರೈನಿಗೆ ಸಿಗತ್ತಾ ಇಲ್ವೋ ಎಂದುಕೊಂಡಿದ್ದೆ. ನನ್ನ ಅದೃಷ್ಟ ಕೈ ಕೊಟ್ಟಿರಲಿಲ್ಲ. ಒ೦ದೇಒಂದು ಸೀಟ್ ಖಾಲಿ ಇತ್ತು. ನನ್ನದು ಮೇಲಿನ ಬರ್ತ್ ಇತ್ತು. ಸ್ವಲ್ಪ ಹೊತ್ತು ಆದ ಮೇಲೆ ಮೇಲೆ ಕೂರೋಣ ಎಂದುಕೊಂಡಿದ್ದೆ.  ಎದುರುಗಡೆ ಸೀಟಿನಲ್ಲಿ ಒಬ್ಬಳೇ ಒಬ್ಬಳು ಹುಡುಗಿ ಕುಳಿತಿದ್ದಳು. ಉಳಿದಂತೆ ಎಲ್ಲ ಸೀಟುಗಳು ಖಾಲಿ ಇದ್ದವು. ಆ ಹುಡುಗಿಯೂ ನಾನು ಬಂದಿದ್ದೆ ಅರಿವಿಲ್ಲವೆಂಬಂತೆ ತನ್ನ ಪಾಡಿಗೆ ತಾನು ಯಾವುದೋ ಇಂಗ್ಲಿಷ್ ಪುಸ್ತಕವೊಂದನ್ನು ಮುಖಕ್ಕೆ ಅಡ್ಡ ಇಟ್ಟುಕೊಂಡು ಓದುತ್ತಿದ್ದಳು. ಎಷ್ಟು ಬೇಡ ಎಂದುಕೊಂಡರೂ ಹುಡುಗ ಮನಸಿನ ಕುತೂಹಲ ಕೇಳಬೇಕೆ ಒಂದು ಸಲ ಅವಳ ಮುಖ ನೋಡಬೇಕು ಎನಿಸಿತು. ಅಷ್ಟರಲ್ಲಿ ಅವಳೇ ಪುಸ್ತಕ ಕೆಳಗೆ ಇಳಿಸಿ ನನ್ನ ಕಡೆ ಒಮ್ಮೆ ನೋಡಿ ನಕ್ಕಳು.  ತೀರ ಸೌಂದರ್ಯವತಿ ಅಲ್ಲದಿದ್ದರೂ ತೆಗೆದು ಹಾಕುವ ಹಾಗೇನು ಇರಲಿಲ್ಲ. ಅವಳು ಧರಿಸಿದ್ದ ಉಡುಪುಗಳು, ಆಭರಣಗಳು, ಕೈಲಿದ್ದ ಮೊಬೈಲ್ ಎಲ್ಲ ನೋಡಿದರೆ ಅವಳು ಯಾರೋ ದೊಡ್ಡ ಸಿರಿವಂತರ ಮನೆಯವಳು ಇರಬೇಕು ಎಂದುಕೊಂಡೆ. ಅವಳೇ ಮಾತನಾಡಿಸಿದಳು. ನನ್ನ ಹೆಸರು ಸಿಂಧು ಎಂದು, ನೀವು ಎಂದಳು. ನಾನು ನಕ್ಕು ಕೈ ಕೊಟ್ಟು ವಿವೇಕ್ ಎಂದೆ. ನೀವು ಎಲ್ಲಿಗೆ ಎಂದು ಕೇಳಿದಳು ನಾನು ರಾಯಚೂರು ನೀವು ಎಂದೆ. ಅವಳು ಆದೋನಿ ಎಂದು ಹೇಳಿದಳು. ಕೆಲವೇ ನಿಮಿಷದಲ್ಲಿ ತುಂಬಾ ದಿನದಿಂದ ಪರಿಚಯ ಇರುವ ಹಾಗೆ ಸ್ನೇಹಿತರಾಗಿಬಿಟ್ಟೆವು. ಅವಳು ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಿದ್ದಳು. ಅವಳು ನಕ್ಕಾಗ ಬಹಳ ಸೊಗಸಾಗಿ ಕಾಣುತ್ತಿದ್ದಳು. ಇದ್ದಕ್ಕಿದ್ದಂತೆ ನನ್ನ ಮನಸಿನಲ್ಲಿ ಆಲೋಚನೆ ಒಂದು ಬಂತು. ಅಯ್ಯೋ ಸ್ವಲ್ಪ ದಿನ ಮುಂಚೆ ಆದರೂ ಇವಳ ಪರಿಚಯ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.  ಇವಳನ್ನೇ ಮದುವೆ ಆಗಬಹುದಿತ್ತು. ಆದರೆ ಏನು ಮಾಡುವುದು. ಹೋಗಲಿ ಪ್ರಯಾಣದ ಉದ್ದಕ್ಕೂ ಒಳ್ಳೆ ಟೈಮ್ ಪಾಸ್ ಆಗುತ್ತೆ ಎಂದುಕೊಂಡೆ. ಅಷ್ಟರಲ್ಲಿ ಒಂದು ಕುಟುಂಬ ಬಂದು ಖಾಲಿ ಸೀಟುಗಳನ್ನು ಆಕ್ರಮಿಸಿಕೊಂಡರು. ಸಿಂಧು ತಕ್ಷಣ ಎದ್ದು ನನ್ನ ಪಕ್ಕದಲ್ಲಿ ಬಂದು ಕೂತಳು. ನನ್ನೊಳಗೆ ವಿದ್ಯುತ್ ಸಂಚರಿಸಿದ ಅನುಭವ ಉಂಟಾಯಿತು.

ಟ್ರೈನ್ ಹಾರನ್ ಮಾಡಿಕೊಂಡು ಚಲಿಸಲು ಶುರು ಮಾಡಿತು. ಆ ಕುಟುಂಬದವರು ತಮ್ಮ ಲಗೇಜ್ ಗಳನ್ನು ಇಡಲು ಹರ ಸಾಹಸ ಪಡುತ್ತಿದ್ದರು. ಅವರ ಅವಸ್ಥೆ ನೋಡಲಾಗದೆ ನಾನು ನನ್ನ ಸೂಟ್ ಕೇಸ್ ಅನ್ನು ತೆಗೆದು ನನ್ನ ಬರ್ತ್ ನಲ್ಲಿ ಇಟ್ಟುಕೊಂಡೆ. ಅವರು ನನಗೆ ಧನ್ಯವಾದ ಹೇಳಿ ಪರಿಚಯ ಮಾಡಿಕೊಂಡರು. ಸಿಂಧು ನನ್ನನ್ನು ತೋರಿಸಿ ನಾವಿಬ್ಬರೂ ಸ್ನೇಹಿತರು ಎಂದು ಹೇಳಿದಳು. ನನಗೆ ಮನಸಿನಲ್ಲಿ ಗೊಂದಲ ಉಂಟಾಗುತ್ತಿತ್ತು. ಅಪ್ಪ ಅಮ್ಮ ನೋಡಿರುವ ಹುಡುಗಿ ಹೇಗಿದಾಳೋ ಗೊತ್ತಿಲ್ಲ, ಸಿಂಧು ನಂಬರ್ ತೆಗೆದುಕೊಂಡು ಅಪ್ಪನ ಹತ್ತಿರ ಮಾತನಾಡಿ ಇವಳನ್ನೇ ಮದುವೆ ಆಗಿಬಿಡಲ ಏನೇನೋ ಯೋಚನೆಗಳು ಸುಳಿದಾಡುತ್ತಿದ್ದವು.

ಅಷ್ಟರಲ್ಲಿ ಆ ಕುಟುಂಬದವರು ನಾವು ಮಲಗಬೇಕು ಎಂದರು. ಅವರವರ ಸೀಟುಗಳನ್ನು ಅವರಿಗೆ ಬಿಟ್ಟುಕೊಟ್ಟು ನಾನು ಮೇಲಿನ ಬರ್ತ್ ಗೆ ಹೋದೆ. ನನ್ನ ಪಕ್ಕದ ಬರ್ತ್ ನಲ್ಲಿ ಸಿಂಧು ಬಂದಳು. ನಾನು ಸೂಟ್ ಕೇಸ್ ಹಾಗು ಬ್ಯಾಗ್ ಎರಡೂ ಇಟ್ಟುಕೊಂಡಿದ್ದರಿಂದ ನನಗೆ ಮಲಗಲು ಆಗುತ್ತಿರಲಿಲ್ಲ ಒದ್ದಾಡುತ್ತಿದ್ದೆ. ನನ್ನ ಕಷ್ಟ ನೋಡಲಾಗದೆ ಸಿಂಧು ಕೇಳಿದಳು ನಿಮ್ಮ ಸೂಟ್ ಕೇಸ್ ಅನ್ನು ಇಲ್ಲಿ ಕೊಡಿ ನಾನು ಇಟ್ಟುಕೊಂಡಿರುತ್ತೇನೆ ಎಂದಳು. ನಾನು ಪರವಾಗಿಲ್ಲ ನಿಮಗೇಕೆ ತೊಂದರೆ ಎಂದೆ. ಅದಕ್ಕವಳು ವಿವೇಕ್ ನಾವಿಬ್ಬರೂ ಈಗ ಸ್ನೇಹಿತರು ಇದರಲ್ಲಿ ತೊಂದರೆ ಏನು ಬಂತು. ಅಷ್ಟು ದೂರ ಪ್ರಯಾಣ ಮಾಡಬೇಕು ನೀವು ಹೀಗೆ ನಿದ್ದೆ ಇಲ್ಲದೆ ರಾತ್ರಿ ಪೂರ ಒದ್ದಾಡುತ್ತೀರ? ಏನೂ ಪರವಾಗಿಲ್ಲ ಕೊಡಿ ಹೇಗಿದ್ದರೂ ನನ್ನದೇನು ಲಗೇಜ್ ಇಲ್ಲ ಎಂದು ಸೂಟ್ ಕೇಸ್ ತೆಗೆದುಕೊಂಡು ತಲೆ ಕೆಳಗೆ ಇಟ್ಟುಕೊಂಡು ಮಲಗಿದಳು. ನಾನು ಹಾಗೆ ಬ್ಯಾಗಿಗೆ ತಲೆ ಕೊಟ್ಟು ಮಲಗಿ ಅವಳ ಕಡೆ ತಿರುಗಿದೆ. ಅವಳು ನನ್ನ ನೋಡಿ ನಕ್ಕಳು. ಹಾಗೆ ಒಬ್ಬರೊನ್ನಬ್ಬರು ನೋಡಿಕೊಂಡು ಅದೆಷ್ಟು ಹೊತ್ತು ಅದೂ ಇದೂ ಮಾತಾಡುತ್ತಿದ್ದೆವೋ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಮಾತಾಡುತ್ತ ಮಾತಾಡುತಾ ಅದ್ಯಾವಾಗ ನಿದ್ದೆ ಆವರಿಸಿತೋ ತಿಳೀಲಿಲ್ಲ. ನಿದ್ದೆಯಲ್ಲೂ ಸಿಂಧು ನೆ ತುಂಬಿಕೊಂಡಿದ್ದಳು. ಈಗಲೂ ಏನೂ ಸಮಯ ಮೀರಿಲ್ಲ ಬೆಳಿಗ್ಗೆ ಎದ್ದ ತಕ್ಷಣ ಸಿಂಧುಗೆ ನನ್ನ ಮನಸಿನ ವಿಷಯವನ್ನು ತಿಳಿಸಿ ಅಪ್ಪನ ಜೊತೆ ಮಾತಾಡಬೇಕು ಎಂದು ಯೋಚಿಸುತ್ತಿದ್ದೆ.

ಬೆಳಿಗ್ಗೆ ಚಳಿ ಗಾಳಿ ತಣ್ಣಗೆ ಬೀಸುತ್ತಿತ್ತು. ಯಾಕೋ ಕತ್ತು ಬೇರೆ ತುಂಬಾ ನೋಯುತ್ತಿತ್ತು. ಒಳ್ಳೆ ನಿದ್ದೆ ಮಾಡಿಬಿಟ್ಟಿದ್ದೇನೆ ಎಂದು ದಡಬಡಿಸಿ ಎದ್ದು ಪಕ್ಕದ ಬರ್ತ್ ನಲ್ಲಿ ನೋಡಿದೆ. ಸಿಂಧು ಆಗಲೇ ಹೊರಟು ಹೋಗಿದ್ದಳು. ಆದರೆ ಅವಳು ಸುಮ್ಮನೆ ಹೋಗಿರಲಿಲ್ಲ.....

..

..

..

..

ನನ್ನ ಸೂಟ್ ಕೇಸ್, ಬ್ಯಾಗ್, ನನ್ನ ಕತ್ತಿನಲ್ಲಿದ್ದ ಚೈನ್, ಕೈಯಲ್ಲಿದ್ದ ವಾಚ್ ಎಲ್ಲವನ್ನೂ ಬಿಚ್ಚಿಕೊಂಡು ಹೋಗಿದ್ದಳು. ಆತುರವಾಗಿ ಕೆಳಗಿಳಿದು ಅಲ್ಲಿ ಕೂತಿದ್ದ ಕುಟುಂಬದವರನ್ನು ಕೇಳಿದೆ. ಸರ್ ಮೇಲೆ ಮಲಗಿದ್ದ ಆ ಹುಡುಗಿ ಎಲ್ಲಿ ಹೋದಳು ಎಂದಿದ್ದಕ್ಕೆ. ಆ ಹುಡುಗಿ ಆಗಲೇ ಆದೋನಿಯಲ್ಲಿ ಇಳಿದು ಹೋದರು. ಇಳಿಯುವ ಮುಂಚೆ ನಿಮ್ಮನ್ನು ತೋರಿಸಿ "ನನ್ನ ಸ್ನೇಹಿತ ಒಳ್ಳೆ ನಿದ್ದೆಯಲ್ಲಿದ್ದಾನೆ, ಅವನು ಎದ್ದ ಮೇಲೆ ಅವನಿಗೆ ಹೇಳಿ ನಾನು ಬೆಳಿಗ್ಗೆ ಫೋನ್ ಮಾಡ್ತೀನಿ ಎಂದು ಹೇಳಿದರು" ಎಂದರು. ನಾನು ಕೊಟ್ಳಲ್ಲಪ್ಪೋ ಕೈ ಎಂದು ಕೊಂಡು ರಾತ್ರಿ ಅವಳು ಕೊಟ್ಟಿದ್ದ ಅವಳ ನಂಬರ್ ಗೆ ಕರೆ ಮಾಡಿ "The number you  have dailled does not exist " ಎಂದು ಬರುತ್ತಿತ್ತು. ಪುಣ್ಯಕ್ಕೆ ಪರ್ಸೊಂದನ್ನು ನಾನು ಪ್ಯಾಂಟಿನ ಒಳಗಡೆ ಇಟ್ಟುಕೊಂಡಿದ್ದರಿಂದ ಅದೊಂದು ಉಳಿದಿತ್ತು. ನನ್ನ ವಸ್ತುಗಳೆಲ್ಲ ಕಳ್ಳತನ ಆಗಿದೆ ಎಂದರೆ ನನ್ನ ಮರ್ಯಾದೆ ಹೋಗತ್ತೆ ಎಂದುಕೊಂಡು ಆ ಕುಟುಂಬದವರ ಕಡೆ ನೋಡಿ ತುಂಬಾ ಧನ್ಯವಾದ ನಾನು ನನ್ನ ಸ್ನೇಹಿತೆಗೆ ಫೋನ್ ಮಾಡುತ್ತೇನೆ ಎಂದು ಟ್ರೈನ್ ಇಳಿದು ಮನೆ ಕಡೆ ಹೊರಟೆ..... 

Rating
No votes yet

Comments