ಕನ್ನಡತನ

ಕನ್ನಡತನ

ಮಾತೃ ಭಾಷೆ ಪ್ರೇಮ ಹುಟ್ಟಿನಿಂದಲೇ ಬಂದಿರಬೇಕೇ ವಿನಃ ಇನ್ನೊಬ್ಬರಿಂದ ನೋಡಿ ಕಲಿಯುವಂತಹದ್ದಲ್ಲ. ನಮ್ಮ ಕನ್ನಡಿಗರು ಬೇರೆಯವರ ಹಾಗಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡವನ್ನು ಕಲಿಸುವುದಿಲ್ಲ. ಅವರ ಭಾಷೆಯನ್ನೆ ಕಲಿಯಲು ಪ್ರಯತ್ನಿಸುತ್ತಾರೆ. ಯಾವ ಭಾಷೆಯವರು ಬಂದರೂ ಅವರಿಗೆ ಮಣೆ ಹಾಕುತ್ತಾರೆ ಎಂದು ಗೊಣಗುವವರನ್ನು ನಿತ್ಯ ಒಂದಿಲ್ಲೊಂದು ಕಡೆ ನೋಡ್ತಾ ಇರ್‍ತಿವಿ.
ಇದಕ್ಕೆ ಏನೂ ಮಾಡಲಿಕ್ಕೆ ಆಗೋದಿಲ್ಲ. ಕನ್ನಡಿಗರು ಹೃದಯ ಶ್ರೀಮಂತರು. ಅಲ್ಲದೆ ಬುದ್ಧಿವಂತರು. ಎಲ್ಲಾ ಭಾಷೆಗಳನ್ನು ಕಲಿತು ಅರಗಿಸಿಕೊಳ್ಳುವಷ್ಟು ಸಾಮರ್ಥ್ಯ ಇರುವಂತಹವರು. ಕವಿರಾಜಮಾರ್ಗಕಾರ ತನ್ನ ಕೃತಿಯಲ್ಲಿ ಕನ್ನಡಿಗರು ಎಂತಹವರು ಎಂದರೆ, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂದೆಲ್ಲಾ ಗುಣಗಾನ ಮಾಡಿರುವುದು ಇದಕ್ಕೆ ಸಾಕ್ಷಿ ಎಂತಲೂ ಹೇಳಬಹುದು.

ಎಲ್ಲಾ ಕನ್ನಡಿಗರ ಬಗ್ಗೆ ಮಾತನಾಡುವ ಬದಲು ಕನ್ನಡದ ಬಗ್ಗೆ ನಾನು ಹೇಗಿರಬೇಕು. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ? ಎಂದು ಪ್ರಶ್ನಿಸಿಕೊಳ್ಳುವವರು ಮಾತ್ರ ಕಡಿಮೆ. ಈ ಸಂದರ್ಭದಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿರುವ ನನಗೆ ನಾನು ಯಾವ ರೀತಿ ಕನ್ನಡ ಪ್ರೇಮಿ, ಅಪ್ಪಟ ಕನ್ನಡಿಗ ಅಂತ ಹೇಳಿಕೊಳ್ಳಬೇಕು ಎನ್ನಿಸುತ್ತಿದೆ.
ಮದರಾಸು ವಿಶ್ವವಿದ್ಯಾನಿಲಯದಲ್ಲೊಮ್ಮೆ ಕನ್ನಡ ವಿಭಾಗದ ರಾಷ್ಟ್ರೀಯ ವಿಚಾರಸಂಕಿರಣ ನಡೆಯುತ್ತಿತ್ತು. ಸಮಾರಂಭದಲ್ಲಿ ಕನ್ನಡ ಸಾಹಿತಿಗಳು ಸೇರಿದಂತೆ ತಮಿಳು, ತೆಲುಗು, ಹಿಂದಿ, ಸಂಸ್ಕೃತ ವಿದ್ವಾಂಸರು ಪಾಲ್ಗೊಂಡಿದ್ದರು. ಸಮಾರಂಭವನ್ನು ಉದ್ಘಾಟಿಸಿದ್ದು ಬೆಂಗಳೂರು ವಿಶ್ವವಿದ್ಯಾಲದ ಕುಲಪತಿ ತಿಮ್ಮಪ್ಪ ಅವರು. ಎಲ್ಲಾ ಭಾಷೆಗಳ ವಿದ್ವಾಂಸರು ಸಮಾರಂಭದಲ್ಲಿ ಹಾಜರಿದ್ದರಿಂದ ಅವರಿಗೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂಬ ಗೊಂದಲ ಕಾಡಿತ್ತು. ಕನ್ನಡನಾಡಿನಿಂದ ಹೊರಗೆ ಬಂದು ಕನ್ನಡ ಮಾತನಾಡುವ ಭಾಗ್ಯ ಬಂದಿದೆಯಲ್ಲ ಎಂದು ಹೆಮ್ಮೆ ಪಡುವ ಬದಲು ನನ್ನ ವಿದ್ವತ್ ಕೇವಲ ಕನ್ನಡಿಗರಿಗಷ್ಟೆ ಸೀಮಿತವಾಗಬಾರದು. ಎಲ್ಲರಿಗೂ ತಿಳಿಯಬೇಕು ಎಂಬುದು ಅವರ ನಿಲುವಾಗಿತ್ತು.
ಸಮಾರಂಭದಲ್ಲಿ ಅವರು ತೆಗೆದುಕೊಂಡ ನಿರ್ಧಾರಕ್ಕೆ ಮೆಚ್ಚಲೇಬೇಕು. ಯಾವ ಭಾಷೆಯಲ್ಲಿ ನನ್ನ ಭಾಷಣ ಆರಂಭಿಸಬೇಕು ಎಂದು ಸಭಿಕರನ್ನು ಕೇಳಿಕೊಂಡಿದ್ದು ಅವರ ದೊಡ್ಡಗುಣ ಎನ್ನಬೇಕು. ಅವರು ಕೇಳಿದರೂ ಕೆಲವರು ಕನ್ನಡದಲ್ಲಿ ಮಾತನಾಡಿ ಎಂದು ಹೇಳುವ ಧೈರ್ಯವಿರಲಿಲ್ಲ. ಕೆಲ ಕನ್ನಡ ದ್ರೋಹಿಗಳು ಇಂಗ್ಲಿಷ್, ಇಂಗ್ಲಿಷ್ ಎಂದು ಕಿರುಚಿಕೊಂಡರು.
ಈ ಸಂದರ್ಭದಲ್ಲಿ ನನ್ನ ಕೋಪ ನೆತ್ತಿಗೇರಿತ್ತು. ಒಂದೇ ಬಾರಿ ಎದ್ದು ನಿಂತು ಕನ್ನಡ ಕನ್ನಡ ಎಂದು ತಿಮ್ಮಪ್ಪನವರಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದು ಆಗ್ರಹಿಸಿದೆ. ಕೊನೆ ಘಳಿಗೆಯಲ್ಲಿ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿ ಅದರಲ್ಲಿ ಸ್ವಲ್ಪ ಇಂಗ್ಲಿಷ್ ಬಳಸಿ ಯಾವ ಭಾಷೆಯವರಿಗೂ ಅನ್ಯಾಯವಾಗದಂತೆ ನ್ಯಾಯ ಒದಗಿಸಿದರು. ಕೊನೆಯಲ್ಲಿ ಮಾತನಾಡಿದ ತಮಿಳು ಪ್ರೊಫೆಸರ್‍ ಒಬ್ಬರು, ನಮ್ಮ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು. ನಾವು ಎಲ್ಲೇ ಇರಲಿ ನಮ್ಮ ಭಾಷೆ, ನಾಡು ನುಡಿಯ ಬಗ್ಗೆ ಮರೆಯಬಾರದು ಎಂದು ಹೇಳಿ ನನ್ನ ಆಗ್ರಹವನ್ನು ಶ್ಲಾಘಿಸಿದರು.

ತಮಿಳು ಪ್ರತಿಭಟನೆಯಲ್ಲಿ ಕನ್ನಡದ ಘೋಷಣೆ ಕೂಗಿ ಎಲ್ಲರ ಹುಬ್ಬರಿಸುವಂತೆ ಮಾಡಿದ್ದೆ ಒಮ್ಮೆ. ಚೆನ್ನೈನಲ್ಲಿ ವಿವಿ ಅವರಣದಲ್ಲಿ ಕಾಲೇಜಿನ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿತ್ತು. ಎಲ್ಲರೂ ತಮಿಳಿನಲ್ಲಿ ಘೋಷಣೆ ಕೂಗುತ್ತಿದ್ದರು. ನಾನೇಕೆ ಕನ್ನಡದಲ್ಲಿ ಘೋಷಣೆ ಕೂಗಬಾರದು ಎಂದು ಭಾವಿಸಿದ ನಾನು, ಬೇಕೇ ಬೇಕು ನ್ಯಾಯ ಬೇಕು ಎಂದು ಶುರು ಮಾಡಿದೆ. ತಮಿಳು ವಿದ್ಯಾರ್ಥಿಗಳು ನನ್ನನ್ನೇ ಫಾಲೋ ಮಾಡಿದರು. ಕೊನೆಗೆ ಅವರು ಸಹ ಕನ್ನಡದಲ್ಲೇ ಘೋಷಣೆ ಕೂಗಲು ಪ್ರಾರಂಭಿಸಿದರು. ಕೆಲ ತಮಿಳು ಸ್ನೇಹಿತರು ಈಗ ಸಿಕ್ಕಿದರೂ ಬೇಕೇ ಬೇಕೆ ನ್ಯಾಯ ಬೇಕು ಎಂದು ನನ್ನನ್ನು ರೇಗಿಸುತ್ತಾರೆ.

ನಾವಿರುವುದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ. ಇಲ್ಲಿ ನಮ್ಮವರಿಗಿಂತ ಅನ್ಯಭಾಷಿಕರೇ ಜಾಸ್ತಿ. ನನಗೆ ತೆಲುಗು, ತಮಿಳು, ಹಿಂದಿ ಸ್ವಲ್ಪ ಸ್ವಲ್ಪ ಬರುತ್ತದೆಯಾದರೂ ಯಾವ ಭಾಷೆಯಲ್ಲಿ ವಿಳಾಸ ಕೇಳಿದರೂ ಅವನಿಗೆ ಮೊದಲು ಕನ್ನಡ ಕಲಿ. ಅಮೇಲೆ ನಿನ್ನ ವ್ಯವಹಾರ ಪ್ರಾರಂಭಿಸು ಎಂದು ಗದರಿಸಿದ ನಂತರವೇ ವಿಳಾಸ ಹೇಳುವುದು.
ನನಗೂ ಸಹ ಬೇರೆ ಭಾಷೆಗಳನ್ನು ಕಲಿಯಬೇಕು ಎಂಬ ಅಸಕ್ತಿ ಇದೆಯೋ ವಿನಹ ಕನ್ನಡದ ಬಗ್ಗೆ ಇರುವ ತಾತ್ಸಾರದಿಂದಲ್ಲ. ರಾಜ್ ಕುಮಾರ್‍ ಹೇಳಿರುವಂತೆ ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ........ಕನ್ನಡಾ........ಕನ್ನಡಾ......

ಕನ್ನಡವೇ ಸತ್ಯ..... ಕನ್ನಡವೇ ನಿತ್ಯ..... ಸಿರಿಗನ್ನಡಂ ಗೆಲ್ಗೆ, ಬಾಳ್ಗೆ

- ಲೋಕೇಶ್‌ಗೌಡ ಎಚ್‌.ಸಿ.

Rating
No votes yet