ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಗಣಪತಿಯು ಕೃಷ್ಣನನ್ನು ಕೇಳಬಹುದಾದ ಪ್ರಶ್ನೆಗಳನ್ನು ಮನಸಿನಲ್ಲಿಯೆ ಯೋಚಿಸುತ್ತಿದ್ದ. ಕೃಷ್ಣನ ಹುಟ್ಟಿನಿಂದ ಕೊನೆಯವರೆಗು ನಡೆದಿರುವ ಮುಖ್ಯ ಘಟನೆಗಳತ್ತ ಗಣಪತಿಯ ಚಿಂತನೆ ನಡೆದಿತ್ತು. ಮಹಾಭಾರತದ ಯುದ್ದವನ್ನು ಧರ್ಮಯುದ್ದವೆಂದೆ ಕರೆಯುವರು ಅಲ್ಲಿಯ ಕೃಷ್ಣನ ಪಾತ್ರವು ಅವನ ಮನದಲ್ಲಿತ್ತು. ಕೃಷ್ಣ ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯನ್ನು ಧರ್ಮದ ವ್ಯಾಖ್ಯಾನದಂತೆ ಹೇಳಿದ್ದು ಗಣಪತಿಯ ಮನ ಚಿಂತಿಸುತ್ತಿತ್ತು. ಈ ಎಲ್ಲ ಹಿನ್ನಲೆಯಲ್ಲಿ ಕೃಷ್ಣನನ್ನು ಕೇಳಬೇಕಾದ ಪ್ರಶ್ನೆಗಳ ಬಗ್ಗೆ ಗಣಪತಿ ಚಿಂತನೆ ನಡೆಸಿದ್ದ.
ಗಣಪತಿಯ ಮುಖವನ್ನೆ ನೋಡುತ್ತ ಕುಳಿತಿದ್ದ ಕೃಷ್ಣ ಗಣಪತಿಯನ್ನು ಕೇಳಿದ
"ಗಣೇಶ ಧರ್ಮ ಎಂದರೇನು?"
ಗಣಪತಿ ಗಲಿಬಿಲಿಗೊಂಡ, ತಾನು ಕೃಷ್ಣನನ್ನು ಪ್ರಶ್ನೆ ಕೇಳಬೇಕೆಂದಿರುವಾಗ ಕೃಷ್ಣನೆ ಪ್ರಶ್ನೆ ಕೇಳಿದ್ದು ಅವನನ್ನು ಚಕಿತನನ್ನಾಗಿಸಿತ್ತು
ಗಣಪತಿ ಉತ್ತರಿಸಿದ
"ಇದೇನು ಕೃಷ್ಣ ಹೀಗೆ ಕೇಳುತ್ತಿ, ಧರ್ಮ ಎಂಬುದು ಹಲವು ವಿಧ , ಒಟ್ಟು ಧರ್ಮಗಳಲ್ಲಿ ಮುಖ್ಯವಾದವು ಹಿಂದೂ ಧರ್ಮ, ಬೌದ್ದ ಧರ್ಮ , ಜೈನ ಧರ್ಮ, ಅಲ್ಲದೆ ಹೊರದೇಶಗಳಿಂದ ಬಂದ ಮುಸಲ್ಮಾನ ಹಾಗು ಕ್ರೈಸ್ತರಿಗೆ ಅವರಿಗೆ ಆದ ಧರ್ಮಗಳಿವೆ..."
ಗಣೇಶನ ಮಾತನ್ನು ಅರ್ಧದಲ್ಲಿಯೆ ಕತ್ತರಿಸುತ್ತ ಕೃಷ್ಣ ನುಡಿದ , ನಗುತ್ತ
"ಗಣೇಶ ಹುಡುಗಾಟ ಬೇಡ, ನಾನು ಗಂಭೀರವಾಗಿ ಕೇಳುತ್ತಿರುವೆ. ನೀನು ಬೇಕು ಬೇಕೆಂದು ಶಾಲೆಯ ಹುಡುಗನ ರೀತಿ ಉತ್ತರಿಸುತ್ತ ಇದ್ದೀಯ, ನನ್ನ ಪ್ರಶ್ನೆಗೆ ನಾನು ನಿನ್ನಿಂದ ತರ್ಕಬದ್ದ ಉತ್ತರವನ್ನು ನಿರೀಕ್ಷಿಸುತ್ತಿದ್ದೇನೆ"
ಗಣೇಶ ನುಡಿದ
’ಇದೇನು ಮಾತು ಕೃಷ್ಣ, ಧರ್ಮ ಎಂದರೆ ಏನು ಎಂದು ನೀನು ನನ್ನನ್ನು ಕೇಳುತ್ತಿದ್ದಿ, ಧರ್ಮದ ಬಗ್ಗೆ ಹದಿನೆಂಟು ಅಧ್ಯಾಯಗಳ ಭಗವದ್ದೀತೆಯ ಭೋದಕ ನೀನು. ಧರ್ಮದ ರಕ್ಷಣೆಗಾಗಿ ಎಂದು ಹದಿನೆಂಟು ದಿನಗಳು ನಡೆದ ಮಹಾಭಾರತದ ಯುದ್ದದ ರುವಾರಿ ನೀನು. ಧರ್ಮದ ರಕ್ಷಣೆಗಾಗಿ ಎಂದು ಅವತಾರವೆತ್ತಿ ಬಂದ ಪುರುಷ ನೀನು, ಈಗ ನೀನು ನನ್ನನ್ನು ಧರ್ಮ ಎಂದರೇನು ಎಂದು ಕೇಳುವುದು ಸರಿಯೆ ?"
ಕೃಷ್ಣ ನುಡಿದ
“ಇರಲಿ ಗಣೇಶ ಹೇಳು. ನೀನು ಹೇಳಿದಂತೆ ನಾನು ಆರ್ಜುನನಿಗೆ ಹೇಳಿದ ಆ ಮಾತುಗಳಲ್ಲಿ ಧರ್ಮದ ವಿಶ್ಲೇಷಣೆಯು ಬಂದಿರಬಹುದು. ಧರ್ಮದ ಭೋದನೆಯು ಆಗಿರಬಹುದು. ಆದರೆ ಅದು ಆಗಿನ ದ್ವಾಪರ ಯುಗಕ್ಕಾಯಿತು. ಧರ್ಮ ಎನ್ನುವುದು ಕಾಲ ಕಾಲಕ್ಕೆ ತನ್ನ ವ್ಯಾಖ್ಯೆಯನ್ನು ಬದಲಾಯಿಸಿಕೊಳ್ಳುತ್ತಲೆ ಇರುತ್ತದೆ. ನೀನು ಹೇಳಿದಂತೆ ನಾನು ಅಲ್ಲಿ ಸಹ ಧರ್ಮ ಎಂದರೆ ಇಂತದೆ ಎಂದು ಎಲ್ಲಿ ಯಾವ ಬಲತ್ಕಾರವನ್ನು ಹೇರಿಲ್ಲ. ನಾನು ನನ್ನ ಜೀವನದಲ್ಲಿ ಅರ್ಥಮಾಡಿಕೊಂಡ ಧರ್ಮದ ಸ್ವರೂಪವನ್ನು ಅರ್ಜುನನಿಗೆ ವಿವರಿಸಲು ಯತ್ನಿಸಿದ್ದೇನೆ.
ಅಷ್ಟೆ ಅಲ್ಲ ಕಡೆಯಲ್ಲಿ ನೀನು ಗಮನಿಸಿರುವೆಯೊ ಇಲ್ಲವೊ ತಿಳಿದಿಲ್ಲ. ನಾನು ಹೇಳಿದ ಧರ್ಮದ ವ್ಯಾಖ್ಯೆಯನ್ನು ಒಪ್ಪುವುದು ಅಥವ ಬಿಡುವುದು ಎನ್ನುವ ಆಯ್ಕೆಯನ್ನು ಅರ್ಜುನನಿಗೆ ಬಿಟ್ಟಿದ್ದೇನೆ. ನಾನು ಹೇಳುವುದು ಸಮ್ಮತವಿಲ್ಲದಿದ್ದರೆ ನೀನು ನಿನ್ನ ಮನಸಿಗೆ ತೋರಿದಂತೆ, ಆತ್ಮಭೋದೆಯಂತೆ ನಡೆ ಎಂದು ತಿಳಿಸಿದ್ದೇನೆ.
ನಮ್ಮ ಮನಸ್ಸೆ ನಮಗೆ ಗುರು ಅಲ್ಲವೆ ಗಣೇಶ. ನಮ್ಮ ಆತ್ಮಭೋದಿಸುವ ಮಾರ್ಗವೆ ಎಲ್ಲಕ್ಕಿಂತ ಶ್ರೇಷ್ಠ, ಎಲ್ಲ ಗುರುವಿನ ಮಾರ್ಗದರ್ಶನಕ್ಕಿಂತಲೂ ಉತ್ತಮವಾದ ದಾರಿ. ಇದು ನನ್ನ ಅಭಿಮತ.
ದ್ವಾಪರದ ಕಡೆಯ ಹೊತ್ತಿಗೆ ಹಿರಿಯರ ಮಾತುಗಳನ್ನು ಗಾಳಿಗೆ ತೂರಲಾಯಿತು. ಈಗಂತು ಕಲಿಗಾಲ. ಅವರವರ ಜೀವನ ಮಾರ್ಗಕ್ಕೆ ಅವರೆ ಹೊಣೆ.
ಅದಕ್ಕಾಗಿಯೆ ನಾನು ಅರ್ಥಮಾಡಿಕೊಂಡದ್ದಕ್ಕು ನಿನ್ನ ಈಗಿನ ತುಲನಾತ್ಮಕ ಅಭಿಪ್ರಾಯಕ್ಕು ವ್ಯತ್ಯಾಸ ತಿಳಿಯಲೋಸುಗ ಕೇಳಿದೆ.
ಗಣೇಶ ಧರ್ಮ ಎಂದರೆ ಏನು?”
ಗಣೇಶ ಸ್ವಲ್ಪ ಕಾಲ ಚಿಂತಿತನಾದ, ನಂತರ ನುಡಿದ
“ಕೃಷ್ಣ, ನೀನು ಹೇಳಿದಂತೆ ಧರ್ಮದ ವ್ಯಾಖ್ಯೆಯನ್ನು ಕಾಲ ಕಾಲಕ್ಕೆ ಮಾಡಲಾಗಿದೆ. ಧರ್ಮ ಎಂದರೆ ಇಂತಹುದೆ ಎಂದು ಬೆರಳು ತೋರಿಸಿ ನುಡಿಯುವುದು ಕಷ್ಟ , ನಾನಂತು ಧರ್ಮ ಎಂದರೆ ಹೀಗೆ ಅರ್ಥಮಾಡಿಕೊಂಡಿದ್ದೇನೆ.
ಧರ್ಮ ಎನ್ನುವ ಪದ ಹಲವು ವೈವಿಧ್ಯಗಳ ಸಮಗ್ರ ರೂಪ. ಹಲವು ರೂಪಗಳ ಸಮ್ಮಿಲನ. ಧರ್ಮ ಎಂದರೆ ನಾವು ಆಚರಿಸುವ, ನಮ್ಮ ಹಿರಿಯರು ಹೀಗೆ ಎಂದು ತೋರಿಸಿದ ಧಾರ್ಮಿಕ ಆಚರಣೆಗಳು, ಧರ್ಮ ಎಂದರೆ ನಾವು ಅನುಸರಿಸುತ್ತಲಿರುವ ಸಂಸ್ಕೃತಿಗಳ ರೂಪವಾಗಿರಬಹುದು. ಧರ್ಮ ಎಂದರೆ ನಾವು ಆಚರಿಸುವ ಹಬ್ಬ ಹರಿದಿನ ನಾಡ ಹಬ್ಬಗಳ ಸ್ವರೂಪದಲ್ಲಿರಬಹುದು. ಧರ್ಮ ಎಂದರೆ ನಮ್ಮ ಹೊರಗಿನ ರೂಪ, ಗಂಡಸರಾಗಲಿ ಹೆಂಗಸರಾಗಲಿ ಧರಿಸುವ ಧಿರಸು ಅಥವ ಬಟ್ಟೆಗಳು. ಧರ್ಮ ಎಂದರೆ ನಾವು ಕಲಿಯುವ ವಿಧ್ಯೆಯ ಸ್ವರೂಪ. ಧರ್ಮ ಎಂದರೆ ನಮ್ಮ ಸಾರ್ವಜನಿಕ ನಡವಳಿಕೆ ಅನ್ಯರಿಗೆ ನಾವು ತೋರುವ ಗೌರವ, ಅವರ ಅಭಿಪ್ರಾಯಗಳಿಗೆ ನೀಡುವ ಬೆಲೆ, ಒಂದು ವೇಳೆ ಇನ್ನೊಬ್ಬರು ತಪ್ಪು ಮಾಡಿದಾಗಲು ನಾವು ಅವರನ್ನು ಕ್ಷಮಿಸಿ ಸರಿ ದಾರಿಯಲ್ಲಿ ಕೊಂಡೊಯ್ಯುವ , ಸರಿ ದಾರಿ ತೋರುವ ವ್ಯಕ್ತಿತ್ವ. ಧರ್ಮ ಎಂದರೆ ನ್ಯಾಯ ಅನ್ಯಾಯಗಳ, ಶುದ್ದ ವ್ಯಕ್ತಿತ್ವದ ಪರಿಜ್ಞಾನ
ಧರ್ಮ ಎಂದರೆ ದೊಡ್ಡವರು ಚಿಕ್ಕವರಿಗೆ ತೋರುವ ಪ್ರೀತಿ ಚಿಕ್ಕವರು ದೊಡ್ಡವರಿಗೆ ನೀಡುವ ಬೆಲೆ, ಗೌರವ. ಧರ್ಮ ಎಂದರೆ ನಮ್ಮ ಸೃಷ್ಟಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ. ಧರ್ಮ ಎಂದರೆ ನಮ್ಮದೆ ಆದ ಸಾಹಿತ್ಯ ಲಲಿತಕಲೆ ಧಾರ್ಮಿಕ ಗ್ರಂಥಗಳು….. ಹೀಗೆ ಧರ್ಮಕ್ಕೆ ತನ್ನದೆ ಆದ ವಿಶಾಲ ವಿಸೃತ ರೂಪವಿದೆ ಕೃಷ್ಣ, ನಾನು ಹೇಳಿದ್ದು ಸರಿ ಅನ್ನಿಸುತ್ತಿಲ್ಲವೆ”
ಕೃಷ್ಣ ಸ್ವಲ್ಪ ಕಾಲ ಗಣೇಶನನ್ನೆ ನೋಡುತ್ತ ಕುಳಿತ್ತಿದ ನಂತರ ನಗುತ್ತ ಹೇಳಿದ
“ಗಣೇಶ ನಾನು ಹದಿನೆಂಟು ಅದ್ಯಾಯದಲ್ಲಿ ದೀರ್ಘವಾಗಿ ವಿವರಿಸಿದ್ದನ್ನು, ಹತ್ತು ಹಲವು ವ್ಯಾಖ್ಯೆಯನ್ನು ನೀನು ಕೆಲವೆ ವಾಕ್ಯಗಳಲ್ಲಿ ತಣ್ಣಗೆ ವಿವರಿಸಿದೆ. ಹೌದು ಗಣೇಶ ಧರ್ಮಕ್ಕೆ ಇಂತದೆ ಎಂದು ನಿರ್ಧಿಷ್ಟವಾದ ರೂಪವಿಲ್ಲ. ನೀನು ಹೇಳಿದ ಈ ಎಲ್ಲ ರೂಪಗಳ ಜೊತೆಗೆ ಮತ್ತೊಂದು ಬಿಟ್ಟುಹೋದ ಅಂಶವೆಂದರೆ, ನೀನು ಹೇಳಿದ ಈ ಎಲ್ಲ ವಿವರಗಳು ಭೂಮಿಯಲ್ಲಿನ ವಿವಿಧ ಬಾಗಗಳಲ್ಲಿ ಬೇರೆ ಬೇರೆ ರೂಪ ತಾಳುತ್ತವೆ. ಪ್ರತಿ ಜನಾಂಗ, ಪ್ರತಿ ಭೂಖಂಡ ಅಥವ ದೇಶ ತನ್ನದೆ ಆದ ಆಚರಣೆ,ಸಂಸ್ಕೃತಿ, ಬಟ್ಟೆ ಬರೆ, ವಿಧ್ಯೆ, ಸಾರ್ವಜನಿಕ ನಡುವಳಿಕೆ , ನ್ಯಾಯ ಅನ್ಯಾಯಗಳ ವಿವೇಚನೆ ಎಲ್ಲವು ಬದಲಾಗುತ್ತ ಹೋಗುತ್ತದೆ, ಹಾಗು ಅದನ್ನು ಅಲ್ಲಿಯ ಧರ್ಮವೆಂದು ಕರೆಯಬಹುದು.
ಮತ್ತು ಅಂತಹ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವುದು ಅವರ ಹಕ್ಕಾಗಿರುತ್ತದೆ. ತನ್ನ ಧರ್ಮದ ಮೇಲೆ ನಡೆಯುವ ಒಳಗಿನ ಹಾಗು ಹೊರಗಿನ ದಾಳಿಯನ್ನು ತಡೆಯುವುದು ಸಹ ಅವನ ಧರ್ಮವಾಗಿರುತ್ತದೆ, ಅದರೆ ಅದು ಯುದ್ದದಿಂದ, ಹೋರಾಟದಿಂದ , ಸಾವಿನಿಂದ ಸಾದ್ಯವಿಲ್ಲ ಎನ್ನುವುದು ನಾವು ಹಿಂದೆಲ್ಲ ಕಂಡಿರುವ ಸತ್ಯ. ಶಾಂತಿ ಹಾಗು ಸಹನೆಯ ಮೂಲಮಂತ್ರದಿಂದ ತನ್ನ ವಿರುದ್ದ ನಡೆಯುವ ಯಾವುದೆ ದಾಳಿಯನ್ನು ತಡೆಯಬಹುದು ಅನ್ನಿಸುತ್ತೆ”
ಗಣೇಶ ಸ್ವಲ್ಪ ನಕ್ಕ
“ನಿನ್ನ ಮಾತು ಸತ್ಯ ಕೃಷ್ಣ. ಇಲ್ಲಿಯವರೆಗು ನಡೆದಿರುವ ಯಾವ ಯುದ್ದದಿಂದ ಹಿಂಸೆಯಿಂದ ಯಾವುದೆ ವಿಷಯ ಇತ್ಯರ್ಥವಾಗಿಲ್ಲ ಎನ್ನುವುದು ಸತ್ಯ. ಬಹುಷಃ ಇದೆ ಈ ಯುಗದ ಧರ್ಮವಾದರೆ ಚೆನ್ನಾಗಿರುತ್ತೆ” ಎಂದ
ಕೃಷ್ಣ ನುಡಿದ
“ಸರಿ ಗಣೇಶ ನಾನಿನ್ನು ನಿನ್ನನ್ನು ತಡೆಯುವದಿಲ್ಲ, ನಿನಗೆ ಬೇಕಾದ ಪ್ರಶ್ನೆ ಕೇಳು, ನನ್ನ ಜೀವನದ ಹಲವು ಘಟನೆಗಳ ಬಗ್ಗೆ ನೀನು ವಿವರ ಕೇಳುವೆ ಅನ್ನಿಸುತ್ತಿದೆ. ನಾನು ನನ್ನ ವಿವೇಚನೆಯಲ್ಲಿರುವಷ್ಟನ್ನು ವಿವರಿಸುವೆ. ನನ್ನ ವಿವರಣೆ ಕೊಡಲು ಪ್ರಯತ್ನಿಸುವೆ”
ಎಂದನು
ಸ್ವಲ್ಪ ಕಾಲ ಸುಮ್ಮನಿದ್ದ ಗಣೇಶ
."ಸರಿ ಕೃಷ್ಣ ಈಗ ನನಗೆ ಮೊದಲನೆ ಅನುಮಾನ ನೀನು ಹುಟ್ಟುವದಕ್ಕೆ ಮೊದಲಿನಿಂದಲೆ ಪ್ರಾರಂಭ, ಕಂಸನಿಗೆ ನಿನ್ನ ಮರಣ ದೇವಕಿಯ ಎಂಟನೆ ಮಗುವಿನಿಂದ ಎಂದು ಅಶರೀರವಾಣಿಯಾಯಿತು ಎನ್ನುವ ಬಗ್ಗೆ ಏನು ಹೇಳುವೆ?. ಇಲ್ಲಿಯವರೆಗು ಯಾರಿಗೆ ಆಗಲಿ ನಿನ್ನ ಮರಣ ಹೀಗೆ ಎನ್ನುವ ರಹಸ್ಯ ಸೃಷ್ಟಿ ಬಿಟ್ಟುಕೊಡಲ್ಲ ಹಾಗಿರುವಾಗ ಕಂಸನಿಗೆ ಕೇಳಿದ ಅಶರೀರವಾಣಿ ಸತ್ಯವ?"
ಕೃಷ್ಣ .. ಕೃಷ್ಣ.. ಕೃಷ್ಣ ಸರಣಿಯ ಎಲ್ಲ ಕಂತುಗಳನ್ನು ಒಟ್ಟಿಗೆ ಓದಲು , ಕೆಳಗೆ ’ಸರಣಿ’ ಎಂಬಲ್ಲಿ ಇರುವ ’ಕೃಷ್ಣ .. ಕೃಷ್ಣ ..ಕೃಷ್ಣ’ ಪದವನ್ನು ಕ್ಲಿಕ್ ಮಾಡಿ
ಚಿತ್ರದ ಮೂಲ : ಕ್ರಿಷ್ಣ.....ಕೃಷ್ಣ
Comments
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಪ್ರೀತಿಯ ಸಂಪದಿಗರಿಗೆ
ಕೃಷ್ಣ .. ಕೃಷ್ಣ .. ಕೃಷ್ಣ ಈ ಸರಣಿ ಪ್ರಾರಂಬಿಸುವಾಗ ನನಗೆ ಕೆಲವು ಕಲ್ಪನೆಗಳಿದ್ದವು, ಹಾಗೆ ನನ್ನೊಳಗೆ ಕುದಿಯುತ್ತಿದ್ದ ಚಿಂತನೆಗಳು. ಈ ಬರಹ ಬರೆಯಲು ಕೆಲವು ತಿಂಗಳಿಂದ ಪ್ರಯತ್ನಪಡುತ್ತಿದ್ದೇನೆ. ಆದರೆ ನನಗೆ ಪೂರ್ಣ ತೃಪ್ತಿ ಕೊಡಲಿಲ್ಲ. ನನ್ನ ಮನಸಿಗೆ ಸರಿ ಎನಿಸುವ ವಿಚಾರವನ್ನಷ್ಟೆ ಚರ್ಚಿಸುತ್ತ ಹೋಗಿದ್ದೇನೆ.
ದ್ವಾಪರದ ಕೃಷ್ಣನ ಬದುಕು ಈಗ ಅರ್ಥಮಾಡಿಕೊಳ್ಳುವುದು ಸುಲುಭ ಸಾದ್ಯವಲ್ಲ. ಅದಕ್ಕೆಲ್ಲ ಯಾವುದೆ ದಾಖಲೆಗಳಾಗಲಿ ಸಾಕ್ಷಿಗಳಾಗಲಿ ಇರುವದಿಲ್ಲ. ನಮ್ಮ ಮನಸಲ್ಲಿ ಅಂದಿನ ಪರಿಸ್ಥಿತಿಯನ್ನು ಕಲ್ಪಿಸಿಕೊಂಡಾಗ ಮಾತ್ರ ಸಾದ್ಯ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇರುವ ಎಲ್ಲ ಭಾವೋತ್ಕರ್ಷ ಕೃಷ್ಣನ ಜೀವನದಲ್ಲಿದೆ. ಅಲ್ಲಿ ನಗುವಿದೆ, ದುಃಖವಿದೆ, ಸಂತಸವಿದೆ ನೋವಿದೆ, ರೋಶವಿದೆ, ಉನ್ಮಾದವಿದೆ, ಪ್ರೀತಿ ಇದೆ ಹಾಗೆ ತ್ಯಾಗವು ಇದೆ. ಭಯ ಹಾಗು ಧೈರ್ಯ ಎಲ್ಲದ ಸಮ್ಮಿಲನ ಕೃಷ್ಣನ ಜೀವನ.
ಒಂದು ಕತೆಯಲ್ಲಿ ಬರುವಂತೆ ಒಳ್ಳೆಯವರು ಹಾಗು ಕೆಟ್ಟವರು ಎಲ್ಲರು ಅವನ ಜೀವನದಲ್ಲಿ ಬರುವರು
ಹದಿನೈದು ಅಥವ ಇಪ್ಪತ್ತು ಪ್ರಕಟಣೆಗಳಿಗಾಗುವಷ್ಟು ಬರಹವನ್ನು ಸರಣಿರೂಪದಲ್ಲಿ ಪ್ರಕಟಿಸಬೇಕೆಂದು ಇಷ್ಟವಿತ್ತು.
ಸಂಪದದಲ್ಲಿ ಬರಹ ಪ್ರಕಟಣೆ ಪ್ರಾರಂಬವಾದಂತೆ ಕೆಲವು ಕಟು ವಿಮರ್ಷೆಯ ಪ್ರತಿಕ್ರಿಯೆಗಳು ಬಂದವು ಅದು ಬಹು ನಿರೀಕ್ಷಿತವಾಗಿತ್ತು. ವಿಮರ್ಷೆ ನನ್ನ ಬರಹದ ಬಗ್ಗೆ ಬಂದಿದ್ದರೆ ಚೆನ್ನಾಗಿತ್ತು ನಾನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೆ, ಆದರೆ ಪ್ರತಿಕ್ರಿಯೆ ನೋಡುವಾಗಲೆ ಗೊತ್ತಾಗುತ್ತಿತ್ತು ಅದರಲ್ಲಿ ನನ್ನ ಬರಹದ ಬಗ್ಗೆ ಯಾವುದೆ ಅಭಿಪ್ರಾಯ ಅಥವ ವಿಮರ್ಶೆ ಇರಲಿಲ್ಲ. ಮೊದಲೆ ರೂಪಗೊಂದು ಗಟ್ಟಿಗೊಂಡ ಅಭಿಪ್ರಾಯಗಳು ವ್ಯಕ್ತಿಗತ ವಿಮರ್ಷೆಗಳು ಹಾಗು ತಳ ಮಟ್ಟದ ಪದಪ್ರಯೋಗಗಳು ನನ್ನನ್ನು ವಿಚಲಿತಗೊಳಿಸಿದವು. ಕೃಷ್ಣನ ಮೇಲಿನ ದ್ವೇಷ ಅಭಿಪ್ರಾಯಗಳು ವೈಯುಕ್ತಿಕ ಆದರೆ ಅದನ್ನು ಸಾರ್ವಜನಿಕಗೊಳಿಸುವಾಗ ಎಲ್ಲ ಶಿಷ್ಟಾಚಾರವನ್ನು ಮೀರಿ ಪ್ರತಿಕ್ರಿಯೆ ನೀಡುವರನ್ನು ವ್ಯಯುಕ್ತಿಕವಾಗಿ ನಿಂದಿಸುವುದು, ಕಡೆಗೆ ಸಂಪದಿಗರ ಮಕ್ಕಳನ್ನು ಸಹ ಇಲ್ಲಿಗೆ ಎಳೆದು ತರುವುದು ಮಾಡುವಾಗ , ಚರ್ಚೆ ಅನ್ನುವುದು ಸಾದ್ಯವಿಲ್ಲವೇನೊ ಅನ್ನಿಸುತ್ತೆ. ಈ ರೀತಿಯ ವಾತವರಣದಲ್ಲಿ ಸರಣಿ ಬರಹವನ್ನು ಮುಂದುವರೆಸುವುದು ಕಷ್ಟ ಅನ್ನಿಸುತ್ತಿದೆ. ನನ್ನದೇನು ದೊಡ್ದ ಬರಹವಲ್ಲ , ನಾನೇನು ದೊಡ್ಡ ಲೇಖಕನು ಅಲ್ಲ. ಆದರೆ ಶಿಷ್ಟಾಚಾರವನ್ನು ಮೀರಿದ ಮಾತುಗಳು , ಪ್ರತಿಕ್ರಿಯೆಗಳ ನಡುವೆ ಸರಣಿ ಮುಂದುವರೆಸಲು ನನಗೆ ಏಕೊ ಬೇಸರ ಅನಿಸುತ್ತಿದೆ. ಬಹುಷಃ ಇದು ಸರಣಿಯ ಕಡೆಯ ಬರಹ.
ನನ್ನ ಬರಹಕ್ಕೆ ಪ್ರತಿಕ್ರಿಯೆ ನೀಡುವ ಕಾರಣದಿಂದ ಕೆಲವರ ಮನಸಿಗಾದರು ನೋವಾಗಿದೆ ಹಾಗಾಗಿ ಅವರ ಕ್ಷಮೆ ಕೇಳುವೆ.
ತಿದ್ದಿ ಸಿದ್ದಪಡಿಸಿದ ಬಾಗವನ್ನು ಇಲ್ಲಿ ಹಾಕಿ ಈ ಸರಣಿಯನ್ನು ಈ ವೇದಿಕೆಯಲ್ಲಿ ಮುಕ್ತಾಯಗೊಳಿಸುತ್ತಿದ್ದೇನೆ. ಉಳಿದ ಬಾಗಗಳು ನನ್ನ ಬ್ಲಾಗಿನಲ್ಲಿ ಹಾಕಿಕೊಂಡಿರುತ್ತೇನೆ, ಆಸಕ್ತಿ ಇದ್ದವರು ನೋಡಬಹುದು. ಅಥವ krishana1krishana.blogslpot.in
ನಲ್ಲಿ ಸಹ ನೋಡಬಹುದು
ವಿಶ್ವಾಸಗಳೊಡನೆ
ಪಾರ್ಥಸಾರಥಿ
In reply to ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು? by partha1059
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಈ ನಿಮ್ಮ ಸರಣಿ ಒಬ್ಬರಿಗೋಸ್ಕರ ಬರೆಯುತ್ತಿರುವುದಲ್ಲ. ಹಾಗೆ ಇದಕ್ಕೆ ಬರುವ ತಳಮಟ್ಟದ ಪ್ರತಿಕ್ರಿಯೆಗಳು ಅವರ ಮನಸ್ಸಿನ ಮಟ್ಟವನ್ನು ತೋರಿಸುತ್ತದೆ ಅಂತಹ ಪ್ರತಿಕ್ರಿಯೆಗಳಿಗೆ ಯಾರು ಮರು ಪ್ರತಿಕ್ರಿಯಸಿದಿದ್ದರೆ ಆಯಿತು ಅಲ್ಲವೆ ಆದುದರಿಂದ ಸರಣಿ ಮುಂದುವರಿಯಲಿ ಎನ್ನುವುದು ನನ್ನ ಅಭಿಪ್ರಾಯ ...................ಸತೀಶ್
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಪಾರ್ಥ ಸಾರ್, ನನ್ನ ಅನಿಸಿಕೆಯಲ್ಲಿ ಸಹ ನೀವಿದನ್ನು ನಿಲ್ಲಿಸಬಾರದು. ಉದಾಹರಣೆಗೆ ಹೇಗಾದರೂ ಈ ಬರಹ ಮುಂದುವರೆಸಲು ಬಿಡಬಾರದೆಂದೆ ಕೆಲವರ ಸನ್ನಾಹವಿತ್ತೆಂದುಕೊಳ್ಳೋಣ; ನೀವು ಬರೆಯುವುದನ್ನು ನಿಲ್ಲಿಸಿದರೆ ಅವರ ಗಮ್ಯ ಸಾಧನೆಗೆ ನೀವೇ ಅನುವು ಮಾಡಿಕೊಟ್ಟಂತಾಗುವುದಿಲ್ಲವೆ? ಅದರ ಬದಲು ನಿರ್ಲಿಪ್ತತೆಯಿಂದ ನೀವು ಹಿಡಿದ ಕಾರ್ಯ ಮುಗಿಸುವುದು ಸರಿಯಾದ ಹಾದಿ ಎಂದು ನನ್ನ ಅಭಿಪ್ರಾಯ.
ನಿಜ ಹೇಳಬೇಕೆಂದರೆ, ನಿಮ್ಮ ಬರಹವನ್ನು ಹೆಚ್ಚು ಪ್ರಚುರಗೊಳಿಸಲು ಶ್ರೀ ಕೃಷ್ಣನೆ ಮಾಡಿದ ಉಪಾಯವಿರಬೇಕು. ಯಾಕೆಂದರೆ, ಮಾಮೂಲಿ ಬರಹಕ್ಕೆ ಹೆಚ್ಚು ಓದುಗರು ಒಂದೆ ಬಾರಿಗೆ ಮುತ್ತಿಕೊಳ್ಳುವುದಿಲ್ಲ. ಆದರೆ ಈ ಪ್ರತಿಕ್ರಿಯೆಯ ನೆಪದಿಂದ ಹೆಚ್ಚೆಚ್ಚು ಜನ ಓದುತ್ತಾರೆ. ಹೀಗಾಗಿ ಇದನ್ನು ನಿಲ್ಲಿಸಬೇಕೆಂದು ಆಶಿಸಿದ್ದವರು ತಮಗರಿವಿಲ್ಲದೆಯೆ ಬರಹಕ್ಕೆ ಹೆಚ್ಚು ಪ್ರಾಮುಖ್ಯತೆ, ಪ್ರಸಿದ್ಧಿಯನ್ನು ತಂದುಕೊಡುವವರಾಗುತ್ತಾರೆ - ಉದ್ದೇಶ ಅದಲ್ಲದಿದ್ದರೂ ಸಹ.
ಈ ದೃಷ್ಟಿಯಿಂದ ನೀವು ಲೇಖನ ಮಾಲೆ ನಿಲ್ಲಿಸದೆ ಮುಂದುವರೆಸುವುದು ಸರಿಯೆಂದು ನನ್ನ ಭಾವನೆ.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು? by nageshamysore
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಪಾರ್ಥ ಸರ್,
ನಿಮ್ಮ ಬರಹಗಳು ಅನೇಕ ಸಂಪದಿಗರಿಗೆ ಸಂತೋಷ ಕೊಟ್ಟಿವೆ.
ದಯವಿಟ್ಟು ನಿಮ್ಮ ನಿರ್ಧಾರವನ್ನು ಹಿಂದೆಗೆದುಕೊಳ್ಳಿ ಎಂದು ಕಳಕಳಿಯ ಕೋರಿಕೆ.
***
ನಿಂದಕರಿರಬೇಕಿರಬೇಕು ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಹಿಯೋ ಹಾಂಗೆ
ಅಂದಂದು ಮಾಡಿದ ಪಾಪವೆಂಬ ಮಲ | ತಿಂದು ಹೋಗುವರಯ್ಯ ನಿಂದಕರು
ದುರುಳ ಜನಂಗಳು ಚಿರಕಾಲವಿರುವಂತೆ |
ಕರವ ಮುಗಿದು ವರ ಬೇಡುವೆನು ........ ಪುರಂದರ ವಿಠಲ
In reply to ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು? by Shreekar
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ನಾಗೇಶ್ ಮತ್ತು ಶ್ರೀಕರ್ ಅವರ ಅಭಿಪ್ರಾಯ ನನ್ನದೂ ಸಹ. ಪಾರ್ಥಸಾರಥಿಯವರೆ, ನಿಮ್ಮದೇ ವಾಕ್ಯ-" ತನ್ನ ಧರ್ಮದ ಮೇಲೆ ನಡೆಯುವ ಒಳಗಿನ ಹಾಗು ಹೊರಗಿನ ದಾಳಿಯನ್ನು ತಡೆಯುವುದು ಸಹ ಅವನ ಧರ್ಮವಾಗಿರುತ್ತದೆ, ಅದರೆ ಅದು ಯುದ್ದದಿಂದ, ಹೋರಾಟದಿಂದ , ಸಾವಿನಿಂದ ಸಾದ್ಯವಿಲ್ಲ ಎನ್ನುವುದು ನಾವು ಹಿಂದೆಲ್ಲ ಕಂಡಿರುವ ಸತ್ಯ. ಶಾಂತಿ ಹಾಗು ಸಹನೆಯ ಮೂಲಮಂತ್ರದಿಂದ ತನ್ನ ವಿರುದ್ದ ನಡೆಯುವ ಯಾವುದೆ ದಾಳಿಯನ್ನು ತಡೆಯಬಹುದು ಅನ್ನಿಸುತ್ತೆ”
ಗಣೇಶ ಸ್ವಲ್ಪ ನಕ್ಕ :) :) ಶಾಂತಿ ಹಾಗು ಸಹನೆಯ ಮೂಲಮಂತ್ರದಿಂದ ತನ್ನ ವಿರುದ್ದ ನಡೆಯುವ ಯಾವುದೆ ದಾಳಿಯನ್ನು ತಡೆಯಬಹುದು ಅನ್ನಿಸುತ್ತೆ -ನೀವೇ ಬೋಧಿಸಿ ನೀವೇ ಸಹನೆ ಕಳಕೊಂಡರೆ ಹೇಗೆ? ನಿಮ್ಮ ಸರಣಿ ಲೇಖನವನ್ನು ನಿಮ್ಮ ಅಭಿಮಾನಿ ಬಳಗಕ್ಕಾಗಿ ಇಲ್ಲೇ ಮುಂದುವರಿಸಿ. ನನ್ನ ಮೇಲಿನ ಧಾಳಿಯನ್ನು ಶಾಂತಿ ಹಾಗು ಸಹನೆಯ ಮೂಲಮಂತ್ರದಿಂದ ನಾನು ನಿಭಾಯಿಸುತ್ತೇನೆ. ಚಿಂತಿಸದಿರಿ. :)
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಪಾರ್ಥರೇ, ಉತ್ತಮ ಚಿಂತನೀಯ ವಿಚಾರಗಳನ್ನು ವಿಶ್ಲೇಷಿಸುತ್ತಿರುವಿರಿ.ಕೃಷ್ಣ, ರಾಮರನ್ನು ದೇವರು ಎಂದು ಪೂಜಿಸುವವರಿದ್ದಾರೆ. ದೇವಮಾನವರಾಗಿದ್ದು ಹೆಚ್ಚಿನ ಸಾಮಾನ್ಯರು ಮಾಡಲಾಗದ ಕಾರ್ಯಗಳನ್ನು ಅವರು ಮಾಡಿದ್ದರಿಂದ ದೇವಸ್ವರೂಪರೆನ್ನುವವರೂ ಇದ್ದಾರೆ. ದೇವರಲ್ಲವೆಂದು ವಾದಿಸುವವರೂ ಇದ್ದಾರೆ. ಅದೇನೇ ಇರಲಿ, ಬರಹದ ಸಾರ ಗ್ರಹಣಯೋಗ್ಯವಾಗಿದೆ. ತಿರುಳನ್ನು ನಾವು ಗ್ರಹಿಸಬೇಕೇ ಹೊರತು ಸಿಪ್ಪೆಯನ್ನಲ್ಲ. ನಿಮ್ಮ ಲೇಖನ ಸರಣಿ ಮುಂದುವರೆಯಲಿ ಎಂದು ಆಶಿಸುವೆ.
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ನಿಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದೀರಿ ... ಸಾಗಲಿ ... ಚೆನ್ನಾಗಿದೆ ಎನ್ನವು ಬದಲಿಗೆ ದಿಫೆರೆಂಟಾಗಿದೆ ಎನ್ನಬಹುದು.
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಈ ಲೇಖನ ಸರಣಿಯನ್ನು ಓದುತ್ತಿದ್ದೇನೆ ಚೆನ್ನಾಗಿದೆ. ಭಿನ್ನಾಭಿಪ್ರಾಯಗಳು ಎಲ್ಲ ರಂಗಗಳಲ್ಲೂ ಸಹಜ, ಇದೊಂದು ರೀತಿಯ ವೈಚಾರಿಕ ಮಂಥನ, ಈ ಬಗೆಗೆ ನಡೆಯುವ ಸಂವಾದ ಸತ್ಯದೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ ಎನ್ನುವ ಗ್ರಹಿಕೆಯಿದ್ದರೆ ಸಾಕು ಉದ್ವೇಗ ಖೇದಗಳು ಬೇಡ, ನಮ್ಮ ವಿಚಾರ ಸರಣಿಯನ್ನು ಎಲ್ಲರೂ ಒಪ್ಪ ಬೇಕೆಂದೇನೂ ಇಲ್ಲ, ಅವರವರ ಅಭಿಪ್ರಾಯ ಅವರದು, ಎರಡು ವೈಚಾರಿಕತೆಗಳು ಸಮಾನಾಂತರ ರೇಖೆಗಳಿದ್ದ ಹಾಗೆ ಅವು ಎಷ್ಟು ದೂರ ಕ್ರಮಿಸಿದರೂ ಒಂದು ಗೂಡಲು ಸಾಧ್ಯವಿಲ್ಲ, ಈ ಸತ್ಯದ ಅರಿವು ನಮಗಾದರೆ ಖಿನ್ನತೆ ನಮ್ಮ ಹತ್ತಿರವೂ ಸುಳಿಯದು,ನಿಮ್ಮ ಲೇಖನಗಳು ವೈಚಾರಿಕ ಮಂಥನಕ್ಕೆ ಒಳಗಾಗುತ್ತಿವೆ ಅದು ಮುಖ್ಯ, ಧನ್ಯವಾದಗಳು
In reply to ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು? by H A Patil
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
ಪಾಟೀಲರೆ ತಮ್ಮ ಮಾತು ಸತ್ಯ ಭಿನ್ನಭಿಪ್ರಾಯಗಳು ಸಹಜ. ಅದೆಲ್ಲ ಬೇಸರವಲ್ಲ. ಆದರೆ ನಾನು ಯಾವ ಕಾರಣಕ್ಕಾಗಿ ಖಿನ್ನನಾಗಿದ್ದೆ ಎಂದು ತಿಳಿಸಿದ್ದೇನೆ, ಅದೆಲ್ಲ ಕ್ಷಣಿಕ, ತಮಗೆ ಹಾಗು ತಮ್ಮ ಹಾಗೆ ನನಗೆ ಪ್ರೋತ್ಸಾಹ ನೀಡಿದ ಎಲ್ಲ ಮಿತ್ರರಿಗು ನಾನು ಚಿರRuಣಿ.
ವಂದನೆಗಳೊಡನೆ
ಪಾರ್ಥಸಾರಥಿ
In reply to ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು? by partha1059
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?
@ ಪಾರ್ಥ ಸಾರ್
ಇಲ್ಲೊಂದು ಅದ್ಭುತವಾದ ಕವನವಿದೆ, ದಯವಿಟ್ಟು ಓದಿ.
ವಿನಯ್ ಪಟೇಲ್ ಅವರ "ನೂರು ನಮನ "
http://sampada.net/c...