ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತಮೂರು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತಮೂರು

“ನನಗೆ ಒಣ ಜಂಬ. ಹಾಗೆ ಜಂಬ ಇಲ್ಲದಿದ್ದರೆ ನಮ್ಮ ಸಮಾಜದಲ್ಲಿ ಮಾಮೂಲಾಗಿ ಬದುಕುವುದಕ್ಕೆ ಕಾರಣ ಏನೇನೂ ಇಲ್ಲ. ಭಾನುವಾರ ಬಂತು. ಡಿನ್ನರಿಗೆ, ಸಂಗೀತ ಸಂಜೆಗೆ ಎಲ್ಲ ಏರ್ಪಾಡು ನಾನೇ ಮಾಡಿದೆ. ಗೆಸ್ಟುಗಳನ್ನು ನಾನೇ ಸ್ವಾಗತಿಸಿದೆ.
“ಆರು ಗಂಟೆಯ ಹೊತ್ತಿಗೆ ಎಲ್ಲರೂ ಬಂದರು. ಅವನು ಈವನಿಂಗ್ ಡ್ರೆಸ್ಸು ಹಾಕಿಕೊಂಡಿದ್ದ. ಅದಕ್ಕೆ ವಜ್ರದ ಗುಂಡಿಗಳಿದ್ದವು. ಅವನ ಕೀಳು ಅಭಿರುಚಿ ಎದ್ದು ಕಾಣುತಿತ್ತು. ತಾನು ಎಲ್ಲರಿಗಿಂತ ಮೇಲು ಅನ್ನುವಹಾಗೆ, ಮುಗುಳ್ನಕ್ಕು ಏನೋ ಉಪಕಾರ ಮಾಡುತ್ತಿರುವವನ ಹಾಗೆ, ಯಾರು ಏನೇ ಹೇಳಿದರೂ ಮಾಡಿದರೂ ಅವರು ಹಾಗೇ ಹೇಳುತ್ತಾರೆ, ಮಾಡುತ್ತಾರೆ ಅನ್ನುವುದು ಗೊತ್ತಿತ್ತು ಅನ್ನುವವನ ಹಾಗೆ ನಡೆದುಕೊಂಡ. ಅವನ ಅಭಿರುಚಿ ಹೀನ ನಡವಳಿಕೆಯ ಒಂದೊಂದು ಸಂಗತಿಯನ್ನೂ ಬಹಳ ಸಂತೋಷದಿಂದ ಗಮನಿಸುತ್ತಾ ಇದ್ದೆ. ತಾನೆಷ್ಟು ನೀಚ ಎಂದು ತೋರಿಸಿಕೊಳ್ಳುತ್ತಾ ಇದ್ದ. ಅವಳೇ ಹೇಳಿದ ಹಾಗೆ ಇವನ ಮಟ್ಟಕ್ಕೆ ಅವಳು ಎಂದೂ ಇಳಿಯಲಾರಳು, ಇಂಥವನ ಬಗ್ಗೆ ಮೋಹ ಹುಟ್ಟಿಸಿಕೊಳ್ಳಲಾರಳು ಎಂದು ನನ್ನ ಮನಸ್ಸಿಗೆ ಸಮಾಧಾನವಾಗುತ್ತಾ ಇತ್ತು. ಅಸೂಯೆ ತಲೆ ಎತ್ತಲು ಬಿಡಲಿಲ್ಲ. ಮೊದಲನೆಯದಾಗಿ ಹಿಂಸೆ ಅನುಭವಿಸಿ ಅನುಭವಿಸಿ ಸುಸ್ತಾಗಿತ್ತು. ನನ್ನ ಮನಸ್ಸಿಗೆ ರೆಸ್ಟು ಬೇಕಾಗಿತ್ತು. ಮತ್ತೆ ನನ್ನ ಹೆಂಡತಿ ಹೇಳಿದ ಮಾತುಗಳನ್ನು ನಂಬಬೇಕು ಅನ್ನಿಸುತ್ತಿತ್ತು. ನಂಬಿದೆ. ಅಸೂಯೆ ಇರದಿದ್ದರೂ ಅವರಿಬ್ಬರ ಜೊತೆ ಸಹಜವಾಗಿ ಇರಲು ಆಗಲಿಲ್ಲ. ಡಿನ್ನರ್ ಆಗುವಾಗ, ಮತ್ತೆ ಸಾಯಂಕಾಲದ ಮೊದಲರ್ಧ ಹೊತ್ತು ಅವರ ಮೂಮೆಂಟು, ಅವರ ನೋಟ ಇವನ್ನೇ ಗಮನಿಸುತ್ತಾ ಇದ್ದೆ.
“ಡಿನ್ನರು, ಎಲ್ಲಾ ಡಿನ್ನರುಗಳ ಹಾಗೆಯೇ ಬೋರು ಹೊಡೆಯುತ್ತಾ ಬರೀ ಕೃತಕವಾಗಿತ್ತು. ಸಂಗೀತ ಸ್ವಲ್ಪ ಬೇಗಲೇ ಶುರುವಾಯಿತು. ಅವತ್ತು ಸಾಯಂಕಾಲದ ಒಂದೊಂದು ವಿವರಾನೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿವೆ! ಅವನು ಹೇಗೆ ವಯಲಿನ್ ತಂದ, ಅದರ ಕೇಸಿನ ಬೀಗ ತೆಗೆದ, ಯಾರೋ ಹೆಂಗಸು ಹಾಕಿಕೊಟ್ಟಿದ್ದ ಕಸೂತಿ ಇದ್ದ ಕವರ್ ಹೇಗೆ ತೆಗೆದ, ವಯಲಿನ್ ಹೇಗೆ ಹಿಡಿದುಕೊಂಡ, ಹೇಗೆ ಶ್ರುತಿಮಾಡಿಕೊಂಡ-ನನ್ನ ಹೆಂಡತಿ ಹೇಗೆ ‘ನಾನೇನು ಕೇರ್ ಮಾಡುವುದಿಲ್ಲ’ ಅನ್ನುವ ಮುಖಭಾವವನ್ನು ಸುಳ್ಳು ಸುಳ್ಳೇ ತೋರಿಸುತ್ತಾ ಪಿಯಾನೋ ಎದುರು ಕೂತಳು. ಆ ಭಾವದ ಹಿಂದೆ ಅಂಜಿಕೆ ಇತ್ತು. ಪಿಯಾನೋ ನುಡಿಸುವುದಕ್ಕೆ ತಕ್ಕ ಕೌಶಲ ಇಲ್ಲ ಅನ್ನುವ ಅಂಜಿಕೆ. ಆಮೇಲೆ ಎಂದಿನಂತೆ ಪಿಯಾನೋದ A, ಅದಕ್ಕೆ ಹೊಂದುವಂತೆ ವಯಲಿನ್ನಿನ pizzicato, ಪರಸ್ಪರ ವಾದ್ಯಗಳ ಹೊಂದಾಣಿಕೆ. ಇಬ್ಬರ ನೋಟ ಸೇರಿದವು. ಇಬ್ಬರೂ ಒಟ್ಟಿಗೆ ಕೂತಿದ್ದ ಜನರತ್ತ ಒಮ್ಮೆ ನೋಡಿದರು. ಮೆಲ್ಲಗೆ ಏನೋ ಹೇಳಿಕೊಂಡರು. ಶರುಮಾಡಿದರು. ಮೊದಲ ಸ್ವರಗಳನ್ನು ಅವನೇ ಎತ್ತಿಕೊಂಡ. ಹೊರಡಿಸುತ್ತಿರುವ ಸ್ವರಗಳನ್ನು ಕೇಳಿಸಿಕೊಳ್ಳುತ್ತಾ ಅವನ ಮುಖ ಗಂಭೀರ, ಕಠಿಣ, ಮೃದು ಆಗುತ್ತಿತ್ತು. ಬಹಳ ಎಚ್ಚರದಿಂದ, ಏಕಾಗ್ರತೆಯಿಂದ, ತಂತಿಗಳನ್ನು ಸ್ಪರ್ಶಿಸುತ್ತಿದ್ದ. ಪಿಯಾನೋ ಅವನ ಸ್ವರಗಳಿಗೆ ಉತ್ತರ ಕೊಟ್ಟಿತು. ಸಂಗೀತ ಶುರುವಾಯಿತು...”
ಪಾಡ್ನಿಶೆವ್ ಮಾತು ನಿಲ್ಲಿಸಿ ಮತ್ತೆ ಮತ್ತೆ ವಿಚಿತ್ರವಾದ ಸದ್ದುಗಳನ್ನು ಹೊರಡಿಸಿದ. ಮಾತಾಡಲು ಯತ್ನಿಸಿ ಆಗದೆ ನಿಲ್ಲಿಸಿದ. ಮತ್ತೆ..
“ಬೆಥೋವೆನ್ನನ ಕ್ರೂಟ್ಸರ್ ಸೊನಾಟಾ ನುಡಿಸಿದರು. ಅದರ ಮೊದಲ ಪ್ರೆಸ್ಟೊ ಗೊತ್ತಾ ನಿಮಗೆ? ಗೊತ್ತಾ? ಓ! ಓ! ಭಯಂಕರ ರಚನೆ ಆ ಸೊನಾಟಾ. ಅದರಲ್ಲೂ ಮೊದಲ ಪ್ರೆಸ್ಟೊ. ಸಂಗೀತವೇ ಭಯಂಕರ! ಏನದು? ತಿಳಿಯುವುದಿಲ್ಲ. ಸಂಗೀತ ಏನದು? ಏನು ಮಾಡುತ್ತದೆ? ಏನೋ ಮಾಡುತ್ತದಲ್ಲ ಯಾಕೆ ಮಾಡುತ್ತದೆ? ಆತ್ಮಕ್ಕೆ ಉನ್ನತಿಯನ್ನು ಕೊಡುತ್ತದೆ ಸಂಗೀತ ಅನ್ನುತ್ತಾರೆ. ನಾನ್‌ಸೆನ್ಸ್. ಸುಳ್ಳು. ಸಂಗೀತದ ಎಫೆಕ್ಟ್ ಇದೆ. ಆದರೆ, ನನ್ನ ಮಟ್ಟಿಗೆ ಹೇಳುವುದಾದರೆ, ಮನಸ್ಸನ್ನು ಉನ್ನತ ಮಾಡುತ್ತದೆ ಅನ್ನುವುದೆಲ್ಲ ಸುಳ್ಳು. ಮನಸ್ಸನ್ನು ಹಿಗ್ಗಿಸುವುದೂ ಇಲ್ಲ, ಕುಗ್ಗಿಸುವುದೂ ಇಲ್ಲ. ತಳಮಳ ಹುಟ್ಟಿಸುತ್ತದೆ, ಉದ್ರೇಕ ಹುಟ್ಟಿಸುತ್ತದೆ. ಹೇಗೆ ಹೇಳಲಿ? ನನ್ನನ್ನೇ ನಾನು ಮರೆಯುವ ಹಾಗೆ ಮಾಡುತ್ತದೆ ಸಂಗೀತ. ನನ್ನ ನಿಜವಾದ ಪರಿಸ್ಥಿತಿಯನ್ನು ಮರೆಯುವ ಹಾಗೆ. ನನ್ನದಲ್ಲದ ಯಾವುದೋ ಬೇರೆ ಸ್ಥಿತಿಗೆ ಹೋಗಿಬಿಡುವ ಹಾಗೆ ಮಾಡುತ್ತದೆ. ಸಂಗೀತದ ಇನ್ಫ್ಲುಯೆನ್ಸಿಗೆ ಸಿಕ್ಕಿಬಿದ್ದು ನನಗೆ ಅರ್ಥವಾಗದೆ ಇರುವುದೆಲ್ಲ ಅರ್ಥವಾಗುತ್ತದೆ, ಅನ್ನಿಸದೆ ಇರುವುದೆಲ್ಲ ಅನ್ನಿಸುತ್ತದೆ, ಮಾಡಲು ಆಗದೆ ಇರುವುದನ್ನೆಲ್ಲ ಮಾಡಬಹುದು ಅನ್ನಿಸುತ್ತದೆ. ಸಂಗೀತ ಆಕಳಿಕೆಯ ಹಾಗೆ, ನಗುವಿನ ಹಾಗೆ. ನಿದ್ದೆ ಬಂದಿರದಿದ್ದರೂ ಬೇರೆಯವರು ಆಕಳಿಸಿದಾಗ ನಾನೂ ಆಕಳಿಸುತ್ತೇನೆ. ಬೇರೆಯವರು ನಗುತ್ತಿರುವಾಗ ನನಗೆ ನಗು ಬಾರದಿದ್ದರೂ ನಗುತ್ತೇನೆ. ಸಂಗೀತವನ್ನು ರಚಿಸಿದವನು ಹಾಗೆ ರಚಿಸುವಾಗ ಯಾವ ಮೂಡಿನಲ್ಲಿದ್ದನೋ ಆ ಮೂಡಿಗೆ ನಾನೂ ತಟ್ಟನೆ ಹೋಗಿಬಿಡುತ್ತೇನೆ. ನನ್ನ ಮನಸ್ಸು ಅವನ ಮನಸ್ಸಿನೊಡನೆ ಬೆರೆತು ಅವನಲ್ಲಿ ಮೂಡಿದ್ದ ಭಾವನೆಗಳೆಲ್ಲಾ ನನ್ನಲ್ಲೂ ಮೂಡುತ್ತವೆ. ಯಾಕೆ ಹೀಗೆ ಆಗುತ್ತದೋ ಗೊತ್ತಿಲ್ಲ. ಸಂಗೀತ ರಚಿಸಿದವನು, ಕ್ರೂಟ್ಸರ್ ಸೊನಾಟಾ ಬರೆದ ಬೆಥೊವೆನ್ ಅಂತಲೇ ಇಟ್ಟುಕೊಳ್ಳೋಣ, ಅವನಿಗೆ ಗೊತ್ತಿತ್ತು ತಾನು ಎಂಥಾ ಸ್ಥಿತಿಯಲ್ಲಿದ್ದೇನೆ ಅಂತ. ಆ ಸ್ಥಿತಿಯ ಕಾರಣದಿಂದಲೇ ಅವನು ಏನೇನು ಮಾಡಿದನೋ ಅದನ್ನೆಲ್ಲ ಮಾಡಿದ, ಅದಕ್ಕೆಲ್ಲ ಅರ್ಥ ಇತ್ತು, ಕಾರಣ ಇತ್ತು. ಆದರೆ ಕೇಳುತ್ತಿರುವ ನನಗೆ ಆ ಪರಿಸ್ಥಿತಿಯೂ ಇಲ್ಲ, ಅರ್ಥವೂ ಇಲ್ಲ. ಸಂಗೀತ ಸುಮ್ಮನೆ ಕೆರಳಿಸುತ್ತದೆ, ಕೆರಳಿದ್ದಕ್ಕೆ ಯಾವ ಫಲವೂ ಇಲ್ಲ. ಸೈನಿಕರ ಕವಾಯತಿಗೆ ಸಂಗೀತ ನುಡಿಸುತ್ತಾರೆ, ಸೈನಿಕರು ಕವಾಯತು ಮಾಡುತ್ತಾರೆ, ಸಂಗೀತದ ಉದ್ದೇಶ ಈಡೇರಿತು. ಕುಣಿತಕ್ಕೆ ತಕ್ಕ ಸಂಗೀತ ನುಡಿಸುತ್ತಾರೆ, ಜನ ಕುಣಿಯುತ್ತಾರೆ, ಸಂಗೀತದ ಆ ಉದ್ದೇಶ ಈಡೇರಿತು. ಪ್ರಾರ್ಥನೆ ಹಾಡುತ್ತಾರೆ, ನನ್ನ ಮನಸ್ಸಿನಲ್ಲಿ ಭಕ್ತಿ ತುಂಬುತ್ತದೆ, ತೀರ್ಥ ತೆಗೆದುಕೊಳ್ಳುತ್ತೇನೆ, ಸಂಗೀತದ ಆ ಉದ್ದೇಶ ಈಡೇರಿತು. ಸುಮ್ಮನೆ ಕೇಳುವ ಸಂಗೀತ ಕೆರಳಿಸುತ್ತದೆ, ಶಮನದ ದಾರಿ ಕಾಣುವುದಿಲ್ಲ. ಅದಕ್ಕೇ ಸಂಗೀತ ಭಯಂಕರ ಅನ್ನಿಸುತ್ತದೆ. ಚೀನಾದಲ್ಲಿ ಸಂಗೀತವು ಪ್ರಭುತ್ವದ ಅಧಿಕಾರಕ್ಕೆ ಒಳಪಟ್ಟಿದೆಯಂತೆ. ಇರಬೇಕಾದದ್ದೇ ಹಾಗೆ. ಯಾರಾದರೂ ಸರಿ, ಇನ್ನೊಬ್ಬರ ಮನಸ್ಸನ್ನು ವಶಮಾಡಿಕೊಂಡು ತನಗೆ ಬೇಕಾದಹಾಗೆ ಕೆರಳಿಸುವುದಕ್ಕೆ ಯಾವ ಅಧಿಕಾರ ಇದೆ ಹೇಳಿ? ಅದರಲ್ಲೂ ಸಂಗೀತಗಾರ ಅತ್ಯಂತ ಅನೈತಿಕವಾದ ಮನುಷ್ಯನಾಗಿರುವಾಗ?
“ಬಳಸುವವರ ಕೈಗೆ ಸಿಕ್ಕರೆ ಎಂಥಾ ಭಯಂಕರ ಆಯುಧ! ಕ್ರೂಟ್ಸರ್ ಸೊನಾಟಾನೇ ನೋಡಿ. ಅದರ ಮೊದಲ ಮೂವ್‌ಮೆಂಟನ್ನು ಲೋ ನೆಕ್ ಬ್ಲೌಸು ತೊಟ್ಟ ಹೆಂಗಸರು ಇರುವ ಡ್ರಾಯಿಂಗ್‌ರೂಮಿನಲ್ಲಿ ಹೇಗೆ ತಾನೇ ನುಡಿಸಲು ಸಾಧ್ಯ? ನುಡಿಸಿ, ಜನ ಚಪ್ಪಾಳೆ ತಟ್ಟಿ ಒಂದಿಷ್ಟು, ಐಸು ತಿನ್ನುತ್ತಾ ಹರಟೆಹೊಡೆಯುವುದು? ಅಂಥಾ ರಚನೆಗಳನ್ನು ಬಹಳ ಮಹತ್ವದ ಸಂದರ್ಭಗಳಲ್ಲಿ, ಸಂಗೀತಕ್ಕೆ ತಕ್ಕ ಅರ್ಥಪೂರ್ಣ ವಾತಾವರಣ ಇರುವಲ್ಲಿ ಮಾತ್ರವೇ ನುಡಿಸಬೇಕು. ಹಾಗೆ ಅದನ್ನು ನುಡಿಸಬೇಕು, ಸಂಗೀತನ ನಿಮ್ಮಲ್ಲಿ ಯಾವ ಭಾವನೆ ಹುಟ್ಟಿಸಿದೆಯೋ ಅದನ್ನು ಕಾರ್ಯರೂಪಕ್ಕೆ ತರಬೇಕು. ಇಲ್ಲದಿದ್ದರೆ ವ್ಯಕ್ತಮಾಡಲು ಆಗದ ಭಾವನೆಗಳು, ಕಾಲ ದೇಶಕ್ಕೆ ಹೊಂದದ, ಬಳಸಿಕೊಳ್ಳಲಾಗದ ಉತ್ಸಾಹಗಳು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ನನ್ನ ಮೇಲಂತೂ ಮನಸ್ಸನ್ನೆಲ್ಲ ಛಿದ್ರಮಾಡುವಂಥ ಪರಿಣಾಮ ಆಯಿತು ಆ ಹಾಡಿನಿಂದ. ನನ್ನಲ್ಲಿ ಇದೆ ಎಂದು ಅದುವರೆಗೂ ನಿಜವಾಗಿ ಗೊತ್ತೇ ಇರದಿದ್ದ ಹೊಸ ಭಾವನೆಗಳು, ಹೊಸ ಸಾಧ್ಯತೆಗಳು ಕಾಣಿಸಿಕೊಂಡವು. ‘ಎಲ್ಲವೂ ನೀನು ಅಂದುಕೊಂಡ ಹಾಗೆ ಇಲ್ಲ, ಹೀಗೆ ಇದೆ ನೋಡು’ ಎಂದು ತೋರಿಸಿದಂತಾಯಿತು. ಈ ಹೊಸ ಸ್ಥಿತಿ ನನ್ನ ಮನಸ್ಸಿನಲ್ಲಿ ಆನಂದ ತುಂಬಿತ್ತು. ಎಲ್ಲರೂ ಅದೇ ಹಳಬರೇ, ಆದರೂ ಅವರೆಲ್ಲ, ನನ್ನ ಹೆಂಡತಿ ಮತ್ತು ಅವನು ಕೂಡ ಹೊಸ ಬೆಳಕಿನಲ್ಲಿ ಕಂಡರು.
“ಆಮೇಲೆ ಸುಂದರವಾದ, ಆದರೆ ಸಾಮಾನ್ಯವಾದ, ಒಂದಿಷ್ಟೂ ಒರಿಜಿನಲ್ ಅಲ್ಲದ andante ಯನ್ನು ನುಡಿಸಿ ತುಂಬ ವೀಕ್‌ ಆಗಿ ಮುಗಿಸಿದರು. ಆಮೇಲೆ ಕೇಳುಗರ ಒತ್ತಾಯಕ್ಕೆ Ernst ನ Elegy ಮತ್ತು ಒಂದೆರಡು ಚಿಕ್ಕ ತುಂಡು ಹಾಡುಗಳನ್ನು ನುಡಿಸಿದರು. ಚೆನ್ನಾಗಿದ್ದವು, ಆದರೆ ಕ್ರೂಟ್ಸರ್ ಸೊನಾಟಾದ ಹಿನ್ನೆಲೆಯಲ್ಲಿ ಕೇಳಿದ್ದರಿಂದ ಅದು ಮಾಡಿದ ಪರಿಣಾಮದಲ್ಲಿ ನೂರರಲ್ಲಿ ಒಂದು ಭಾಗದಷ್ಟು ಪರಿಣಾಮವೂ ನನ್ನ ಮೇಲೆ ಆಗಲಿಲ್ಲ. ಇಡೀ ಸಂಜೆ ಅವತ್ತು ನನ್ನ ಮನಸ್ಸು ಲಘುವಾಗಿತ್ತು. ಅವತ್ತು ಕಂಡ ಹಾಗೆ ನನ್ನ ಹೆಂಡತಿ ಎಂದೂ ಕಂಡಿರಲಿಲ್ಲ. ಅವಳ ಕಣ್ಣಿನ ಹೊಳಪು, ಪಿಯಾನೊ ನುಡಿಸುವಾಗ ಮುಖದಲ್ಲಿದ್ದ ಗಾಂಭೀರ್ಯ, ಮುಗಿಸಿದಾಗ ಮುಖವೆಲ್ಲ ಸಡಿಲವಾಗಿ ತೆಳ್ಳಗೆ ಹರಡಿಕೊಂಡ, ಆನಂದ ತುಂಬಿದ ಆದರೆ ಅಯ್ಯೋ ಅಂತ ಕೂಡ ಅನಿಸುವ ಹಾಗೆ ಮಾಡುವ ನಗು..ನನಗೆ ಆದ ಹಾಗೇ ಅವಳ ಮನಸ್ಸೂ ಲಘುವಾಗಿದೆ, ಅವಳಿಗೇ ಗೊತ್ತಿರದಿದ್ದ ಭಾವನೆಗಳು ಮನಸ್ಸಿನ ಆಳದಿಂದ ಎದ್ದು ಬಂದಿವೆ ಹಳೆಯ ನೆನಪುಗಳ ಹಾಗೆ ಎಂದುಕೊಂಡೆ. ಸಂಜೆ ಕಳೆಯಿತು. ಅತಿಥಿಗಳೆಲ್ಲ ಹೋದರು.
“ಇನ್ನೆರಡು ದಿನಕ್ಕೆ ನಾನು ಝ್ಮೆಸ್ಟೊವೊದಲ್ಲಿ ನಡೆಯುವ ಮೀಟಿಂಗಿಗೆ ಹೋಗುತ್ತೇನೆ ಎಂದು ಗೊತ್ತಿದ್ದಿದ್ದರಿಂದ ಟ್ರುಕಾಚೆವ್ಸ್‌ಕಿ ‘ಇವತ್ತಿನ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ನಾನು ಮತ್ತೆ ಮಾಸ್ಕೊಗೆ ಬಂದಾಗ ಇನ್ನೊಂದು ಕಾರ್ಯಕ್ರಮ ಕೊಡಬೇಕು ಅನ್ನಿಸಿದೆ’ ಅಂದ. ಅಂದರೆ ನಾನಿಲ್ಲದಾಗ ಮನೆಗೆ ಬರುವುದಿಲ್ಲ ಅವನು ಅನಿಸಿ ಸಂತೋಷವಾಯಿತು.ಅವನು ಊರು ಬಿಡುವ ಮೊದಲು ನಾನು ವಾಪಸ್ಸು ಬರುವುದು ಸಾಧ್ಯವಿಲ್ಲದ್ದರಿಂದ ನಾವು ಇನ್ನು ಭೇಟಿ ಆಗುವುದು ಸಾಧ್ಯವಿಲ್ಲ ಅನಿಸಿತು.
“ಅದೇ ಮೊಟ್ಟಮೊದಲ ಬಾರಿಗೆ ನಿಜವಾದ ಸಂತೋಷಪಡುತ್ತಾ ಅವನ ಕೈ ಕುಲುಕಿ, ಸಂಗೀತವನ್ನು ಮೆಚ್ಚಿಕೊಂಡೆ. ಹೋಗಿಬರುತ್ತೇನೆ ಎಂದು ಹೆಂಡತಿಗೂ ಹೇಳಿದ. ಇಬ್ಬರೂ ಅತ್ಯಂತ ಸಹಜವಾಗಿ ನಡೆದುಕೊಂಡರು. ಸಂಜೆ ಬಹಳ ಅದ್ಭುತವಾಗಿತ್ತು ಎಂದು ಹೆಂಡತಿಗೂ ನನಗೂ ಖುಷಿ ಆಗಿತ್ತು.”
(ಮುಂದುವರೆಯುವುದು)

Rating
No votes yet