ಕ್ಷೇತ್ರ ಪರ್ಯಟನೆ: ಇಡಗುಂಜಿ, ಮುರ್ಡೇಶ್ವರ

ಕ್ಷೇತ್ರ ಪರ್ಯಟನೆ: ಇಡಗುಂಜಿ, ಮುರ್ಡೇಶ್ವರ

ಮೇ ೧, ೨೦೦೯. ಕಾರ್ಮಿಕ ದಿನಾಚರಣೆ ರಜೆಯನ್ನು ಇಡಗುಂಜಿ ಹಾಗೂ ಮುರ್ಡೇಶ್ವರಕ್ಕೆ ದರ್ಶನಕ್ಕೆ ಮೀಸಲಿಟ್ಟಿದ್ದೆವು. ಅಂತೆಯೆ ಬೆಳಿಗ್ಗೆ ಬೇಗ ಎದ್ದು, ಅಂದಿನ ಕಾರ್ಯಗಳನ್ನು ಮುಗಿಸಿ ಹೊರಡಲು ತಯಾರಾದೆವು. ಈ ಬಾರಿಯ ಕ್ಷೇತ್ರ ಪರ್ಯಟನೆಗೆ ಹೊರಟಿದ್ದು ನಾನು, ತಂದೆ, ತಾಯಿ ಹಾಗೂ ಕಿರಿಯಕ್ಕ. ೬:೩೦ ಸಮಯಕ್ಕೆ ಅಮ್ಮ ಮೊಸರವಲಕ್ಕಿ ಮಾಡಿಕೊಟ್ಟರು. ಗಟ್ಟಿಯಾದ ಹಾಗೂ ದುಬಾರಿಯಲ್ಲದ ಡೈರಿ ಹಾಲಿಗೆ ಹೆಪ್ಪಿಟ್ಟ ಮೊಸರಿನ ರುಚಿಯೇ ಬೇರೆ. ಯಾವುದೇ ಸಂಸ್ಕರಣೆ ಮಾಡದ ಹಾಲದು. ಲೀಟರಿಗೆ ಕೇವಲ ೧೭ ರುಪಾಯಿ. ಹಳ್ಳಿಯವರಿಗೆ ಮಾತ್ರ ಈ ಭಾಗ್ಯ. ಮೊಸರವಲಕ್ಕಿ ಜೊತೆಗೆ ಮನೆಯಲ್ಲಿ ತಯಾರಿಸಿದ ಮಾವಿನ ಮುಡಿಯ ಉಪ್ಪಿನಕಾಯಿ. ಆಹಾ ರುಚಿಯೋ ರುಚಿ. ಬೇಸಿಗೆ ಸಮಯವಾದ್ದರಿಂದ, ಸಿಕ್ಕಾಪಟ್ಟೆ ಬೆವರುವುದರಿಂದ, ದಣಿವಾರಿಸಿಕೊಳ್ಳಲು ೧೦ ಲೀಟರ್ ಬಾವಿ ನೀರನ್ನು ಕೂಡ ಮನೆಯಿಂದ ತೆಗೆದುಕೊಂಡು ಹೋಗಿದ್ದೆವು. ಇದರ ಜೊತೆಗೆ ಕಿರಿಯಕ್ಕ ಹಿಂದಿನ ದಿನವೇ ಕಲ್ಲಂಗಡಿ, ಸೇಬು, ಮರ-ಸೇಬು ಕತ್ತರಿಸಿ ಡಬ್ಬಿಯೊಳಗೆ ಹಾಕಿಟ್ಟಿದ್ದರು. ಇವು ಕೂಡ ಬೇಸಿಗೆಗೆ ಉತ್ತಮ ಟಾನಿಕ್ ಇದ್ದ ಹಾಗೆ. ಹಾಗೆಯೆ ನಮ್ಮ ಮನೆಯ ಮುದ್ದಿನ ಸದಸ್ಯರಾದ ಬೆಕ್ಕುಗಳಿಗೂ ತಟ್ತೆಯಲ್ಲಿ ಬಿಸ್ಕತ್, ಅನ್ನ, ಹಾಲು ಇಟ್ಟು ಹೋಗಿದ್ದೆವು. ಹೊರಡುವ ಮುನ್ನ ಹಲವು ಯೋಚನೆಗಳಿದ್ದವು. ಕೆಲವು ಸೇತುವೆಗಳ ಚಿತ್ರಗಳನ್ನು ಈ ಬಾರಿಯಾದರೂ ತೆಗೆಯಬೇಕೆಂದು ಅಂದುಕೊಂಡಿದ್ದೆ. ಸರಿಯಾಗಿ ೭ ಘಂಟೆಗೆ ಕಾರು ಹೊರಟಿತು. ರಾಹೆ-೧೭ರ ಈಗಲೂ ಆರೋಗ್ಯವಾಗಿದೆ. ಆದರೆ ಉಡುಪಿ-ಕುಂದಾಪುರ ರಸ್ತೆಯಲ್ಲಿ ಆಗಲೇ ಒಂದೆರಡು ಹೊಂಡಗಳು ಬಿದ್ದಿವೆ. ಮಳೆಗಾಲಕ್ಕೆ ಏನಾಗುತ್ತೋ. ಹಾಗೆಯೇ ಮಣ್ಣಿನ ಲಾರಿಗಳು ಕೂಡ ಹೆಚ್ಚಾಗಿದೆ. ಅವುಗಳ ಆರ್ಥಿಕ ಹಿಂಜರಿತ ಈಗ ಹಿಂದೆ ಸರಿದಿರಬಹುದೇನೋ. ಒಟ್ಟಿನಲ್ಲಿ ಉಡುಪಿ-ಕುಂದಾಪುರ ಹೆದ್ದಾರಿಯಲ್ಲಿ ಲಾರಿಗಳನ್ನು(ಮಾರಿಗಳು) ಹಿಮ್ಮೆಟ್ಟುವುದು ಬಹು ದೊಡ್ಡ ಸಾಹಸವೇ ಸರಿ. ಕುಂದಾಪುರ ತಲುಪಿದಾಗ ೮ ಘಂಟೆಯಾಗಿತ್ತು. ಅಲ್ಲಿಯೆ ಒಂದು ಉಪಾಹಾರ ಗೃಹದಲ್ಲಿ ತಿಂಡಿ ತಿಂದೆವು. ಇನ್ನೂ ಬಹಳ ದೂರ ಚಾಲನೆ ನಡೆಸಬೇಕಾದ್ದುದ್ದರಿಂದ ನಾನು ಒಂದು ಚಹಾ ಕೂಡ ಸೇವಿಸಿದೆ. ಮನೆಯಿಂದ ಲೆಕ್ಕ ಹಾಕಿದ ಪ್ರಕಾರ ಇಡಗುಂಜಿಗೆ ಸುಮಾರು ೧೩೦ಕಿ.ಮೀ. ಮೊದಲು ಇಡಗುಂಜಿಗೆ ಹೋಗಿ ನಂತರ ವಾಪಾಸ್ ಬರುವಾಗ ಮುರ್ಡೇಶ್ವರ ಹೋಗುವ ನಿರ್ಧಾರ ಕೈಗೊಂಡಿದ್ದೆವು.

ತಿಂಡಿ ಮುಗಿಸಿ ಕುಂದಾಪುರದಿಂದ ಹೊನಾವರದ ಕಡೆ ಪ್ರಯಾಣ ಬೆಳೆಸಿದೆವು. ಈ ರಸ್ತೆಯಲ್ಲಿ ವಾಹನ ದಟ್ಟಣೆ ಅಷ್ಟಾಗಿ ಇರಲಿಲ್ಲ. ಹಾಗೆಯೇ ನೇರ ರಸ್ತೆಗಳೇ ಹೆಚ್ಚಿದ್ದವು. ಆದ್ದರಿಂದ ತುಂಬಾ ಏನೂ ತೊಂದರೆ ಬರಲಿಲ್ಲ. ಕಡಿಮೆ ದಟ್ಟಣೆಯ ಪರಿಣಾಮವೇನೋ ರಸ್ತೆಗಳು ಸುಸ್ಥಿತಿಯಲ್ಲಿದ್ದವು. ೧೦ ಕಿ.ಮೀ ನಂತರ ಕಂಡಿದ್ದು ಮರವಂತೆ ಸಮುದ್ರ ತೀರ. ಇಂತಹ ಸಮುದ್ರ ತೀರ ಎಲ್ಲೂ ಸಿಗಲಿಕ್ಕಿಲ್ಲ. ಪೂರ್ವಕ್ಕೆ ಸೌಪರ್ಣಿಕಾ ನದಿ, ಮಧ್ಯೆ ರಾಹೆ-೧೭ ಹಾಗೂ ಪಶ್ಚಿಮಕ್ಕೆ ಅರಬ್ಬೀ ಸಮುದ್ರ ತೀರ (ಮೊದಲನೆಯ ಚಿತ್ರ). ಎಷ್ಟೊಂದು ಸುಂದರ, ಮಳೆಗಾಲದಲ್ಲಿ ಅಷ್ಟೇ ಭೀಕರ. ಮಳೆಗಾಲದಲ್ಲಿ ಇದರ ಅಬ್ಬರ ಅಲ್ಲಿನ ನಿವಾಸಿಗಳಿಗೇ ಗೊತ್ತು. ಸಮುದ್ರ ತೀರಕ್ಕೆ ಇಳಿಯಲು ಮನಸ್ಸಾಗಲಿಲ್ಲ. ಮೈಸೂರಿನವರಿಗೆ ಅರಮನೆ ಎಷ್ಟು ಮಾಮೂಲೋ ಅಷ್ಟೇ ಕರಾವಳಿಯವರಿಗೆ ಸಮುದ್ರ. ಸಮುದ್ರದಲ್ಲಿ ನಾಯಿಗಳು ಆಟವಾಡುತ್ತಿದ್ದವು. ಸಂಜೆ ಮನುಷ್ಯರಿಗಾದರೆ ಬೆಳಗ್ಗೆ ಇವುಗಳಿಗೇನೋ. ಕೆಲವು ಚಿತ್ರಗಳು ಬೆಳಿಗ್ಗೆ ಹೋಗುವಾಗ ತೆಗೆದರೆ ಕೆಲವು ಸಂಜೆ ವಾಪಾಸ್ ಬಂದಾಗ ತೆಗೆದಿದ್ದು.

ಪೂರ್ವಕ್ಕೆ ಸೌಪರ್ಣಿಕಾ ನದಿ ಮಧ್ಯೆ ರಾಹೆ-೧೭ ಪಶ್ಚಿಮಕ್ಕೆ ಅರಬ್ಬೀ ಸಮುದ್ರ. ಇದು ಮರವಂತೆ ಸಮುದ್ರ ತೀರ (ಮೊದಲನೆಯ ಚಿತ್ರ ಕೂಡ ಅಲ್ಲಿಯದೆ)

ಸೌಪರ್ಣಿಕಾ ನದಿ

ಸೌಪರ್ಣಿಕಾ ನದಿ ಸಂಜೆಯ ನೋಟ

ಕೆಲವು ನೆನಪುಗಳು:
ಮರವಂತೆ ಸಮುದ್ರ ತೀರವನ್ನು ಬೇಸಿಗೆಯಲ್ಲಿ ಬಹಳಷ್ಟು ಮಂದಿ ಭೇಟಿ ನೀಡಿರಬಹುದು. ಮಳೆಗಾಲದಲ್ಲಿ ಭೇಟಿ ನೀಡಿದ್ದೀರಾ? ಕಡಲ ಕೊರೆತ ತಡೆಯಲು ತಡೆಗೋಡೆ, ಮಣ್ಣಿನ ಚೀಲ ಹೀಗೆ ಎಷ್ಟು ಖರ್ಚು ಮಾಡಿದರೂ ಪ್ರಕೃತಿಯನ್ನು ಮಾತ್ರ ಮೀರುವುದಕ್ಕೆ ಸಾಧ್ಯವಾಗಲಿಲ್ಲ. ಒಮ್ಮೆ ಸರ್ಕಾರದವರು ರೆಸಾರ್ಟ್ ಮುಂತಾದ ವ್ಯವಸ್ಥೆಯನ್ನು ಮಾಡಿದರೂ ಮುಂದಿನ ಮಳೆಗಾಲದಲ್ಲಿ ಸಮುದ್ರರಾಜ ಎಲ್ಲವನ್ನೂ ನುಂಗಿಹಾಕಿದ. ಇಲ್ಲಿ ಪಕ್ಕದಲ್ಲಿ ಒತ್ತಿನೆಣೆಯಲ್ಲಿ ಹೆಲಿ-ಟೂರಿಸಂ ಯೋಚನೆ ಇದೆ ಅದರ ಜೊತೆಗೆ ಗಾಲ್ಫ್ ಕೋರ್ಸ್ ಬೇರೆ. ಏನೆಲ್ಲ ಇದೆ ದುಡ್ದು ಇರುವವರಿಗೆ. ಮತ್ತೆ ಮಳೆಗಾಲಕ್ಕೆ ಬರುವ. ಸಿಕ್ಕಾಪಟ್ಟೆ ಮಳೆ ಸುರಿದಾಗ ನದಿ, ಹೆದ್ದಾರಿ ಮತ್ತು ಸಮುದ್ರದ ಸಂಗವಾಗುತ್ತದೆ. ರಾಹೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಕಿಲೋಮೀಟರ್ಗಟ್ಟಲೆ ವಾಹನಗಳು ನಿಂತಿರುತ್ತದೆ. ಈ ದೃಶ್ಯ ಬಹಳ ವಿರಳ. ಅಂತಹ ಮಳೆ ಬರಬೇಕು. ಸಣ್ಣವರಿರುವಾಗ ಪತ್ರಿಕೆಗಳಲ್ಲಿ ಇದರ ಬಗ್ಗೆ ಅನೇಕ ವಾರ್ತೆ ಕೇಳುತ್ತಿದ್ದೆವು. ಈಗ ಅಂತ ಮಳೆ ಬರುವ ಕಾಲವಲ್ಲ. ೨೦೦೩ ಅಥವಾ ೨೦೦೪ ರಲ್ಲಿ ಕರಾವಳಿ ತೀರದಲ್ಲಿ (ಮಂಗಳೂರಿನಿಂದ ಕಾರವಾರದವರೆಗೆ) ಮುಸಲಧಾರೆ ಮಳೆಯಾದಾಗ ಇಂತಹ ಸಂಗಮದ ಬಗ್ಗೆ ಓದಿದ ನೆನಪು.

ಮರವಂತೆ ಸಮುದ್ರ ತೀರ ನೋಡಿದ ನಂತರ ನಾವು ಭಟ್ಕಳದ ಕಡೆಗೆ ಪ್ರಯಾಣ ಬೆಳೆಸಿದೆವು. ಅಬ್ಬಬ್ಬಾ ಎಷ್ಟು ಸುಂದರವಾದ ಜಿಲ್ಲೆ ಉತ್ತರಕನ್ನಡ. ಬಹುಶಃ ಕರ್ನಾಟಕದಲ್ಲೇ ಅತೀ ಸುಂದರ ಜಿಲ್ಲೆ ಎಂದರೆ ಸುಳ್ಳಾಗದು. ನಗರೀಕರಣ, ಕೈಗಾರಿಕರಣದಿಂದಾಗಿ ದಕ್ಷಿಣ-ಕನ್ನಡ, ಉಡುಪಿ ಜಿಲ್ಲೆಗಳು ಸೊಬಗನ್ನು ಕಳೆದುಕೊಳ್ಳುತ್ತಿದ್ದರೆ ಉತ್ತರ-ಕನ್ನಡ ಜಿಲ್ಲೆ ತನ್ನ ಸೌಂದರ್ಯವನ್ನು ಹಾಗೆ ಉಳಿಸಿಕೊಂಡಿದೆ. ದಾರಿಯುದ್ದಕ್ಕೂ ಬೆಟ್ಟಗಳ ಸಾಲುಗಳು ನೋಡುಗರನ್ನು ಆಕರ್ಷಿಸುತ್ತದೆ. ಬೆಟ್ಟದ ತಪ್ಪಲಿನಲ್ಲಿ ಕಂಡ ಕೊಂಕಣ ರೈಲಿನ ಹಳಿಗಳು ಅದ್ಭುತವಾಗಿದ್ದವು. ಹಲವು ಕಡೆ ಒಂದು ಬದಿ ಸಮುದ್ರ ಮತ್ತೊಂದು ಬದಿ ಪಶ್ಚಿಮ ಘಟ್ಟಗಳ ಸಾಲು ಕಾಣಿಸುತ್ತದೆ. ಸಮುದ್ರ ಮತ್ತು ಪಶ್ಚಿಮ ಘಟ್ಟಗಳು ಬಹಳ ಸನಿಹವಿರುವುದರಿಂದಲೇ ಭಟ್ಕಳ-ಹೊನ್ನಾವರ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ಮಳೆ ೫೦೦-೬೦೦ ಸೆಂ.ಮೀಟರಿನಷ್ಟು ಇರಬೇಕು. ಹೆಚ್ಚಾಗಿ ನೇರ ರಸ್ತೆಗಳೆ ಇದ್ದವು. ಒಂದೆರಡು ಕಡೆ ಗುಡ್ಡಗಾಡಿನ ರಸ್ತೆಗಳು. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಹೋಗಿವುದು ಒಂದು ವಿಶೇಷ ಅನುಭವ. ಮಳೆಗೆ ಹೆದರಿ ಹಲವು ಮಂದಿ ಈ ಕಡೆ ಬರುವುದಿಲ್ಲ. ಆದರೆ ಹವ್ಯಾಸಿ ಪ್ರಯಾಣಿಕರು ಮಂಗಳೂರಿನಿಂದ-ವೆರ್ನಾಕ್ಕೆ ಹೋಗುವ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಾರೆ. ದಾರಿಯುದ್ದಕ್ಕೂ ಸಿಗುವ ಸೇತುವೆಗಳು, ಭತ್ತದ ಗದ್ದೆಗಳು, ಅಡಿಕೆ-ತೆಂಗಿನ ತೋಟ, ಮೈದುಂಬಿ ಹರಿಯುವ ನದಿಗಳು, ಹಸಿರಿನಿಂದ ಆವರಿಸಿದ ಬೆಟ್ಟಗುಡ್ಡಗಳು ಮೈಮನ ಸೆಳೆಯುತ್ತದೆ. ಭಟ್ಕಳಕ್ಕೆ ಹೋಗುವಾಗ ತೆಗೆದ ಕೆಲವು ಚಿತ್ರಗಳು

ರಾಷ್ಟ್ರೀಯ ಹೆದ್ದಾರಿ-೧೭

ಹೊಳೆ

ಭಟ್ಕಳ ನಂತರ ಸಿಕ್ಕ ಊರು ಮಂಕಿ. ಇಲ್ಲಿಂದ ಇಡಗುಂಜಿಗೆ ಸುಮಾರು ೮ಕಿ.ಮೀ. ನಾಲ್ಕು ಕಿ.ಮೀ ಹೆದ್ದಾರಿ, ನಂತರದ ನಾಲ್ಕು ಕಿ.ಮೀ ಒಳಹಾದಿ. ಹೆದ್ದಾರಿಯಲ್ಲಿ ಇಡಗುಂಜಿ ಅಂತ ನಾಮಫಲಕ ದೆ. ಆದರೆ ಸರಿ ಕಾಣಿಸುವುದಿಲ್ಲ. ದೇವಸ್ಥಾನದ ಸ್ವಾಗತ ಗೋಪುರ ಕಾಣಿಸುತ್ತದೆ. ಸ್ವಾಗತ ಗೋಪುರ ಬಳಿ ಕೊಂಕಣ-ರೈಲಿನ ಟನೆಲ್ ಇದೆ (ಭಟ್ಕಳದ ಬಳಿ ೨ಕಿ.ಮೀ ಉದ್ದದ ಟನೆಲ್ ಸಿಗುತ್ತದೆಯಂತೆ) ನಂತರ ಅರಣ್ಯ ಇಲಾಖೆಯ ಕಚೇರಿ ಇದೆ. ಇಡಗುಂಜಿ ಕ್ಷೇತ್ರ ಆಳವಾದ ಪ್ರದೇಶದಲ್ಲಿದೆ. ಬೆಟ್ಟವನ್ನು ಇಳಿದು ಹೋಗಬೇಕು. ಇದರಿಂದಾಗಿ ಇಲ್ಲಿ ಯಾವುದೇ ಮೊಬೈಲ್ ಸಂಪರ್ಕ ಸಿಗುವುದಿಲ್ಲ. ಅಂಕು-ಡೊಂಕಾದ ರಸ್ತೆ. ಮಧ್ಯೆ ಒಂದು ೧೫ಡಿಗ್ರಿ ತಿರುವು ಕೂಡ ಸಿಗುತ್ತದೆ. ವಾಹನವನ್ನು ಸಂಪೂರ್ಣ ನಿಧಾನವಾಗಿ ಚಲಾಯಿಸಬೇಕಾಗುತ್ತದೆ. ಅಂತು ಇಂತೂ ೧೦:೧೫ಕ್ಕೆ ಇಡಗುಂಜಿ ಸೇರಿದೆವು. ಕಾರು ಪಾರ್ಕಿಂಗ್ ಮೇಲುಗಡೆ ಇದೆ. ಇಳಿಜಾರನ್ನು ದಾಟಿ ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನದ ಬಳಿ ವಾಹನ ಪೂಜೆ ಅಥವಾ ವಯಸ್ಸಾದವರಿದ್ದರೆ ಮಾತ್ರ ವಾಹನವನ್ನು ಕೊಂಡೊಯ್ಯಲು ಬಿಡುತ್ತಾರೆ. ಇಲ್ಲವಾದಲ್ಲಿ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಬೇಕು. ಯಾವುದೇ ಪಾರ್ಕಿಂಗ್ ಶುಲ್ಕ ಇಲ್ಲ. ತುಂಬಾ ಪ್ರಸಿದ್ಧಿ ಪಡೆದ ಕ್ಷೇತ್ರ ಇಡಗುಂಜಿ. ಸಂಕಷ್ಟಹರ ಚತುರ್ಥಿಯಂದು, ಚೌತಿಯಂದು ದೇವಸ್ಥಾನದಿಂದ ಸುಮಾರು ೨ಕಿ.ಮೀ ಹಿಂದೆಯೇ ಪಾರ್ಕಿಂಗ್ ಮಾಡಬೇಕಂತೆ. ಇಡಗುಂಜಿಯ ಮೊದಲ ನೋಟ ಇಲ್ಲಿದೆ.

ಇಡಗುಂಜಿ ದೇವಸ್ಥಾನದ ಸ್ವಾಗತ ಗೋಪುರ

ಮಂಕಿ ಟನೆಲ್. ಬಹುಶಃ ರೋಹಾದಿಂದ ಕೊಂಕಣ ರೈಲಿನ ಮೈಲಿಗಲ್ಲು ಪ್ರಾರಂಭವಾಗಿ ಮಂಗಳೂರಿನಲ್ಲಿ ಅಂತ್ಯವಾಗುತ್ತದೆ. ಈ ಚಿತ್ರದ ಒರಿಜಿನಲ್ ಆವೃತ್ತಿ ನೋಡಿದಾಗ ಇದರ ಉದ್ದ ಒಂದು ಕಿ.ಮೀ ಇರಬೇಕು

ಇಡಗುಂಜಿ ದೇವಸ್ಥಾನದ ಬಳಿಯ ಬೆಟ್ಟ

ದೇವಸ್ಥಾನದ ಕೆರೆ ಅದರ ಮಧ್ಯೆ ಸಣ್ಣ ಬಾವಿ

ದೇವಸ್ಥಾನ

ಮೂರು ದಿನ ರಜೆ ಇದ್ದರಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿದ್ದರು. ದೇವಸ್ಥಾನದಲ್ಲಿ ಮೊದಲು ಹೋದ ಜಾಗ ಅಲ್ಲಿನ ಕೆರೆ. ಸಣ್ಣ ಕೆರೆ ಅದರ ಮಧ್ಯೆ ಸಣ್ಣ ವಿಸ್ತೀರ್ಣದ ಬಾವಿ. ಮುಂಭಾಗದಲ್ಲಿ ವಾಲಖಿಲ್ಯ ಎಂಬ ಪಾಠಶಾಲೆಯಿದೆ. ಹಿಂದೆ ವಾಲಖಿಲ್ಯ ಮುನಿಯ ಪ್ರಯತ್ನದಿಂದಾಗಿ ಇಲ್ಲಿ ಗಣಪ ನೆಲೆಸಿದ್ದು ಎಂಬ ಪುರಾಣ ಇದೆ. ಬಲಭಾಗದಲ್ಲಿ ಯಜ್ಞಶಾಲೆಯಿದೆ. ನಾವು ಅಲ್ಲಿಗೆ ಹೋಗುವಾಗ ಗಣಪನಿಗೆ ಅಭಿಷೇಕವಾಗುತ್ತಿತ್ತು. ಹೂವಿನ ಪೂಜೆಯನ್ನು ಮಾಡಿಸಿದೆವು. ಇಲ್ಲಿನ ದರ್ಶನದ ಸಮಯ: ಬೆಳಿಗ್ಗೆ ೮ರಿಂದ ರಾತ್ರಿ೮. ಮಧ್ಯಾಹ್ನ೧ ರಿಂದ ೩ ಘಂಟೆಯವರೆಗೆ ದೇವಸ್ಥಾನ ಮುಚ್ಚಿರುತ್ತದೆ. ಮಧ್ಯಾಹ್ನ ೧೨:೩೦ವರೆಗೆ ಮಧ್ಯಾಹ್ನದ ಮಹಾಪೂಜೆ ಜರುಗುತ್ತದೆ. ಪ್ರಸಾದ ಮಹಾಪೂಜೆಯ ನಂತರ ದೊರಕುವುದರಿಂದ ಸ್ವಲ್ಪ ಸುತ್ತಾಡಲು ಹೊರಟೆವು. ನಮ್ಮ ಕೈಯಲ್ಲಿ ಬಾಳೆಹಣ್ಣಿನ ಕಟ್ಟು ಕಂಡು ಆಕಳುಗಳು ದಾಳಿಯಿಟ್ಟವು. ಏನು ಮಾಡಿದರೂ ಅವುಗಳು ಪಟ್ಟು ಸರಿಸಲಿಲ್ಲ. ಕೊನೆಗೆ ಒಂದು ಡಜನ್ ಬಾಳೆಹಣ್ಣು ಆಕಳಿನ ಪಾಲಾಯಿತು. ಎಲ್ಲಾ ಖಾಲಿಯಾದ ನಂತರವೇ ನಮಗೆ ಮುಕ್ತಿ ಸಿಕ್ಕಿದ್ದು. ಮಹಾಪೂಜೆಯ ಸಮಯಕ್ಕೆ ಮತ್ತೆ ದೇವಳಕ್ಕೆ ಬಂದೆವು. ಗಣಪನಿಗೆ ನಾಮ, ಹೂವು, ಬೆಳ್ಳಿಯ ಕಡಗವನ್ನು ಹಾಕಿ ಅಲಂಕಾರ ಮಾಡಿದ್ದರು. ಇಲ್ಲಿರುವುದು ನಿಂತಿರುವ ಗಣಪತಿ ವಿಗ್ರಹ. ಇಲ್ಲಿನ ವಿಗ್ರಹವು ಕಪ್ಪು ಕಲ್ಲಿನಿಂದ ನಿರ್ಮಿತವಾದದ್ದು, ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ಎಡಗೈಯಲ್ಲಿ ಮೋದಕ, ಬಲಗೈಯಲ್ಲಿ ಪದ್ಮ ಹಿಡಿದ ವಿಶಿಷ್ಟ ವಿಗ್ರಹ. ಇಲ್ಲಿನ ಅರ್ಚಕರು ತಾಳ್ಮೆಯಿಂದ, ಶ್ರದ್ಧಾಪೂರ್ವಕವಾಗಿ ಎಲ್ಲರ ಸೇವೆ ನಡೆಸುತ್ತಿದ್ದುದ್ದು ತುಂಬಾ ಸಂತಸ ನೀಡಿತು. ಇಲ್ಲಿ ಪಂಚಕಜ್ಜಾಯಕ್ಕೆ ಪಂಚಖಾದ್ಯ ಎನ್ನುತ್ತಾರೆ.

ಮಹಾಪೂಜೆಯ ನಂತರ ಭೋಜನಕ್ಕೆ ತೆರಳಿದೆವು. ಭೋಜನಕ್ಕೆ ಉಚಿತ ಪಾಸ್ ನೀಡುತ್ತಾರೆ. ಇದರ ಬಗ್ಗೆ ಪ್ರಕಟಣೆ ಕೂಡ ನೀಡುತ್ತಾರೆ. ಸೇವಾ ಕೌಂಟರ‍್ನಲ್ಲಿ ಈ ಪಾಸ್‍ಗಳನ್ನು ವಿತರಿಸುತ್ತಾರೆ. ಇಡಗುಂಜಿ ದೇವಸ್ಥಾನದ ಅಚ್ಚುಕಟ್ಟಿನ ವ್ಯವಸ್ಥೆ ತುಂಬಾ ಇಷ್ಟವಾಯಿತು. ಊಟದ ಮನೆಗೆ ಹೋದಾಗ ಅಲ್ಲಿ ಯಾರೋ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನವರೆಂದು ಊಹಿಸಿದೆ. ಅವರು ಕತ್ರಿಗುಪ್ಪೆ, ಬನಶಂಕರಿ ಎಂದಾಗ ಬೆಂಗಳೂರಿನವರೆಂದು ಖಾತ್ರಿಯಾಯಿತು. ಊಟದ ಮನೆ ವಿಶಾಲವಾಗಿತ್ತು. ಊಟ ಕೂಡ ರುಚಿಯಾಗಿತ್ತು (ತುಂಬಾ ಹಸಿವಾಗಿತ್ತು). ಅನ್ನ, ಕೊದ್ದೇಲ್(ತೆಂಗಿನಕಾಯಿ ಮಸಾಲೆಯ ಹುಳಿ), ಮಜ್ಜಿಗೆ, ರವೆ ಪಾಯಸ ಭರ್ಜರಿಯಾಗಿ ಸವಿದೆವು. ಇಲ್ಲೂ ಎರಡೇ ಬಾರಿ ಅನ್ನ ಬಡಿಸುವುದು, ಮೊದಲೇ ಬೇಕಾದಷ್ಟು ಅನ್ನ ಹಾಕಿಸಿಕೊಳ್ಳಿ ಎಂದು ಹೇಳುತ್ತಾರೆ. ಈ ಮಾತನ್ನು ಕೊಲ್ಲೂರಿನಲ್ಲಿ ಹೇಳುವುದಿಲ್ಲ. ಬಟ್ಟಲಿನಲ್ಲಿ ಊಟ. ಊಟವಾದ ನಂತರ ಮುಂದಿನ ಪ್ರಯಾಣಕ್ಕೆ ಅಣಿಯಾದೆವು. ಇಡಗುಂಜಿಗೆ ಸರಿಯಾದ ಸಂಪರ್ಕ ಕೊಂಡಿಗಳಿಲ್ಲ. ಆಗಾಗ ಹೊನ್ನವರದಿಂದ ಸರಕಾರಿ ಬಸ್ಸುಗಳು ಬರುತ್ತಿದ್ದವು. ಹೆಚ್ಚಾಗಿ ತುಂಬಿ-ತುಳುಕುತ್ತಿದ್ದ ಮಾಕ್ಸಿ-ಕ್ಯಾಬ್‍ಗಳದ್ದೇ ಕಾರುಬಾರು. ಮ್ಯಾಕ್ಸಿ-ಕ್ಯಾಬ್‍ಗಳು ಹೆದ್ದಾರಿ ಮಧ್ಯೆ ನಿಲ್ಲಿಸಿ ಹಿಂಬದಿ ಸವಾರರಿಗೆ ಕಿರುಕಳ ನೀಡುತ್ತವೆ.

ಮುಂದಿನ ಪ್ರಯಾಣ ಹೊನ್ನಾವರದ ಶರಾವತಿ ಸೇತುವೆಗೆ. ಇಡಗುಂಜಿಯಿಂದ ೧೪ ಕಿ.ಮೀ ದೂರದಲ್ಲಿದೆ. ಸೇತುವೆ ಬರುವ ಮುನ್ನ ಶುಲ್ಕ ಸಂಗ್ರಹಣ ಕೇಂದ್ರ ಕೂಡ ಇದೆ. ಬಹುಶಃ ಸಿಬ್ಬಂದಿಗಳು ಊಟ ಮಾಡುತ್ತಿದ್ದರೇನೋ ನಮ್ಮ ಬಳಿ ಶುಲ್ಕ ಕೇಳಲಿಲ್ಲ. ಸ್ವಲ್ಪ ದೂರದಲ್ಲಿ ಶರಾವತಿ ಸೇತುವೆ ಸಿಗುತ್ತದೆ. ಶರಾವತಿ ರೈಲು ಸೇತುವೆ ಕೊಂಕಣ ರೈಲಿನ ಅತಿ ಉದ್ದದ ಸೇತುವೆಯಾಗಿದೆ(೨೦೨೩ ಮೀ). ಶರಾವತಿ ಸೇತುವೆ ಬಳಿಯ ಕೆಲವು ನೋಟಗಳು.

ಶರಾವತಿ ನದಿಯ ನೋಟ

ಶರಾವತಿಯ ಕಡೆಯ ಪ್ರಯಾಣ

ಶರಾವತಿ ನದಿಗೆ ಕಟ್ಟಲಾದ ಕೊಂಕಣ ರೈಲಿನ ಸೇತುವೆ (ಹಿನ್ನೆಲೆಯಲ್ಲಿ ತಿಳಿಯಾಗಿ ಕಾಣುತ್ತಿದೆ). ಬಹುಶಃ ವೈಟ್-ಬಾಲೆನ್ಸ್ ಸರಿಯಾಗಿ ಸೆಟ್ ಆಗದ ಕಾರಣ ಸ್ವಲ್ಪ ಅಸ್ಪಷ್ಟವಾಗಿ ಬಂದಿದೆ. ಮಾಹಿತಿಗೆ ಚಿತ್ರ ಸೇರಿಸಿದೆ.

ನೆನಪು:
ಸುಮಾರು ೧೫ ವರ್ಷದ ಹಿಂದಿನ ಮಾತು. ಹಳೆಯ ಸೇತುವೆಯಾದ ಶರಾವತಿ ಸೇತುವೆ ದುರಸ್ತಿಯಲ್ಲಿತ್ತು. ಘನ ವಾಹನಗಳು ಚಲಿಸುವಂತಿರಲಿಲ್ಲ. ಘನ ವಾಹನಗಳ ಸಂಚಾರಕ್ಕಾಗಿ ಬಾರ್ಜ್ ವ್ಯವಸ್ಥೆ ಇತ್ತು. ಒಮ್ಮೆ ಬೆಳಿಗ್ಗೆ ೪ ಘಂಟೆ ಸಮಯಕ್ಕೆ, ಬಾರ್ಜ್ ಸಂಚರಿಸುತ್ತಿದ್ದಾಗ ಬಸ್ಸೊಂದು, ನದಿಗೆ ಜಾರಿ ಬಿತ್ತು. ಹಲವರು ಗಾಡವಾದ ನಿದ್ರೆಯಲ್ಲಿದ್ದರು. ಎಚ್ಚರವಾದವರು ತಕ್ಷಣ ಗಾಜುಗಳನ್ನು ಒಡೆದು ಹೇಗೋ ಪಾರಾದರು. ನೀರು ಪಾಲಾದವರು ಎಷ್ಟೋ ನೆನಪಿಲ್ಲ. ಈ ಘಟನೆಯ ಬಳಿಕ ಹೆದ್ದಾರಿ ಇಲಾಖೆಗೆ ಜನ ಹಿಡಿ ಶಾಪ ಹಾಕಿದ್ದರು. ಕಡೆಗೂ ಸಂಪೂರ್ಣ ದುರಸ್ತಿಯಾಯಿತು ಸೇತುವೆ. ದುರಸ್ತಿಯಾಗುವುದಕ್ಕೆ ಅಷ್ಟು ಜನ ಬಲಿಯಾಗಬೇಕಿತ್ತೆ? ಈಗಲೂ ದುರಸ್ತಿ ಸರಿ ಆಗಲಿಲ್ಲವೆಂದು ಹೇಳುತ್ತಾರೆ. ಸಂತಸದ ಮಾತೆಂದರೆ ಈಗ ಎಲ್ಲಾ ವಾಹನಗಳು ಸೇತುವೆಯ ಮೇಲೆ ಸಂಚರಿಸುತ್ತವೆ. ಯಾವಾಗ ಈ ಸೇತುವೆ ಕುಸಿಯುತ್ತದೋ ಹೇಳಲಾಗದು. ಶರಾವತಿ ಸೇತುವೆಯಲ್ಲಿ ಒಂದು ಸುತ್ತು ಹಾಕಿ ಮುರ್ಡೇಶ್ವರಕ್ಕೆ ಹೊರಟೆವು.

ಮುರ್ಡೇಶ್ವರಕ್ಕೆ ಹೋದ ದಾರಿಯಲ್ಲೇ ವಾಪಾಸ್ ಬರಬೇಕು. ದಾರಿ ಮಧ್ಯೆ ಮತ್ತೆ ಗಣಪನಿಗೆ ನಮನ ಸಲ್ಲಿಸಿದೆವು. ದೇವಸ್ಥಾನಕ್ಕೆ ನೇರ ಬಸ್ ಸೌಲಭ್ಯ ಇಲ್ಲವೇನೋ. ಸ್ವಾಗತ ಗೋಪುರದ ಬಳಿ ಇಳಿದು ಅಲ್ಲಿಂದ ರಿಕ್ಷಾದಲ್ಲಿ ೨ ಕಿ.ಮೀ ಒಳಹಾದಿಯಲ್ಲಿ ಕ್ರಮಿಸಬೇಕು. ರೈಲ್ವೇ ನಿಲ್ದಾಣದಿಂದ ೩ ಕಿ.ಮೀ ಆಗಬಹುದು. ಮುರ್ಡೇಶ್ವರಕ್ಕೆ ಬಂದಾಗ ೨:೪೫ ಆಗಿತ್ತು. ದೇವಾಲಯದ ಬಾಗಿಲು ಮುಚ್ಚಿತ್ತು. ಮೂರು ಘಂಟೆಗೆ ತೆರೆಯುತ್ತಾರೆ. ಇತ್ತೀಚಿಗಷ್ಟೆ ಈ ದೇವಾಲಯ ಜೀರ್ಣೋದ್ಧಾರ ಕಂಡಿತು. ಇಲ್ಲಿನ ಗೋಪುರ ಹಾಗೂ ಶಿವನ ಮೂರ್ತಿಗಳು ಹಲವರನ್ನು ಆಕರ್ಷಿಸುತ್ತದೆ. ಮೂರು ಘಂಟೆಗೆ ಸರಿಯಾಗಿ ದೇವಸ್ಥಾನ ತೆರೆಯಿತು. ರುದ್ರಾಭಿಷೇಕ ಸೇವೆ ಮಾಡಿಸಿದೆವು. ರುದ್ರಾಭಿಷೇಕ ಸೇವೆಯಲ್ಲಿ ಪೂಜೆ, ಪಂಚಕಜ್ಜಾಯ ಹಾಗೂ ಲಾಡು ಒಳಗೊಂಡಿರುತ್ತದೆ. ದೇವಾಲಯ ರಮಣೀಯವಾಗಿದೆ. ಈಶ್ವರನ ಗುಡಿಯ ಸುತ್ತಲೂ ದತ್ತಾತ್ರೇಯ, ಗಣಪತಿ, ಆಂಜನೇಯ, ನಾಗ, ಪಾರ್ವತಿ ಗುಡಿಗಳಿವೆ. ಹಾಗೆ ದೇವಸ್ಥಾನದಿಂದ ಎಲ್ಲೆಲ್ಲಿ ನೋಡಿದರೂ ಸಮುದ್ರವೇ ಕಾಣುತ್ತದೆ. ಪೂರ್ವಕ್ಕೆ ಪಶ್ಚಿಮ ಘಟ್ಟ ಸಾಲು ಕಾಣಿಸುತ್ತದೆ. ಖೇದದ ಸಂಗತಿಯೆಂದರೆ ಸಮುದ್ರ ತೀರ ತುಂಬಾ ಕೊಳಕು. ಒಮ್ಮೆ ಮಳೆಗಾಲದಲ್ಲಿ ಹೋಗಿದ್ದಾಗ ಕೊಳೆತ ಮೀನುಗಳನ್ನು ತೀರದಲ್ಲಿ ಬಿಸಾಡಿದ್ದರು. ಇಲ್ಲಿನ ಕೆಲವು ಚಿತ್ರಗಳು.

ಮುರ್ಡೇಶ್ವ್ರರ ದೇವಸ್ಥಾನದ ಸ್ವಾಗತ ಗೋಪುರ

ದೇವಸ್ಥಾನ

ಶಿವನ ಮೂರ್ತಿ

ಸಮುದ್ರ ತೀರದ ನೋಟ

ಮುರ್ಡೇಶ್ವರ ದರ್ಶನದ ನಂತರ ಭಟ್ಕಳದಲ್ಲಿ ಕಾಫಿ ಕುಡಿದು ಮನೆ ಕಡೆ ಪ್ರಯಾಣ ಬೆಳೆಸಿದೆವು. ಹಸಿವಾದಾಗ ಇಡಗುಂಜಿ, ಮುರ್ಡೇಶ್ವರದ ಪಂಚಕಜ್ಜಾಯ ಹಾಗೂ ಲಡ್ಡು ಪ್ರಸಾದವನ್ನು ತಿಂದೆವು. ಮುರ್ಡೇಶ್ವರದ ಲಡ್ಡು ತುಂಬಾ ರುಚಿಯಾಗಿತ್ತು. ಪ್ರಕೃತಿ ಮಡಿಲಲ್ಲಿರುವ ಇಡಗುಂಜಿಯನ್ನು ನೋಡಲೇಬೇಕು ಹಾಗೆ ಸ್ವಲ್ಪ ದೂರದಲ್ಲಿರುವ ಶರಾವತಿ ಸೇತುವೆ. ಮಳೆಗಾಲದಲ್ಲಿ ಕರಾವಳಿಯ ಯಾವುದೇ ಸ್ಥಳಗಳಿಗೆ ಹೋಗುವುದು ಸೂಕ್ತವಲ್ಲ. ಮಾರ್ಗ ಮಧ್ಯದಲ್ಲಿ ಕುಂಭಾಸಿಗೆ ಭೇಟಿ ನೀಡಿದೆವು. ಅಲ್ಲಿ ಗಣಪನ ದರ್ಶನ ಪಡೆದು ಮೂಡೆ ಪ್ರಸಾದವನ್ನು ಕೊಂಡೆವು. ಕುಂಭಾಸಿ ಮತ್ತು ಮುರ್ಡೇಶ್ವರದಲ್ಲಿ ಕೆಲ ಹುಡುಗರು ಅಲ್ಲಿನ ಚಿತ್ರ ತೆಗೆದುಕೊಳ್ಳುವಂತೆ ದುಂಬಾಲು ಬೀಳುತ್ತಿದ್ದರು. ಮನೆಗೆ ತಲುಪಿದಾಗ ಸಂಜೆ ೭ ಘಂಟೆಯಾಗಿತ್ತು. ಸುಮಾರು ೧೮೦ ಕಿ.ಮೀ ವಾಹನ ಚಾಲನೆ ಮಾಡಿದ್ದರಿಂದ ನನಗೆ ಸ್ವಲ್ಪ ಹೆಚ್ಚು ದಣಿವಾಗಿತ್ತು. ಸೆಖೆ ಇತ್ತಾದರೂ ಅದೇ ಹವಾಮಾನಕ್ಕೆ ಒಗ್ಗಿಕೊಂಡಿದ್ದರಿಂದ ಅಷ್ಟೊಂದು ತೊಂದರೆಯಾಗಲಿಲ್ಲ. ರಾತ್ರಿ ಮೂಡೆ ಪ್ರಸಾದ ತಿಂದು ಅಂದಿನ ದಿನಕ್ಕೆ ಮಂಗಳ ಹಾಡಿದೆವು
-----------------------------------------------------------------------------------------------------------------------------------------------
ಇಡಗುಂಜಿ ಹಾಗೂ ಮುರ್ಡೇಶ್ವರ ಹೋಗಲು ಸೂಕ್ತ ಮಾರ್ಗದರ್ಶನ ನೀಡಿದ ಸಂಪದಿಗರಾದ ಕಾರ್ತಿಕೇಯ ಭಟ್ಟರಿಗೆ ಧನ್ಯವಾದಗಳು

ಸೂಚನೆ: ಹೊನ್ನಾವರದ ಬಳಿ ಅಪ್ಸರಕೊಂಡ ಸಮುದ್ರ ತೀರ ನೋಡಲಾಗಲಿಲ್ಲ. ಇಡಗುಂಜಿಗೆ ಹೋಗುವವರು ಇಲ್ಲಿಗೆ ಅವಶ್ಯವಾಗಿ ಭೇಟಿ ನೀಡಿ. ಶರಾವತಿ ನದಿಯ ಕೊನೆಯ ಭಾಗ ಎಂದು ಹೇಳುತ್ತಾರೆ. ಇಲ್ಲಿ ಬೆಟ್ಟದ ನಡುವೆ ಸಣ್ಣ ಜಲಪಾತ ಹಾಗೂ ಕೊಳವಿದೆ. ಸುಂದರವಾದ ಪ್ರದೇಶ. ಈ ಜಾಗಕ್ಕೂ ಪುರಾಣ ಕಥೆಗಳಿವೆಯೆಂದು ಹೇಳುತ್ತಾರೆ.

Rating
No votes yet

Comments