ಗಣಪತಿ

ಗಣಪತಿ

ಚಂದನ ಟಿವಿಯಲ್ಲಿ ದಿವಸಾ ಇರುಳು ೧೦.೩೦ ರಿಂದ ೧೦.೪೫ ರ ವರೆಗೆ ಬರಿ ಹದಿನೈದು ನಿಮಿಶ ’ಮಾರ್ಗದರ್ಶನ’ ಅಂತ ಒಂದು ಹರಿವು ಬರುತ್ತದೆ. ತುಂಬ ಚೆನ್ನಾಗಿರತೈತಿ ಈ ಪ್ರೋಗ್ರಾಮ್. ಅದರಲ್ಲಿ ಮೊನ್ನೆ ಒಮ್ಮೆ ತಿಳಿದವರೊಬ್ಬರು ಗಣಪತಿಯ ಕತೆ ಏನನ್ನು ಹೇಳುತ್ತದೆ ಅಂತ ತುಂಬ ಚೆನ್ನಾಗಿ ತಿಳಿಸಿದರು.

ಪಾರ್ವತಿದೇವಿ ಜಳಕ ಮಾಡುತ್ತಿದ್ದಾಗ, ಗಣಪತಿಯನ್ನು ಕಾವಲಿರಿಸಿರುತ್ತಾಳೆ, ಶಿವ ಬಂದಾಗ ದಾರಿ ಬಿಡದ ಗಣಪತಿಯ ತಲೆ ತರೆಯುವದು, ನಂತರ ತನ್ನ ಗಣವನ್ನು ಅಟ್ಟಿ, ಸಿಕ್ಕುವ ಆನೆಯ ತಲೆಯನ್ನು ತಂದು ಅಂಟಿಸಿ, ಗಣಪತಿ ಅಂತ ಹೆಸರು ಕೊಡುವದು, ಇದೆಲ್ಲ ನಮಗೆ ತಿಳಿದಿರುವ ಕತೆ.

ಪಾರ್ವತಿ ದೇವಿ ಅಂದರೆ, ಪರ್ವತನ ಮಗಳು, ಅಂದರೆ ಈ ಭೂಮಿ. ಶಿವ ಅಂದರೆ ನೇಸರ. ಮಳೆಗಾಲದಲ್ಲಿ ಬೂದೇವಿ ಮತ್ತು ನೇಸರನ ನಡುವೆ ಅಡ್ಡ ಬರುವ ಮೋಡ ಗಣಪತಿಯ ಹಳೆಯ ರೂಪ. ಗಣಪತಿಯನ್ನು ಪಾರ್ವತಿ ತನ್ನ ಮೈಗೆ ಮೆತ್ತಿದ ಮಣ್ಣಿನಿಂದ ಮಾಡುತ್ತಾಳೆ ಅಂತ ನಾವು ಕೇಳಿದ್ದೇವೆ, ಮೋಡ ಉಂಟಾಗುವದು ಭೂಮಿಯಿಂದ ಆವಿಯಾಗಿ ಹೋಗುವ ನೀರಿನಿಂದಲೇ ಅಲ್ಲವೇ!!.

ನಂತರ ನೇಸರನ ಸುಡುತಾಪದಿಂದ ಮೋಡ ಕರಗಿ ಮಳೆಯಾಗಿ, ಬೂಮಿ ತಂಪಾಗಿ, ಹುಲುಸಾದ ಬೆಳೆ ಬರುತ್ತದೆ. ಮೋಡವೇ ಕರಗಿ ಬದುಕಿನ ಆಕರವಾದ ಹುಲುಸಾದ ಪೈರಿನ ರೂಪ ಪಡೆಯುತ್ತದೆ, ನಂತರ ಇದರ ಕೊಯಿಲಾಗುತ್ತದೆ, ಶಿವನು ಗಣಪತಿಯ ಮುಂಡವನು ತರಿದ ಅನ್ನುವದು ಇದರ ಗುರುತು.

ಮುಂದೆ ಸಂಕ್ರಾಂತಿಯ ಹೊತ್ತಿಗೆ ಕುಯ್ದ ಪೈರಿನ ಧಾನ್ಯವನ್ನು ಒಂದು ಕಡೆ ಗುಡ್ಡೆ ಹಾಕಿ, ಅದರ ಮೇಲೆ ಎರಡು ಮೊರಗಳನ್ನು ಇಡುತ್ತಾರೆ, ಇವು ಗಣಪತಿಯ ಕಿವಿಗಳು, ಕಾಳಗುಡ್ಡೆಯ ಸುತ್ತ, ದೊಡ್ಡ ಹಗ್ಗ ಸುತ್ತಿರುತ್ತಾರೆ, ಇದರ ಗುರುತು, ಗಣಪತಿಯ ಹೊಟ್ಟೆ ಮತ್ತು ಅದನ್ನು ಸುತ್ತಿರುವ ಹಾವು, ಮಳೆಯಿಂದ ಬೆಳೆ, ಬೆಳೆಯಿಂದ ಬದುಕು, ಅದರ ಗುರುತು ನಮ್ಮ ಗಣಪತಿ.

ಈ ಸಂಗತಿ ತಿಳಿದು, ನಮ್ಮ ಮಂದಿ ಮಾಡಿರುವ ಆಚರಣೆ, ಹಬ್ಬ ಹರಿದಿನಗಳು, ಏನಾದರೊಂದನ್ನು ಗುರುತು ಮಾಡುವಂತವು, ಸುಮ್ಮನೆ ಮಾಡಿದವಲ್ಲ ಅಂಬುವದು ಮತ್ತಸ್ಟು ಮನದಟ್ಟಾಗಿ, ನಲಿವಾಯಿತು. :[:-)]

Rating
No votes yet