ಚಿಲ್ಲರೆ ವಿಷಯ

ಚಿಲ್ಲರೆ ವಿಷಯ

ಬಸ್ಸು ಗಡಗಡ ಅಲುಗಾಡುತ್ತಾ ಹೋಗುತ್ತಿತ್ತು. ಅಮ್ಮ ಕೈಬಳಸಿ ನನ್ನನ್ನ ಅಪ್ಪಿಕೊಂಡವಳು ಜೋರು ನಿದ್ದೆಯಲ್ಲಿದ್ದಳು. ಕಿಟಕಿಯಿಂದ ಕಾಣುವ ಚಂದ್ರ ಮೋಡಮರೆಯಲ್ಲಿ ಕಣ್ಣಾಮುಚ್ಚಾಲೆಯಾಡುತ್ತಾ ನಮ್ಮ ಜೊತೆಗೇ ಬರುತ್ತಿದ್ದ. ಬಾಳಪ್ಪಜ್ಜನ ಹಾಡು ನೆನಪಾತು - ಎಂತಾ ಚಂದ ಬೆಳದಿಂಗಳ..ಜಗದ ಜನಕ ಮಂಗಳ… - ಎಷ್ಟು ಮಂಗಳಕರವಾದ್ರೂ ನಾವು ಅಮ್ಮ ಮಗಳನ್ನ ಊರು ಬಿಡಿಸಿ ಬೆಂಗಳೂರಿನ ಬಸ್ ಹತ್ತಿಸಿದ ಬೆಳ್ದಿಂಗಳು ಹಿತವೆನಿಸಲಿಲ್ಲ. ಇಲ್ಲ ಅಪ್ಪೂ, ನಾನು ನಿಂಜೊತೀಗ್ ಬರಾವಿದ್ದೀನಿ ಅನ್ನುವಂತಿದ್ದ ಚಂದಿರನ ಮಾತು ನಿಜವೆನಿಸಲಿಲ್ಲ. ಇಡೀ ಬಸ್ನಾಗ ಎಲ್ರೂ ನಿದ್ದಿ ಹೊಡಿಯಾವ್ರೇ ಇದ್ದಿದ್ದು. ಡ್ರೈವರಣ್ಣ ಏನೋ ಗುನುಗುತ್ತ ಬಸ್ ಬಿಡ್ತಿದ್ದ. ಅವನ ಕನಿಕರಕ್ಕೇ ನಮಗೆ ಬಸ್ಸಲ್ಲಿ ಸೀಟು ಸಿಕ್ಕಿದ್ದು.

ಹಾಗೇ ಸ್ವಲ್ಪ ನಿದ್ದೆ ಹತ್ತಿತ್ತು, ಎಲ್ಲೋ ಒಂದ್ಕಡೆ ಬಸ್ಸು ಮುಗ್ಗರಿಸಿದಂತಾಯಿತು. ಗುನುಗುತ್ತಿದ್ದ ಡ್ರೈವರಣ್ಣ, ಕಿಟಕಿಯಿಂದ ತಲೆ ಹೊರಹಾಕಿ, ಯಾಕಲೇ ತಿಂದು ಹೆಚ್ಚಾಗೀತೆನೋ ಮಗ್ನೆ ಅಂತ, ಸುಯ್ಯೆಂದು ಹೋದ ಕಾರಿಗೆ ಬಯ್ದ.

ದೂರದಲ್ಲಿ ಗುಡ್ಡವಿತ್ತೇನೋ, ಎತ್ತರದಲ್ಲೊಂದುಕಡೆ ದೀಪ ಮಿನುಗುತ್ತಿತ್ತು. ನಮ್ಮೂರ ಗುಡ್ಡದ ಮೇಲಿನ ಹಣಮಪ್ಪನ ಗುಡಿಯ ನೆನಪಾಯಿತು, ಹಾಗೇ ಎಲ್ಲಮ್ಮನ ಜಾತ್ರೆ, ಜಾತ್ರೆಯ ಸಂಭ್ರಮ, ಜಾತ್ರೆ ಮುಗಿದ ಮೇಲೆ ನಾವು ಮಕ್ಕಳ ಹಾರಾಟ, ಜಾತ್ರೆಯಲ್ಲಿ ಕಂಡ ಹೊಸ ಹೊಸದರ ಅನುಸರಣ, ಕೊಂಡ ಬಳೆ ಟೇಪುಗಳ ಪ್ರದರ್ಶನ, ಇನ್ನೇನು ಜಾತ್ರೆಗೆ ಬಂದ ಟೆಂಟು ಮಡಚಿ ಕಟ್ಟಿ ಹೊರಡಬೇಕು ಅನ್ನುವಾಗ ಅಪ್ಪ ಕರೆದುಕೊಂಡು ಹೋಗುತ್ತಿದ್ದ ಸಿನೆಮಾಕ್ಕೆ, ಅಪ್ಪನ ನೆನಪಾಗಿ ಕಣ್ಣಂಚು ಒದ್ದೆಯಾಯಿತು,
ಬಸ್ಸು ಯಾವುದೋ ತಿರುವಿನಲ್ಲಿ ತಿರುಗಿ, ಅದೊಂದು ಹೋಟೆಲಿನ ಮುಂದೆ ನಿಂತಿತು. ಎಚ್ಚರಾದ ಅಮ್ಮ ನನ್ನ ಕರಕೊಂಡು ಇಳಿದಳು. ಮರೆಯಲ್ಲಿ ಕೂತು ಎದ್ದು ಲಂಗ ಸರಿಮಾಡಿಕೊಳ್ಳುವಾಗ ಕತ್ತಲಿಗೆ ಹೊಂದಿಕೊಂಡ ಕಣ್ಣಿಗೆ ರಸ್ತೆಯಾಚೆಗೆ ಹರಡಿಕೊಂಡಿರುವುದು ಗದ್ದೆ ಅಂತ ಗೊತ್ತಾಯಿತು. ಸ್ವಲ್ಪ ಹೊತ್ತಿಗೆ ಮುಂಚೆ ಒರಸಿಕೊಂಡು ಒಣಗಿದ್ದ ಕೆನ್ನೆಯ ಮೇಲೆ ಮತ್ತೆ ನೀರಿಳಿಯಿತು.

ಅಮ್ಮ ಚಾ ಕುಡಿಯುತ್ತೀಯಾ ಅಂತ ಕೇಳುತ್ತಿದ್ದರೆ, ನಾನು ಇನ್ನೆಲ್ಲೋ ನೋಡುತ್ತಾ ತಲೆಯಾಡಿಸಿದೆ, ಅವಳಿಗೆ ಕಾಣದ ಹಾಗೆ ಕಣ್ಣೊರೆಸಿಕೊಂಡು ಬಸ್ ಹತ್ತಿದೆ. ಮತ್ತೆ ಅಮ್ಮನ ಬೆಚ್ಚನೆ ಅಪ್ಪುಗೆಯಲ್ಲಿ ಸೇರಿ, ದಡಬಡ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣ. ಅಮ್ಮ ಸಂಜೆ ಬಾಗಿಲ ಇಡುಕಲಲ್ಲಿ ದೀಪ ಹಚ್ಚುವ ಸಮಯಕ್ಕೆ ಸರಿಯಾಗಿ, ಅಂಗಳದಲ್ಲಿ ಬಂದು ನಿಲ್ಲುತ್ತಿದ್ದ ಅಪ್ಪನ ಸೈಕಲ್ಲು, ಸರಭರನೆ ಒಳಗೋಡಿ ಅಪ್ಪ ಹೊರಗಿನ ಕಟ್ಟೆಯಲ್ಲಿ ಕಾಲೊರೆಸಿ ಕೂರುವಷ್ಟರಲ್ಲಿ ಬರುತ್ತಿದ್ದ ಅಮ್ಮನ ಬಿಸಿಬಿಸಿ ಚಾ, ತಲೆತಗ್ಗಿಸಿ ನಾನು ಬರೆಯುತ್ತಿದ್ದ ಅಭ್ಯಾಸದ ಪುಸ್ತಕದಲ್ಲಿ ಇಣುಕುತ್ತ ಮೆತ್ತಗೆ ಬಳಸುತ್ತಿದ್ದ ಅಪ್ಪನ ಕೈ, ಅವನ ಜೇಬಿಗೆ ಕೈ ಹಾಕಿದ ಕೂಡಲೆ ಸಿಗುತ್ತಿದ್ದ ಜೇನುತುಪ್ಪದ ಚಾಕಲೇಟು, ನನ್ನ ಕಾಪಿಪುಸ್ತಕದಲ್ಲಿದ್ದ ಟೀಚರ್ ಕೊಟ್ಟಿರುತ್ತಿದ್ದ "ಎ" ನೋಡಿದ ಕೂಡಲೆ, ಈ ಮುದ್ದು ಅಕ್ಷರ ನೋಡಾಕ್ಕೆ ಎಷ್ಟು ಸಾಲವಾದ್ರೂ ಮಾಡೇನ ಅಪ್ಪೂ ಅಂತ ಹತ್ತಿರಕ್ಕೆಳೆದುಕೊಂಡು ತಲೆಯ ಮೇಲೆ ಅವ ಇಡುತ್ತಿದ್ದ ಬೆಚ್ಚನೆ ಮುತ್ತು, ಮುದ್ದಾಡಿದ್ದು ಸಾಕು, ದೇವ್ರಿಗೆ ಕೈ ಮುಗಿದು ಊದಕಡ್ಡಿ ಹಚ್ರಿ, ಬೇಗ್ನೆ ಊಟ ಮಾಡಿ ಮಲಗಣ, ನಾಳೆ ಬೆಳ್ಗೆ ಮುಂಚೆನೇ….. ಅಂತ ಅಮ್ಮನ ಎಂದಿನ ಅಹವಾಲು ಏನೋ ಇರುತ್ತಿತ್ತು. ಗದ್ದೆಯ ಕೆಲಸದ ಮಣ್ಣು ಧೂಳೆಲ್ಲ ತೊಳೆದು ಅಪ್ಪ ದೇವರಿಗೆ ಕೈಮುಗಿಯಲು ಬರುವಾಗ ಸಾಕಷ್ಟು ಹೊತ್ತಾಗುತ್ತಿತ್ತು. ರಾತ್ರಿ ಊಟ ಮಾಡಿ ಮಲಗುವಾಗ, ನಾನು ಶಾಲೆಯಲ್ಲಿ ಬರೆದುಕೊಂಡು ಬಂದಿದ್ದ, ಅಂದಿನ ದಿನಪತ್ರಿಕೆಯ ಸಾರಾಂಶವನ್ನ ಅಪ್ಪನಿಗೆ ಓದಿಹೇಳುವುದಿತ್ತು. ಓದಿಮುಗಿದ ಕೂಡಲೆ ಹಾಸಿಟ್ಟ ಹಾಸಿಗೆಯಲ್ಲಿ ನನ್ನ ಮಲಗಿಸಿ, ಕುತ್ತಿಗೆಯವರೆಗೂ ಚಾದರ ಎಳೆದು, ಕೆನ್ನೆ ಸವರಿ ದೀಪವಾರಿಸುತ್ತಿದ್ದ ನೆನಪುಗಳು ಒಂದರ ಹಿಂದೆ ಒಂದು ಸಿನಿಮಾದಂತೆ ಕಾಣಿಸತೊಡಗಿದವು. ಕೆನ್ನೆ ಎಷ್ಟು ಒರೆಸಿಕೊಂಡರೂ ಒದ್ದೆಯಾಗಿಯೇ ಇತ್ತು.

ಸಿಹಿಯಾದ ನೆನಪುಗಳು ಚಿವುಟಿ ಚಿವುಟಿ ಅಳಿಸಿದ ಪ್ರಯಾಣದ ಕೊನೆಯ ಜಾವದಲ್ಲಿ ಯಾವಾಗಲೋ ಬಂದ ನಿದ್ದೆ; ಎಚ್ಚರಾದಾಗ, ಎತ್ತರೆತ್ತರದ ಕಟ್ಟಡಗಳು, ದೊಡ್ಡ ದೊಡ್ಡ ಸೇತುವೆ, ರಸ್ತೆ ತುಂಬಾ ಹರಿದಾಡುವ ವಾಹನಗಳು, ಆ ಚುಮುಚುಮು ಬೆಳಗಲ್ಲೂ ಗಡಿಬಿಡಿಯಿಂದ ನುಗ್ಗಿ ಸಾಗುವ ಜನ, ಜನ, ಜನ... ಎಲ್ಲ ಬೋರ್ಡುಗಳ ವಿಳಾಸದಲ್ಲೂ ಆ ಹೆಸರಿತ್ತು, ಬೆಂಗಳೂರು..

ಬಸ್ಸಿಳಿದವ್ರಿಗೆ ಎಲ್ಲಿ ಹೋಗಬೇಕು ಗೊತ್ತಾಗುತ್ತಿಲ್ಲ. ಹಾಗೇ ಕಾಯುವಾಗ, ಮಾವ ಬಂದು ಕರೆದುಕೊಂದು ಹೊರಟ. ಸಾಲು ಸಾಲಾಗಿ ನಿಂತ ಬಸ್ಸುಗಳಲ್ಲೊಂದಕ್ಕೆ ಹತ್ತಿ ಮತ್ತೆ ಯಾವುದೊ ಗಲ್ಲಿಯ ಯಾವುದೊ ವಟಾರಕ್ಕೆ ಬಂದಿಳಿವಾಗ ಹೊತ್ತೇರುತ್ತಿತ್ತು. ಅತ್ತೆ ನಮಗೆ ಅವಲಕ್ಕಿ ಚಾ ಮಾಡಿಟ್ಟು, ಯಾರದೋ ಮನೆಯ ಮನೆಗೆಲಸಕ್ಕೆ ಹೊಗಿದ್ದಳು.

ಮಾಡಲು ಕೆಲಸವಿಲ್ಲದೆ ಒಂದು ವಾರ ಕಳೆಯಿತು. ಮಾವ ಓಡಾಡಿ ನನ್ನ ಹತ್ತಿರದಲ್ಲೇ ಇದ್ದ ಹೈಸ್ಕೂಲಿಗೆ ಸೇರಿಸಿದ. ಮತ್ತೊಂದು ವಾರ ಕಳೆಯುವಷ್ಟರಲ್ಲಿ ಅದೇ ಬೀದಿಯ ಕೊನೆಯಲ್ಲಿ ಒಂದು ಪುಟ್ಟ ತರಕಾರಿ ಗೂಡಂಗಡಿ ಬಾಡಿಗೆಗೆ ಸಿಕ್ಕಿತು ಅಮ್ಮನಿಗೆ. ನಾನು ಶಾಲೆ ಮುಗಿಸಿದವಳು ಗೂಡಂಗಡಿಯಲ್ಲೆ ಕೂತಿರುತ್ತಿದ್ದೆ. ಇಬ್ಬರು ಒಟ್ಟಿಗೆ ರಾತ್ರಿ ಮನೆಗೆ ಬರುತ್ತಿದ್ದೆವು. ಅವರಿಬ್ಬರೂ ನಮ್ಮನ್ನು ಎಷ್ಟೇ ಅಕ್ಕರೆಯಿಂದ ನೋಡಿಕೊಂಡರೂ ಬೇರೆಯವರ ಮನೆ ಎಂಬ ಭಾವ ಹೋಗಲಿಲ್ಲ. ಅವರಿಗೆ ಮಕ್ಕಳಿಲ್ಲ. ಮಾತು ಕಡಿಮೆಯಂತೆ ಕಂಡ ಅತ್ತೆ, ಸ್ವಲ್ಪ ದಿನದಲ್ಲೆ ಗೆಳತಿಯಾದಳು. ಆಗೀಗ ರಜೆಯ ಸಂಜೆಗಳಲ್ಲಿ ನಾವು ಜೊತೆಯಾಗಿ ಹತ್ತಿರದ ದೇವಸ್ಥಾನಗಳಿಗೆ ಹೋಗಿ ಬರುತ್ತಿದ್ದೆವು. ಅಮ್ಮ ಬರುತ್ತಿರಲಿಲ್ಲ. ಅಮ್ಮ ಮಾತ್ರ ಮೊದಲಿನ ಹಾಗೆ ಉಳಿಯಲೇ ಇಲ್ಲ. ಮಾತೇ ಇಲ್ಲ. ಅಂಗಡಿಯ ವ್ಯವಹಾರಕ್ಕೆ ಏನು ಬೇಕೋ ಅಷ್ಟೆ. ಅವತ್ತೊಂದು ದೌರ್ಭಾಗ್ಯದ ದಿನ ಆಚೆ ಕೇರಿಯ ಸಂಗೂ ಮಾಮ ಅಳುತ್ತ ಬಂದು, ಪಾರೋತಕ್ಕ, ಎಲ್ಲ ಮುಗ್ದೋತು ಅಂತ ಹೇಳಿದ ಕ್ಷಣದಿಂದ ಮುದುಡಿಹೋದ ಮುಖ ಮತ್ತೆ ಯಾವತ್ತೂ ಅರಳಲಿಲ್ಲ. ಎಂತ ಕಷ್ಟ ಬಂದಾಗಲೂ, ಬೆಳೆದ ಆಲುಗಡ್ಡೆಯೆಲ್ಲ ಕೊಳೆತುಹೋದಾಗಲೂ, ಅಪ್ಪ ಸಾಲ ಹೆಂಗೆ ತೀರಿಸಲಿ ಅಂತ ತಲೆಗೆ ಕೈಕೊಟ್ಟು ಮನೆಯಲ್ಲೇ ಕುಳಿತಾಗಲೂ, ಧೈರ್ಯಗೆಡದ ಅಮ್ಮ, ಸಂಗೂ ಮಾಮನ ಮಾತು ಕೇಳಿ ಹುಲಿಯನ್ನು ನೋಡಿದವರ ಹಾಗೆ ಅರಚಿಕೊಂಡು ಎಚ್ಚರತಪ್ಪಿಬಿದ್ದಳು. ನಂಗೆ ಏನೂ ಅರ್ಥವಾಗದೆ ಹೋದರೂ ಏನೋ ಕೆಟ್ಟದ್ದು ನಡೆಯಿತು ಅಂತ ಚೆನ್ನಾಗಿ ಗೊತ್ತಾಯಿತು.

ಮತ್ತೆ ಮೇಲೆದ್ದ ಅಮ್ಮ ಬದಲಾಗಿದ್ದಳು. ಅಮ್ಮನೊಬ್ಬಳೇ ಏನು ನಂಬಿಕೊಂಡ ಬದುಕು, ಸುತ್ತಲ ಬಯಲು, ಮೇಲಿನ ಆಕಾಶ, ನಡೆವ ದಾರಿ ಎಲ್ಲ ಬದಲಾಯಿತು. ಹೈಸ್ಕೂಲಿನ ಹುಡುಗಿಯ ಪುಟ್ಟ ಕೋಶ ದೊಡ್ಡವರ ಪ್ರಪಂಚದೊಳಗೆ ಮುರಕೊಂಡು ಬಿತ್ತು. ಸಾಲದ ದೈನ್ಯ ಅಪ್ಪನ ಬುದ್ದಿ ಕೆಡಿಸಿ, ಹೊಲ ಮಾರಿಸಿ ಅದೂ ಸಾಲವನ್ನ ತೂಗಲಾರದೆ ಹೋದಾಗ, ವಿಷ ಕುಡಿಸಿಬಿಟ್ಟಿತ್ತು.

ಹಾಗೂ ಹೀಗೂ ವರ್ಷಗಳೆರಡು ಕಳೆವಾಗ ನಾನು ಸೆಕೆಂಡ್ ಪಿಯುಸಿಗೆ ಬಂದೆ. ಅಮ್ಮನ ಅಂಗಡಿ ಚೆನ್ನಾಗಿ ನಡೆಯುತ್ತಿತ್ತು. ಮಾವ ಅತ್ತೆ ಅವರವರ ಕೆಲಸದಲ್ಲಿ. ಅಮ್ಮ ಹಟ ಮಾಡಿ ಅಲ್ಲೆ ಹತ್ತಿರದಲ್ಲಿ ಒಂದು ರೂಮಿನ ಮನೆ ಬಾಡಿಗೆ ಹಿಡಿದಳು. ಕೊನೆಯ ಪರೀಕ್ಷೆ ಮುಗಿಯುವಾಗ ಅಮ್ಮ ಸ್ವಲ್ಪ ಮಂಕಾಗಿದ್ದಳು. ಮುಗಿಸಿ ಬಂದವಳು ಯಾಕಮ್ಮಾ ಅಂತ ಕೇಳಿದರೆ, ವ್ಯಾಪಾರ ಕೈ ಹತ್ತುತ್ತಿಲ್ಲ ಅಂದಳು. ನನಗೆ ಆಶ್ಚರ್ಯ ಇಷ್ಟು ದಿನ ಚೆನ್ನಾಗಿದ್ದ ವ್ಯಾಪಾರ ಯಾಕೆ ಹೀಗಾಯಿತಮ್ಮಾ ಅಂದೆ. ಮಾತಾಡದ ಅಮ್ಮ ನನ್ನನ್ನ ಬೆಂಚಿನಿಂದೆಬ್ಬಿಸಿ, ಅಂಗಡಿಗೆ ಬೀಗ ಹಾಕಿ, ಕೈ ಹಿಡಿದು ಕರಕೊಂಡು ಹೊರಟಳು.

ಆಚೆ ಬೀದಿಯಲ್ಲೆ ಬಸ್ ಸ್ಟಾಪಿತ್ತು. ಹಾಗೇ ಸಾಲು ಸಾಲು ಅಪಾರ್ಟ್ ಮೆಂಟುಗಳು. ಇಲ್ಲಿನ ಸಾಕಷ್ಟು ಜನ ನಮ್ಮ ತರಕಾರಿ ಅಂಗಡಿಗೆ ಬರುತ್ತಿದ್ದರು, ಅವರ ಪರಿಚಯವಿತ್ತು ನನಗೆ. ಅಲ್ಲೊಂದು ಹೊಸ ಕಟ್ಟಡ. ಕೆಂಪಗೆ ಹೊಳೆಯುವ ಬಣ್ಣದ ಗೋಡೆ, ಎತ್ತರೆತ್ತರದ ಗಾಜಿನ ಕಿಟಕಿ ಬಾಗಿಲುಗಳು, ಒಳಗೂ ಹೊರಗೂ ಜನಾಂದ್ರೆ ಜನಾ.. ಮಾತು ಬೇಡದ ಅಮ್ಮ, ನನ್ನ ಕೈಹಿಡಿದು ಅದರ ಮುಂದೆ ನಿಂತಳು ನೋಡೆಂಬಂತೆ.. ಒಳಗೆ ರಾಶಿ ರಾಶಿ ತಾಜಾ ತರಕಾರಿ, ಹಣ್ಣು, ಹೂವು.. ಎಲ್ಲ ನೀಟಾಗಿ ಜೋಡಿಸಿಟ್ಟ ಪ್ಯಾಕುಗಳು, ತಗೊಂಡು ಹೋಗಲು ಬಣ್ಣಬಣ್ಣದ ಚೀಲಗಳು, ಅಲ್ಲಲ್ಲಿ ಸಮವಸ್ತ್ರ ಧರಿಸಿದ ನನ್ನಂತ ಹುಡುಗಿಯರು, ಯಾವ ಮೂಲೆಯಲ್ಲೂ ಕತ್ತಲಿನ ಸುಳಿವೂ ಇರದಂತೆ ಫಳ್ಳನೆ ಹೊಳೆಯುವ ಲೈಟುಗಳು.. ದೇವಸ್ಥಾನದಲ್ಲಿ ಅಭಿಷೇಕದ ಹೊತ್ತಲ್ಲಿ ತುಂಬಿರುವಂತೆ ಜನ.. ನನ್ನ ಮಂಕುಬುದ್ಧಿಗೆ ನಿಧಾನವಾಗಿ ಹೊಳೆಯಿತು.. ಇದು ದಿನವೂ ಪತ್ರಿಕೆಯಲ್ಲಿ ಬರುತ್ತಿರುವ ಹೊಸ ತರಕಾರಿ ಮಾರಾಟ ಮಳಿಗೆ.. ನಗರದ ಹಲವು ಕಡೆ ತೆರೆದಿದ್ದಾರಂತೆ, ದೊಡ್ಡ ವ್ಯಾಪಾರಸ್ಥರಂತೆ, ಹಳ್ಳಿಗರಿಂದ, ನೇರವಾಗಿ ಖರೀದಿಸಿದ ತರಕಾರಿ,ಹೂ ಹಣ್ಣುಗಳನ್ನ, ಕಿರಾಣಿ/ಸಗಟು ತರಕಾರಿ‌ಅಂಗಡಿಗಳಿಗಿಂತ ಕಡಿಮೆ ಬೆಲೆಗೆ ಕೊಟ್ಟು ಗ್ರಾಹಕರನ್ನ ಮೋಡಿ ಮಾಡುತ್ತಿದ್ದಾರಂತೆ.. ಓದಿದ ಎಲ್ಲ ಸಾಲುಗಳೂ ತಲೆಯೊಳಗೆ ಹಾದು ಹೋಗುತ್ತಿದ್ದರೆ, ಕಣ್ಮುಂದೆ ದೀಪಾವಳಿಯಂತ ಸಂಭ್ರಮ, ಜಾತ್ರೆಯ ಗೌಜು, ಅಮ್ಮನ ಕೈ ನನ್ನ ಕೈಯೊಳಗೆ ತಣ್ಣಗೆ ಕೊರೆಯುತ್ತಿತ್ತು. ಇನ್ನೇನು ಬಿದ್ದು ಬಿಡುತ್ತೀನಿ ಎಂಬಂತೆ ಬಿಗಿಯಾಗಿ ಹಿಡಿದಿದ್ದಳು. ನಮ್ಮಂಗಡಿಯ ಡಲ್ಲು ಹೊಡೆದ ವ್ಯಾಪಾರ ಅಮ್ಮನ ಭಯ ಎಲ್ಲ ಬಿಡಿಸಿದ ಒಗಟಿನಂತೆ ಒಂದಕ್ಕೊಂದು ಹೊಂದಿಕೊಂಡವು.

ಇದಾದ ಒಂದು ವಾರದೊಳಗೇ ಅಮ್ಮನ ಅಂಗಡಿ ಬಾಗಿಲು ಹಾಕಿತು. ಅಮ್ಮ ಹಿಂದಿನ ಬೀದಿಯ ದೊಡ್ಡ ಮನೆಗೆ ಮನೆಗೆಲಸಕ್ಕೆ ಹೋದಳು. ಸಂಜೆಯ ಕೆಲಸ ಮುಗಿಸಿ ಮನೆಗೆ ಬಂದ ಅಮ್ಮ, ಆ ದೊಡ್ಡ ತರಕಾರಿ ಅಂಗಡಿಯ ಯುನಿಫಾರ್ಮ್ ಹಿಡಿದುಕೊಂಡು ಕುಳಿತಿದ್ದ ನನ್ನನ್ನ ನೋಡಿ ಹೌಹಾರಿ ಹೋದಳು. ನಾನು ಕೆಲಸಕ್ಕೇ ಸೇರುವುದು, ಓದಲಿಷ್ಟವಿಲ್ಲ ಎಂದು, ಮುಂದೆ ಮಾತು ಬೇಡ ಎನ್ನುವಂತೆ ಘೋಷಿಸಿಬಿಟ್ಟೆ. ಅಪ್ಪ, ಓದು, ಕೆಲಸ ಅಂತ ಏನೇನೋ ಮಣಮಣ ಮಾತಾಡಿದಳು ಅಮ್ಮ, ನಾನು ಕೇಳಿಸದವರ ಹಾಗೆ ಕೂತಿದ್ದೆ. ನನಗೆ ಅಮ್ಮ ಯಾರದೋ ಮನೆಯ ಮುಸುರೆ ತೊಳೆಯುವುದನ್ನ, ಇನ್ಯಾರದೋ ಹತ್ತಿರ ಬಯ್ಯಿಸಿಕೊಳ್ಳುವುದನ್ನ ಸಹಿಸಲಾಗುತ್ತಿಲ್ಲ.

ಈ ಅಂಗಡಿ ಈಗ ನಂಗೆ ಕೆಲ್ಸ ಕೊಟ್ಟಿದೆಯಲ್ಲಾ ಸಾಕು ಬಿಡು, ನಿನ್ನ ಮನೆಕೆಲಸಕ್ಕಿಂತ ಜಾಸ್ತಿ ದುಡ್ಡು ಸಿಗುತ್ತೆ, ಹೇಗೋ ಮಾಡಿ ಮನೆ ನಡೆಸಬಹುದು ಅಂದ ಕೂಡಲೇ ಅವಳ ಮುಖದಲ್ಲಿ ಸುಳಿದ ಭಾವನೆ ನನ್ನ ಅನುಭವಕ್ಕೆ ಮೀರಿದ್ದು. ಕಣ್ಣ ತುಂಬ ನೀರು ಬಳಬಳ ಸುಳಿಯಿತು. ಮಾತಾಡದೆ ಹೋಗಿ ಮಲಗಿದಳು.

ಮರುದಿನ ನಾನು ಕೆಲಸಕ್ಕೆ ಹೊರಟವಳು, ಅಮ್ಮನಿಗೆ ಮನೆಯಲ್ಲೇ ಇರಲು ಹೇಳಿ ಹೋದೆ. ಸಂಜೆ ಬಂದಾಗ ಅಮ್ಮ ಬೆಳಿಗ್ಗೆ ಕೂತ ಜಾಗದಲ್ಲೇ ಕೂತಿದ್ದಳೂ. ಮರುದಿನ ಬೆಳಿಗ್ಗೆ ಎದ್ದು ನೋಡುವಾಗ ಪಕ್ಕದಲ್ಲಿ ಅಮ್ಮನಿಲ್ಲ. ಗಾಭರಿಯಾಯಿತು. ಕಾಲುಮಣೆಯ ಮೇಲೆ ಮಡಚಿಟ್ಟಿದ್ದ ನನ್ನ ಕೆಲಸದ ಯುನಿಫಾರ್ಮ್ ಮೇಲೆ ಒಂದು ಮಡಚಿಟ್ಟ ಕಾಗದ. ಬಿಡಿಸಿದರೆ ವಕ್ರವಕ್ರವಾದ, ಒತ್ತಕ್ಷರ ಸರಿಯಾಗಿ ಬರೆದಿರದ, ಆದರೆ ಚಿತ್ತಿಲ್ಲದ ಬರಹ.. ಅಮ್ಮನಿಗೂ ಬರೆಯುವುದಕ್ಕೆ ಬರುತ್ತದೆ ಅಂತ ಗೊತ್ತಾಗಿದ್ದೇ ಈಗ..
ಅಪ್ಪೂ... ನನ್ ತಾಯೀ.. ಬದ್ಕಾದು ಕಷ್ಟ ಕಾಣ್ತಾ ಇದೆ ಕಣಾ. ನಿಮ್ಮಪ್ಪಯ್ಯ ನಿನ್ ಓದುಸ್ಲೇಬೇಕಂತ ಆಸೆ ಪಡ್ತು. ಅದೇ ಒಂದ್ ಆಸೆನ ಗಟ್ಯಾಗಿ ಹಿಡ್ಕಂಡು ನಾನೂ ಬದುಕ್ಲೇ ಬೇಕಂತ ಹೊಡದಾಡ್ದೆ. ಇನ್ನೇನೈತೆ ಬದಕಾಕೆ? ಅರೆಹೊಟ್ಟೆನಾರಾ ಆದ್ರೂ ಮಾನ್ವಾಗಿ ದುಡ್ಕಂಡು ತಿಂತೀನಿ ಅಂಬೋ ನೆಮ್ದಿನೇ ಕಿತ್ಕಂಡ್ರಲ್ಲಾ ಆ ದೊಡ್ಡಂಗಡೀಯವ್ರು.. ಅಷ್ಟೇನಾ ನಾನ್ ಬದ್ಕ್ ಬೇಕು ಅನ್ನೋ ಗುರೀನೇ ಕಸ್ಕಂಡ್ ಬಿಟ್ರಲ್ಲವಾ..ಅಪ್ಪೂ,, ಏನ್ ಮಾಡ್ಲಿ.. ಇನ್ನೇನ್ ದಿಕ್ಕು..?ನನ್ ಕೈಯಾಗ್ ಬದುಕು ತಳ್ಳಾಕ ಆಗಾ ಹಂಗಿಲ್ಲ, ಕ್ಷಮಿಸ್ ಬಿಡು ಮಗಾ, ಹೊಟ್ಟೆಗೆ ಹಾಕ್ಕಂಬಿಡು ಈ ಅನ್ಯಾಯನ....ಅಮ್ಮ..ನೆಂಬ ಸಹಿಯ ಸುತ್ತಬಿದ್ದಿದ್ದ ಕಣ್ಣಹನಿಗಳ ಕಲೆ. ನಿಂತ ನೆಲ ಕುಸಿಯುತ್ತಿರುವ ಅನುಭವ, ಹೊಟ್ಟೆಯ ಸಂಕಟ ತಾಳಲಾರದೆ ಅಮ್ಮಾ ಎಂದು ಕೂಗಿ ಕೂಗಿ ಅತ್ತರೆ ಅಮ್ಮನೆಲ್ಲಿ..?

ತಟ್ಟಿ ಎಬ್ಬಿಸಿದ ಗಂಡ ಶಂಕರ, ಯಾಕೆ ಅಚ್ಚೂ ಏನಾಯಿತು ಅಂತ ಕೇಳುತ್ತಿದ್ದರೆ ಎಚ್ಚರಾದ ಕಣ್ಣ ತುಂಬ ನೀರು.. ಏನಿಲ್ಲ ಕೆಟ್ಟ ಕನಸು ಅಂದವಳು ಬೆಳಗಾಗಿದ್ದನ್ನ ನೋಡಿ ಆಫೀಸಿಗೆ ತಯಾರಾದೆ.

ಚುಮುಚುಮುಬೆಳಗಲ್ಲಿ ವೆಸ್ಟರ್ನ್ ಫಾರ್ಮಲ್ಸ್ ಹಾಕಿ, ಲ್ಯಾಪ್ ಟಾಪಿನೊಂದಿಗೆ ಕ್ಯಾಬ್ ಹತ್ತಿ ಕುಳಿತಾಗ, ಆ ಪುಟ್ಟ ತರಕಾರಿ ಅಂಗಡಿ ಮತ್ತು ಫ್ರೆಶ್ ಮಾಲ್ ಎರಡೆರಡೂ ಒಟ್ಟಿಗೆ ನಿಂತಿದ್ದವು. ಗಾಜಿನ ಗೋಡೆಗಳಲ್ಲೆಲ್ಲಾ ಪ್ರತಿಫಲಿಸಲು ತಿಮಿರಸಂಹಾರನ ಹರಸಾಹಸ ಸಾಗಿತ್ತು. ದೊಡ್ಡದಾಗಿ ಎದ್ದುನಿಂತ ಮಾಲ್ ನ ನೆರಳಿನಲ್ಲಿ ತಲೆತಗ್ಗಿಸಿ ನಿಂತ ಪುಟ್ಟ ಗೂಡಂಗಡಿ ಅವನಿಗೂ ಬೇಕಿಲ್ಲ. ಛೇ ತಲೆಕೊಡವಿದೆ. ಇವತ್ತು ಬೆಳಿಗ್ಗೆಯೇ ಮುಖ್ಯವಾದ ಮೀಟಿಂಗಿದೆ. ದೊಡ್ಡ ವಾಣಿಜ್ಯೋದ್ಯಮಿಯ ಗುಂಪಿನ ಜೊತೆ. ಇದೆಲ್ಲಾ ಯಾಕೆ ಹೀಗೆ ಅಂದುಕೊಂಡೆ.. ನೆನಪಾಯಿತು. ನಿನ್ನೆ ಸಂಜೆ ಮಾಲ್ ನಿಂದ ಹಣ್ಣಿನ ಬ್ಯಾಗು ತುಂಬಿ ತರುವಾಗ, ಗೂಡಂಗಡಿಯ ಹುಡುಗಿ ಕೇಳಿದ್ದಳು - ಯಾಕ್ರಕ್ಕಾ ಈಗ ನಮ್ತಾವ ಬರದೇ ಇಲ್ಲ ಯಾಪಾರಕ್ಕೆ, ಅದೇ ಹಣ್ಣು ತರಕಾರಿನೇವ ನಾವ್ ತಗಂಬರದೂ.. - ಅಂತ.. ಅವಳ ಆಸೆ ತುಂಬಿದ ಮುಖ, ಬಡಕಲು ಮೈ ನನ್ನ ಕನಸನ್ನ ದಿನವನ್ನು ತುಂಬಿಕೊಳ್ಳುತ್ತಿದೆ..

ಆಫೀಸಿಗೆ ಬಂದವಳಿಗೆ ಪುರಸೊತ್ತಿರಲಿಲ್ಲ. ಹಿಂದಿನ ದಿನವೇ ಸಿದ್ಧಪಡಿಸಿಟ್ಟಿದ್ದ ಪ್ರಸ್ತಾವನೆ, ಪ್ರಿಂಟ್ ಔಟು ಎಲ್ಲ ತೆಗೆದುಕೊಂಡು ನನ್ನ ಸಹೋದ್ಯೋಗಿಯೊಡನೆ ಕಾನ್ಪರೆನ್ಸ್ ರೂಮಿಗೆ ಕಾಲಿಟ್ಟಾಗ ಮೀಟಿಂಗ್ ಶುರುವಾಗಲು ಎರಡು ನಿಮಿಷ ಬಾಕಿ ಇತ್ತು.
ವಾಣಿಜ್ಯ ಗುಂಪಿನ ಉನ್ನತ ಅಧಿಕಾರಿಗಳು ಬಂದಿದ್ದರು, ನಮ್ಮ ಆಫೀಸಿನ ಎಂ.ಡಿ ಇದ್ದರು. ನಾನು ಪಟಪಟನೆ ನಮ್ಮ ತಂತ್ರಾಂಶದ ಗುಣ, ಅನುಕೂಲ, ಹೊಸ ರಚನೆ, ಹೇಗೆ ಅದು ಭಾರತದ ಸಗಟು ವ್ಯಾಪಾರದಲ್ಲಿ ಅತಿ ದೊಡ್ಡ ಬದಲಾವಣೆ ತರುತ್ತದೆ ಎಂಬೆಲ್ಲ ಅಂಶಗಳನ್ನೂ ವಿಡಿಯೋ, ಅನಿಮೇಶನ್, ಗ್ರಾಫ್ ಇತ್ಯಾದಿಗಳ ಸಹಾಯದಿಂದ ವಿವರಿಸುತ್ತಾ ಹೋದೆ. ಹತ್ತು ಜನ ಕೂತು ಮಾಡಬೇಕಾದ ಅಕೌಂಟ್ಸನ್ನು ಈ ತಂತ್ರಾಂಶ ಹೇಗೆ ಒಬ್ಬೇ ಒಬ್ಬನ ಕೈಯಲ್ಲಿ ಅತಿ ಕಡಿಮೆ ಸಮಯದಲ್ಲಿ ಮಾಡಿಮುಗಿಸುತ್ತದೆ, ಯಾವ ರೇಟನ್ನ ಯಾವ ಸೀಸನ್ನಿನಲ್ಲಿ ಇಟ್ಟರೆ ಗ್ರಾಹಕರು ಮುಗಿಬೀಳುತ್ತಾರೆ ಅನ್ನುವುದನ್ನ ತಿಂಗಳು ಮುಂಚೆಯೇ ಹೇಗೆ ಕ್ಯಾಲ್ಕುಲೇಟ್ ಮಾಡಿ ಹೇಳುತ್ತದೆ,ಎಲ್ಲ ವಿವರಿಸಿದೆ. ಬಂದ ಎಲ್ಲರ ಮುಖದಲ್ಲೂ ನಸುನಗೆ. ಇನ್ನು ಸಗಟು ವ್ಯಾಪಾರ ಸಾಮ್ರಾಜ್ಯ ನಮ್ಮದೇ ಎಂಬ ವಿಶ್ವಾಸ. ಮೀಟಿಂಗ್ ಯಶಸ್ವಿಯಾಯಿತು. ನಮ್ಮ ಡೈರೆಕ್ಟರ್ ಖುಷಿಯಾಗಿ, ಆ ಪ್ರತಿಷ್ಠಿತರ ಜೊತೆಯೂಟಕ್ಕೆ ನನ್ನನ್ನೂ ಕರೆದೊಯ್ದರು. ಪಂಚತಾರಾ ಹೋಟೆಲಿನ ಮಬ್ಬು ಆಂಬಿಯೆನ್ಸಲ್ಲಿ ಬಿರಿಯಾನಿ,ರೋಟಿ, ಪನೀರ್ ಸಮಾರಾಧನೆ ನಡೆಯಿತು. ನಾಲ್ಕೆಂಟು ವಿಧದ ಸಿಹಿತಿಂಡಿ, ತಾಜಾ ಹಣ್ಣು, ತರಕಾರಿ ಸಲಾಡ್, ವಿಧವಿಧವಾಗಿ ಕತ್ತರಿಸಿಟ್ಟ ಐಸ್ ಕ್ರೀಂ..

ನಾನು ಸ್ಪೂನ್ ಇಟ್ಟಲ್ಲೆಲ್ಲ ಅಪ್ಪೂ ಮತ್ತು ಅವಳಮ್ಮ ಕಾಣತೊಡಗಿದರು, ಕತ್ತರಿಸಿಟ್ಟ ತಾಜಾ ಹಣ್ಣುಗಳ ಮೇಲೆ ಇಬ್ಬನಿಯಂತೆ ಕೂತಿರುವುದು ಅವರ ಅಳುವಲ್ಲವೇ ಅದನ್ನ ಚಪ್ಪರಿಸಿ ತಿನ್ನಲೇ ಅಂದುಕೊಳ್ಳುತ್ತಿರುವಂತೆ, ಹೊಟ್ಟೆ ನನ್ನ ಸಹಾಯಕ್ಕೆ ಬಂತು, ಎಕ್ಸ್ ಕ್ಯೂಸ್ ಮೀ ಅಂತ ಮುಖ ಹಿಂಡುತ್ತ, ಆದರೂ ನಸುನಗಲು ಪ್ರಯತ್ನಿಸುತ್ತ ಅಲ್ಲಿ ಕುಳಿತ ಅತಿಗಣ್ಯರ ಗುಂಪಿನಿಂದ ದೂರ ಹೋದೆ..

ಎಷ್ಟು ದೂರ ಹೋಗಬಲ್ಲೆ?

Rating
No votes yet