ಚೈತ್ರ ಬರುವ ಕಾಲದಿ...

ಚೈತ್ರ ಬರುವ ಕಾಲದಿ...

 ನಿನ್ನೆ ಟಿವಿಯಲ್ಲಿ ಮಾಯಾವತಿ ನೋಟುಗಳ ಮಾಲೆ ಧರಿಸಿದ್ದನ್ನು ನೋಡಿದಾಗಿಂದ
ಈ ಯುಗಾದಿಯ ಸಂಭ್ರಮಕ್ಕೆ ಮಂಕುಬಡಿದಿದೆ. ಇದು ನಮ್ಮ ಸೋಲು ಅಂತಲೇ ನಾ ಅಂದುಕೊಳ್ಳೋದು ಯಾಕೆಂದರೆ
ಮಾಯಾವತಿ ಅಂತಹವರನ್ನು ಆರಿಸಿ ತಂದಿರೋದು ನಾವಲ್ಲವೆ..,ನಮ್ಮ ಈ ಮಂಪರು ಕಳೆದು ಹೊಸಾ ಯುಗಾದಿ ಬರೋದೆಂದು
ಅಥವಾ ಆ ನಿರೀಕ್ಷೆಯೇ ಹುಸಿಯೇ..... ಮಾಯಾವತಿ ದಲಿತ ದೀನರ ಹೆಸರು ಹೇಳಿಕೊಂಡು ಕುರ್ಚಿ ಗಳಿಸಿದಳು. ಆರಿಸಿ ಬಂದದ್ದೇ
ತಡ ತನ್ನ ಹಿರಿಮೆ ಸಾರುವ ಪ್ರತಿಮೆ ನಿರ್ಮಾಣಮಾಡಿದಳು. ಸರ್ವೋಚ್ಚ ನ್ಯಾಯಾಲಯಕ್ಕೂ ಕಿಮ್ಮತ್ತು ಕೊಡದೆ..... ನಿನ್ನೆ ನೋಡಿ
ಅವಳ ಪಕ್ಷ ಹುಟ್ಟಿ ೨೫ ವರ್ಷ ಮುಗಿಸಿದ ಸಂಭ್ರಮ. ದುಡ್ಡು ಸ್ವಂತದ್ದಲ್ಲ ಜನರದ್ದು ..ದುಡ್ಡು ಖರ್ಚಾಗಿದ್ದಕ್ಕೆ ಲೆಕ್ಕ ಇಟ್ಟವರಾದರೂ ಯಾರು....ಸಾವಿರ ನೋಟಿನ ಮಾಲೆ ಅದನ್ನು ಎತ್ತಿಅವಳ ಕೊರ‍ಳಿಗೆ ಹಾಕಲು ವಂದಿಮಾಗಧರು ಬೇರೆ...! ಬೇರೆ ದೇಶದಲ್ಲಿ ಹೀಗೆ
ನಡೆಯಲು ಸಾಧ್ಯವೆ...ಅಥವಾ ಸ್ವತಃ ಮಾಯಾವತಿಗೆ ಈ ಉತ್ಸವ ನಡೆಸಲು ಜನರ ಬೆಂಬಲ ಅಥವಾ ಪ್ರೀತಿ ಇದೆಯೇ
ಒಂದು ರಾಜ್ಯದ ಮುಖ್ಯಮಂತ್ರಿಗೆ ಈ ಸರ್ವಾಧಿಕಾರ ಕೊಡಬೇಕೆ ಅಥವಾ ಅದಕ್ಕೆ ಆತ ನಿಜವಾಗಿಯೂ ಅರ್ಹನೇ....
ಪ್ರಶ್ನೆ ಕೇಳುತ್ತಲೇ ಹೋಗಬಹುದು ಆದರೆ ನಿರುತ್ತರದ ಗೋಡೆಗಳಿಗೆ ಬಡಿದು ಪ್ರಶ್ನೆಯ ಚಂಡು ನಮಗೇ ಅಪ್ಪಳಿಸೀತು....!

                                 ಮೊನ್ನೆ ತಾನೇ ಬರೇಲಿಯಲ್ಲಿ ಹಿಂಸಾಚಾರ ನಡೆದು ಜನ ನಲುಗಿದ್ದರು ಅವರ ಕಣ್ಣೀರು ತೊಡೆಯುವ ಕಾಯಕ್ಕೆ ಮಾಯಾವತಿ ಮುಂದಾಗಲಿಲ್ಲ. ಅಥವ ಕಾಲ್ತುಳಿತಕ್ಕೆ ಬಲಿಯಾದ ಕುಟುಂಬದ ಸದಸ್ಯರಿಗೆ ಪರಿಹಾರ
ಕೊಡಲು ನಕಾರ ಮಾಡಿದವಳು  ಸ್ವಂತದ ಮೆರವಣಿಗೆಗೆ ಈ ಪರಿ ದುಡ್ಡು ಹಾಳೇಕೆ ಮಾಡಬೆಕು. ಈ ದೇಶದ ಸಂವಿಧಾನದ ಹೆಸರಲ್ಲಿ ಪ್ರತಿಜ್ನೆ ತಗೊಂಡು ದೀನ ದಲಿತರ ಉದ್ಧಾರ ಆಗೊದಿದ್ರೆ ಅದು ತನ್ನಿಂದಲೇ ಸಾಧ್ಯ ಎಂದು ಹೇಳುವ ಮಾಯಾವತಿಯ
ಎದೆಯಲ್ಲಿ ಸ್ವಲ್ಪವಾದರೂ ಬೇಸರ ಇಲ್ಲವೇ.....

                                  ನಮ್ಮ ರಾಜ್ಯದ ಸ್ಥಿತಿಯೂ ಹಾಗೆಯೇ ಅಲ್ಲವೆ.... ಗಣಿಧಣಿ ಕೃಪೆಯಿಂದ ಈ ಸರಕಾರ ಸಾಗಿದೆ
ಅವರು ಹೇಳಿದರು ಅಂತ ಮಾಜಿರಾಜನ ಪಟ್ಟಾಭಿಷೇಕದ ಉತ್ಸವಕ್ಕೆ ನಮ್ಮ ದುಡ್ಡು ಸುರಿದಿದ್ದಾಯಿತು. ಇತ್ತ ನೆರೆ ಸಂತ್ರಸ್ತರಿಗೆ
ಸಂಗ್ರಹಿಸಿದ ದುಡ್ಡು ಎಲ್ಲಿ ಗೊತ್ತಿಲ್ಲ. ಗಣಿಧಣಿ ಮನೆಯಲ್ಲಿ ಪೂಜೆ ಅಂತ ಯಡ್ಯೂರಪ್ಪ ಬಳ್ಳಾರಿಗೆ ಹರಿ ಹೋಗ್ತಾರೆ...ಇತ್ತ ಬಿಎಂಟಿಸಿ
ಡ್ರೈವರ್ ಗಳಿಗೆ ಮಾತ್ರ ಇಂಧನದ ಮಿತವ್ಯಯದ ಬಗ್ಗೆ ಹೇಳಲಾಗುತ್ತದೆ.

                                  ಯಾಕೆ ಹೀಗೆ  ಉತ್ತರ ನಾವೇ ಕಂಡುಕೊಳ್ಳಬೇಕಾಗಿದೆ. ಈ ದೇಶದಲ್ಲಿ ಸರಕಾರ, ನ್ಯಾಯಾಂಗ
ಹಾಗೂ ಮೀಡಿಯಾ ಎಲ್ಲ ಗಬ್ಬೆದ್ದಿವೆ. ನಾವು ಜಡ್ಡುಗಟ್ಟಿ ,ಕೊಚ್ಚೆಯಲ್ಲಿ ಬಿದ್ದು ಇದೇ ಸ್ವರ್ಗ ಅಂತ ತಿಳ್ಕೊಂಡು ನಗುತ್ತಿದ್ದೇವೆ..
ಯುಗಾದಿಯ ಒಬ್ಬಟ್ಟು ತಿಂದು ಐಪಿಎಲ್ ನಲ್ಲಿ ಅದಾರೋ ವಿದೇಶಿ ಹುಡುಗಿ ಸೊಂಟ ಕುಣಿಸಿರುವುದನ್ನು ಆಸ್ವಾದಿಸುತ್ತಿದ್ದೇವೆ..
ಇಂಥ ಯುಗಾದಿ ಅನೇಕ ಬಂದಿವೆ  ಗಿಡ ಬೆತ್ತಲಾಗಿ ಮತ್ತೆ ನಳನಳಿಸಿ ಹಸಿರಂಗಿ ಹೊದ್ದು ಸಂಭ್ರಮಿಸುತ್ತಿದೆ. ನಾವು ಮಾತ್ರ
ನಮ್ಮನ್ನು ಆವರಿಸಿರುವ ಜಡತೆ ತೆಗೆಯದೆ...ಚಿಗಿಯದೆ...ಹಿಗ್ಗದೆ ಇದ್ದೇವೆ.

                                    ನಮಗೆ ಯಾವಾಗ ನಿಜವಾದ ಯುಗಾದಿ ಬರೋದು...
                                    ವಿಕೃತಿ ಸಂವತ್ಸರದ ಶುಭಾಶಯಗಳು.....    

Rating
No votes yet

Comments