ಛಲಗಾರ ಅನಿಲ್ ಕುಂಬ್ಳೆ

ಛಲಗಾರ ಅನಿಲ್ ಕುಂಬ್ಳೆ

ಭಾರತದ ಟೆಸ್ಟ್ ಕ್ರಿಕೆಟಿಗ ನಂಬರ್ ೧೯೨. ಇನ್ನೆಂದೂ ಈ ಮಹಾನ್ ಆಟಗಾರನನ್ನು ನಾವು ಭಾರತಕ್ಕಾಗಿ ಅಥವಾ ಕರ್ನಾಟಕಕ್ಕಾಗಿ ಆಡುವುದನ್ನು ಕಾಣೆವು. ನಿನ್ನೆ ನಿವೃತ್ತಿ ಘೋಷಿಸಿದ ಅನಿಲ್ ಕುಂಬ್ಳೆ, ಭಾರತ ಕಂಡ ಅಪ್ರತಿಮ ಸ್ಪಿನ್ ಬೌಲರ್. ಆ ಮಾಸಿದ ೧೯೨ ನಂಬರಿನ ಕ್ಯಾಪ್ ಇನ್ನು ಅನಿಲ್ ಮನೆಯಲ್ಲಿ ಗೌರವದ ಸ್ಥಾನ ಪಡೆದು ವಿಶ್ರಮಿಸಲಿದೆ. ೧೯೯೦ ಅಗೋಸ್ಟ್ ೯ ರಂದು ಮ್ಯಾಂಚೆಸ್ಟರ್-ನಲ್ಲಿ ತನ್ನ ಪ್ರಥಮ ಟೆಸ್ಟ್ ಪಂದ್ಯದ ಪ್ರಥಮ ದಿನದಿಂದ, ೨೦೦೮ ನವೆಂಬರ್ ೨ ರವರೆಗೆ ತನ್ನ ಕೊನೆಯ ಅಂದರೆ ೧೩೨ನೇ ಟೆಸ್ಟ್ ಪಂದ್ಯದ ಕೊನೆಯ ದಿನದವರೆಗೆ ಆ ೧೯೨ನೇ ಸಂಖ್ಯೆಯ ಕ್ಯಾಪ್-ನ್ನು ಹೆಮ್ಮೆಯಿಂದಲೇ ಧರಿಸಿ ದೇಶಕ್ಕಾಗಿ ಆಡಿದ ಛಲಗಾರ ಅನಿಲ್.

ನನ್ನ ಫೇವರಿಟ್ ಕ್ರಿಕೆಟಿಗ ಅಂದರೆ ಅನಿಲ್ ಕುಂಬ್ಳೆ ಮಾತ್ರ. ಕುಂಬ್ಳೆಯನ್ನು ಮೆಚ್ಚಲು ಹಲವಾರು ಕಾರಣಗಳಿವೆ. ಯಾವ ಸನ್ನಿವೇಶದಲ್ಲೂ ಬೌಲಿಂಗ್ ಮಾಡಲು ಅನಿಲ್ ತಯಾರು. ಎಷ್ಟೇ ಹೊತ್ತಿನ ತನಕ ಬೇಕಾದರೂ ಬೌಲ್ ಮಾಡಬಲ್ಲರು. ಈ ಪಿಚ್-ನಲ್ಲಿ ತನಗೆ ಯಾವುದೇ ವಿಕೆಟ್ ದೊರೆಯದು ಎಂದು ಗೊತ್ತಿದ್ದೂ, ಆ ಒಂದು ವಿಕೆಟಿಗಾಗಿ ದಿನಕ್ಕೆ ೪೦ರಷ್ಟು ಓವರುಗಳನ್ನು ಬೌಲ್ ಮಾಡಲು ಸದಾ ತಯಾರಿರುವ ಅಪ್ರತಿಮ ಎಸೆಗಾರ ಅನಿಲ್. ಒಂದು ವಿಕೆಟ್ ದೊರಕಿದ ಕೂಡಲೆ ವಿಶ್ರಮಿಸದೇ ಇನ್ನೊಂದನ್ನು ಯಾವ ರೀತಿಯಲ್ಲಿ ಗಳಿಸಬಹುದು ಎಂಬ ತಯಾರಿಯಲ್ಲಿ ಅನಿಲ್ ತನ್ನನ್ನು ತೊಡಗಿಸಿಕೊಳ್ಳುತ್ತಾರೆ. ತನ್ನ ಇತಿಮಿತಿಗಳ ಅರಿವು ಚೆನ್ನಾಗಿ ಇದ್ದಿದ್ದರಿಂದ ಅನಿಲ್ ೬೧೯ ಟೆಸ್ಟ್ ಹುದ್ದರಿಗಳನ್ನು ಗಳಿಸಲು ಸಾಧ್ಯವಾಯಿತು. ಕ್ರೀಡೆಯ ವಿದ್ಯಾರ್ಥಿ ಎಂದೇ ತನ್ನನ್ನು ಅನಿಲ್ ಪರಿಗಣಿಸಿದ್ದರಿಂದ ಕೊನೆಯವರೆಗೂ ಅನಿಲ್ ಹುದ್ದರಿಗಳನ್ನು ಗಳಿಸುತ್ತಲೇ ಇದ್ದರು. ಮೊದಲ ಹುದ್ದರಿ ಅಲನ್ ಲ್ಯಾಂಬ್ ಮತ್ತು ಕೊನೆಯ ಹುದ್ದರಿ ಮಿಷೆಲ್ ಜಾನ್ಸನ್.

೧೯೮೯ ನವೆಂಬರ್ ೧೮ರಂದು ಸಿಕಂದರಾಬಾದಿನಲ್ಲಿ ಹೈದರಾಬಾದ್ ವಿರುದ್ಧ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಅನಿಲ್ ಆಡಿದರು. ಪ್ರಥಮ ಬಲಿ ಅಬ್ದುಲ್ ಖಯ್ಯಾಮ್. ಮುಂದಿನ ವರ್ಷವೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅನಿಲ್, ಒಂದೇ ಟೆಸ್ಟ್ ಪಂದ್ಯದ ಬಳಿಕ ಕಡೆಗಣಿಸಲ್ಪಟ್ಟರು. ನಂತರ ೨ ವರ್ಷಗಳ ಕಾಲ ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮರಳಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬಳಿಕ ಅನಿಲ್ ತಿರುಗಿ ನೋಡಿಲ್ಲ.

ಈ ಮಧ್ಯೆ ಹಲವಾರು ಬಾಯಿಬಡುಕರು ಈತನಿಗೆ ಚೆಂಡನ್ನು ಸ್ಪಿನ್ ಮಾಡಲು ಬರುವುದಿಲ್ಲ, ಗೂಗ್ಲಿ ಎಸೆಯಲು ಬರುವುದಿಲ್ಲ, ಸ್ಪಿನ್ನರೋ ಅಥವಾ ವೇಗದ ಬೌಲರೋ ಎಂಬಿತ್ಯಾದಿ ಕುಹಕದ ಮಾತುಗಳನ್ನು ಹೇಳುತ್ತಾ ಇದ್ದರು. ವಿಷಾದದ ಮಾತೆಂದರೆ ಕುಂಬ್ಳೆ ಕೊನೆಯ ಪಂದ್ಯವನ್ನು ಆಡುತ್ತಿರುವಾಗಲೂ ಇವೇ ಮಾತುಗಳು ಕೇಳಿ ಬರುತ್ತಿದ್ದವು. ಕುಂಬ್ಳೆ ಏನನ್ನು ಸಾಧಿಸಿದ್ದಾರೆ ಮತ್ತು ತನ್ನ ಸಾಮರ್ಥ್ಯ ಮತ್ತು ತನ್ನಲ್ಲಿರುವ ಕೌಶಲ್ಯಗಳನ್ನು ಬಳಸಿ ಅದೆಷ್ಟು ಬಾರಿ ಭಾರತಕ್ಕೆ ವಿಜಯವನ್ನು ದೊರಕಿಸಿಕೊಟ್ಟಿದ್ದಾರೆ ಎಂಬುದು ಮುಖ್ಯವೇ ಹೊರತು ಸ್ಪಿನ್ ಮಾಡಲು ಬರುತ್ತೋ ಇಲ್ಲವೋ ಎಂಬುದಲ್ಲ. ವಿಕೆಟ್ ಗಳಿಸಲು ದೊಡ್ಡ ಮಟ್ಟದ ಸ್ಪಿನ್ ಬೇಕಾಗಿಲ್ಲ. ಚೆಂಡು ಸ್ವಲ್ಪವೇ ಸ್ಪಿನ್ ಆದರೂ ಸಾಕು, ಕೀಪರ್ ಅಥವಾ ಸ್ಲಿಪ್ ನಲ್ಲಿ ಕ್ಯಾಚ್ ಆಗುವ ಮೂಲಕ ವಿಕೆಟ್ ಸಿಗುತ್ತದೆ ಎಂಬ ಮಾತು ಕುಂಬ್ಳೆಗೆ ಗೊತ್ತಿತ್ತು. ಬ್ಯಾಟ್ಸ್ ಮನ್-ಗಳ ಮನಸ್ಸಿನಲ್ಲಿ ಸಂಶಯವನ್ನು ಉಂಟುಮಾಡುವುದೇ ಎಸೆಗಾರನ ಕರ್ತವ್ಯ. ಇದನ್ನು ಅನಿಲ್ ೧೮ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.

ಅನಿಲ್ ಎಸೆದ ಚೆಂಡುಗಳು ಪಿಚ್-ನಿಂದ ಭಾರೀ ಮಟ್ಟಕ್ಕೆ ನೆಗೆಯುತ್ತಿದ್ದರಿಂದ ’ಜಂಬೋ’ ಎಂಬ ಹೆಸರೂ ಕುಂಬ್ಳೆಗಿದೆ. ಈ ಹೆಸರನ್ನಿಟ್ಟವರು ನವಜೋತ್ ಸಿಂಗ್ ಸಿದ್ಧು. ಭುಜದ ಆಪರೇಷನ್ ಆದ ಮೇಲೆ ಕುಂಬ್ಳೆಯ ಚೆಂಡುಗಳು ಆ ನೆಗೆತವನ್ನು ಕಳಕೊಂಡರೂ ಹೆಸರು ಮಾತ್ರ ಉಳಿದಿದೆ. ೨೦೦೧ರಲ್ಲಿ ಭುಜದ ಆಪರೇಷನ್ ಬಳಿಕ ಮತ್ತೆ ವಿಕೆಟ್ ಕೀಳುವ ಕಾಯಕವನ್ನು ಅನಿಲ್ ಮುಂದುವರಿಸಿದರು. ಆದರೆ ಈಗ ಮೊದಲಿನಂತೇ ಚೆಂಡುಗಳಿಗೆ ಬೌನ್ಸ್ ನೀಡಲು ಅನಿಲ್ ಅಸಮರ್ಥರಾಗಿದ್ದರು. ಅದಾಗಲೇ ಸುಮಾರು ೩೦೦ ಹುದ್ದರಿಗಳನ್ನು ಅನಿಲ್ ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ್ದರು. ಕುಂಬ್ಳೆ ಬೌಲಿಂಗಿನಲ್ಲಿ ಬೌನ್ಸ್ ಇಲ್ಲದ ಕಾರಣ ಇನ್ನು ಮುಂದೆ ಅವರು ಮೊದಲಿನಷ್ಟು ಅಪಾಯಕಾರಿಯಾಗಲಾರರು ಎಂಬ ಮಾತುಗಳು ಅಲ್ಲಿಲ್ಲಿ ತೇಲಲಾರಂಭಿಸಿದವು. ಆದರೆ ಅನಿಲ್ ಅದ್ಯಾವ ಮಟ್ಟದ ಛಲಗಾರನೆಂದರೆ ತನ್ನ ಬೌಲಿಂಗಿನಲ್ಲಿ ಗೂಗ್ಲಿಯನ್ನು ಅಳವಡಿಸಿಕೊಂಡರು. ವೇಗವನ್ನು ನಿಯಂತ್ರಿಸುವ ಮೂಲಕ ಚೆಂಡನ್ನು ವಿವಿಧ ರೀತಿಯಲ್ಲಿ ಎಸೆಯಲು ಕಲಿತುಕೊಂಡರು. ಕ್ರೀಸನ್ನು ಕಲಾತ್ಮಕವಾಗಿ ಬಳಸಲು ಆರಂಭಿಸಿದರು. ಅತ್ತ ಹರ್ಭಜನ್ ಸಿಂಗ್, ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾವನ್ನು ಧೂಳೀಪಟ ಮಾಡುತ್ತಿರಬೇಕಾದರೆ ಇತ್ತ ಈ ಎಲ್ಲಾ ಪ್ರಯೋಗಗಳನ್ನು ಸದ್ದಿಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನಿಲ್ ಮಾಡುತ್ತಿದ್ದರು.

ಆ ನಂತರದ ವರ್ಷಗಳಲ್ಲಿ ಅನಿಲ್ ಭಾರತದ ಎರಡನೇ ಪ್ರಮುಖ ಸ್ಪಿನ್ನರ್ ಆಗಿ ಆಯ್ಕೆಯಾಗತೊಡಗಿದರು. ಸೌರವ್ ಗಾಂಗೂಲಿ ನಾಯಕರಾಗಿದ್ದರು. ಆಗ ಸೌರವ್ ಮತ್ತು ಅನಿಲ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಸೌರವ್ ಬೆಂಬಲ ಸಂಪೂರ್ಣವಾಗಿ ಹರ್ಭಜನ್ ಸಿಂಗಿಗೆ ಇದ್ದಿದ್ದರಿಂದ ಹರ್ಭಜನ್ ಫರ್ಸ್ಟ್ ಚಾಯ್ಸ್ ಸ್ಪಿನ್ನರ್. ಹರ್ಭಜನ್ ಕೂಡಾ ಚೆನ್ನಾಗಿ ಬೌಲ್ ಮಾಡುತ್ತಿದ್ದರು. ಆದರೆ ಅನಿಲ್ ಕೂಡಾ ಕಡಿಮೆಯಿರಲಿಲ್ಲ. ತನ್ನ ಹೊಸ ಎಸೆತಗಳನ್ನು ಯಶಸ್ವಿಯಾಗಿ ಬಳಸಿ ಹುದ್ದರಿ ಕೀಳುವ ಕಾಯಕ ಮುಂದುವರಿಸಿದ್ದರು. ಆದರೂ ಸೌರವ್-ಗೆ ಹರ್ಭಜನ್ ಮೇಲೆ ತುಂಬಾ ಪ್ರೀತಿ. ಒಂದೇ ಸ್ಪಿನ್ನರ್ ಆಡುವಲ್ಲಿ ಅನಿಲ್ ಹೊರಗುಳಿಯಬೇಕಾಗುತ್ತಿತ್ತು.

ತುಂಬಾ ಸ್ಪರ್ಧಾತ್ಮಕ ಕ್ರೀಡಾಳಾಗಿರುವ ಕುಂಬ್ಳೆಗೆ ತಂಡದಿಂದ ತಾನು ಹೊರಗಿರುವುದು ಇಷ್ಟವಿರುತ್ತಿರಲಿಲ್ಲ. ಸೌರವ್-ಗೆ ಕೂಡಾ ಅಂತಿಮ ಹನ್ನೊಂದರಲ್ಲಿ ನಿನ್ನ ಹೆಸರಿಲ್ಲ ಎಂದು ಕುಂಬ್ಳೆಗೆ ತಿಳಿಸಲು ಧೈರ್ಯ ಸಾಲುತ್ತಿರಲಿಲ್ಲ ಮತ್ತು ಧೈರ್ಯಕ್ಕಿಂತ ಹೆಚ್ಚಾಗಿ ಕುಂಬ್ಳೆಯ ಕಟು ಪ್ರಶ್ನೆಗಳಿಗೆ ಉತ್ತರ ನೀಡಲು ಗಂಗೂಲಿಗೆ ಸಾಧ್ಯವಾಗುತ್ತಿರಲಿಲ್ಲ. ಕುಂಬ್ಳೆಗೆ ತಿಳಿಹೇಳುವ ಜವಾಬ್ದಾರಿ ಆಗ ರಾಹುಲ್ ದ್ರಾವಿಡ್ ಮೇಲೆ ಬೀಳುತ್ತಿತ್ತು. ಸೌರವ್-ಗೆ ಗೆಳೆಯ ಮತ್ತು ಅನಿಲ್-ಗೆ ಆಪ್ತ ಗೆಳೆಯನಾಗಿದ್ದ ರಾಹುಲ್ ಈ ಮಧ್ಯವರ್ತಿ ಕೆಲಸವನ್ನು ಯಶಸ್ವಿಯಾಗಿಯೇ ನಿಭಾಯಿಸಿದರೆನ್ನಿ. ಗಾಂಗೂಲಿಯ ಪ್ರಕಾರ ಕುಂಬ್ಳೆಯ ಸಾಮರ್ಥ್ಯ ಕ್ಷೀಣಿಸುತ್ತಿದೆ ಮತ್ತು ಒಬ್ಬ ಯುವ ಸ್ಪಿನ್ನರಿಗೆ ಅವಕಾಶ ನೀಡಿದರೆ ಯಾವಾಗಲೂ ಉತ್ತಮ. ಈ ಶೀತಲ ಸಮರ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಕೆಲ ಕಾಲ ಗಾಂಗೂಲಿ ಮತ್ತು ಕುಂಬ್ಳೆ ನಡುವೆ ಮಾತುಕತೆ ಇರಲಿಲ್ಲ. ಆದರೆ ನಂತರ ಅನಿಲ್ ನಾಯಕನಾದಾಗ, ಪ್ರತಿ ಸಲವೂ ತಂಡದಲ್ಲಿ ಗಾಂಗೂಲಿ ಇರಲೇಬೇಕೆಂದು ಸಿಲೆಕ್ಷನ್ ಮೀಟಿಂಗುಗಳಲ್ಲಿ ಜಿದ್ದಿಗೆ ಬೀಳುತ್ತಿದ್ದರು. ಒಂದೆರಡು ಪಂದ್ಯಗಳಲ್ಲಿ ಗಾಂಗೂಲಿ ವಿಫಲರಾದಾಗ ಕರ್ನಲ್ (ವೆಂಗ್-ಸಾರ್ಕರ್) ನೇತೃತ್ವದ ಆಯ್ಕೆ ಸಮಿತಿ ಗಾಂಗೂಲಿಯನ್ನು ಕೈಬಿಡುವ ನಿರ್ಧಾರಕ್ಕೆ ಬಂದರೂ ಆತನನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಅನಿಲ್. ಇದೇ ಕಾರಣಕ್ಕೆ ಅನಿಲ್ ಇಷ್ಟವಾಗುವುದು. ಗಾಂಗೂಲಿಯಲ್ಲಿ ಇನ್ನೂ ಸಾಮರ್ಥ್ಯವಿದೆ ಎಂದು ಅವರ ಆಯ್ಕೆಯನ್ನು ಸಮರ್ಥಿಸಿ ಅವರನ್ನು ಆಡಿಸಿದ್ದು ಅನಿಲ್ ಹಿರಿಮೆ. ಈಗ ಗಾಂಗೂಲಿಗೆ ಅನಿಲ್ ಎಂದರೆ ಅಪಾರ ಗೌರವ.

೨೦೦೪ರ ಆಸ್ಟ್ರೇಲಿಯಾ ಪ್ರವಾಸ. ಮತ್ತೆ ಗಾಂಗೂಲಿ ನಾಯಕ. ಮೊದಲ ಟೆಸ್ಟ್ ಪಂದ್ಯದಲ್ಲಿ ಅನಿಲ್ ಇಲ್ಲ. ಈ ಪಂದ್ಯ ಆಡಿದ ಹರ್ಭಜನ್ ಗಾಯಗೊಂಡು ಭಾರತಕ್ಕೆ ಮರಳಿದರು. ಕಾಂಗರೂಗಳಿಗೆ ಕುಂಬ್ಳೆ ಅಂದರೆ ಅಗೌರವ. ಭಾರತದಲ್ಲಿ ಮಾತ್ರ ವಿಕೆಟ್ ಕೀಳುವ ಸಾಮರ್ಥ್ಯವುಳ್ಳವ ಎಂಬ ಭಾವನೆ. ಆದರೆ ಅನಿಲ್ ಈ ಬಾರಿ ಸಜ್ಜಾಗಿದ್ದರು. ಹರ್ಭಜನ್ ಗಾಯಾಳಾಗಿದ್ದು ಕುಂಬ್ಳೆಯ ಅದೃಷ್ಟ. ಮುಂದಿನ ೩ ಪಂದ್ಯಗಳನ್ನಾಡಿದ ಅನಿಲ್, ೨೪ ಹುದ್ದರಿಗಳನ್ನು ಕೆಡವಿ ಕಾಂಗರೂಗಳನ್ನು ಕಂಗೆಡಿಸಿ ಹೆಮ್ಮೆಯಿಂದ ಬೀಗುತ್ತಾ ಭಾರತಕ್ಕೆ ಮರಳಿದರು. ಕುಂಬ್ಳೆಯೇನೂ ಹೆದರಬೇಕಾದ ಬೌಲರ್ ಅಲ್ಲ, ಆತನನ್ನು ಸುಲಭದಲ್ಲಿ ನಿಭಾಯಿಸಿಕೊಳ್ಳಬಹುದು ಎಂದು ಅರಾಮವಾಗಿದ್ದ ಕಾಂಗರೂಗಳನ್ನು ತನ್ನ ಹೊಸ ರೀತಿಯ ಎಸೆತಗಳಿಂದ ಕಂಗಾಲಾಗಿ ಮಾಡಿದರು ಅನಿಲ್. ಈ ಸರಣಿಯ ಬಳಿಕ ಮತ್ತೆ ಕುಂಬ್ಳೆ ಫರ್ಸ್ಟ್ ಚಾಯ್ಸ್ ಸ್ಪಿನ್ನರ್ ಆದರು. ಮಾನಸಿಕವಾಗಿ ಕುಂಬ್ಳೆ ತುಂಬಾ ಗಟ್ಟಿಗ. ಈ ಆಸ್ಟ್ರೇಲಿಯಾ ಪ್ರವಾಸ ಅವರ ಜೀವನದ ಶ್ರೇಷ್ಠ ನಿರ್ವಹಣೆಗಳಲ್ಲೊಂದು.

ಸಚಿನ್ ತೆಂಡೂಲ್ಕರ್-ನಂತೆ ಅನಿಲ್ ಹುಟ್ಟಾ ಪ್ರತಿಭಾವಂತ ಕ್ರಿಕೆಟಿಗನಲ್ಲ. ಕಠಿಣ ಪರಿಶ್ರಮದಿಂದ ಯಶಸ್ಸನ್ನು ಕಂಡುಕೊಂಡವರ ಸಾಲಿಗೆ ಅನಿಲ್ ಸೇರುತ್ತಾರೆ. ಮಾಮೂಲಿ ಲೆಗ್ ಸ್ಪಿನ್ ಗಿಂತ ಸ್ವಲ್ಪ ವಿಭಿನ್ನ ಬೌಲರ್ ಆಗಿರುವ ಅನಿಲ್, ಅಗಾಗ ತನ್ನ ಬೌಲಿಂಗನ್ನು ಸುಧಾರಿಸಿಕೊಳ್ಳಬೇಕಿತ್ತು. ಕೇವಲ ಬೌನ್ಸ್ ಮೇಲೆ ನಿರ್ಭರರಾಗಿರುವಂತಿರಲಿಲ್ಲ. ಆಪರೇಷನ್ ಆದ ಮೇಲಂತೂ ಸತತ ಪರಿಶ್ರಮದಿಂದ ಭಾರತಕ್ಕೆ ಆಡಲು ಅರ್ಹನೆನಿಸಿಕೊಳ್ಳುವಷ್ಟು ಮಟ್ಟಕ್ಕೆ ತನ್ನ ಬೌಲಿಂಗನ್ನು ಕುಂಬ್ಳೆ ಸುಧಾರಿಸಿಕೊಳ್ಳುತ್ತಿದ್ದರು. ಇವರ ಎಸೆತಗಳಲ್ಲಿರುವುದು ಸಣ್ಣ ಮಟ್ಟದ ಬದಲಾವಣೆಗಳು. ಈ ಸಣ್ಣ ಬದಲಾವಣೆಗಳಿಗಾಗಿ ಅನಿಲ್ ಬಹಳ ಶ್ರಮಪಟ್ಟಿದ್ದಾರೆ. ಅನಿಲ್ ಪಟ್ಟಿರುವ ಶ್ರಮದ ಬಗ್ಗೆ ನಾನಿಷ್ಟು ಏಕೆ ಹೇಳುತ್ತಿದ್ದೇನೆಂದರೆ, ಇವರ ಅರ್ಧದಷ್ಟು ಪರಿಶ್ರಮವನ್ನು ಸಚಿನ್ ಮಾಡಿದ್ದರೂ, ಇದುವರೆಗೆ ಸಚಿನ್ ೬೦ರಷ್ಟು ಟೆಸ್ಟ್ ಶತಕಗಳನ್ನು ಗಳಿಸಿಯಾಗಿರುತ್ತಿತ್ತು. ಹೀಗಿರುವಾಗ ಅನಿಲ್ ಪಟ್ಟಿರುವ ಶ್ರಮ ಅದ್ಯಾವ ಮಟ್ಟದ್ದು ಎನ್ನುವುದು ತಿಳಿಯುತ್ತದೆ. ಪ್ರತಿಭೆಯಿದ್ದವರಿಗೆ ಹೆಚ್ಚು ಪರಿಶ್ರಮದ ಅಗತ್ಯವಿರುವುದಿಲ್ಲ! ಆದರೆ ಪ್ರತಿಭೆಯಿಲ್ಲದವರಿಗೆ ಪರಿಶ್ರಮವೇ ಸಂಜೀವಿನಿ.

ದವಡೆಗೆ ಪೆಟ್ಟು ಬಿದ್ದರೂ, ಬೆರಳುಗಳಿಗೆ ಪೆಟ್ಟು ಬಿದ್ದರೂ ಬೌಲಿಂಗ್ ಮಾಡಲು ಹಿಂಜರಿಯದ ಧೀರ ಅನಿಲ್ ಕುಂಬ್ಳೆ. ಎಲ್ಲಾ ಬೌಲರುಗಳು ದಣಿದು ಸುಸ್ತಾಗಿರುವಾಗ, ಯಾರಿಗೆ ಚೆಂಡು ನೀಡಲಿ ಎಂದು ನಾಯಕ ಚಿಂತಿಸುತ್ತಿರುವಾಗ ಮುಂದೆ ಬರುವ ಬೌಲರ್ ಅನಿಲ್. ದಣಿವು ಮತ್ತು ಸುಲಭದಲ್ಲಿ ಬಿಟ್ಟುಕೊಡುವುದು ಅನಿಲ್ ಕುಂಬ್ಳೆಗೆ ಗೊತ್ತಿರದ ವಿಷಯಗಳು. ಎದುರಾಳಿ ತಂಡದ ಗೆಲುವು ನಿಶ್ಚಿತವಾಗಿದ್ದರೂ ಇನ್ನೊಂದು ಹುದ್ದರಿ ಬೀಳಿಸಿ ಗೆಲುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುವ ಅಪೂರ್ವ ಮನೋಭಾವನೆಯುಳ್ಳ ಆಟಗಾರ ಅನಿಲ್. ಅದಕ್ಕೇ ಕುಂಬ್ಳೆ ಇಷ್ಟವಾಗುವುದು.

ಅನಿಲ್ ಕುಂಬ್ಳೆ ೧೮ ವರ್ಷಗಳ ಕಾಲ ೧೩೨ ಟೆಸ್ಟ್ ಪಂದ್ಯಗಳಲ್ಲಿ ಮತ್ತು ೨೭೧ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ದೇಶದ ಮತ್ತು ತನ್ನ ಗೌರವಕ್ಕೆ ಕಿಂಚಿತ್ತೂ ಹಾನಿಯುಂಟಾಗದಂತಹ ನಡೆದುಕೊಂಡಿದ್ದಾರೆ. ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ತಂಡವನ್ನು ನಡೆಸಿದ ರೀತಿ ಪ್ರಶಂಸಾರ್ಹ. ಕ್ರಿಕೆಟ್ ಬಿಟ್ಟು ಇತರ ವಿಷಯಗಳಿಂದ ಎರಡು ತಂಡಗಳ ನಡುವೆ ಬಿಕ್ಕಟ್ಟು ಉಂಟಾದಾಗ ನಾಯಕನಾಗಿ ಸರಿಯಾದ ಸಮಯದಲ್ಲಿ ಸರಿಯಾದ ಮಾತುಗಳನ್ನಾಡಿ ತಂಡದ ಮತ್ತು ದೇಶದ ಗೌರವವನ್ನು ಉಳಿಸಿದ್ದು ಅನಿಲ್ ಕುಂಬ್ಳೆಯ ಸಮರ್ಥ ನಾಯಕತ್ವಕ್ಕೆ ಸಾಕ್ಷಿ. ’ಓನ್ಲೀ ಒನ್ ಟೀಮ್ ಪ್ಲೇಯ್ಡ್ ವಿಥಿನ್ ದ ಸ್ಪಿರಿಟ್ ಆಫ್ ದ ಗೇಮ್’ ಎಂಬ ಕುಂಬ್ಳೆಯ ಒಂದು ವಾಕ್ಯ ಇಡೀ ಆಸ್ಟ್ರೇಲಿಯಾವನ್ನೇ ನಿದ್ರೆಯಿಂದ ಎಚ್ಚರಿಸಿತು. ತಮ್ಮ ತಂಡವೆಂದರೆ ಹೆಮ್ಮೆಯಿಂದ ಬೀಗುತ್ತಿದ್ದ ಆಸ್ಟ್ರೇಲಿಯಾದ ಜನರು ಕುಂಬ್ಳೆಯ ಈ ಮಾತಿನ ಬಳಿಕ ತಮ್ಮ ತಂಡದ ನಡತೆಯನ್ನು ಖಂಡಿಸತೊಡಗಿದರು. ಕುಂಬ್ಳೆಯಂತಹ ಹೆಚ್ಚು ಮಾತನಾಡದ ದಿಗ್ಗಜನಿಂದ ಈ ಮಾತನ್ನು ಕೇಳಿ ಕಾಂಗರೂ ಆಟಗಾರರೇ ಥಂಡಾ ಹೊಡೆದುಬಿಟ್ಟರು. ಆ ಸನ್ನಿವೇಶಗಳನ್ನು ಅನಿಲ್ ನಿಭಾಯಿಸಿದ ರೀತಿಯನ್ನು ಮೆಚ್ಚಬೇಕು. ೨೦೦೪ರ ಪ್ರವಾಸದಲ್ಲಿ ೪೦೦ನೇ ವಿಕೆಟ್ ಪಡೆದಿದ್ದರೆ ೨೦೦೭ರ ಪ್ರವಾಸದಲ್ಲಿ ೬೦೦ನೇ ವಿಕೆಟ್ ಪಡೆದು ಸತತ ೨ನೇ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಂಬ್ಳೆ ಯಶಸ್ವಿಯಾಗಿ ಹಿಂತಿರುಗಿದರು.

ಅನಿಲ್ ಬೌಲಿಂಗಿನಲ್ಲಿ ಇಲ್ಲದಿರುವುದು ಬಹಳವಿದೆ. ಆದರೆ ತನ್ನ ಬೌಲಿಂಗಿನಲ್ಲಿ ಇರುವುದನ್ನು ಬಳಸಿಕೊಂಡೇ ಭಾರತಕ್ಕೆ ಹೆಚ್ಚಿನ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ವಿಜಯದ ರೂವಾರಿ ಅನಿಲ್. ಕ್ರಿಕೆಟ್ ಮೈದಾನದಲ್ಲಿ ವ್ಯಾಘ್ರನಂತೆ ಇರುವ ಅನಿಲ್, ಹೊರಗಡೆ ಅಷ್ಟೇ ಸೌಮ್ಯ. ಕುಂಬ್ಳೆಗಿರುವ ’ವರ್ಕ್ ಎಥಿಕ್’ ಭಾರತ ತಂಡದಲ್ಲಿ ಇನ್ಯಾರಿಗೂ ಇಲ್ಲ. ಎಲ್ಲರಿಗೂ ಇದ್ದರೆ ಭಾರತ ಬಹಳ ಮೊದಲೇ ಉತ್ತಮ ತಂಡವಾಗಿರುತ್ತಿತ್ತು.

ಇನ್ನು ಮುಂದೆ ನನ್ನ ನೆಚ್ಚಿನ ಆಟಗಾರನನ್ನು ಭಾರತಕ್ಕಾಗಿ ಆಡುವುದನ್ನು ಕಾಣಲಾರೆ ಎಂಬ ವಿಷಾದದ ಭಾವನೆಯೊಂದಿಗೆ ಕುಂಬ್ಳೆಯ ಕೊನೆಯ ೪ ಓವರುಗಳನ್ನು ನೋಡುತ್ತಿದ್ದೆ. ೧೮ ವರ್ಷಗಳ ಕಾಲ ಇದ್ದ ಅತಿಥಿ ಈಗ ಒಮ್ಮೆಲೇ ನಿರ್ಗಮಿಸುವಂತೆ ಭಾಸವಾಗುತ್ತಿತ್ತು. ನನಗರಿವಿಲ್ಲದಂತೆ ಕಣ್ಣುಗಳು ತೇವವಾಗಿದ್ದವು.

ಒಳ್ಳೆದಾಗಲಿ, ಅನಿಲ್.

Rating
No votes yet

Comments