ಜೋಗಿ ಎಂಬ ಕಿಂದರ ಜೋಗಿಯ ಬಗ್ಗೆ

ಜೋಗಿ ಎಂಬ ಕಿಂದರ ಜೋಗಿಯ ಬಗ್ಗೆ

ನಮಸ್ಕಾರ,
ಈ ಶನಿವಾರ ಮತ್ತು ಭಾನುವಾರ ಸ್ವಲ್ಪ ಬಿಡುವಿದ್ದುದ್ದರಿಂದ ಸಪ್ನಾ ಪುಸ್ತಕಾಲಯಕ್ಕೆ ಭೇಟಿ ನೀಡಿದ್ದೆ. ಜೋಗಿ ಅವರ ಎಲ್ಲ ಪುಸ್ತಕಗಳನ್ನು ಕೊಂಡು ತಂದು ಮನೆಯಲ್ಲಿ ಗುಡ್ಡೆ ಹಾಕಿಕೊಂಡು ಓದಲು ಕುಳಿತೆ. ನಿಜಕ್ಕೂ ಜೋಗಿ ಅದ್ಭುತವಾಗಿ ಬರೆಯುತ್ತಾರೆ. ಅವರ ಕಥೆ ಹೇಳುವ ಶೈಲಿ ಮನಮುಟ್ಟುವಂತಿದೆ, ಆಯ್ದುಕೊಳ್ಳುವ ವಸ್ತು ಹಳೆಯದು ಅಂತ ಅನ್ನಿಸದ ಹಾಗೆ ಅದಕ್ಕೊಂದು ಹೊಸತನ ತಂದು ಕೊಡುತ್ತಾರೆ. ಅವರ ಬರಹ ಓದಿದರೆ ಅಲ್ಲಿಯ ಪಾತ್ರದ ಜೊತೆ ನಿಮ್ಮ ಮಾನಸಿಕ ಸಂಭಾಷಣೆಗೆ ಒಂದು ವೇದಿಕೆ ಸಿದ್ಧವಾಗುತ್ತದೆ.

ಒಂದು ನಾವು ಗಮನಿಸಬೇಕಾದ ಸಂಗತಿ ಎಂದರೆ ಇತ್ತಿಚ್ಚಿನ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಒಳ್ಳೆಯ ಸಾಹಿತ್ಯ ಬರ್ತಾ ಇದೆ. ನಮಲ್ಲಿ ವಿವೇಕ್ ಶಾನುಭಾಗ್, ಜಯಂತ್ ಕಾಯ್ಕಿಣಿ (ಇವರನ್ನ ಸ್ವಲ್ಪ ಹಳಬರು ಅಂದ್ರೆ ತಪ್ಪಾಗಲ್ಲ), ಮೊಗ್ಗಳ್ಳಿ ಗಣೇಶ್, ವಸುಧೇಂದ್ರ,(ಕ್ಷಮಿಸಿ ಸದ್ಯಕ್ಕೆ ಇಸ್ಟೇ ಜನ ನೆನಪಿಗೆ ಬಂದದ್ದು, ಇನ್ನು ಬಹಳಷ್ಟು ಹೆಸರು ಬಿಟ್ಟು ಹೋಗಿವೆ) ಹೀಗೆ ಹಲವಾರು ಜನ ಕನ್ನಡ ಸಾಹಿತ್ಯದಲ್ಲಿ ಹೊಸತನ ತಂದಿದ್ದಾರೆ ಅಂದ್ರೆ ತಪ್ಪಾಗಲ್ಲ, ಇವರೆಲ್ಲರ ಮಧ್ಯೆ ಬೇರೆಯಾಗಿ ನಿಲ್ಲುವ ಸಾಮರ್ಥ್ಯ ಜೋಗಿಯವರಿಗಿದೆ. ಇವರು ಕಥೆಗಾರ ಹೌದು, ಕಾದಂಬರಿಕಾರರು ಹೌದು, ಅದಕ್ಕಿಂತ ಹೆಚ್ಚು ನನಗೆ ಇಷ್ಟವಾಗಿದ್ದು ಅವರ ಸಾಹಿತ್ಯ ವಿಮರ್ಶೆ.

ನೀವು ಹಾಯ್ ಬೆಂಗಳೂರು ಓದುಗರಾಗಿದ್ದರೆ ಅದರಲ್ಲಿಯ "ಜಾನಕಿ ಕಾಲಂ" ಮರೆಯುವುದಿಲ್ಲ. ಅದರಲ್ಲಿಯ ಸಾಹಿತ್ಯ ವಿಮರ್ಶೆ, ಬರಹಗಾರರ ವಿಶೇಷತೆಗಳು, ಬರಹಗಾರರನ್ನು ಹೊಗಳುತ್ತಲೇ ಅವರ ಕಾಲೆಳೆದು ಅವರನ್ನ ಮುಜುಗರಕ್ಕಿಡು ಮಾಡುತ್ತಾರೆ. ಯಾವ ಪುಸ್ತಕ ಓದಬೇಕು, ಯಾವುದರಲ್ಲಿ ಏನಿದೆ, ಏನು ಹೊಸತನ ಕಾಣಬಹುದು ಅನ್ನೋದನ್ನ ಸೂಕ್ಷ್ಮವಾಗಿ ವಿವರಿಸುತ್ತ ಹೋಗುತ್ತಾರೆ. ಬಹುಶಃ ಡಿ. ಅರ್. ನಾಗರಾಜ್, ತಿರುಮಲೇಶ್, ಲಂಕೇಶ್, ಮುಂತಾದ ಕೆಲವರನ್ನು ಬಿಟ್ಟರೆ ಜೋಗಿ ಒಬ್ಬ best critic ಅಂತ ಹೇಳಿದರೆ ತಪ್ಪೇನಲ್ಲ.
ಯಶವಂತ ಚಿತ್ತಾಲರನ್ನು ನನಗೆ ನಿಜಕ್ಕೂ ನನ್ನ ಮನಸೀಗೆ ಮುಟ್ಟುವಂತೆ ಮಾಡಿದ್ದು ಜೋಗಿಯವರ ಬರಹಗಳು. ಚಿತ್ತಾಲರ ಕಾದಂಬರಿ "ಶಿಕಾರಿ" ಯನ್ನು ನಿಜಕ್ಕೂ ನನಗೆ ಇನ್ನೊಂದು ರೀತಿಯಲ್ಲಿ ನೋಡೋಕೆ ಸಾಧ್ಯವಾಗಿದ್ದು ಜೋಗಿಯವರ ಬರಹ ಓದಿದ ಮೇಲೆ. ಎಷ್ಟೋ ಎಲೆ ಮರೆಯ ಕಾಯಿಯಂತಿರುವ ಬರಹಗಾರರನ್ನು ಜೋಗಿ ಲೈಮ್ ಲೈಟ್ ಗೆ ಬರೋಕೆ ಜೋಗಿ ಪ್ರೋತಸಾಹಿಸಿದ್ದಾರೆ.

ಇನ್ನು ಕಾದಂಬರಿಕಾರರಾಗಿ ಜೋಗಿ ನಿಜಕ್ಕೂ ಒಳ್ಳೆಯ ಸಾಹಿತ್ಯ ಸೃಷ್ಟಿಸಿದ್ದಾರೆ. ಅವರ "ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುವಷ್ಟರಲ್ಲೇ ನೀವಿದನ್ನು ಓದುತ್ತಿರುತ್ತಿರಿ" ಕಥಾ ಸಂಕಲನ ಒಳ್ಳೆಯ ಕಥೆಗಳನ್ನು ಹೊಂದಿದೆ. ಮುನ್ನಿದಿಯಲ್ಲಿ ಬರೆದಂತೆ ಈ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿ ಮತ್ತೆರಡು ದಿನಬಿಟ್ಟು ಓದಿದರೆ ಅದೇ ಕಥೆ ನಿಮಗೆ ಒಂದು ಹೊಸ ಆಯಾಮವನ್ನ ನೀಡುತ್ತದ್ದೆ. ಇನ್ನು ಅವರ "ನದಿಯ ನೆನಪಿನ ಹಂಗು..." ತೇಜಸ್ವಿ ಅವರ "ಜುಗಾರಿ ಕ್ರಾಸ್" ನೆನಪಿಸಿಕೊಳ್ಳುವಂತೆ ಮಾಡುತ್ತದೆ.

ಅವರ ಇತ್ತಿಚ್ಚಿನ "ಕಾಡು ಹಾದಿಯ ಕತೆಗಳು" ಕಥಾ ಸಂಕಲನದಲ್ಲಿ ಕೆಲವು ಒಳ್ಳೆಯ ಕಥೆಗಳಿವೆ. "ಯಾಮಿನಿ" ಕಾದಂಬರಿಯಲ್ಲಿ ತನ್ನದೇ ಅಹಮ್ಮಿನ ಜೊತೆ ನಡೆಸುವ ಸಂಗರ್ಷ, ಒಬ್ಬ ಹೆಸರಾಂತ ಸಾಹಿತಿಯ ತಳಮಳ, ಅವನ ಚಿಂತನೆ ಹೀಗೆ ಎಲ್ಲವನ್ನು ನಮ್ಮ ಮುಂದೆ ತೆರೆದಿಡುತ್ತಾ ಹೋಗುತ್ತದೆ.

ಕೊನೆಯದಾಗಿ ಜೋಗಿ ಎಂಬ ಹೆಸರಿನಿಂದ ಬರೆಯು ಅವರ ನಿಜವಾದ ಹೆಸರು ಗಿರೀಶ್ ರಾವ್. ಕನ್ನಡ ಪ್ರಭ ಪತ್ರಿಕೆಯಲ್ಲಿ ಸಿನಿಮಾ ಪುರವಣೆಯ ಸಂಪಾದಕರು. ಇವರು ಜಾನಕಿ ಎಂಬ ಹೆಸರಿನಿಂದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆಯುತ್ತಾರೆ.

Rating
No votes yet