ಟಾಲ್ಸ್‌ಟಾಯ್ ಕಥೆ: ಕ್ರೂಟ್ಸರ್ ಸೊನಾಟಾ

ಟಾಲ್ಸ್‌ಟಾಯ್ ಕಥೆ: ಕ್ರೂಟ್ಸರ್ ಸೊನಾಟಾ

ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ.
ಕ್ರೂಟ್ಸರ್ ಸೊನಾಟಾ ಎಂಬುದು ಸಂಗೀತಕಾರ ಬೆಥೊವೆನ್‌ನ ಒಂದು ರಚನೆ. ತೀರ ಉದ್ದೀಪಕವಾದ, ನುಡಿಸಲು ಕಷ್ಟವಾದ ರಚನೆ ಅನ್ನುತ್ತಾರೆ. ಟಾಲ್ಸ್‌ಟಾಯ್ ಮದುವೆಯ ಸಂಬಂಧದಲ್ಲಿ ಹುಟ್ಟುವ ಅಸೂಯೆ, ಪ್ರೀತಿಯ ಸಾವು, ಮನುಷ್ಯಮನಸ್ಸಿನ ಸುಪ್ತ ಆಲೋಚನೆ ಇವನ್ನೆಲ್ಲ ಅಚ್ಚರಿಯಾಗುವಷ್ಟು ಅದ್ಭುತವಾಗಿ ಹಿಡಿದಿರುವ ಲೇಖಕ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಇರುವವರು ದಯವಿಟ್ಟು ತಾಳ್ಮೆಯಿಂದ ಈ ಕಥೆಯನ್ನು ಓದಿ ಪ್ರತಿಕ್ರಿಯೆ ತೋರಬೇಕೆಂದು ಕೋರಿಕೆ. ಇಗೋ ಮೊದಲನೆಯ ಅಧ್ಯಾಯ:

ಅಧ್ಯಾಯ ೧
ಬೇಸಗೆ ಕಾಲ ಶುರುವಾಗಿಬಿಟ್ಟಿತ್ತು. ನಾನು ರೈಲು ಹತ್ತಿ ಆಗಲೇ ಒಂದು ದಿನ ಕಳೆದುಹೋಗಿತ್ತು. ರೈಲು ಯಾವ ಯಾವುದೋ ಸ್ಟೇಷನ್ನಿನಲ್ಲಿ ನಿಂತಾಗಲೆಲ್ಲ ಯಾರು ಯಾರೋ ಹತ್ತುತ್ತಿದ್ದರು, ಇಳಿಯುತ್ತಿದ್ದರು. ಮೂರು ಜನ ಮಾತ್ರ ನನ್ನ ಹಾಗೇನೇ ಕೊನೆಯ ಸ್ಟೇಷನ್ನಿನವರೆಗೂ ಹೋಗುವವರು ಇದ್ದರು. ಅವರಲ್ಲಿ ಒಬ್ಬಳು ಹೆಂಗಸು. ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿ ಕಾಣುತ್ತಾ ಇರಲಿಲ್ಲ. ತೆಳ್ಳನೆ ಮುಖ, ಗಂಡಸರ ಥರ ಡ್ರೆಸ್ಸುಮಾಡಿಕೊಂಡು ಸಿಗರೇಟು ಸೇದುತ್ತಾ ಇದ್ದಳು. ತಲೆಯ ಮೇಲೆ ಕ್ಯಾಪು ಹಾಕಿಕೊಂಡಿದ್ದಳು. ಅವನ ಜೊತಗೆ ಒಬ್ಬ ಇದ್ದ. ಲಾಯರು. ತುಂಬ ಮಾತಾಡುತ್ತಾ ಇದ್ದ. ಸುಮಾರು ನಲವತ್ತು ವರ್ಷ ಇರಬಹುದು. ಹೊಸಾ ಸೂಟುಕೇಸು, ಬ್ಯಾಗುಗಳನ್ನ ತಂದಿದ್ದ. ಇನ್ನು ಮೂರನೆಯವನು ಅಷ್ಟು ಎತ್ತರ ಇರಲಿಲ್ಲ. ಕೂದಲು ಗುಂಗುರುಗುಂಗುರಾಗಿತ್ತು. ಬೆಳ್ಳಗಾಗಿತ್ತು. ಕಣ್ಣಿನಲ್ಲಿ ಒಂದು ಥರಾ ಹೊಳಪು ಇತ್ತು. ಯಾವಾಗಲೂ ಆ ಕಡೆ ಈ ಕಡೆ ನೋಡುತ್ತಾ ಇದ್ದ. ಓವರ್ ಕೋಟು ಹಾಕಿಕೊಂಡಿದ್ದ. ನೋಡಿದರೆ ಯಾರೋ ಒಳ್ಳೆಯ ಟೈಲರನ ಕೈಯಲ್ಲಿ ಹೊಲಿಸಿದ್ದು ಅನ್ನುವ ಹಾಗೆ ಕಾಣುತ್ತಿತ್ತು. ಅದಕ್ಕೆ ಅಸ್ಟ್ರಾಖಾನ್ ಕಾಲರಿತ್ತು. ತಲೆಗೆ ಅಸ್ಟ್ರಾಖಾನ್ ಕ್ಯಾಪು. ಒಂದೊಂದು ಸಾರಿ ಯಾವಾಗಲಾದರೂ ಓವರ್‌ಕೋಟಿನ ಗುಂಡಿ ತೆಗೆದಾಗ ಒಳಗೆ ತೋಳಿಲ್ಲದ ರಶಿಯನ್ ಕೋಟು, ಕಸೂತಿ ಹಾಕಿದ ಅಂಗಿ ಕಾಣುತ್ತಾ ಇದ್ದವು. ಗಂಟಲು ಸರಿಮಾಡಿಕೊಳ್ಳುವವನ ಹಾಗೆ ಶ್ಬದಮಾಡುತ್ತಿದ್ದ. ಸುಮ್ಮಸುಮ್ಮನೆ ನಗುವುದಕ್ಕೆ ಶುರುಮಾಡಿ ತಟಕ್ಕನೆ ನಿಲ್ಲಿಸಿಬಿಡುತ್ತಿದ್ದ.
ಅವನದೇ ಲೋಕದಲ್ಲಿದ್ದವನ ಹಾಗೆ ಕೂತಿದ್ದ. ಯಾರ ಜೊತೆಯಲ್ಲೂ ಮಾತಾಡಬಾರದು, ಯಾರ ಪರಿಚಯವೂ ಬೇಡ ಅನ್ನುವ ಹಟ ತೊಟ್ಟಿದ್ದನೋ ಏನೋ. ಮಾತಾಡಿಸಿದರೆ ಒಂದು ಮಾತಿನಲ್ಲಿ ಹೌದು ಅಂತಲೋ ಇಲ್ಲ ಅಂತಲೋ ಅಂದು ಕಿಟಕಿಯಾಚೆ ನೋಡುತ್ತ ಕೂತುಬಿಡುತ್ತಿದ್ದ. ಏನಾದರೂ ಓದುತ್ತಾ ಇದ್ದ, ಅಥವಾ ಸಿಗರೇಟು ಸೇದುತ್ತಾ ಇದ್ದ. ಇಲ್ಲಾ ಪಕ್ಕದಲ್ಲಿದ್ದ ಹಳೆಯ ಚೀಲದಲ್ಲಿ ಏನಾದರೂ ಹುಡುಕಿ ತೆಗೆದು ತಿನ್ನುತ್ತಾ, ಆಗಾಗ ಟೀ ಕುಡಿಯುತ್ತಾ ಕೂತಿರುತ್ತಿದ್ದ.
ಒಂಟಿತನದ ಭಾರ ಹೊತ್ತು ನಲುಗಿಹೋಗಿದ್ದನೋ ಏನೋ. ನನಗೆ ಹಾಗನ್ನಿಸಿತು ಎಂದು ಅವನಿಗೆ ತಿಳಿಯಿತೋ ಏನೋ. ಯಾವಾಗಲಾದರೂ ಒಮ್ಮೆ ಅವನ ಮುಖ ಕೊಂಚ ಹೊತ್ತು ದಿಟ್ಟಿಸಿದರೆ ತಟ್ಟನೆ ಕಣ್ಣು ಹೊರಳಿಸಿ, ಪುಸ್ತಕ ತೆಗೆದು ಹಾಳೆ ತಿರುವಿಹಾಕುತ್ತಿದ್ದ.
ಪ್ರಯಾಣದ ಎರಡನೆಯ ದಿನ ಸಂಜೆ. ಕತ್ತಲಿಳಿಯುತ್ತಿತ್ತು. ಯಾವುದೋ ದೊಡ್ಡ ಸ್ಟೇಶನ್ನು ಬಂದಿತ್ತು. ರೈಲು ಬಹಳ ಹೊತ್ತು ನಿಂತಿತ್ತು. ಅವನು ಎದ್ದು ಹೋಗಿ ಬಿಸಿ ನೀರು ತಂದು ಟೀ ಮಾಡಿಕೊಂಡ. ಲಾಯರು ಟೀ ಕುಡಿಯಲು ಹೆಂಗಸಿನ ಜೊತೆ ಇಳಿದು ಹೋದ.
ಅವರು ಇಳಿದು ಹೋಗಿದ್ದಾಗ ಎಷ್ಟೋ ಹೊಸಬರು ನಮ್ಮ ಬೋಗಿಗೆ ಹತ್ತಿಕೊಂಡರು. ಅವರಲ್ಲಿ ಒಬ್ಬ, ನೀಟಾಗಿ ಕ್ಷೌರ ಮಾಡಿಕೊಂಡಿದ್ದ ಎತ್ತರವಾಗಿದ್ದ ಮುದುಕ. ಮುಖದ ತುಂಬ ಗೆರೆಗಳಿದ್ದವು. ನೋಡಿದರೆ ಬ್ಯುಸಿನೆಸ್ ಮ್ಯಾನ್ ಅಂತ ನೋಡಿದರೇ ತಿಳಿಯುತ್ತಿತ್ತು. ಫರ್ ಕೋಟು ಹಾಕಿಕೊಂಡು ತಲೆಗೆ ದೊಡ್ಡ ಕ್ಯಾಪು ಹಾಕಿಕೊಂಡಿದ್ದ. ಲಾಯರು ಮತ್ತು ಅವನ ಗೆಳತಿ ಕುಳಿತಿದ್ದ ಸೀಟುಗಳಿಗೆ ಎದುರಿಗೆ ಇದ್ದ ಖಾಲಿ ಸೀಟಿನಲ್ಲಿ ಕೂತುಕೊಂಡ. ಕೂತವನೇ ತನ್ನ ಜೊತೆಯಲ್ಲೇ ರೈಲು ಹತ್ತಿದ್ದ, ಸೇಲ್ಸ್‌ಕ್ಲಾರ್ಕ್‌ನನ ಹಾಗೆ ಕಾಣುತ್ತಿದ್ದ ಯುವಕನ ಜೊತೆ ಮಾತಿಗೆ ಶುರುಹಚ್ಚಿಕೊಂಡ.
ನಾನು ಇವರಿಗೆ ಓರೆಯಾಗಿ ಎದುರಾದ ಸೀಟಿನಲ್ಲಿದ್ದೆ. ರೈಲು ನಿಂತಿತ್ತು. ನಮ್ಮ ನಡುವೆ ಯಾರೂ ಅತ್ತ ಇತ್ತ ಓಡಾಡದೆ ಇದ್ದಾಗ ಅವರ ಮಾತು ಕೇಳಿಸುತ್ತಿತ್ತು. ‘ಆ ಸೀಟಿನಲ್ಲಿ ಯಾರೋ ಇದ್ದಾರೆ ಅಂತ ಕಾಣುತ್ತದೆ’ ಎಂದ ಯುವಕ. ಅದಕ್ಕೆ ಮುದುಕ ‘ನಾನು ಮುಂದಿನ ಸ್ಟೇಷನ್ನಿನಲ್ಲೇ ಇಳಿಯುತ್ತೇನೆ’ ಅಂದ. ಹೀಗೆ ಶುರುವಾಗಿ. ಮಾಮೂಲಾಗಿ ಬೆಲೆಗಳ ಬಗ್ಗೆ ಮಾತನಾಡಿದರು. ಮಾಸ್ಕೊ ಮಾರ್ಕೆಟ್ಟಿನ ಬಗ್ಗೆ ಮಾತನಾಡಿದರು. ನಿಜಿನಿ ನೊವೊಗೊರೊಡ್ ಫೇರ್ ಬಗ್ಗೆ ಮಾತು ಹೊರಳಿತು. ಅವರಿಬ್ಬರಿಗೂ ಪರಿಚಯ ಇದ್ದ ಮತ್ತೊಬ್ಬ ಬ್ಯುಸಿನೆಸ್‌ಮ್ಯಾನು ಅಲ್ಲಿ ಹೇಗೆ ಮಜಾ ಉಡಾಯಿಸುತ್ತಿದ್ದಾನೆ ಎಂದು ಕ್ಲಾರ್ಕು ಹೇಳಿದ. ಅವನು ಮಾತು ಮುಂದುವರೆಸಲು ಬಿಡದೆ ಮುದುಕ ವ್ಯಾಪಾರಿ ಕಳೆದ ವರ್ಷ ಕುನಾವಿನೊದಲ್ಲಿ ನಡೆದ ಎಕ್ಸಿಬಿಶನ್ನು, ಅಲ್ಲಿದ್ದ ಸಂಭ್ರಮ, ಅಲ್ಲಿ ಕ್ಲಾರ್ಕಿಗೂ ಗೊತ್ತಿರುವ ಆ ಅವನೂ ತಾನೂ ಕುಡಿದು ಟೈಟಾಗಿ ಎಂತೆಂಥ ಪೋಲಿ ಕೆಲಸ ಮಾಡಿದ್ದೆವು ಅವನ್ನು ಗುಟ್ಟಾಗಿ ಕಿವಿಯಲ್ಲಷ್ಟೆ ಹೇಳಬೇಕು ಅಂದ. ಅವನ ಮುಖದಲ್ಲಿ ಲಂಪಟತನದ ಜಂಬ ಹೊಳೆಯುತ್ತಿತ್ತು.
ಕ್ಲಾರ್ಕಿನ ನಗು ರೈಲಿನ ಬೋಗಿಯನ್ನೆಲ್ಲ ತುಂಬಿತು. ಮುದುಕನೂ ನಗುತ್ತಿದ್ದ. ನಕ್ಕಾಗ ಎರಡು ಹಳದಿ ಹಲ್ಲುಗಳು ಕಾಣುತ್ತಿದ್ದವು. ಅವರ ಮಾತು ಇಷ್ಟ ಆಗಲಿಲ್ಲ. ರೈಲು ಹೊರಡುವವರೆಗೆ ಇಳಿದು ಕೊಂಚ ಕಾಲಾಡಿಸೋಣವೆಂದು ಎದ್ದೆ. ನಮ್ಮ ಬೋಗಿಯ ಬಾಗಿಲಲ್ಲಿ ಲಾಯರು ಮತ್ತು ಅವನ ಗೆಳತಿ ಎದುರಾದರು. ಗಟ್ಟಿಯಾಗಿ ಮಾತಾಡುತ್ತಿದ್ದರು.
“ಇಳಿಯುವುದಕ್ಕೆ ಟೈಮಿಲ್ಲ, ಇನ್ನೇನು ಎರಡನೆಯ ಬೆಲ್ಲು ಆಗುತ್ತದೆ” ಎಂದ ಲಾಯರು.
ರೈಲಿನ ತುದಿ ಮುಟ್ಟುವುದರೊಳಗೆ ಮತ್ತೆ ಬೆಲ್ಲು ಆಯಿತು. ವಾಪಸ್ಸು ಬಂದೆ. ಬಂದಾಗ ಲಾಯರು ಹೆಂಗಸಿಗೆ ಉತ್ಸಾಹದಿಂದ ಹೇಳುತ್ತಿದ್ದ. ಅವನೆದುರು ಕುಳಿತಿದ್ದ ವ್ಯಾಪಾರಿ ಮೌನವಾಗಿದ್ದ.ಅವರ ಮಾತು ಹಿಡಿಸಲಿಲ್ಲವೆಂಬಂತೆ ಹಲ್ಲು ಕಡಿಯುತ್ತಾ ನೆಟ್ಟಗೆ ಎದುರಿಗೇ ದೃಷ್ಟಿ ನೆಟ್ಟು ಕೂತಿದ್ದ.
“ಆಮೇಲೆ ಏನಾಯಿತೆಂದರೆ,” ಲಾಯರನ್ನು ದಾಟಿ ಹೋಗುವಾಗ ಮುಗುಳ್ನಗುತ್ತಾ ಹೇಳುತ್ತಿದ್ದದ್ದು ಕೇಳಿಸಿತು “ಆಮೇಲೆ ಏನಾಯಿತೆಂದರೆ, ನಿನ್ನ ಜೊತೆ ಬದುಕುವುದಕ್ಕೆ ನನಗೆ ಇಷ್ಟವಿಲ್ಲ, ನಿನ್ನ ಜೊತೆ ಇರುವುದೂ ಇಲ್ಲ ಎಂದು ಗಂಡನಿಗೆ ಹೇಳಿಬಿಟ್ಟಳು. ಯಾಕೆಂದರೆ...”
ಅವನು ಮಾತು ಮುಂದುವರೆಸಿದ್ದ. ಟಿಟಿ ಬಂದಿದ್ದ. ನನ್ನ ಹಿಂದೆಯೇ ಕೆಲವರು ಪ್ರಯಾಣಿಕರು ಹತ್ತಿದ್ದರು. ಪೋರ್ಟರು ಆತುರಾತುರವಾಗಿ ನುಗ್ಗುತ್ತಿದ್ದ. ಗಲಾಟೆಯಲ್ಲಿ ಅವರ ಮಾತು ಕೇಳಿಸಲಿಲ್ಲ. ಸದ್ದಡಗಿದಮೇಲೆ ಮತ್ತೆ ಲಾಯರನ ಧ್ವನಿ ಕೇಳಿಸಿತು. ಈಗ ಲೋಕಾಭಿರಾಮವಾಗಿ ಮಾತಾಡುತ್ತಿದ್ದ.
“ಯೂರೋಪಿನಲ್ಲಿ ಎಲ್ಲ ಕಡೆಯೂ ಡೈವೋರ್ಸಿನ ವಿಷಯ ಮಾತಾಡುತ್ತಿದ್ದಾರೆ, ಈಗ ರಶಿಯಾದಲ್ಲೂ ಅಂಥ ಕೇಸುಗಳು ಜಾಸ್ತಿಯಾಗಿವೆ” ಅನ್ನುತ್ತಿದ್ದ. ಒಬ್ಬನೇ ಮಾತಾಡುತ್ತಿದ್ದೇನೆ ಅನ್ನಿಸಿ ಮುದುಕನನ್ನೂ ಮಾತಿಗೆಳೆಯಲು ಬಯಸಿದ. “ಹಿಂದಿನ ಕಾಲದಲ್ಲಿ ಹೀಗೆ ಆಗುತ್ತಿರಲಿಲ್ಲ ಅಲ್ಲವೇ?” ಅಂತ ನಗುತ್ತಾ ಕೇಳಿದ.
ಅವನು ಉತ್ತರಕೊಡುವಷ್ಟರಲ್ಲಿ ರೈಲು ಹೊರಟಿತು. ಮುದುಕ ಕ್ಯಾಪನ್ನು ತೆಗೆದು, ಎದೆಯ ಮೇಲೆ ಶಿಲುಬೆಯ ಆಕಾರ ಬರೆದುಕೊಂಡು, ಪ್ರಾರ್ಥನೆ ಹೇಳಿಕೊಳ್ಳಲು ಶುರುಮಾಡಿದ. ಲಾಯರು ಸಭ್ಯತೆಯಿಂದೆಂಬಂತೆ ಬೇರೆಯ ಕಡೆ ನೋಡುತ್ತಾ ಉತ್ತರಕ್ಕಾಗಿ ಕಾಯುತ್ತಿದ್ದ. ಪ್ರಾರ್ಥನೆ ಮುಗಿಸಿ, ಎದೆಯ ಮೇಲೆ ಮೂರು ಬಾರಿ ಶಿಲುಬೆಯ ಆಕಾರದಲ್ಲಿ ಕೈ ಆಡಿಸಿ, ತಲೆಯ ಮೇಲಿನ ಕ್ಯಾಪು ಸ್ವಲ್ಪ ಹಣೆಯನ್ನು ಮುಚ್ಚುವ ಹಾಗೆ ಎಳೆದುಕೊಂಡು, ಕೂತಿದ್ದ ಭಂಗಿ ಒಂದು ಚೂರು ಬದಲಾಯಿಸಿ ಮಾತು ಶುರು ಮಾಡಿದ.
“ಹೌದು ಸಾರ್. ಹಿಂದಿನ ಕಾಲದಲ್ಲೂ ಆಗುತ್ತಾ ಇತ್ತು. ಬಟ್, ಅಪರೂಪ. ಇವತ್ತಿನ ಕಾಲದಲ್ಲಿ ಜಾಸ್ತಿ ಆಗಿದೆ. ಜನ ಎಜುಕೇಟೆಡ್ ಆಗಿಬಿಟ್ಟಿದಾರೆ” ಎಂದ.
ರೈಲಿನ ಸ್ಪೀಡು ಜಾಸ್ತಿ ಆಗಿತ್ತು. ಕೊಂಚ ಓಲಾಡುತ್ತಿತ್ತು. ಹಳಿಗಳ ಜಾಯಿಂಟು ಬಂದಾಗೆಲ್ಲ ಸದ್ದು ಹೆಚ್ಚಾಗುತ್ತಿತ್ತು. ಮುದುಕನ ಮಾತುಗಳು ಸ್ಪಷ್ಟವಾಗಿ ಕೇಳಲಿಲ್ಲ. ಅವನ ಮಾತು ಆಸಕ್ತಿ ಕೆರಳಿಸಿದ್ದರಿಂದ ಕೊಂಚ ಅತ್ತ ಸರಿದೆ. ನನ್ನ ಪಕ್ಕದಲ್ಲಿದ್ದ ಒಂಟಿ ಮನುಷ್ಯನಿಗೂ ಆಸಕ್ತಿ ಹುಟ್ಟಿದ್ದಂತಿತ್ತು. ಕುಳಿತ ಭಂಗಿ ಬದಲಾಯಿಸದೆ ಅವನೂ ಕಿವಿಕೊಟ್ಟಿದ್ದ.
“ಎಜುಕೇಶನ್ನಿನದು ಏನು ತಪ್ಪು?” ಹೆಂಗಸು ಕೇಳಿದಳು. ಅವಳ ಮುಖದ ಮೇಲೆ ಕಂಡೂ ಕಾಣದಂತೆ ನಗು ಸುಳಿಯುತ್ತಿತ್ತು. “ಹಿಂದಿನ ಕಾಲದಲ್ಲಿ ಗಂಡು ಹೆಣ್ಣು ಒಬ್ಬರನ್ನೊಬ್ಬರು ನೋಡದೆಯೇ ಮದುವೆ ಆಗುತ್ತಿದ್ದರು. ಈಗಲೂ ಹಾಗೆಯೇ ಆಗುವುದು ಒಳ್ಳೆಯದಾ?” ಎದುರಿಗಿರುವವರು ಆಡಿದ ಮಾತಿಗೆ ಉತ್ತರ ಕೊಡುವುದಕ್ಕಿಂತ ಅವರು ಆಡಬಹುದು ಅನ್ನಿಸಿದ ಮಾತಿಗೆ ಹೆಂಗಸರು ಉತ್ತರ ಕೊಡುತ್ತಾರಲ್ಲ ಹಾಗೆಯೇ ಆಕೆಯೂ ಮಾತಾಡಿದಳು. “ಹೆಂಗಸರಿಗೆ ಗಂಡ ತಮ್ಮನ್ನು ಲವ್ ಮಾಡುತ್ತಾನೋ, ಗಂಡನ ಬಗ್ಗೆ ತಮ್ಮಲ್ಲಿ ಪ್ರೀತಿ ಹುಟ್ಟುತ್ತದೋ ಯಾವುದೂ ಗೊತ್ತಿಲ್ಲದೆ ತಮ್ಮನ್ನು ಒಪ್ಪಿದ ಮೊದಲ ಗಂಡನ್ನು ಮದುವೆ ಆಗಿಬಿಡುತ್ತಿದ್ದರು. ಹಾಗಿದ್ದಿದ್ದರೆ ಚೆನ್ನಾಗಿರುತಿತ್ತೋ?” ಮುದುಕನ ಮಾತಿಗೆ ಉತ್ತರ ಕೊಡುತ್ತಿದ್ದರೂ ಲಾಯರನ್ನೂ ನನ್ನನ್ನೂ ಉದ್ದೇಶಿಸಿ ಕೇಳಿದಹಾಗಿತ್ತು.
ಅವಳ ಮಾತು ಕೇಳಿಸಿಕೊಳ್ಳದವನ ಹಾಗೆ “ಜನಾ ಅತೀ ಬುದ್ಧಿವಂತರಾಗಿಬಿಟ್ಟಿದಾರೆ” ಎಂದು ಮುದುಕ ತಿರಸ್ಕಾರದಿಂದ ಹೇಳಿದ.
“ಎಜುಕೇಶನ್ನಿಗೂ ಗಂಡ ಹೆಂಡತಿಯರ ನಡುವೆ ಹುಟ್ಟುವ ಡಿಫರೆನ್ಸುಗಳಿಗೂ ಏನು ಸಂಬಂಧ?” ಹೌದೋ ಅಲ್ಲವೋ ಅನ್ನುವ ಹಾಗೆ ನಗುತ್ತಾ ಲಾಯರು ಕೇಳಿದ.
ಮುದುಕ ಏನೋ ಹೇಳಬೇಕೆಂದಿದ್ದ. ಆದರೆ ಹೆಂಗಸು ನಡುವೆಯೇ “ಇಲ್ಲ. ಆ ಕಾಲ ಎಲ್ಲಾ ಹೊರಟು ಹೋಯಿತು” ಅಂದಳು.
ಲಾಯರು ಅವಳ ಮಾತನ್ನು ತಡೆಯುತ್ತಾ “ತಾಳಿ. ಅವರ ಅಭಿಪ್ರಾಯ ಹೇಳಲಿ” ಅಂದ.
“ಯಾಕೆ ಅಂದರೆ, ಈಗ ಯಾರಲ್ಲೂ ಭಯ ಇಲ್ಲಾ” ಎಂದ ಮುದುಕ.
“ಪರಸ್ಪರ ಪ್ರೀತಿ ಇಲ್ಲದವರ ಮದುವೆ ಹೇಗೆ ಮಾಡಿಸುತ್ತೀರಿ? ಪ್ರಾಣಿಗಳನ್ನು ಮಾತ್ರ ಓನರು ತನ್ನ ಇಷ್ಟ ಬಂದ ಹಾಗೆ ಜೋಡಿ ಮಾಡಬಹುದು. ಮನುಷ್ಯರಿಗೆ ಆಸೆಗಳಿರುತ್ತವೆ, ಇಷ್ಟ ಅನಿಷ್ಟಗಳು ಇರುತ್ತವೆ” ಎಂದು ಹೇಳುತ್ತಾ ಹೆಂಗಸು ಲಾಯರಿನತ್ತ, ನನ್ನತ್ತ, ಮತ್ತು ಎದ್ದು ನಿಂತು ಸೀಟಿನ ಮೇಲೆ ಮೊಳಕೈ ಊರಿ, ಬಗ್ಗಿ ನಿಂತು, ನಸುನಗುತ್ತಾ ಮಾತನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಕ್ಲಾರ್ಕಿನತ್ತ ಕೂಡ ದೃಷ್ಟಿ ಹಾಯಿಸಿದಳು. ಮುದುಕ ಕೆರಳಬೇಕು ಎಂದು ಅವಳು ಬಯಸಿದ ಹಾಗಿತ್ತು.
“ನೀವು ಹೇಳುವುದು ತಪ್ಪು ಪ್ರಾಣಿಗಳು ಎಷ್ಟೆಂದರೂ ಪ್ರಾಣಿಗಳು. ಮನುಷ್ಯರು ಕಾನೂನಿನ ಪ್ರಕಾರ ಬದುಕಬೇಕು” ಅಂದ ಮುದುಕ.
“ಆದರೂ ಪ್ರೀತಿಯಿಲ್ಲದ ಗಂಡನ ಜೊತೆಗೆ ಬದುಕುವುದು ಹೇಗೆ?” ಎಲ್ಲರೂ ತಾನಾಡುವ ಮಾತು ಗಮನಕೊಟ್ಟು ಕೇಳುತ್ತಿದ್ದಾರೆ ಎಂದು ಗೊತ್ತಾಗಿ ಉತ್ತೇಜಿತಳಾಗಿ ಕೇಳಿದಳು. ತನಗೇ ಹೊಸ ಹೊಸ ವಿಚಾರಗಳು ಹೊಳೆಯುತ್ತಿವೆ ಎಂಬಂತೆ ವಾದಮಾಡಲು ತೊಡಗಿದ್ದಳು.
“ಮುಂಚೆ ಇದೆಲ್ಲಾ ಇರಲಿಲ್ಲ” ಮುದುಕ ಗಂಭೀರವಾಗಿ ಹೇಳಿದ. “ಪ್ರೀತಿ ಗೀತಿ ಅಂತೆಲ್ಲ ಈಗ ಕೇಳುತಾ ಇದೇವೆ. ಸಣ್ಣ ಮನಸ್ತಾಪ ಆದರೂ ಸಾಕು, ‘ನಾನು ಮನೆ ಬಿಟ್ಟು ಹೋಗತೀನಿ’ ಅನ್ನುತ್ತಾಳೆ ಹೆಂಡತಿಯಾದವಳು. ರೈತರೂ ಹಳ್ಳಿಯವರೂ ಇದನ್ನೇ ಕಲಿತುಬಿಟ್ಟಿದಾರೆ. ‘ನಿನ್ನ ಸಹವಾಸ ಸಾಕಾಯಿತು, ಹೊರಟೆ; ಇನ್ನು ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ; ವಾನ್ಕಾ ಜೊತೆ ಹೋಗುತಿದೀನಿ, ಅವನು ನಿನಗಿಂತ ಸಾವಿರಪಾಲು ವಾಸಿ’ ಅನ್ನುತಾಳೆ ಹೆಂಡತಿಯಾದವಳು. ಬೇಕಾದರೆ ಹೋಗಿ ಮಾತಾಡಿಸಿ ನೋಡಿ. ಏನಾದರೂ ಆಗಲಿ, ಹೆಂಡತಿಯಾದವಳಿಗೆ ಮೊದಲು ಭಯ ಇರಬೇಕು.”
ಕ್ಲಾರ್ಕು ಲಾಯರತ್ತ ನೋಡಿದ, ಹೆಂಗಸಿನತ್ತ ನೋಡಿದ, ನನ್ನತ್ತ ನೋಡಿದ. ಕಷ್ಟಪಟ್ಟು ನಗು ತಡೆದುಕೊಂಡಿದ್ದ. ಮಿಕ್ಕವರನ್ನು ನೋಡಿಕೊಂಡು ವ್ಯಾಪಾರಿಯ ಮಾತನ್ನು ವಿರೋಧಿಸುವುದಕ್ಕೂ ಸಮರ್ಥಿಸುವುದಕ್ಕೂ ಸಿದ್ಧನಾಗಿದ್ದ.
“ಎಂಥಾ ಭಯ?” ಹೆಂಗಸು ಕೇಳಿದಳು.
“ಎಂಥಾ ಭಯ ಅಂದರೆ--ಹೆಂಡತಿಗೆ ಗಂಡನ ಬಗ್ಗೆ ಭಯ ಇರಬೇಕು.”
“ಆ ಕಾಲ ಈಗಿಲ್ಲ ಅಜ್ಜಾ” ಎಂದು ಕಹಿಯಾಗಿ ನುಡಿದಳು.
“ಇಲ್ಲಮ್ಮಾ, ಕಾಲದ ಪ್ರಶ್ನೆ ಅಲ್ಲ ಇದು. ದೇವರು ಈವ್‌ಳನ್ನು ಗಂಡಸಿನ ಪಕ್ಕೆಲುಬು ತೆಗೆದು ಸೃಷ್ಟಿಮಾಡಿದ. ಈ ಲೋಕ ಇರುವವರೆಗೂ ಅವಳು ಗಂಡಿಗೆ ಅಧೀನವಾಗಿಯೇ ಇರಬೇಕು” ಎಂದು ಅಧಿಕಾರವಾಣಿಯಿಂದ ತಲೆದೂಗುತ್ತ ವ್ಯಾಪಾರಿ ನುಡಿದ್ದನ್ನು ಕಂಡು, ಗೆಲುವು ಅವನದೇ ಎಂದು ನಿರ್ಧರಿಸಿ ಕ್ಲಾರ್ಕು ಜೋರಾಗಿ ನಕ್ಕುಬಿಟ್ಟ.
“ಹೌದು, ನೀವು ಗಂಡಸರು ಹಾಗಂದುಕೊಳ್ಳುತ್ತೀರಿ” ಅವಳು ಸೋಲೊಪ್ಪದವಳಂತೆ ನಮ್ಮತ್ತ ತಿರುಗಿ ಹೇಳಿದಳು. “ನಿಮಗೆ ನೀವೇ ಸ್ವಾತಂತ್ರ್ಯ ಕೊಟ್ಟುಕೊಂಡಿದ್ದೀರಿ. ಹೆಂಗಸನ್ನ ನಿಮ್ಮ ಅಧೀನದಲ್ಲಿಟ್ಟುಕೊಳ್ಳಬೇಕು ಅನ್ನುತ್ತೀರಿ. ಗಂಡಸು ಮಾತ್ರ ಏನು ಬೇಕಾದರೂ ಮಾಡಬಹುದು, ಅನ್ನುವಂತೆ ಎಲ್ಲಾ ವಿಚಾರದಲ್ಲೂ ಸ್ವತಂತ್ರ ಕೊಟ್ಟುಕೊಳ್ಳುತ್ತೀರಿ.”
“ಗಂಡಸು,--ಗಂಡಸಿನ ಮಾತು ಬೇರೆ.”
“ಹಾಗಾದರೆ ನಿಮ್ಮ ಪ್ರಕಾರ ಗಂಡಸು ಏನು ಬೇಕಾದ್ದು ಮಾಡಬಹುದಾ?”
“ನಮಗೆ ಯಾರೂ ಪರ್ಮಿಶನ್ನು ಕೊಡುವುದಿಲ್ಲ. ಒಂದು ವೇಳೆ ಗಂಡಸು ಫ್ಯಾಮಿಲಿಯ ಆಚೆ ಕೆಟ್ಟದಾಗಿ ನಡೆದುಕೊಂಡರೆ ಅದರಿಂದ ಫ್ಯಾಮಿಲಿಗೇನೂ ತೊಂದರೆ ಇಲ್ಲ. ಆದರೆ, ಹೆಂಗಸು, ಹೆಂಡತಿ ಅಂದರೆ ಒಡೆದು ಹೋಗುವ ಗಾಜಿನ ಪಾತ್ರೆ ಇದ್ದಹಾಗೆ” ವ್ಯಾಪಾರಿ ಕಠಿಣವಾಗಿ ಹೇಳಿದ.
ಅವನ ಅಧಿಕಾರವಾಣಿ ಕೇಳುತ್ತಿದ್ದವರನ್ನೆಲ್ಲ ಮರುಳುಮಾಡಿತು. ಹೆಂಗಸು ಕೂಡ ಮೆತ್ತಗಾದಳು. ಆದರೂ ಸೋಲೊಪ್ಪದೆ “ಸರಿ, ಹೆಂಗಸು ಕೂಡ ಮನುಷ್ಯಳು, ಅವಳಿಗೂ ಗಂಡನಿಗೆ ಇರುವ ಹಾಗೆಯೇ ಫೀಲಿಂಗುಗಳು ಇರುತ್ತವೆ ಅನ್ನುವುದನ್ನು ಒಪ್ಪುತ್ತೀರಲ್ಲಾ. ಅವಳಿಗೆ ಗಂಡನ ಬಗ್ಗೆ ಪ್ರೀತಿ ಇರದಿದ್ದರೆ ಏನು ಮಾಡಬೇಕು?”
“ಗಂಡನ ಬಗ್ಗೆ ಪ್ರೀತಿ ಇರದಿದ್ದರೆ ಏನು ಮಾಡಬೇಕು!” ಮುದುಕ ಬಿರುಗಾಳಿಯಂತೆ ಅವಳ ಮಾತನ್ನೇ ತಿರುಗಿಸಿ, ಹುಬ್ಬೇರಿಸಿ, ಇರುವ ಎರಡು ಹಲ್ಲು ಕಚ್ಚಿ ಕೇಳಿದ. “ಏನು ಮಾಡಬೇಕು, ಗಂಡನನ್ನು ಪ್ರೀತಿಸುವಹಾಗೆ ಮಾಡಬೇಕು. ಪ್ರೀತಿ ಮಾಡೇ ಮಾಡುತಾಳೆ.”
ಈ ಅನಿರೀಕ್ಷಿತವಾದ ವಿವಾದ ಕ್ಲಾರ್ಕಿಗೆ ಸಂತೋಷ ತಂದಿತ್ತು. ಅವನು ಹೌದೆನ್ನುವಂತೆ ಗೊಣಗುಟ್ಟಿದ.
“ಇಲ್ಲಾ ಇಲ್ಲಾ. ಬಲವಂತ ಮಾಡಬಾರದು. ಪ್ರೀತಿ ಇರದಿದ್ದರೂ ಪ್ರೀತಿಸುವಂತೆ ಒತ್ತಾಯ ಮಾಡಬಾರದು” ಅಂದಳು ಹೆಂಗಸು.
“ಒಂದುವೇಳೆ ಹೆಂಡತಿ ಗಂಡನಿಗೆ ಮೋಸಮಾಡಿದರೆ ಏನು ಮಾಡಬೇಕು?” ಲಾಯರು ಕೇಳಿದ.
“ಹಾಗಾಗುವುದಕ್ಕೆ ಬಿಡಬಾರದು. ಗಂಡನಾದವನು ಹುಷಾರಾಗಿರಬೇಕು” ಎಂದ ವ್ಯಾಪಾರಿ.
“ಹುಷಾರಾಗಿದ್ದರೂ ಮೋಸ ಮಾಡಿದರೆ? ಹಾಗಾಗುತ್ತದಲ್ಲವೇ ಎಷ್ಟೋ ಸಾರಿ?”
“ಅದೇನಿದ್ದರೂ ಶ್ರೀಮಂತರ ಮನೆಗಳಲ್ಲಿ ನಡೆಯುತ್ತದೆ. ನಮ್ಮಲ್ಲಿ ಅಲ್ಲ.” ಮುದುಕ ಹೇಳಿದ. “ಗಂಡನಾದವನು ಹೆಂಡತಿಯನ್ನು ಆಳಲಾರದಷ್ಟು ಪೆದ್ದನಾಗಿದ್ದರೆ ಏನೂ ಮಾಡುವುದಕ್ಕಾಗುವುದಿಲ್ಲ. ಆದರೆ ಹಾದಿಮಾತು ಬೀದಿಮಾತು ಆಗಿ ಮರ್ಯಾದೆ ಹೋಗಬಾರದು. ಪ್ರೀತಿ ಇದೆಯೋ ಇಲ್ಲವೋ, ಮನೆ ಮಾತ್ರ ಮುರಿಯಬಾರದು. ಗಂಡನಾದವನು ಹೆಂಡತಿಯನ್ನು ಆಳಬೇಕು. ಅವನಿಗೆ ಅಂಥ ಶಕ್ತಿ ಇದೆ. ಆಳುವುದಕ್ಕೆ ಆಗದಿದ್ದವನು ನಾಮರ್ದ.”
ಎಲ್ಲರೂ ಮೌನವಾಗಿದ್ದರು. ಕ್ಲಾರ್ಕು ಕೊಂಚ ಮುಂದೆ ಬಂದ. ಮಿಕ್ಕವರಿಗಿಂತ ಮಾತಿನಲ್ಲಿ ಹಿಂದೆ ಬೀಳಬಾರದೆಂದು, ಹೇಳಿದ. ಅವನ ಮುಖದಮೇಲೆ ಯಾವಾಗಲೂ ನಗು ಇದ್ದೇ ಇರುತ್ತಿತ್ತು: “ನಮ್ಮ ಬಾಸ್‌ನ ಮನೆಯಲ್ಲಿ ಒಂದು ಗುಲ್ಲಾಯಿತು. ಸರಿ ತಪ್ಪು ಕರೆಕ್ಟಾಗಿ ಹೇಳುವುದು ಕಷ್ಟ. ಬಾಸ್‌ ಮಗನ ಹೆಂಡತಿ ಬಹಳ ಚಾಲೂ. ದಾರಿ ತಪ್ಪುವುದಕ್ಕೆ ಶುರುಮಾಡಿದಳು. ಗಂಡ ತುಂಬ ಏಬಲ್ಲು. ಗಂಭೀರ ಸ್ವಭಾವದವನು. ಕಲ್ಚರ್ಡು. ಮೊದಲು ಅಕೌಂಟೆಂಟಿನ ಜೊತೆ ವ್ಯವಹಾರ ಇಟ್ಟುಕೊಂಡಿದ್ದಳು. ಗಂಡ ಒಳ್ಳೆಯ ಮಾತಿನಲ್ಲಿ ಬುದ್ಧಿ ಹೇಳಿ ನೋಡಿದ. ಆದರೆ ಅವಳು ನಡತೆ ಬದಲಾಯಿಸಿಕೊಳ್ಳಲಿಲ್ಲ. ದುಡ್ಡು ಕದ್ದಳು. ಗಂಡ ಅವಳನ್ನು ಹೊಡೆದ. ಹಟ ಜಾಸ್ತಿ ಆಯಿತು. ಮೊದಲು, ಹೇಳಬಹುದೋ ಬೇಡವೋ, ಆದರೂ... ಚರ್ಚಿನ ಸಂಸ್ಕಾರವೇ ಆಗಿರದಿದ್ದವನ ಜೊತೆ, ಆಮೇಲೆ ಕ್ರಿಶ್ಚಿಯನ್ನೇ ಅಲ್ಲದವನ ಜೊತೆ ಮತ್ತೆ ಒಬ್ಬ ಯಹೂದಿ ಜೊತೆ ಸಂಬಂಧ ಬೆಳೆಸಿದಳು. ಗಂಡ ಏನು ಮಾಡಬೇಕು? ಅವಳ ಕೈಬಿಟ್ಟುಬಿಟ್ಟ.ಈಗ ಬ್ಯಾಚಲರ್ ಥರಾ ಬದುಕಿದ್ದಾನೆ. ಅವಳು ಪೂರಾ ಹಾಳಾಗಿಹೋಗಿದ್ದಾಳೆ.”
“ಅವನು ನಾಮರ್ದ” ಮುದುಕ ಹೇಳಿದ, “ಮೊದಲಿನಿಂದಲೇ ಬಿಗಿಯಾಗಿದ್ದಿದ್ದರೆ ಸರಿಯಾಗುತ್ತಿತ್ತು. ಅವಳು ಗರತಿಯಾಗಿ ಇರೋಳು. ಏನೂ ಆಗತಾ ಇರಲಿಲ್ಲ. ಮೊದಲೇ ಲೂಸು ಬಿಡಬಾರದು. ಮೈದಾನದಲ್ಲಿ ಕುದುರೆಯನ್ನ ಮನೆಯಲ್ಲಿ ಹೆಂಡತಿಯನ್ನು ನಂಬಬಾರದು.”
ಆ ಹೊತ್ತಿಗೆ ಟಿಟಿ ಬಂದ. ಸ್ಟೇಶನ್ನು ಹತ್ತಿರವಾಗುತ್ತಿತ್ತು. ಮುದುಕ ತನ್ನ ಟಿಕೆಟ್ಟು ತೋರಿಸಿದ.
“ಹೆಂಗಸರನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲಾ ಹಾಳಾಗಿಹೋಗುತದೆ.”
“ನೀವು ಸಂಸಾರಸ್ಥ ಗಂಡಸರು, ಕುನಾವಿನೊಗೆ ಹೋದಾಗ ಹೆಂಗಸರ ಜೊತೆ ಮಜಾ ಮಾಡಿದ್ದು ಹೇಳುತ್ತಿದ್ದಿರಲ್ಲಾ?” ಕೇಳದೆ ಸುಮ್ಮನಿರಲು ಆಗಲಿಲ್ಲ ನನಗೆ.
ಕಠಿಣವಾದ ದನಿಯಲ್ಲಿ “ಅದು ಬೇರೆಯದೇ ವಿಷಯ” ಅನ್ನುತ್ತಾ, ಮೈಮೇಲೆ ಗೌನು ಎಳೆದುಕೊಳ್ಳುತ್ತಾ, ಸೀಟಿನ ಕೆಳಗೆ ಇಟ್ಟಿದ್ದ ಚೀಲ ತೆಗೆದುಕೊಂಡು, ಕ್ಯಾಪು ತೆಗೆದು “ಹೋಗಿ ಬರ್ತೇನೆ” ಎಂದೆನ್ನುತ್ತಾ ಇಳಿದು ಹೋಗಿಬಿಟ್ಟ.
(ಮುಂದುವರೆಯುವುದು)

Rating
No votes yet