ಡಿಯೇಗೋ ಮೆರಡೋನ

ಡಿಯೇಗೋ ಮೆರಡೋನ

ಚಿಕ್ಕವನಿದ್ದಾಗ ಬಬ್ಬಲ್ ಗಮ್ ಜೊತೆ ಸಿಗುತ್ತಿದ್ದ ಕಾರ್ಡುಗಳನ್ನು ಜೋಡಿಸುವುದು ಸಹವಾಸದ ಫಲವಾಗಿ ರೂಢಿಯಾಗಿದ್ದ ಹವ್ಯಾಸ. ಸ್ನೇಹಿತರಿಗಿಂತ ಹೆಚ್ಚು ಕಾರ್ಡುಗಳು ನನ್ನ ಬಳಿ ಇರಬೇಕು. ಅವುಗಳಲ್ಲಿ 'ಒಳ್ಳೆಯ ಆಟಗಾರರ ಕಾರ್ಡುಗಳು' ಹೆಚ್ಚಾಗಿರಬೇಕು ಇತ್ಯಾದಿ ಹಂಬಲಗಳು.

'ಬಿಗ್ ಫನ್'ನಲ್ಲಿ ಹೆಚ್ಚು 'ಫನ್' ಇರುತ್ತಿರಲಿಲ್ಲವಾದರೂ ಜೊತೆಗೆ ಸಿಗುತ್ತಿದ್ದ ಕ್ರಿಕೆಟ್ ಆಟಗಾರರ ಕಾರ್ಡು/ಚೀಟಿಗಳಿಗಾಗಿ ಆ ಬಬ್ಬಲ್ ಗಮ್ ಕೊಂಡುಕೊಳ್ಳುತ್ತಿದ್ದೆವು. ಆ ಚೀಟಿಗಳಿಂದ ಮುಂದೆ ಶಾಲೆಯಲ್ಲಿ, ಬೇಸಿಗೆ ರಜೆಯಲ್ಲಿ exchange ಮಾಡಿಕೊಳ್ಳುತ್ತಾ ಸಿಗುತ್ತಿದ್ದದ್ದು ಫನ್ನೋ ಫನ್ನು. ಆ ಚೀಟಿಗಳನ್ನು ಹಿಡಿದು 'ಟ್ರಂಪ್ ಗೇಮ್' ಕೂಡ ಆಡುತ್ತಿದ್ದೆವು.

ಹಾಗೆಯೇ ಫುಟ್‌ಬಾಲ್ ವಿಶ್ವ ಕಪ್ ಹತ್ತಿರ ಬಂತೆಂದರೆ ಸಾಕು ಪುಟ್‌ಬಾಲ್ ಆಟಗಾರರ ಕಾರ್ಡುಗಳನ್ನು ಹೊತ್ತ ಬಬ್ಬಲ್ ಗಮ್ ಪಕ್ಕದ ಶೆಟ್ಟರಂಗಡಿಗೆ ಆಗಲೇ ಲಗ್ಗೆಯಿಟ್ಟುಬಿಡುತ್ತಿದ್ದವು. ವಿಶ್ವ ಕಪ್ ಎಲ್ಲಿ ನಡೆಯುತ್ತಿದೆ, ಯಾವ ಯಾವ ದೇಶಗಳ ತಂಡಗಳು ಭಾಗವಹಿಸುತ್ತಿವೆ ಇತ್ಯಾದಿ ಏನೂ ಗೊತ್ತಿಲ್ಲದ ನಮಗೆ ಬಬ್ಬಲ್ ಗಮ್ ಜೊತೆ ಸಿಗುತ್ತಿದ್ದ ಆಟಗಾರರ ಕಾರ್ಡುಗಳಲ್ಲಿ 'ಯಾವ ಕಾರ್ಡುಗಳು "ಒಳ್ಳೆಯವು"' ಎಂಬುದನ್ನು ಅಳೆಯುವುದು, ಅಥವ ನಿರ್ಧರಿಸುವುದು ತುಂಬ ಇಕ್ಕಟ್ಟಿಗೆ ಸಿಲುಕಿಸುವಂತಹ ಸನ್ನಿವೇಶವಾಗಿಬಿಡುತ್ತಿತ್ತು. ಶೆಟ್ಟರಿಂದ ಕೇಳಿ ಪಡೆದು ನಮ್ಮ ಹವ್ಯಾಸಕ್ಕೆ ತಕ್ಕಂತೆ ಒಳ್ಳೆಯ ಕಾರ್ಡುಗಳನ್ನೇ ಆರಿಸಿಟ್ಟುಕೊಳ್ಳಬೇಕಲ್ಲವೆ?

ಹೀಗಿರುವಾಗ ನನ್ನ ಸ್ನೇಹಿತರೆಲ್ಲರೂ 'ಏ, ಡಿಯಾಗೋ ಮೆರಡೋನ ಕಾರ್ಡು ತಗೊಳ್ಳೋ... ಭಾರಿ ಕಷ್ಟ ಕಣೋ ಅದು ಸಿಗೋದು' ಅಂತ ಕಾರ್ಡು ಹುಡುಕುವಾಗೆಲ್ಲ ಹೇಳುತ್ತಿದ್ದರು. ಆಗ ಮನೆಯಲ್ಲಿ ಕೇಬಲ್ಲೂ ಇಲ್ಲ, ಇರೋ ಒಂದೇ ಒಂದು ಚಾನಲ್ಲು - ದೂರದರ್ಶನ ನೋಡೋಕೆ ಅಪ್ಪ ಬಿಡುತ್ತಲೂ ಇರಲಿಲ್ಲವಾದ್ದರಿಂದ ಎಲ್ಲೆಲ್ಲೋ ನಡೆಯುವ ಆಟಗಳ ದರ್ಶನ ನಮಗೆ ದೂರವೇ. ಇದ್ಯಾರೋ ಡಿಯಾಗೋ ಅಂದರೆ ಭಾರಿ ಇಂಪಾರ್ಟೆಂಟ್ ಮನುಷ್ಯ ಇರಬೇಕು, ಪಟ್ಟಿ ಇರೋ ನೀಲಿ ಶರ್ಟು ಅವಂಗೆ ಭಾಳ ಇಷ್ಟ ಇರಬೇಕು - ಯಾವಾಗಲೂ ಅದನ್ನೇ ಹಾಕ್ಕೋತಾನೆ. ಅವನ ಭಾವಚಿತ್ರ ಇರೋ ಒಂದು ಕಾರ್ಡಿಗೆ ನಮ್ ಫ್ರೆಂಡ್ಸು ಎರಡೆರಡು ಕಾರ್ಡು exchange ಮಾಡ್ತಾರೆ! ಕಪಿಲ್ ದೇವ್ - ಸಿಕ್ಸರ್ ಚೀಟಿ ಕೂಡ ಕೊಡ್ತಾರೆ!! ಎಂದೆಲ್ಲ ಆಲೋಚನೆ ಮಾಡುತ್ತಿದ್ದ ನಮಗೆ ಕಾರ್ಡು ಅದಲಿ-ಬದಲಿ ಮಾಡುವಾಗ ಕೈಗೆ ಸಿಕ್ಕ 'ಕಾರ್ಡು ದೇವೆತೆ'ಯೇ ಸೈ ಎಂಬಂತಾಗಿಹೋಗಿದ್ದ. :)

ಮೆರಡೋನ ಕಾರ್ಡಿಗೆ ಇಷ್ಟು ಬೇಡಿಕೆಯಿರುವಾಗ ಅದು ಕೈ ಸೇರುವುದು, ಅದೂ ಶೆಟ್ಟರ ಅಂಗಡೀಲಿ - ಭಾರೀ ಕಷ್ಟದ ಹಾಗೂ challenging ವಿಷಯ. ಎಲ್ಲ ಹುಡುಗರೂ ಅಲ್ಲಿಗೇ ಬರುತ್ತಿದ್ದರು. ಶೆಟ್ಟರ ಅಂಗಡಿಗೆ ಹೋಗಿ, ಶೆಟ್ಟರ mood ನೋಡ್ಕೊಂಡು, ನಯಸ್ಸಾಗಿ ಮಾತನಾಡಿ, ಬಬ್ಬಲ್ ಗಮ್ ಕೊಂಡು, ಕಾರ್ಡುಗಳ ಕಟ್ಟನ್ನು ಗಿಟ್ಟಿಸಿಕೊಂಡು, ಕಣ್ಣಲ್ಲಿ ಕಣ್ಣಿಟ್ಟು ಬರುವ ಅರೆ-ಬರೆ ಇಂಗ್ಲೀಷಿನಲ್ಲಿ ಮೆರಡೋನ ಹೆಸರನ್ನು ಹುಡುಕುವುದು ಎಲ್ಲರೂ ಹೇಗೋ ರೂಢಿಸಿಕೊಂಡಿದ್ದ ಟ್ಯಾಲೆಂಟು!
ಮೆರಡೋನಾನ ಚಹರೆ ಬೇರೆ ಬೇರೆ ಕಾರ್ಡುಗಳಲ್ಲಿ ಬೇರೆ ಬೇರೆ ತರಹ ಕಾಣುತ್ತಿದ್ದವಾದ್ದರಿಂದ ಹುಡುಕುವುದೂ ಕಷ್ಟವೆ. ಈ ಮಧ್ಯೆ ಕಾರ್ಡು ಸಿಕ್ಕವನಿಗೆ 'ಗೆದ್ದೆ'ನೆಂಬ ಹುರುಪು. ಅಷ್ಟೊಂದು ಇಂಪಾರ್ಟೆಂಟ್ ಮನುಷ್ಯ ಅವ! ;)

ಶಾಲೆಗೆ ಬರುವ ಹೊತ್ತಿಗೆ ಈ ಕಾರ್ಡು ದೈವ ಡಿಯಾಗೋ ಯಾರು ಎಂದು ಗೊತ್ತಾಗಿ ಹೋಯಿತು. (ಕ್ರಿಕೆಟ್ ತಂಡದಲ್ಲಿ ನನಗೆ ಜಾಗವಿರುತ್ತಿರಲಿಲ್ಲವಾದ್ದರಿಂದ ಫುಟ್‌ಬಾಲ್ ಪರಿಚಯವಾಗ ಅದೇ ಹೆಚ್ಚಾಗಿ ಆಡುತ್ತಿದ್ದೆ. ಹೆಚ್ಚಾಗಿ ಚೆಸ್ ಆಡುವ ಹುಡುಗರು ಹೊರಗೆ ಆಟವಾಡಬೇಕೆಂದರೆ ಯಾರೂ ಆಡುವ ಗೋಜಿಗೆ ಹೋಗದ ಫುಟ್‌ಬಾಲೇ ಗತಿ. ನಮ್ಮದೊಂದು ಫುಟ್‌ಬಾಲ್ ಆಡುವ ಗುಂಪೇ ಇತ್ತು). ಆದರೆ ಅವನ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ.

ಈಗ ಇಂಟರ್ನೆಟ್ ಇರೋದ್ರಿಂದ ಮೆರಡೋನ ಬಗ್ಗೆ, ಅವನ ಜೀವನದ ಬಗ್ಗೆ ಇರೋ ಬರೋ ಮಾಹಿತಿಯನ್ನೆಲ್ಲ ಜಾಲಾಡಿಬಿಡಬಹುದು! ಮೆರಡೋನ ಬಗ್ಗೆ ನಮಗೆ ಏನೂ ಗೊತ್ತಿಲ್ಲದಿದ್ದರೂ, ಅವನ ಆಟ ನಮ್ಮಲ್ಲಿ ಯಾರೂ ನೋಡಿಲ್ಲದಿದ್ದರೂ ಆಗ ಅವ ಹೇಗೋ ನಮ್ಮ ಆರಾಧ್ಯ ದೈವವಾಗಿಬಿಟ್ಟಿದ್ದ. ಈಗ ಅವನ ಬಗ್ಗೆ ಓದಿದರೆ 'ಎಂತಹ ಆಟಗಾರ ಇವ, ನಿಜವಾಗಲೂ legendary' ಅನ್ಸತ್ತೆ!

ಇವನ ಬಗ್ಗೆ ಕನ್ನಡ ವಿಕಿಪೀಡಿಯದಲ್ಲೊಂದು ಪುಟ [kn:ಡಿಯೇಗೋ ಮೆರಡೋನ|ಅನುವಾದ ಮಾಡಲು ಪ್ರಾರಂಭಿಸಿದ್ದೇನೆ]. ನೀವೂ ಭಾಗವಹಿಸಿ, ನಾನು ಮಾಡಿರುವ ಕೆಟ್ಟ ಅನುವಾದವನ್ನು ಸರಿಪಡಿಸುವಲ್ಲಿ, ಉಳಿದಿರುವ ಆಂಗ್ಲ ಭಾಗವನ್ನು ಕನ್ನಡಕ್ಕೆ ತರುವಲ್ಲಿ [kn:ಡಿಯೇಗೋ ಮೆರಡೋನ|ಸಹಾಯ ಮಾಡಿ].

Rating
No votes yet