ನಗುವುದಕ್ಕೆ ಕಾರಣ ಬೇಕಿತ್ತಾ?

ನಗುವುದಕ್ಕೆ ಕಾರಣ ಬೇಕಿತ್ತಾ?

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನಿಸುತ್ತವೆ, ಯಾರೋ ಮಾಡಿದ ವ್ಯಂಗ್ಯ ಕುಚೇಷ್ಟೆ ದಡ್ಡತನ ಅನ್ನಿಸುತ್ತದೆ, ನಗುವ ಅವಕಾಶಗಳು ಬಂದಾಗ ಅವುಗಳನ್ನು ಅನುಮಾನಿಸಿ ನೋಡುತ್ತಾರೆ. ನಗುವಂಥ ಸಂದರ್ಭ ಬಂದರೂ ನೋಡಿದವರಿಗೆ ತಮ್ಮದು ವಿವೇಕ ಪೂರ್ಣವಾದ ಮಂದ ಹಾಸ, ಮಿಲಿಯನ್ ಡಾಲರ್ ಸ್ಮೈಲ್ ಎನ್ನಿಸುವಂತೆ ಹಲ್ಕಿರಿಯುತ್ತಾರೆ. ಇವರಿಗೆ ಕಾರಣವಿಲ್ಲದೆ ನಗುವುದೆಂದರೆ ಏನು ಎಂಬುದು ಅರ್ಥವೇ ಆಗದ ಸಂಗತಿ.

ಇವರಿಗೆ ಹೇಳಬೇಕಾದ್ದು ಇಷ್ಟೇ, ‘ಮಹಾ ಸ್ವಾಮಿ ನೀವು ಬಹು ದೊಡ್ಡವರಾಗಿದ್ದೀರಿ. ದೊಡ್ಡ ದೊಡ್ಡದನ್ನು ಕಲಿಯುವ ಪ್ರಕ್ರಿಯೆಯಲ್ಲಿ ನಿಮ್ಮಿಡೀ ಬದುಕನ್ನು ಸವೆಸಿದ್ದೀರಿ. ಅತ್ಯುತೃಷ್ಟವಾದ ಸಿದ್ಧಾಂತಗಳು, ತತ್ವಗಳು, ಬೃಹದ್ಗ್ರಂಥಗಳನ್ನು ಅಧ್ಯಯನ ಮಾಡುವಲ್ಲಿ ನೀವು ಪೂರ್ಣ ಶಕ್ತಿಯನ್ನು ತೊಡಗಿಸಿದ್ದೀರಿ. ಬಹುಶಃ ಈ ಹಂತದಲ್ಲಿ ನೀವು ತುಂಬಾ ಹಿಂದಿನ ಅಂದರೆ ನಿಮ್ಮ ಬಾಲ್ಯದ ಗುಣಗಳನ್ನು ಕೊಂಚ ಮರೆತಿದ್ದೀರಿ. ನೆನಪಿದೆಯೇ ಆಗ ನೀವು ಬಸ್ಸಿನ ಮುಂದಿನ ಸೀಟಿನಲ್ಲಿ ನಿಮ್ಮ ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದಿರಿ. ನಿಮ್ಮ ಹಿಂದಿನ ಸೀಟಿನಲ್ಲಿ ಕುಳಿತ ಅಂಕಲ್ಲೊ, ಆಂಟಿಯೋ ನಿಮ್ಮನ್ನು ನೋಡಿ ‘ಐ ಕಳ್ಳಾ...’ ಎಂದು ಕಣ್ಣು ಮಿಟುಕಿಸಿದರೆ ಸಾಕು ನೀವು ಕಿಲಕಿಲನೇ ನಗುತ್ತಿದ್ದಿರಿ. ಪುನಃ ಅವರು ಕಣ್ಣು ಮಿಟುಕಿಸಿದಾಗ ಮತ್ತೆ ಅಷ್ಟೇ ಲವಲವಿಕೆಯಿಂದ ನಗುತ್ತಿದ್ದಿರಿ. ಪುನಃ ಪುನಃ ಎಷ್ಟು ಬಾರಿ ನಕ್ಕರೂ ನಿಮಗೆ ಆಯಾಸವಾಗುತ್ತಿರಲಿಲ್ಲ. ಬೇಸರವಾಗುತ್ತಿರಲಿಲ್ಲ.

‘ಯೋಚಿಸಿ, ನಿಮಗೆ ಎದುರಿನ ಅಂಕಲ್ಲೋ ಆಂಟಿಯೋ ಯಾವ ಜೋಕನ್ನೂ ಹೇಳುತ್ತಿರಲಿಲ್ಲ. ಅಸಲಿಗೆ ಅವರ ಪರಿಚಯವೂ ನಿಮಗಿರುತ್ತಿರಲಿಲ್ಲ. ಅವರು ಎಂಥವರು, ಅವರ ಸಂಸ್ಕೃತಿ ಎಂಥದ್ದು, ಜಾತಿ ಯಾವುದು, ಆಸಕ್ತಿಗಳ್ಯಾವುವು ಎಂಬುದೊಂದೂ ಗೊತ್ತಿರಲಿಲ್ಲ. ಆದರೆ ಎದುರಿಗಿದ್ದವರ ಮುಖದಲ್ಲಿನ ನಿಷ್ಕಲ್ಮಶ ನಗೆಯನ್ನು ನೀವು ಗುರುತಿಸಿದ್ರಿ, ನೀವೂ ಅಷ್ಟೇ ನಿಷ್ಕಲ್ಮಶವಾಗಿ ನಗುತ್ತಿದ್ದಿರಿ. ನಿಮ್ಮ ನಗುವನ್ನು ಕಂಡು ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಭಯವಾಗುತ್ತಿರಲಿಲ್ಲ. ನಿಮ್ಮ ನಗುವಿನಲ್ಲಿನ ವಿಶ್ವಾಸದಿಂದಾಗಿ ನೋಡಿದವರೆಲ್ಲರೂ ನಿಮ್ಮನ್ನು ನಗಿಸುತ್ತಿದ್ದರು. ನೀವು ನಗುತ್ತಲೇ ಇದ್ದಿರಿ. ನಿಮಗೆ ಕಾರಣಗಳು ಬೇಕಿರಲಿಲ್ಲ ಆಗ ನಗಲು... ನಗು ನಿಮ್ಮೊಳಗಿತ್ತು, ಹೊರಹಾಕಲು ನೆಪಗಳನ್ನು ಮಾತ್ರ ಅಪೇಕ್ಷಿಸುತ್ತಿದ್ದಿರಿ. ಈಗ ಒಳಗಿನ ನಗುವನ್ನು ಬತ್ತಿಸಿಕೊಂಡಿದ್ದೀರಿ, ಕಾರಣಗಳನ್ನು ಹುಡುಕುತ್ತಿದ್ದೀರಿ. ಹೇಳಿ, ನಾವು ನಿಮ್ಮಷ್ಟು ಬುದ್ಧಿವಂತರಲ್ಲ. ಆದರೆ ನಿಮಗೆ ಇದು ವಿವೇಕ ಅನ್ನಿಸುತ್ತದೆಯೇ?’

ಏನಂತೀರಿ, ನಮ್ಮ ನಗು ಕಳುದು ಹೋದದ್ದು ಎಲ್ಲಿ ಎಂಬುದೇನಾದರೂ ನಿಮಗೆ ತಿಳಿಯಿತೇ?

Rating
No votes yet

Comments