ನನ್ನ ಪ್ರತಿಬಿ೦ಬಕ್ಕೆ..

ನನ್ನ ಪ್ರತಿಬಿ೦ಬಕ್ಕೆ..

ಮೊದಲನೇ ಸರ್ತಿ ನಿಮ್ನ ಹೀಗೆ ಕರೀಬೇಕು ಅನ್ಸಿದಾಗ ಎಷ್ಟು ಖುಶಿ ಆಗಿತ್ತು ಗೊತ್ತಾ? ನೀವು ನಿಜಕ್ಕೂ ನನ್ನ ಜೀವನ ಪ್ರೀತಿಯ ಪ್ರತಿಬಿಂಬ ಆಗಿದೀರ... ನನ್ನ ಫ್ರೆಂಡ್ಸ್ ನನ್ನ ಯಾವಾಗ್ಲೂ ರೇಗಿಸ್ತಿರ್ತಾರೆ.. ನೀನು ಏನಾದ್ರು ಸತ್ತು, ಅದು ಆತ್ಮಹತ್ಯೆ ಅಂತ ಏನಾದ್ರೂ ಸುದ್ದಿ ಆದ್ರೆ, ನಾವು ಅದು ಆತ್ಮಹತ್ಯೆ ಅಲ್ವೇ ಅಲ್ಲ ಅಂತ ವಾದಿಸ್ತೀವಿ ಯೋಚಿಸ್ಬೇಡ ಅಂತ... ನಾನು ಅಷ್ಟರ ಮಟ್ಟಿಗೆ ಜೀವನವನ್ನ ಪ್ರೀತಿಸ್ತೀನಿ.... ಆ ಜೀವನಪ್ರೀತಿನೇ ನೀವಾಗಿಬಿಟ್ರಿ... ಈಗ ನನ್ನ ಜೀವನದ ಬಗ್ಗೆ ಇರೋ ಪ್ರೀತಿನೇ ನನಗೆ ಮುಳುವಾಗ್ತಿದೆ... ಇಲ್ಲಾ ಅಂದ್ರೆ ನನ್ನ ಜೀವನಪ್ರೀತಿ ಅಂತ ಭಾವಿಸಿದ ನೀವು ನನ್ನ ಬದುಕಿನಿಂದ ನಿಧಾನಕ್ಕೆ ದೂರಾಗ್ತ ಇದ್ರೂ ಸಾಯ್ಬೇಕು ಅನ್ನಿಸೋದೆ ಇಲ್ಲ ನಂಗೆ... ನಿಮ್ಮನ್ನ ಹೇಗೆ ಉಳಿಸಿಕೊಳ್ಳೋದು ನನ್ನ ಬದುಕಿನಲ್ಲಿ ಅಂತ ಯೋಚಿಸ್ತೀನಿ ಹೊರತು ಬದುಕು ಬೇಡ ಅನ್ನಿಸ್ತಾನೆ ಇಲ್ಲ... ನನ್ನ ಬಗ್ಗೆನೇ ನಂಗೆ ಈ ವಿಷಯಕ್ಕೆ ಸಿಟ್ಟು ಬರುತ್ತೆ.... ಆದ್ರೂ ಜೀವನಪ್ರೀತಿ ಮಾತ್ರ ಎಳ್ಳಷ್ಟೂ ಕಮ್ಮಿ ಆಗಿಲ್ಲ ನೋಡಿ...
 

       ನಿಮಗೆ ಹೃದ್ರೋಗ ಇದೆ ಅನ್ನೋದ್ನ ನಮ್ಮ ಭೇಟಿಯಾದ ಕೆಲವೇ ದಿನಗಳಲ್ಲಿ ಹೇಳಿಬಿಟ್ಟಿದ್ರಿ ನೀವು... ಆಗ ಇನ್ನೂ ಪ್ರಾಯಶಃ ನನ್ನಲ್ಲಿ ನಿಧಾನಕ್ಕೆ ಪ್ರೀತಿ ಹುಟ್ತಾ ಇತ್ತು... ಅಮ್ಮನ ಮುಂದೆ ಹೀಗಂತೆ ಅಮ್ಮ ಅಂತ ಹೇಳೋವಾಗ ಕಣ್ಣಲ್ಲಿ ನೀರಿನ ತೆಳು ಪರದೆ... ಅಮ್ಮ ಆವಾಗ್ಲೇ ಕೇಳಿದ್ರು... ಇಷ್ಟ ಪಡ್ತಿದ್ದೆಯೇನೆ ಅಂತ... ಆಗ ಹೌದು ಅನ್ನಿಸಿತ್ತು... ಈಗ್ಲೂ ಅಮ್ಮ ಒಂದೇ ಮಾತು ಕೇಳ್ತಾರೆ... ಗೊತ್ತಿದ್ದೂ ಗೊತ್ತಿದ್ದೂ ಅದು ಹೇಗೆ ಪ್ರೀತಿಸಿದೆ ಅಂತ... ಏನಂತ ಹೇಳ್ಲಿ ಅಮ್ಮನಿಗೆ? ನನ್ನ ಬದುಕಲ್ಲಿ ನಾನು ನನ್ನ ಜೀವನಸಂಗಾತಿಯ ಬಗ್ಗೆ ಕಲ್ಪಿಸಿಕೊಂಡ ಎಲ್ಲ ಕಲ್ಪನೆಗಳ ಮೂರ್ತರೂಪ ನೀವು ಅಂತ ಹೇಳ್ಲಾ?? ಇಲ್ಲಾ ಪ್ರೀತಿ ಹೇಗಾಯ್ತು ಗೊತ್ತಿಲ್ಲಾ ಅಂತನಾ??

       ನಿಮ್ಮ ಜೊತೆ ಮಾತಾಡ್ತ ಮಾತಾಡ್ತ ನಾನು ನೀವು ಒಂದೇ ತರ ಯೋಚಿಸ್ತೀವಿ, ಒಂದೇ ತರ ಕನಸುಗಳಿವೆ ಅನ್ನೋದು ಗೊತ್ತಾಗ್ತಾ ಒಂತರಾ ಖುಶಿ ಆಗ್ತಿತ್ತು... ನಿಮ್ಮ ಬಗ್ಗೆ ಕಾಳಜಿ ಇತ್ತು... ಯಾವತ್ತೂ ಕರುಣೆ, ಸಾಂತ್ವಾನ ಇರ್ಲಿಲ್ಲ... ನನ್ನ ಕಾಳಜಿ ನಿಮಗೆ ಕರುಣೆ ಸಾಂತ್ವಾನದ ರೂಪದಲ್ಲಿ ಕಂಡು ನೀವೇನಾದ್ರೂ ಹಾಗೆ ರಿಯಾಕ್ಟ್ ಮಾಡಿದ್ರೆ ನಾನು ಜಗಳ ಮಾಡ್ತಿದ್ದೆ ನಿಮ್ಮ ಹತ್ರ.. ನೆನಸಿಕೊಂಡ್ರೆನೇ ನಗು ಬರುತ್ತೆ.. ಕಾಳಜಿ ಅನ್ನೋ ಪದವನ್ನ ಎಲ್ಲಾದ್ರೂ ಕೇಳಿದೀರಾ ಅಂತ ದಬಾಯಿಸ್ತಿದ್ದೆ.. ಆಗ ನೀವು ಬಜಾರಿ ಅಂತ ರೇಗಿಸ್ತಿದ್ರಿ.. ನಿಮ್ಮ ಸೌಮ್ಯ ಸ್ವಭಾವದ ಮುಂದೆ ನಾನು ಭಜಾರಿನೆ... ಅದಿಕ್ಕೆ ಅಲ್ವಾ? ನಾನು ನಿಮ್ಮನ್ನ " ಮೈ ಮೇಲ್ ವರ್ಶನ್ ವಿಥ್ ಫ಼ಿಮೇಲ್ ಫ಼ೀಲಿಂಗ್ಸ್ " ಅಂತ ರೇಗಿಸೋದು....

       ನೀವು ಬರೆದ್ರಲ್ಲ ವಂಚಕ ಹರಿ ಅಂತ ಪತ್ರ... ಅದಿಕ್ಕೇ ಬರೀತಿದೀನಿ... ನೀವು ವಂಚಿಸಿಲ್ಲ... ನನ್ನೆಲ್ಲಾ ಕನಸುಗಳ ಪ್ರತಿಬಿಂಬ ನೀವಾಗಿದ್ದು ವಂಚನೆ ಹೇಗಾಗುತ್ತೆ... ನಾನೆ ನಿಮಗೆ ವಂಚಿಸ್ತಿದೀನಿ... ನಿಮ್ಮನ್ನ ಬಿಟ್ಟು ದೂರಾಗ್ತಿದೀನಿ.. ಅಪ್ಪ ಅಮ್ಮನಿಗೆ ವಿಷಯ ಹೇಳೋ ಅಷ್ಟು ಧೈರ್ಯ ಇಲ್ದೇ ಇರೋಳಲ್ಲ ನಾನು... ಅಪ್ಪ ಅಮ್ಮನಿಗೆ ಹೇಳಿ ಆಯ್ತು... ಆದ್ರೆ ಅವರು ಒಪ್ಪಲ್ಲ ಅನ್ನೋದು ಗೊತ್ತಿತ್ತು. ಅದ್ರಲ್ಲೇನು ಆಶ್ಚರ್ಯ ಇಲ್ಲ... ನೀವು ಈ ಕ್ಷಣ ಗಟ್ಟಿ ಮನಸ್ಸು ಮಾಡಿದ್ರೂ ನಾನು ಮನೇಲಿ ಹಟ ಮಾಡಿ ಒಪ್ಪಿಸ್ತೀನಿ.... ಅಷ್ಟು ನನ್ನ ಕೈಲಿ ಸಾಧ್ಯ... ಆದ್ರೆ ನಿಮಗೆ ಅದು ಇಷ್ಟ ಇಲ್ಲ... ಇಲ್ಲೂ ನನ್ನನ್ನ ಮೀರಿಸಿಬಿಟ್ರಿ... ಅಪ್ಪ ಅಮ್ಮನ್ನ ಒಪ್ಪಿಸಿದ್ರೂ ಅವರು ಖುಶಿಯಾಗಿ ಒಪ್ಪಲ್ಲ ಅಂತ ಹೇಳಿ ದೊಡ್ಡೋರಾದ್ರಿ... ನಾನು ಇನ್ನೂ ಹೆಣಗಾಡ್ತ ಇದ್ದೀನಿ... ಹೇಗೆ ನಿಮ್ಮ ಹಾಗೆ ಪ್ರಬುದ್ಧಳಾಗಿ ಬದುಕನ್ನ ಸ್ವೀಕರಿಸೋದು ಅಂತ... ನಿಜ ಹೇಳ್ತೀನಿ... ನೀವು ನನ್ನೊಟ್ಟಿಗೆ ಇರಲ್ಲ ಅಂತಾದ್ರೆ ಆ ರೀತಿಯ ಪ್ರಬುದ್ಧತೆ ನನಗೆ ಬೇಡ್ವೇ ಬೇಡ ನನ್ನ ಮನಸ್ಸು ಚಂಡಿ ಹಿಡಿದು ಕೂತಿದೆ...

       ನಾನು ಎಷ್ಟೇ ಕೊರಗಿದ್ರೂ ನಿಮ್ಮನ್ನ ಬಿಟ್ಟು ದೂರಾಗ್ಲೇ ಬೇಕು... ಹ್ಮ್... ನೀವು ನನ್ನನ್ನ ಅಸೂಯೆ ಪಡ್ತೀನಿ ಅಂತ ರೇಗಿಸ್ತಿದ್ರಿ ನೆನಪಿದಿಯಾ? ನೀವು ಬೇಕೂಂತ್ಲೇ ಹುಡುಗೀರ ಹೆಸರು ಹೇಳಿ ನನ್ನನ್ನ ರೇಗಿಸ್ತಿದ್ರಿ... ನಾನು ಕಾಲು ಮುರೀತೀನಿ ಅಂತ ರೇಗ್ತಿದ್ದೆ... ಪುಟ್ಟಾ, ಪ್ರಾಯಶಃ ಪ್ರೀತಿಯಲ್ಲಿ ಈ ಅಸೂಯೆಗೆ ವಿಷೇಶ ಸ್ಥಾನ ಇದೆ... ಅಸೂಯೆ ತೋರಿಕೆಗೆ ಮಾತ್ರ ಇರ್ಬೇಕು ಯಾವುದೇ ಸಂಬಂಧದಲ್ಲಿ... ನಮ್ಮ ಸಂಗಾತಿಯ ಬಗ್ಗೆ ಅಪಾರವಾದ ನಂಬಿಕೆ ಇದ್ದೂ ಅವರು ಬೇರೆಯವರ ಬಗ್ಗೆ ಮಾತಾಡಿದಾಗ ಅಸೂಯೆ ಇದೆ ಅನ್ನೋ ಹಾಗೆ ರಿಯಾಕ್ಟ್ ಮಾಡ್ಬೇಕು... ಯಾಕೆ ಗೊತ್ತಾ? ಅಸೂಯೆ ಇದೆ ಅನ್ನೋ ನಾಟಕ ಪ್ರೀತಿಯ ಇನ್ನೊಂದು ರೂಪ.. ಆದ್ರೆ ಅದು ನಿಜವಾದ ಅಸೂಯೆಯಾದ್ರೆ ಸಂಬಂಧದಲ್ಲಿ ಉಸಿರುಗಟ್ಟೋ ಹಾಗೆ ಆಗುತ್ತೆ ಅಂತ ನೀವೆ ಹೇಳ್ತಿದ್ರಿ.. ಈಗ ಅಸೂಯೆಯ ನಾಟಕವನ್ನೂ ಬಿಟ್ಟು ಭಗವಂತನಲ್ಲಿ ಬೇಡೋದು ಒಂದೇ ಒಂದು ವಿಷಯನಾ... ನಿಮ್ಮ ಆಪರೇಷನ್ ಯಶಸ್ವಿಯಾಗಿ ನಿಮಗೆ ಬಂಗಾರದಂತ ಹುಡುಗಿ ಜೊತೆ ಮದುವೆಯಾಗ್ಲಿ.... ನೀವು ಖುಶಿಯಾಗಿ ಇರ್ಬೇಕು...
       ಅಪ್ಪ ಅಮ್ಮನ ಮೇಲೂ ಸಿಟ್ಟಿಲ್ಲ ಪುಟ್ಟಾ... ಯಾಕೆ ಗೊತ್ತಾ? ನಾನು ಅಪ್ಪ ಅಮ್ಮನ ವಿಷಯದಲ್ಲಿ ತುಂಬಾ ಲಕ್ಕಿ... ಮಗಳು ಯಾರನ್ನೋ ಪ್ರೀತಿಸಿದಾಳೆ ಅಂದ್ರೆ ಸಂಕಟ ಪಡ್ತಾರೆ.. ಬೈತಾರೆ... ಹೊಡೆದ್ರೂ ಆಶ್ಚರ್ಯ ಇಲ್ಲ... ಅಂತಾದ್ರಲ್ಲಿ ಮಗಳು ಬಯಸಿದ ವ್ಯಕ್ತಿ ಜೊತೆ ಮದುವೆ ಮಾಡಕ್ಕಾಗದ ಅಸಹಾಯಕರು ನಾವು ಅಂತ ಕಣ್ಣಿರಿಟ್ಟೊರು ನನ್ನ ಅಪ್ಪ ಅಮ್ಮ ಮಾತ್ರ ಇರ್ಬೇಕು... ನಾವಾಗೆ ಹೇಗೆ ಕೊಡೋದು ಅಂತ ನನ್ನೇ ಕೇಳ್ತಾರೆ... ನಿಮ್ಗೆ ಮದ್ವೆ ಮಾಡಿ ಕೊಟ್ಟು ಎಲ್ಲಿ ಜೀವನ ಪೂರ್ತಿ ಕೊರಗ್ತಾರೋ ಅಂತ ಭಯ ಆಗತ್ತೆ.. ಈಕಡೆ ನಿಮ್ಮನ್ನೂ ಬಿಡಕ್ಕಾಗಲ್ಲ... ಆ ಕಡೆ ಇಷ್ಟೋಂದು ಪ್ರೀತಿಸೋ ಅಪ್ಪ ಅಮ್ಮನಿಗೂ ಏನೂ ಹೇಳಕ್ಕಾಗಲ್ಲ... ನನ್ನ ಪರಿಸ್ಥಿತಿ ಯಾರಿಗೂ ಬೇಡ... ಎಷ್ಟೋ ಸರ್ತಿ ಅಪ್ಪ ಅಮ್ಮನಿಗೆ ಹೇಳಿಬಿಡೋಣ, ಹರಿ ಬಿಟ್ಟು ಬೇರೆಯವರನ್ನ ಮದುವ ಆಗಕ್ಕಾಗಲ್ಲ ಅಂತ ಯೋಚಿಸ್ತೀನಿ.... ಆಗ ನೀವು ಕೂಡ ಒಪ್ಪಲ್ಲ ಅನ್ನೋದು ನೆನಪಾಗುತ್ತೆ.... ಒಮ್ಮೊಮ್ಮೆ ನಿಮ್ಮ ಮೇಲೇ ಸಿಟ್ಟು ಬರುತ್ತೆ... ಸ್ವಲ್ಪ ನನ್ನ ಬಗ್ಗೆನೂ ಯೋಚಿಸಿ ಅಂತ ಕಿರುಚಿಕೋಬೇಕು ಅನ್ನಿಸುತ್ತೆ... ಆದ್ರೆ ಮನಸ್ಸಿನಾಳದಲ್ಲಿ ನಿಮ್ಮ ಈ ನಿರ್ಧಾರದ ಬಗ್ಗೆ ಹೆಮ್ಮೆ ಇದೆ... ನನ್ನ ಅಪ್ಪ ಅಮ್ಮನ ಬಗ್ಗೇನೂ ಯೋಚಿಸ್ತೀರಾ ನೀವು ಅಂತ ಖುಶಿ ಇದೆ... ದೇವ್ರು ಕೈಗೆ ಸಿಕ್ರೆ ಸರಿಯಾಗಿ ಜಗಳ ಮಾಡ್ಬೇಕು ಅಂತಿದೀನಿ.. ಇಂತಾ ಒಳ್ಳೇ ಅಪ್ಪ ಅಮ್ಮನ್ನ ಕೊಟ್ಟು, ಇಂತಾ ಒಳ್ಳೇ ವ್ಯಕ್ತಿಯ ಪ್ರೀತಿ ಕೊಟ್ಟೂ ನನ್ನನ್ನ ಹೀಗೆ ಅಸಹಾಯಕಳನ್ನಾಗಿ ಮಾಡಿ ಯಾಕೆ ಮಜ ತಗೋತಿದ್ದೀಯಾ ಅಂತ... ಹೋಗ್ಲಿ ಬಿಡಿ... ಹೀಗೆ ಮಾತಾಡ್ತ ಮಾತಾಡ್ತ ಕಣ್ಣೀರಾಗೋದು ನನಗೆ ಇಷ್ಟ ಇಲ್ಲ...

       ಮುಂದೆ ಏನು ಮಾಡ್ಬೇಕು ಅನ್ನೋದು ನಂಗಂತೂ ಗೊತ್ತಿಲ್ಲ... ನಿಮ್ಮನ್ನ ಮನಸಾರೆ ಪ್ರೀತಿಸಿದೀನಿ.. ಇಷ್ಟು ಮಾತ್ರ ಸತ್ಯ... ಯಾವಾಗ್ಲೂ ಕೈ ಕೊಡೊ ಹುಡುಗ-ಹುಡುಗೀರನ್ನ ಅಪಾರವಾಗಿ ದ್ವೇಷಿಸ್ತಿದ್ದ ನಾನು ಈ ಕ್ಷಣ ಅದೇ ಸಾಲಿನಲ್ಲಿ ಸೇರ್ತಿದ್ದೀನಿ ಅನ್ನೋ ಕಟು ಸತ್ಯ ಕಣ್ಣ ಮುಂದೆ ಕುಣೀತಿದೆ.... ನನ್ನನ್ನ ಕ್ಷಮಿಸಿ ಅಂತ ಕೇಳೋದಿಲ್ಲ... ಯಾಕೆ ಅಂದ್ರೆ ನನ್ನನ್ನೇ ನಾನು ಕ್ಷಮಿಸಿಕೊಳ್ಳೋದಿಲ್ಲ...

       ನಿಮ್ಮ ಆರೋಗ್ಯದ ಬಗ್ಗೆ ಗಮನ ಇರ್ಲಿ... ಗಂಟೆಗಟ್ಲೇ ಆಫೀಸ್ ಅಲ್ಲೇ ಕೂತು ಆರೋಗ್ಯ ಹಾಳು ಮಾಡಿಕೋಬೇಡಿ.... ಹೊತ್ತು ಹೊತ್ತಿಗೆ ಸರಿಯಾಗಿ ಹೊಟ್ಟೆಗೆ ಆಹಾರ ಬೀಳ್ಲಿ... ಬ್ಯಾಗ್ ಅಲ್ಲಿ ಯಾವಾಗ್ಲೂ ಬಿಸ್ಕೇಟ್ ಇಟ್ಕೊಳ್ಳೋದನ್ನ ಮರೀಬೇಡಿ.. ನಿಮಗೆ ಸಡನ್ ಆಗಿ ಹಸಿವಾಗುತ್ತೆ, ಕೈ ಕಾಲು ಆಡಲ್ಲ... ಆಗ ಹುಷಾರು... ಎದೆ ನೋವು ಬಂದಾಗ ಅದನ್ನ ಮುಚ್ಚಿಡೋ ಪ್ರಯತ್ನ ಮಾಡಬೇಡಿ.. ಅಪ್ಪ ಅಮ್ಮನಿಗೆ ವಿಷಯ ತಿಳಿಸಿ... ಮತ್ತೆ ಪ್ಲೀಸ್... ಫಾರ್ಮಲ್ ಡ್ರೆಸ್ ಜೊತೆ ಸ್ಪೋರ್ಟ್ ಷೂಸ್ ಹಾಕ್ಕೋಬೇಡಿ ಆಫೀಸ್ಗೆ ಹೋಗ್ತ...


ಪ್ರಜ್ಞೆ ಇಲ್ಲದ ಪ್ರಜ್ಞ  

 

 

Rating
No votes yet