ನರಸ, ಅಜ್ಜ ಮತ್ತು ಪುಟ್ಟಿ..

ನರಸ, ಅಜ್ಜ ಮತ್ತು ಪುಟ್ಟಿ..

ಮಳೆಗಾಲದ ಶುರುವಿನ ಶನಿವಾರ ಮಧ್ಯಾಹ್ನ ಮನೆಯಲ್ಲೆಲ್ಲ ಮಲಗಿದ್ದರು. ಶಾಲೆಯ ರಜದ ಮಜಕ್ಕೆ ಪುಟ್ಟಿ ಒಬ್ಬಳೆ ಜಗುಲಿಯ ಮೂಲೆಯಲ್ಲಿ ಕೊಡೆ ಬಿಚ್ಚಿಟ್ಟು ಮನೆ ಮಾಡಿಕೊಂಡು ಅಡಿಗೆ ಆಟದ ಸಾಮಾನು ಹರಡಿ ಕೂತಿದ್ದಳು.
ಅಮ್ಮೀ..
ಅರೆ ನರಸಾ..

ಹಿ ಹ್ಹಿ ಹ್ಹಿ.. ಅಜ್ಜಯ್ಯ ಐದಾರಾ..? ನರಸ ಬಂದಾನೆ ಹೇಳ್ಬೇಕಲ್ರ ಅಮೀ.. ಪುಟ್ಟ ಅಮ್ಮಿ ಓಡುತ್ತಾಳೆ, ಒಳಗೆ ನಡುಮನೆಯ ಕತ್ತಲಗವಿಯ ಮೆತ್ತನೆ ತಲ್ಪದಲ್ಲಿ ಮಲಗಿರುವ ಅಜ್ಜನನ್ನ ಏಳಿಸಲಿಕ್ಕೆ.

ಅಜ್ಜ ಮಲಗಿದ್ದಾನೆ, ಮಗ್ಗುಲಲ್ಲಿ ವಾರ್ತೆಗೆ ಹಚ್ಚಿದ್ದ ರೇಡಿಯೋ ಇನ್ನೂ ಹಾಡುತ್ತಲೆ ಇದೆ.ಅವಳೇನು ಅಜ್ಜನನ್ನು ತಟ್ಟಿ ಎಬ್ಬಿಸಿದಳಾ.. ಇಲ್ಲ.
ಮಂಚವೇರಿ, ಅಜ್ಜನ ಸಂದಿಯಲ್ಲಿ ಮಲಗಿದ ಕೂಡಲೆ ಅಜ್ಜನಿಗೆ ಎಚ್ಚರಾಗುತ್ತೆ ಅಂತ ಗೊತ್ತವಳಿಗೆ. ತೂರಿದಳು ಹೊದಿಕೆಯೊಳಗೆ.

ಅಚ್ಚೂ ಗಂಟೆ ಎಷ್ಟಾತು? ಅಮ್ಮಮ್ಮ ಚಾ ಮಾಡಿದ್ಲಾ? ಅವಳಿಗೆ ನಗು.. ಇಲ್ಲ್ಯೊ ಅಜ್ಜಾ, ಚಾಕ್ಕೆ ಕರೆಯಲ್ಲೆ ನಾನು, ನರಸ ಬೈಂದ. ಮಾತಾಡಕ್ಕಡ.. ಬಾರಜ್ಜಾ

ಎಂತಕ್ ಬೈಂದ್ನಡ ಅಂವಾ, ನೆಟ್ಟಿ ಟೈಮಾಗಲ್ಯಲ್ಲ ಇನ್ನೂ..ಸರಿ ಬಂದಿ ಹೇಳು.. ಕುಡಿಯಕ್ಕೆ ಎಂತ ಬೇಕು ಕೇಳಿ ಅಮ್ಮಮನ್ ಹತ್ರ ಏನಾರು ಮಾಡ್ಸಿಕೊಡು..

ಓಟದ ನಡಿಗೆ..

ಅಜ್ಜ ಬರ್ತಾ ಇದ್ದ ನರಸ, ಎಬ್ಸಿದ್ದಿ. ನಿಂಗೆ ಆಸರಿಗೆ ಏನು ಕೊಡಲಿ..?

ಹೆ ಹ್ಹೆ ಎಂತು ಬ್ಯಾಡ್ರ.. ನಂಗೆಂತಕೆ..

ಏ.. ಅಜ್ಜನೆ ಹೇಳಿದ್ದು.. ಏನ್ ಕೊಡಲಿ ಹೇಳು.. ಊಟ ಮಾಡ್ ಕ್ಯಂಡ್ ಬಂದಿದ್ಯ ನೀನು?

ಹೆ ಹ್ಹೆ.. ಅಮ್ಮಿ ಎಷ್ಟು ದೊಡ್ಡೊರಾದ್ರ ನೀವು.. ಶಣ್ಣಮ್ಮನ ಹಾಂಗೇ ಮಾತಾಡತ್ರಿ.. ನಮ್ಗೆಲ್ಲ ನಿಮ್ ತರ ಬೆಳ್ಗೆ ತಿಂಡಿ, ಮಜ್ಜಾನ ಊಟ, ಸಂಜೆ ಕಾಪಿ, ರಾತ್ರಿ ಊಟ ಎಲ್ಲೈತ್ರಾ..ಹೆ ಹ್ಹೆ..

ಅವಳಿಗೆ ಅರ್ಥವಾಗಲಿಲ್ಲ.. ಅದು ಅವನಿಗೆ ಅರ್ಥವಾಯಿತು.

ಹೆ ಹ್ಹೆ.. ಹೋಕ್ಯಳ್ಳಿ ಬುಡಿ, ಈಗ ಒನ್ ಚಂಬು ನೀರುನೂವ, ಹಂಗೆ ಚೂರು ಬೆಲ್ಲ ಕೊಡ್ರ ಸಾಕು.. ಆಮೇಲೆ ಹೆಗ್ಗಡ್ತೇರು ಹ್ಯಾಂಗೂ ಚಾ ಕಣ್ಣು ಕೊಡ್ತ್ರಲ್ಲ..ಹೆಹ್ಹೆ

ಅವಳ ಓಡು ನಡಿಗೆಗೆ ಯೋಚನೆಯ ಗೇರು ಬಿತ್ತು. ನಿಧಾನ ಅಡಿಗೆ ಮನೆಗೆ ಹೋಗಿ, ಅಮ್ಮಮ್ಮನ ಹತ್ತಿರ ಬೆಲ್ಲ ಇಸಿದುಕೊಂಡು, ನೀರಿನ ತಂಬಿಗೆ ತೆಗೆದುಕೊಂಡು ಬಂದು ನರಸನಿಗೆ ಕೊಟ್ಟಳು.

ಅವನು ಬೆಲ್ಲ ಬಾಯಿಗೆ ಹಾಕಿ ಒಂದೆ ಸಲಕ್ಕೆ ಚೊಂಬಿನ ನೀರು ಬರಿದು ಮಾಡತೊಡಗಿದ. ಖಾಲಿಯಗುವುದನ್ನೆ ನೋಡುತ್ತ ನಿಂತ ಅವಳು ಮತ್ತೆ ಕೇಳಿದಳು.

ನರಸಾ ನೀನ್ ಹಾಂಗರೆ ಮಧ್ಯಾಹ್ನ ಊಟನೆ ಮಾಡದಿಲ್ಯಾ?

ಹೆಹ್ಹೆ.. ಶಣ್ಣಮ್ಮಿ ಅದೆಲ್ಲ ಯಂತಕೆ ಬುಡ್ರ.. ನಾವು ಒಕ್ಕಲು ಮಕ್ಕಳು ಬೆಳಿಗೆ ಹೊಟ್ಟೆ ತುಂಬ್ಸಿ ಕೆಲ್ಸಕ್ಕೆ ಹೊಂಡದು, ರಾತ್ರೆ ಮನಿಗಿ ಹ್ವಾದ್ ಮ್ಯಾಲೆ ಮತ್ತೆ ಹೊಟ್ಟೆ ತುಂಬ್ಸಿ ಮಲಗೂದು ಅಷ್ಟೇಯ.ಏನೊ ಹೆಗ್ಡೇರ ಮನಿಗ್ ಬಂದ್ರೆ ಮಜ್ಜಾನದ್ದು ಊಟ ಕಾಂಬುದು, ಚಾ ಕಣ್ಣು ಕೊಡ್ತ್ರು..ಕುಡಿಯೂದು..ಹೆಹ್ಹೆ..

ಮತ್ತೆ ಗಣಪಿ.. ?ಅವಳ ಪ್ರಶ್ನೆ.

ಗಣಪೀದ್ ಎಂತದು. ಅದೂ ಅಷ್ಟೆ ಸೈ.. ಹೆಂಡ್ರಿಗೇನು ಬ್ಯಾರೆ ರಿವಾಜಿದ್ದನ್ರಾ ಹೆಗ್ಗಡ್ತೇರ್ ಹಂಗೆ...ಹೆ ಹ್ಹೆ..

ಅಷ್ಟೊತ್ತಿಗೆ ಅಜ್ಜ ಬಂದು ಕೂತ.ಆರಾಮಾಗಿ ಗೋಡೆಗೊರಗಿ ಕೂತು ಪುಟ್ಟಿಯೊಡನೆ ಮಾತಾಡುತ್ತಿದ್ದ ನರಸ ಎದ್ದು, ಬಗ್ಗಿಕೊಂಡು ನಿಂತ.

ಏನು.. ನರಸೆಗೌಡನ ಸವಾರಿ ಪ್ಯಾಟೆವರಿಗೆ..? ಏ ನರಸ... ಎಷ್ಟ್ ಸಲಿ ಹೇಳಲ್ಯೊ ನಿಂಗೆ ಹಂಗೆ ಬಗ್ಗಿ ಕೈಕಟ್ಟಿ ನಿಂತ್ ಕಳಡ ಅಂತ.. ನೆಟ್ಟಗ್ ನಿಂತ್ಕ.. ಇಲ್ದೆ ಹೋದ್ರೆ ಅರಾಮಾಗಿ ಅಲ್ಲೆ ಕೂತ್ಕ.

ಹೆ ಹ್ಹೆ ಬಿಡ್ರಿ ಒಡ್ಯ. ನೀವು ಪ್ಯಾಟೆ ರಿವಾಜ್ ಮಾತಾಡ್ತೀರಿ, ಹಳ್ಳಿ ಮನ್ಯಾಗೆ ಹಂಗ್ ಮಾಡಿ ಬದಕಾಕ್ಕಾಗತೈತ.. ಬುಡಿ ಬುಡಿ..

ಕಾನೂನೆ ಇದ್ಯಲ್ಲೊ ಯಾರೋ ನಿಂಗೆ ತೊಂದ್ರೆ ಕೊಡವ್ರು..?

ಅಯ್ಯೊ ಕಾನ್ವೂನು, ಲಾಯ್ರು ಸಾವಾಸ ಎಲ್ಲ ಬ್ಯಾಡ ನಂಗೆ..

ಹೋಗ್ಲಿ ಬಿಡು ಈಗೆಂತ ಬಂದೆ ಹೇಳು.

ಅದು.. ಅದು ನರಸ ಪುಟ್ಟಿಯ ಕಡೆ ನೋಡಿದ.. ಅದನ್ನು ಗಮನಿಸಿದ ಅಜ್ಜ- ಅಚ್ಚೂ ಅಲ್ಲಿ ಅಮ್ಮಮ್ಮಂಗೆ ಚಾ ಮಾಡಕ್ಕೆ ಹೇಳು ಹೋಗು ಅಂದ.

ಓಡಿ ಹೋಗಿ ಹೇಳಿಬಂದವಳು ಜಗುಲಿಗೆ ಬರದೆ ಬಾಗಿಲಲ್ಲಿ ನಿಂತಳು.

ನರಸ ಅಳು ದನಿಯಲ್ಲಿ ಹೇಳುತ್ತಿದ್ದ - ಗಣಪೀ ಹೊಟ್ಟೆಯಲ್ಲಿ ಗಡ್ಡ್ಯಂತೆ. ಡಾಕುಟ್ರೆ ಆಗ್ಬೇಕು, ಆಪರೇಸನ್ನು ಅಂತಾರೆ ಹೆಗಡೇರೆ.. ಇಲ್ಲೆ ದೊಡ್ಡಾಸ್ಪತ್ರಿಗೆ ಹಾಕನ ಅಂಥ ಮಾಡಿನಿ. ಅದ್ಕೆ..

ಅಜ್ಜ ಯಾರ ಕಷ್ಟಕ್ಕೂ ಹೆಚ್ಚು ಹೇಳಿಸಿಕೊಳ್ಳದೆ ಮೊದಲು ಹೆಗಲು ಕೊಡುವವನು : - ಇಂತದ್ರಾಗೆಲ್ಲ ತಡ ಮಾಡದು ಬ್ಯಾಡ. ನಾಳೆನೇ ಕರ್ಕಂಡ್ಬಾ ಗಣಪೀನ, ನಾನು ಬರ್ತೇನೆ ಆಸ್ಪತ್ರೇಲಿ ತೋರ್ಸನ. ನಾಕ್ ದಿನಾ ಇರಿ ಅಂದ್ರೆ ಇರ್ಬೇಕಾತಲ್ಲ, ಬಟ್ಟೆ ಬರೆ ತಂದ್ಕ. ಉಳಿಯಕ್ಕೆ-ಊಟಕ್ಕೆ ನಮ್ಮನೆ ಇದ್ಯಲ್ಲ. ಊರಾಗೆ ನಿನ್ ಗದ್ದೆ ನೆಟ್ಟಿ ನಮ್ಮನೇವೆ ಮಾಡ್ತ ಬಿಡು, ಸಣ್ಣ ಹೆಗಡೇರಿಗೆ ನಾನ್ ಹೇಳ್ ಕಳ್ಸಿರ್ತೀನಿ..

ಅಡ್ಬಿದ್ದೆ ಹೆಗಡೆರೆ.. ನೀವೆ ಕಾಪಾಡ್ಬೇಕು ಅಂತ ನಿಜವಾಗಲೂ ಅಡ್ಡ ಬಿದ್ದ. ಅಜ್ಜಂಗೆ ಸಿಟ್ಟು. ಏ ಏ ನರಸಾ ಅದ್ಯಂತ ಮಾರಾಯ ನೀನು..ಎದ್ ನಿಂತ್ಕ, ನನ್ ಹತ್ರ ಹೀಂಗ್ ಮಾಡಡ ಅಂತ ಎಷ್ಟ ಸರ್ತಿ ಹೇಳಕ್ಕೋ ನಿಂಗೆ.. ಚಾ ಬಂತು ನೋಡು..

ಅಮ್ಮಮ್ಮ ಅಜ್ಜಂಗೆ ಕೊಟ್ಟು ನರಸಂಗೆ ಚಾ ಕಣ್ಣು ಕೊಟ್ಟಳು. ಅಮ್ಮಿ ತನಗೂ ಚಾ ಕಣ್ಣು ಬೇಕೆಂದು ಹಟ ಮಾಡಿದಳು.

ಅಮ್ಮಮ್ಮಂಗೆ ಸಿಟ್ಟು ಬಂತು. ನರಸ ಹಲ್ಲಿಲ್ಲದ ಬಾಯಲ್ಲಿ ನಗುತ್ತಿದ್ದ.

ಇದಾಗಿ ಕೆಲದಿನಗಳ ಮೆಲೆ, ಚಿಕ್ಕಿ ಹೇಳಿದಳು ನರಸನ ಹೆಂಡ್ತಿ ಗಣಪಿ ದೊಡ್ಡಾಸ್ಪತ್ರೇಲೆ ಗಂಟು ಮೂಟೆ ಕಟ್ಟಿದ್ಲು ಅಂತ... ಪುಟ್ಟಿ ಯೋಚಿಸಿದಳು.. ಒಕ್ಕಲು ಮಗ ಅಂತ ಹೇಳಿಕೊಂಡ ಹಲ್ಲಿಲ್ಲದ ನರಸನ ಊಟ ತಿಂಡಿ ಯಾರು ನೋಡುತ್ತಾರೆ?

ಆ ಶನಿವಾರ ಮಧ್ಯಾಹ್ನ ಮನೆಯಲ್ಲೆಲ್ಲ ಮಲಗಿದ್ದರು. ಪುಟ್ಟಿ ಜಗುಲಿಯ ಮೂಲೆಯಲ್ಲಿ ಕೊಡೆ ಬಿಚ್ಚಿಟ್ಟು ಮನೆ ಮಾಡಿಕೊಂಡು ಅಡಿಗೆ ಆಟದ ಸಾಮಾನು ಹರಡಿ ಕೂತಿದ್ದಳು.

ಅಮ್ಮಿ..
ಅರೆ ನರಸಾ..

ಹಿ ಹ್ಹಿ ಹ್ಹಿ.. ಆಜ್ಜಯ್ಯ ಐದಾರನು? ನರಸ ಬಂದಾನೆ ಹೇಳ್ಬೆಕಲ್ರಾ...

ಗಣಪಿ ಪುಟ್ಟಿಯ ನಾಲಗೆಯ ತುದಿಗೆ ಬಂದಿದ್ದಳು. ಅಷ್ಟರಲ್ಲಿ ನರಸನ ಹಿಂದೆ ಇಣುಕುತ್ತ ನಿಂತ ಒಬ್ಬಳು ಕಾಣಿಸಿದಳು. ಪುಟ್ಟಿ ಒಳಗೆ ಓಡಿದಳು ಅಜ್ಜನ್ನ ಎಬ್ಬಿಸಲು.

ಅಜ್ಜನ್ನೆಬ್ಬಿಸಿ, ಅಡಿಗೆ ಮನೆಗೆ ಹೋಗಿ ಅಮ್ಮಮ್ಮಂಗೆ ಹೇಳಿದರೆ, ಅವಳೂ ಗಡಿಬಿಡಿಯಲ್ಲಿ ಬಂದಳು.

ಅವರನ್ನು ಮಾತಾಡಿಸಿಕೊಂಡು ಬಂದು ಪುಟ್ಟಿಯ ಕೈಗೆ ಬೆಲ್ಲ ನೀರು ಕೊಡುತ್ತ ಕೇಳಿದಳು ನೋಡಿದ್ಯನೇ ನರಸಗೌಡನ ಹೊಸ ಹೆಂಡ್ತೀನ.. - ಹೆಂಡ್ತಿ..? ಪುಟ್ಟಿಗೆ ಅಚ್ಚರಿ.

ಅವರಿಗೆ ನೀರು ಬೆಲ್ಲ ಕೊಡುವಷ್ಟರಲ್ಲಿ ಅಜ್ಜನು ಬಂದು ಕೂತ. ನರಸ ತನ್ನ ಎಂದಿನ ಶೈಲಿಯಲ್ಲಿ ನಮಸ್ಕಾರ ಸಲ್ಲಿಸಿ ಕೂತ.

ಅಜ್ಜ ನಗುತ್ತ ಕೇಳಿದ ಏನೊ ನರಸಾ. ಮದುವೆ ಜೋರಾಗಿ ನಡತ್ತು ಅಂತ ಕೇಳಿದ್ನಲ್ಲೋ...ಹೆಸರೆಂತದಾ?

ನರಸ ನಾಚುತ್ತ ಹೇಳಿದ ನರಸಿ ಅಂತ್ಲೆ ಹೆಗ್ಡೇರೆ, ಅದ್ಕೆ ಮದುವ್ಯಾದ್ದು. ಈ ಸಲ ಮಕ್ಳು ಆಗಕ್ಕೆ ಬೇಕು ಅಂದ್ರಪ್ಪ ನಿಕ್ಕಿ ಮಾಡ್ಕೊಟ್ಟ ಮಾಗೋಡು ಕೃಷ್ಣಪ್ಪೋರು. ನಮ್ದು ಅಂತ ಹೇಳ್ಕಂಡೆ ಗೊತ್ತಿಲ್ದಿರೊ ಜಾತಿ ಬಡವಂಗೆ ನೀವಾಗೆ ಭೂಮಿ ಕೊಟ್ಟೀರಿ. ಅದನ್ನ ನೋಡ್ಕಣಾಕ್ಕಾದ್ರು ಒಂದ್ ಮೊಗಾ ಅಂತ ಬೇಕಲ್ದಾ ಹೆ ಹ್ಹೆ..

ಓ ತೆಗಿಯೋ ಮಾರಾಯಾ, ಹೆಸ್ರಿಗೆ ಮಕ್ಕಳಾಗಾ ಹಂಗೆ ಇದ್ದಿದ್ರೆ ಭೇಷಾತು ಬಿಡು. ಅಂತ ಅಜ್ಜ ನಕ್ಕು ಸುಮ್ಮನಾದ.

ನರಸಿ ತಗ್ಗಿಸಿದ ತಲೆ ಎತ್ತಲಿಲ್ಲ. ಅವಳು ಚಿಕ್ಕಿಗಿಂತಲೂ ಚಿಕ್ಕವಳ ಹಾಗೆ ಪುಟ್ಟಿಗಿಂತಲೂ ದೊಡ್ಡವಳ ಹಾಗೆ ಕಾಣ್ತಿದ್ದಳು. ನರಸ ಪುಟ್ಟಿಯ ಕಡೆ ನೋದಿ ಹಲ್ಲಿಲ್ಲದ ಬಾಯಲ್ಲಿ ನಕ್ಕ. ಶಣ್ಣಮ್ಮಿ ನಮ್ಮನೇಲು ಈಗ ಚಾ ಕಣ್ಣು ಕಾಯಿಸ್ತೇವಿ ಹೆ ಹ್ಹೆ..

ಅದಾಗಿ ಎಷ್ಟೊ ಶನಿವಾರಗಳ ನಂತರ ಒಂದು ಸುರಿಮಳೆಯ ಶನಿವಾರ ಮಧ್ಯಾಹ್ನ, ಪುಟ್ಟಿ ಕೊಡೆ ಬಿಡಿಸಿ ಅಡಿಗೆ ಆಟ ನಡೆಸಿದ್ದಳು ಜಗುಲಿಯ ಮೂಲೆಯಲ್ಲಿ. ಅಮ್ಮಿ ಅಂದಂತಾಗಿ ತಿರುಗಿ ನೋಡಿದರೆ ನರಸನಿರಲಿಲ್ಲ. ನಕ್ಕೊಂಡು ಆಟ ಮುಂದುವರಿಸಿದಳು. ಅಜ್ಜ ಎದ್ದು ಬಂದು ಕೂತ. ಅಮ್ಮಮ್ಮ ಚಾ ತಂದುಕೊಟ್ಟಳು ಇಬ್ಬರಿಗೂ.

ಬೇಸರದಲ್ಲಿ ಅಜ್ಜ ಹೇಳಿದ.. ನರಸಗೌಡ ಗಣಪಿಯ ಹಿಂದೆ ಹೋದ್ನಡ, ಆಚೆವಾರ ಹಕ್ರೆ ಭಾವನ ಮನೇಲಿ ನೆಟ್ಟಿಗ್ ಹೋದವಂಗೆ ಜ್ವರ ಹಿಡದ್ದು ಬಿಡ್ಲೇ ಇಲ್ಯಡ, ಎಷ್ಟ್ ಸಲ ಹೇಳಿದ್ದಿ ಎಂತಾರು ಹುಷಾರಿಲ್ದಿದ್ರೆ ಇಲ್ಲಿ ಪ್ಯಾಟಿಗ್ ಬಾ ಆಸ್ಪತ್ರಿಗೆ ಹೋಪನ ಅಂತ. ಎಲ್ ಕೇಳ್ತ. ಜಟ್ಗ ಬೂತಪ್ಪ ಅಂದ್ಕಂಡು ಕಾಯಿ ಒಡದ್ರೆ ವಯಸ್ಸಾದ್ಮೇಲೆ ಬಪ್ಪ ಕಾಯ್ಲೆ ಬಗ್ತಾ?..

ಪುಟ್ಟಿ ಅವಾಕ್ಕಾಗಿ ಚಾ ಲೋಟ ನೆಲದ ಮೇಲಿಟ್ಟು ಕೂತಳು.

ಅಮ್ಮಮ್ಮ ಗೊಣಗುತ್ತ ಒಳಹೋದಳು - ಈ ಸಂಭ್ರಮಕ್ಕೆ ಮಕ್ಕಳಾಗ್ಲಿ ಅಂತ ಆ ಎಳೆ ಹುಡ್ಗೀನ್ ಬೇರೆ ಕಟ್ಕ್ಯಂಡು..

ಅಜ್ಜನ ಮುಖ ನೋಡಿದಳು. ಯೋಚಿಸುತ್ತಿದ್ದ ಅಜ್ಜ ಪುಟ್ಟಿಗೆ ಅರ್ಥವಾಗೆ ಆಗುತ್ತೆ ಅಂತ ನಂಬಿದವನ ಹಾಗೆ ಹೇಳಿದ... - ಅವತ್ತು ಊರಾಗೆ, ಮದ್ವೆ ಗೊತ್ ಮಾಡ್ಕಂಡೆ ಅಂದಾಗ್ಲೆ ಬ್ಯಾಡ ಅಂದಿದ್ರೆ ಸುಮ್ನಾಗ್ತಿದ್ನೊ ಏನೊ. ಇವ್ನೇನ್ ಇನ್ನು ಬಾಳ ದಿನಾ ಇರಾಂವಲ್ಲ ಅಂತ ಅನ್ಸಿದ್ರೂ, ಬಡವ, ಭೂಮಿ ಬಂದ್ ಮೇಲೆ ಬದುಕೋ ಅಸೆ ಅವಂಗೆ, ಸುಮ್ನೆ ಯಾಕ್ ಕಲ್ಲು ಹಾಕದು. ಏನಾಗ್ತೊ ಆಗ್ಲಿ ಅಂತ ಬಿಟ್ಬುಟ್ಟಿ..ಈಗ ಆ ಪಾಪದ ಹೆಂಗಸಿನ್ನ ನೆನಪ್ ಮಾಡ್ಕ್ಯಂಡ್ರೆ ಬೇಜಾರಾಗ್ತು. ಹಿಂಗೇಯ ಅಚ್ಚೂ ಬದುಕು.. ನಮಗೇ ಗೊತ್ತಿಲ್ದೆ ನಾವೇ ಯಾವ್ದೋ ಘಟನೆಗೆ ಮೂಲ ಆಗಿ ಹೋಗ್ತು. ಬುದ್ವಂತ್ರು ಲಾ ಪಾಯಿಂಟ್ ಹಾಕಿ ಅದಕ್ಕು ಎಂಗೂ ಸಂಬಂಧ ಇಲ್ಲೆ ಅಂತ ಹೇಳಲಕ್ಕು. ಬುದ್ದಿ ಬದಿಗಿಟ್ಟು ಸುಮ್ಮನೆ ಒಂದ್ಗಳಿಗೆ ಕೂರಕ್ಕಿದ್ರೆ, ಸಂಜೆ ದೇವರಿಗೆ ಕೈ ಮುಗಿಯಕ್ಕಿದ್ರೆ ನೆನಪಾದ್ರೆ ನಾನೇನಾದ್ರೂ ಮಾಡ್ಲಕ್ಕಿತ್ತೇನೋ, ಸುಮ್ನಿದ್ ಬಿಟ್ನೋ ಏನೋ ಅನ್ನಿಸಿ ಕಿರಿಕಿರಿ ಆಗ್ತು.

ಒಟ್ನಾಗೆ ನರಸಗೌಡನ ನಾವೆ ಬದುಕಿನ ಸರಯೂ ನದಿ ದಾಟಿ ದಂಡಕಾರಣ್ಯಕ್ಕೆ ಹೋತು, ದೋಣಿ ಒಳಗೆ ರಾಮದೇವ್ರು ಇದ್ವೋ ಇಲ್ಯೋ, ಗುಹನೊಬ್ಬನೇ ಹೋದನೋ ಎಂತೊ ಗೊತ್ತಾಗಲ್ಲೆ, ನರಸಿಯದಿನ್ನೆಷ್ಟು ವರ್ಷದ ವನವಾಸವೋ - ಮುಂದೆ ಮಾತಿನ ಬದಲು ನಿಟ್ಟುಸಿರುಗಳು ಕೇಳಿಸಿದವು.

ಪೂರ್ತಿ ಅರ್ಥವಾಗದ ಅವಳು ಆಟ ಮುಂದುವರಿಸುವ ಮನಸ್ಸಾಗದೆ, ಜಗುಲಿಯ ಕಿಟಕಿಯ ತಳಿಯಲ್ಲಿ ಕೂತು ಸುರಿವ ಮಳೆಗೆ ಕಣ್ಣು ನೆಟ್ಟು ಕೂತಳು. ಹಲ್ಲಿಲ್ಲದ ಬೊಚ್ಚು ಬಾಯಿಯ ನರಸನ ಮುಖ,ಅವನ ನಗು ಎಲ್ಲ ಸುರಿವ ಮಳೆಯಲ್ಲಿ ಕಲಸಿ ಕಲಸಿ ರಸ್ತೆಯ ಮೇಲೆ ಹರಿಯತೊಡಗಿತು. ಮಳೆ ಹ್ಹಿ ಹ್ಹಿ ಅಂತ ಸದ್ದು ಮಾಡುತ್ತ ನಿಲ್ಲದೆ ಸುರಿಯಿತು.

Rating
No votes yet

Comments