ನವೆಂಬರ್ ೧೮

ನವೆಂಬರ್ ೧೮

 

"ನಿತ್ಯ ಹುಟ್ಟಿ ಮುಳುಗುವ ರವಿ"

ಹುಟ್ಟುಹಬ್ಬ ನನಗೆಂದೂ ಯಾವ ಕಾರಣಕ್ಕೂ ವಿಶೇಷ ಎನಿಸಿದ್ದಿಲ್ಲ. ಒಂದೊಮ್ಮೆ ಮತ್ತೊಂದು ವರುಷ ಕಳೆದುಹೋಯಿತಲ್ಲ ಎಂಬ ಬೇಸರ ಮೂಡಿಸುತ್ತಿದ್ದುದಂತೂ ನಿಜ. ಆದರೆ ಅದೂ ಹೆಚ್ಚು ಹೊತ್ತು ಮನಸ್ಸಿನಲ್ಲುಳಿಯುತ್ತಿರಲಿಲ್ಲ. ಹುಟ್ಟುಹಬ್ಬದ ಕೇಕ್, ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ನೆರೆಯುವ ಜನ, ಆ ನಂತರದ ಘಳಿಗೆ, ನೆರೆದವರಿಂದ ಸಿಗಬಹುದಾದ ಉಡುಗೊರೆ - ಇವು ಯಾವೂ ನನಗೆಂದೂ ಆಸಕ್ತಿ ಹುಟ್ಟಿಸಿದ್ದಿಲ್ಲ. ಕಾಲೇಜಿನ ಕ್ಲಾಸ್ ರೂಮಿನಲ್ಲಿ ಯಾರದ್ದಾದರೂ 'ಬರ್ತ್ ಡೇ'ಗೆಂದು ಕ್ಲಾಸ್ ಮುಗಿಯುತ್ತಲೇ ಕೇಕ್ ಕಟ್ ಮಾಡಿಸಿದ ಸಮೂಹ ಕೇಕೆ ಹಾಕುತ್ತಿದ್ದರೆ ನನ್ನ ಮನಸ್ಸು ನನ್ನನ್ನು ಅದೆಲ್ಲದರಿಂದ ದೂರ ಓಡುವಂತೆ ಮಾಡುತ್ತಿತ್ತು. ಅದೇ ಆ 'ಬರ್ತ್ ಡೇ ಬೇಬಿ'ಯಿಂದ 'ಟ್ರೀಟ್' ಸಿಕ್ಕ ನಂತರ ಬರ್ತ್ ಡೇ ಯಾರದ್ದು ಎಂಬುದೂ ನೆನಪಿರದಂತೆ ಇರುತ್ತಿದ್ದ ದೃಶ್ಯ ಕೇಕ್ ಕಟ್ ಮಾಡಿಸಿದವರ ವಿಶ್ವಾಸ ಎಷ್ಟಿರಬಹುದು ಎಂಬುದರ ಬಗ್ಗೆ ಅಪಾರ ಆಲೋಚನೆಗಳು ಸುಳಿದು ಹೋಗುವಂತೆ ಮಾಡುತ್ತಿತ್ತು.

ಹುಟ್ಟುಹಬ್ಬ ಆಚರಣೆ ಅವರವರ ಭಾವನೆಗಳಿಗೆ, ಆದರ್ಶಗಳಿಗೆ, ಆಲೋಚನೆಯ ರೀತಿಗೆ ಬಿಟ್ಟದ್ದು ಎಂದು ನನಗನಿಸುತ್ತದೆ. ತಮಗೆ ನೆಮ್ಮದಿ ಸಿಗುವ, ತಮಗೆ ಸಂತೋಷ ಉಂಟುಮಾಡುವ ಯಾವುದೇ ಆಚರಣೆ ಅಂದಿನ 'ಹಬ್ಬ'ವಾಗಬಹುದು ಎಂದು ನನ್ನ ಅನಿಸಿಕೆ. ಅದು ತನಗಿಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವುದಿರಬಹುದು, ತನಗೆ ಇಷ್ಟವಾದೆಡೆ ಕುಳಿತು ಸಮಯ ಕಳೆಯುವುದಿರಬಹುದು. ಯಾವ ಆಚರಣೆಯನ್ನೂ ಕೀಳಾಗಿ ನೋಡಬೇಕಿಲ್ಲ, ಯಾವ ಆಚರಣೆಯನ್ನೂ ಆಡಂಬರದಿಂದ ಕಾಣಬೇಕಿಲ್ಲ. ಕೊನೆಗೆ ಆ 'ಹಬ್ಬ' ನಡೆಸಿದ ರೀತಿಗೊಂದು ನಾವು ಅರಿಯದ ಕಾರಣವೇ ಇದ್ದಿರುತ್ತದೆ. ಒಂದೊಮ್ಮೆ ಅರಿತರೂ ಅರಿಯದಂತಿರುತ್ತೇವೆ. ಅವರವರ ಇಷ್ಟದಂತೆ ಇರಬಹುದು ಆಚರಣೆ. ಅವರವರ ಸ್ವಂತದ ವಿಚಾರ.

ನನಗೆ ಇಪ್ಪತ್ತಾರು ವರ್ಷ ತುಂಬಿದ ದಿನ (ಅಂದರೆ ನಿನ್ನೆ) ಕೂಡ ನನಗೆ ಅಂತಹ ವಿಶೇಷ ದಿನ ಅನ್ನಿಸಿದ್ದಿಲ್ಲ. ಆದರೆ ಈ ದಿನ ಹತ್ತಿರಬರುತ್ತಿದ್ದಂತೆಯೇ ಕಳೆದ ವರುಷದ ನೆನಪು, ಅವಲೋಕನ ನನ್ನ ಮನಸ್ಸಿನಲ್ಲಿ ನನಗರಿವಿಲ್ಲದಂತೆಯೇ ಪ್ರಾರಂಭವಾದದ್ದು ಎಂದಿನಂತೆಯೇ. ಕಳೆದ ವರುಷದಲ್ಲಿ ನಾನಂದುಕೊಂಡಿದ್ದ ಹಲವು ವಿಷಯಗಳು ಕಾರ್ಯರೂಪಕ್ಕೆ ಬಂದದ್ದು, ಎಷ್ಟೋ ಬರದೇ ಹೋದದ್ದು, ಜೀವನ ಕಹಿ ಸಿಹಿಗಳ ನಡುವೆ ಹೊರಳುತ್ತ, ಟಾಗಲ್ ಮಾಡುವಂತಿದ್ದದ್ದು, ಹೊಗಳಿಕೆ, ತೆಗಳಿಕೆಗಳೆರಡೂ ಇದ್ದದ್ದು - ಎರಡನ್ನೂ ಒಂದೇ ರೀತಿ ತೆಗೆದುಕೊಳ್ಳುವ ಪಾಠವನ್ನು ಕಲಿತದ್ದು, ಮಾಡಿದ ತಪ್ಪುಗಳನ್ನು ಕೆದಕಿ ನೋಡುತ್ತ ಅವುಗಳನ್ನು ಸರಿಪಡಿಸುವತ್ತ ಒಲವು ತೋರಿದ ಮನಸ್ಸು, ಇದೇ ಸಮಯದಲ್ಲಿ ಹೋದ ವರ್ಷ ಇದ್ದಷ್ಟು ಕತ್ತಲೆ ಈಗ ಇಲ್ಲ ಎಂಬ ಸಮಾಧಾನ, ಎಲ್ಲ ಕಷ್ಟಗಳ, ಎಲ್ಲ ಎಡರುತೊಡರುಗಳ ನಡುವೆ, ಭರವಸೆಯ ಹಸುರಿನ ಚಿಗುರು ಕಣ್ಣಿಗೆ ಕಾಣುತ್ತಿರುವುದು - ಎಲ್ಲದಕ್ಕಿಂತ ಮಿಗಿಲಾಗಿ ಇವೆಲ್ಲ ನಾ ಹೊರಟಿರುವುದು ಕಷ್ಟದ್ದಾದರೂ ಸರಿ ದಾರಿ ಎಂಬ ಆತ್ಮವಿಶ್ವಾಸ ಮೂಡಿಸಿರುವುದು - ಇವೇ ಮೊದಲಾದ ಆಲೋಚನೆಗಳು ಮನದ ಸುತ್ತ ಹಾದು ಹೋದದ್ದಿದೆ. ಸ್ವಂತದ ನಿರ್ಣಯಗಳು ಎಷ್ಟು ಕಠಿಣತೆ ನಿರೀಕ್ಷಿಸುತ್ತದೋ, ಅಷ್ಟೇ ಕಠಿಣ ಪರಿಸ್ಥಿತಿಗಳನ್ನೊಡ್ಡಿ, ಜೊತೆಜೊತೆಗೇ ಸ್ವಂತಿಕೆಯ ಬಲ ನೀಡುತ್ತ ಮುನ್ನಡೆಸುತ್ತದೆ. ಆ ನಿಟ್ಟಿನಲ್ಲಿ ಹುಟ್ಟು ಹಬ್ಬದ ದಿನ ಹತ್ತಿರ ಬರುತ್ತಿರುವಂತೆ ಮನಸ್ಸನ್ನು ಕಾಡುತ್ತಲೇ ಅಮೂರ್ತ ಚಿತ್ರಣಗಳಲ್ಲಿ ಆಲೋಚನೆ ಕೆದಕುವ ಘಳಿಗೆಗಳು 'ವಿಶೇಷ'ವೆನ್ನಲಾಗದಿದ್ದರೂ ತನ್ನದೇ ರೀತಿಯದ್ದು.

ಈ ಸಾರಿ ನನಗೆ ವಿಶೇಷ ಎನಿಸಿದ್ದು ನನ್ನ ಮೇಲೆ ಹಲವರು ಇಟ್ಟಿರುವ ಪ್ರೀತಿ, ವಿಶ್ವಾಸ. ದೂರದ ಶಿವಮೊಗ್ಗದ ಹಳೆಯ ಪರಿಚಯ, ಹೊಸ ಪರಿಚಯ, ಸ್ನೇಹಿತರು - ಎಲ್ಲರೂ ನನ್ನ ಮೇಲೆ ಇಟ್ಟಿರುವ ವಿಶ್ವಾಸ ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸುವಷ್ಟು. ಸಂಪದಿಗರು ಹಲವರು ಹುಟ್ಟುಹಬ್ಬದಂದು ಶುಭ ಹಾರೈಕೆಗಳನ್ನು ಕಳುಹಿಸಿದಿರಿ.  ನಿಮ್ಮ ಹಾರೈಕೆಗಳಿಗೆ ನಾನು ಋಣಿ. ನೀವೆಲ್ಲ ಕೊಟ್ಟ ಗಮನ ನನ್ನನ್ನು ಸಂಪದದಿಂದಲೂ ದೂರ ಓಡಿಸುವಷ್ಟಾದರೂ ನಾನು ಇಲ್ಲಿಯೇ ಇದ್ದೇನೆ. ಆದರೆ ಈ ತಿಂಗಳು ಅಲ್ಲಿಗಲ್ಲಿಗೆ ಸರಿದೂಗಿಸಿದರೇ ಗೆದ್ದೆ ಎಂಬಂತಿರುವಾಗ ಎಲ್ಲರಿಗೂ 'ಟ್ರೀಟು' ಕೊಡಿಸುವುದು ಸಾಧ್ಯವಾಗದಿರಬಹುದು. ಮುಂದೊಂದು ದಿನ ಇದೇ ನೆಪದಲ್ಲಿ ಎಲ್ಲರೂ ಸಿಕ್ಕು ಮಾತನಾಡೋಣವಂತೆ, ನಿಜವಾದ ಸಂಭ್ರಮ ಬೇರೆ ಇಟ್ಟುಕೊಳ್ಳೋಣವಂತೆ.

ಒಂದೆರಡು ವಾರ ಸುಮಾರು ಕೆಲಸಗಳನ್ನು ನನ್ನ ತಲೆಯ ಮೇಲೇ ಹಾಕಿಕೊಂಡು ಸ್ವತಃ ಕಣ್ಣು ನೋಯಿಸಿಕೊಂಡಿದ್ದೆ. ಹೀಗಾಗಿ ಸೋಮವಾರ ನನಗೆ ಹೊಳೆದದ್ದು ಹುಟ್ಟುಹಬ್ಬದಂದು ಕೆಲಸವೆಲ್ಲ ಬಿಟ್ಟು ಏಕಾಂತ, ನೆಮ್ಮದಿ ಅರಸಿ ಹೊರಡುವುದು ಎಂದು. ಆದರೆ ಕಂಪ್ಯೂಟರ್, ಮೊಬೈಲುಗಳನ್ನಿಟ್ಟುಕೊಂಡು ಅದೂ ಸಿಟಿಯಲ್ಲಿದ್ದವರಿಗೆ ಇದು ಆಗದಾ ಮಾತು. ಸರಿಯಾದ ನಿದ್ರೆಯಾದರೂ ಮಾಡೋಣವೆಂದು ರಾತ್ರಿ ಮಲಗುವ ವೇಳೆಯಿಂದ ಬೆಳಗಾಗುವವರೆಗೂ ಸೈಲೆಂಟ್ ಮೋಡ್ ನಲ್ಲಿ  ಇಟ್ಟು "ವಿಶ್ ಮಾಡೋಣ ಅಂದರೆ ಫೋನ್ ಎತ್ತಿಕೊಳ್ಳೋದಿಲ್ಲವಲ್ಲೋ" ಎಂದೆನಿಸಿಕೊಂಡದ್ದಾಯಿತು. ತದನಂತರ ಬೆಳಗ್ಗಿನಿಂದ ಒಂದರ ಹಿಂದೆ ಒಂದರಂತೆ ಬಂದ ಫೋನ್ ಕಾಲ್ ಗಳು ನನ್ನನ್ನು ಕಟ್ಟಿಹಾಕಿದ್ದು irony. ಜೊತೆಜೊತೆಗೇ ಹಾರೈಸಿದ ಎಲ್ಲರ ವಿಶ್ವಾಸ ನನಗೆ ಆಶ್ಚರ್ಯ ತಂಡೊಡ್ಡಿದುದರ ಜೊತೆಗೆ ಎಚ್ಚೆತ್ತಿಸಿದಂತಿತ್ತು. ಉಳಿದಷ್ಟು ಹೊತ್ತು ಬಹಳ ದಿನಗಳಿಂದ ಓದಬೇಕು ಎಂದುಕೊಳ್ಳುತ್ತಿರುವ ಪುಸ್ತಕವೊಂದನ್ನು ಕೈಲಿಟ್ಟುಕೊಂಡು ಕಳೆದದ್ದು.

ಸಾಯಂಕಾಲ ಮಾತ್ರ ಸ್ವಲ್ಪ ಹೊತ್ತಾದರೂ ಶುದ್ಧ ಗಾಳಿ ಉಸಿರಾಡಿ ಬರಬೇಕೆಂದು ಹೊಂಚು ಹಾಕಿ, ಫೋನ್ ಮಾಡಿ ತಿಳಿಸಿ ನಾಗೇಶ ಹೆಗಡೆಯವರ ತೋಟದ ಮನೆಯ ಕಡೆಗೆ ಹೊರಟೆ. ಶಾಲೆಯಲ್ಲಿದ್ದಾಗ ನನ್ನನ್ನು ಕನ್ನಡ ಓದು, ಬರಹಗಳೆಡೆಗೆ ಸೆಳೆದ ಬರಹಗಳಲ್ಲಿ ನನ್ನ ಮೇಲೆ ಅತಿ ಹೆಚ್ಚಿನ ಪ್ರಭಾವ ಬೀರಿದ ಲೇಖನಗಳು ನಾಗೇಶ ಹೆಗಡೆಯವರದ್ದು. ಒಂದು ದಿನ ನಮ್ಮ ಶಾಲೆಯ ಪಠ್ಯದಲ್ಲಿ ಓದಿ ನೆನಪಿಟ್ಟುಕೊಳ್ಳುತ್ತಿದ್ದ ಹೆಸರುಗಳನ್ನು ಮುಖತಃ ಭೇಟಿ ಮಾಡಿ ವ್ಯಕ್ತಿ ರೂಪದಲ್ಲಿ ಕಾಣಲೂಬಹುದು ಎಂದು ನಾವುಗಳು ಶಾಲೆಯಲ್ಲಿ ಎಣಿಸಿದ್ದೆವೋ ಇಲ್ಲವೋ ನೆನಪಿಲ್ಲ. ಆದರೆ ನಮ್ಮ ಮೇಲೆ ಪ್ರಭಾವ ಬೀರಿದವರನ್ನು ಭೇಟಿಯಾಗಿ ಮಾತನಾಡಿಸುವುದು ಇರಲಿ, ಅವರು ತಾವು ಬರೆದ ಲೇಖನಗಳಷ್ಟೇ ಸರಳ ಜೀವನದ ವ್ಯಕ್ತಿತ್ವ ಎಂದು ಮುಖತಃ ಭೇಟಿಯಾಗಿ ತಿಳಿಯುವುದಿದೆಯಲ್ಲ, ಅದು ಅಪೂರ್ವವಾದುದು.

ಮೈತ್ರಿ ಫಾರ್ಮ್ ತಲುಪಿದಾಗ ಎಡಗಡೆ ಕಾಣುತ್ತಿದ್ದ ಕೆರೆಯ ಬಾತುಕೋಳಿಗಳು ಕಣ್ಣಿಗೆ ಬಿದ್ದವು. ಬೈಕ್ ಪಾರ್ಕ್ ಮಾಡಿ ತೊಟ್ಟಿಯಲ್ಲಿ ಹಾವು ಕಾಣುತ್ತದೆಯೇ ಎಂದು ಒಮ್ಮೆ ಇಣುಕಿ ನಂತರ ಫಾರ್ಮ್ ಒಳಹೋಗುತ್ತಿರುವಂತೆ ರೇಖ 'Hi' ಹೇಳಿದರು. ಅವರು ಎಂದಿಗೂ cheerful! ಹುಟ್ಟುಹಬ್ಬದ ಚಾಕಲೇಟು ಕೊಡುತ್ತ ನಾಗೇಶ ಹೆಗಡೆಯವರು 'ಕಾಫಿ'ಯನ್ನು ವಾಕಿಂಗಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಅವರಿಂದ ತಿಳಿಯುತ್ತಲೇ ನಾನೂ ಒಂದು ರೌಂಡ್ ಹೊರಟೆ. ದೈತ್ಯಾಕಾರದ ವುಡ್ಲೆಂಡ್ ಶೂ ಚರಪರನೆ ಸದ್ದು ಮಾಡುತ್ತಿದ್ದುದು ಅಲ್ಲೊಂದು ಮನೆಯ ಕೆಲಸದ ಹುಡುಗಿಗೆ ಹೆದರಿಕೆ ಹುಟ್ಟಿಸಿತೆಂದು ಕಾಣುತ್ತದೆ. ಆ ಮನೆಯವರಿಗೆ 'ಯಾರೋ ಬಂದಿದ್ದಾರೆ' ಎಂಬ ಸುದ್ದಿ ತಲುಪಿಸಿದಳು. ನಾನು ಸುಮ್ಮನೇ ಮುಂದೆ ನಡೆದೆ. 'ನೋ ಪ್ಲಾಸ್ಟಿಕ್ ಝೋನ್' ಎಂಬುದರ ಜೊತೆಗೆ ಮತ್ತಷ್ಟು ಫಲಕಗಳನ್ನು ನೋಡುತ್ತ, ಓದುತ್ತ, ಅತ್ತಿತ ಇರುವ ಮರಗಳು ಯಾವುದು ಎಂದು ಗ್ಯೆಸ್ ಮಾಡುತ್ತ ಸ್ವಲ್ಪ ದೂರ ಹೋಗಿದ್ದೆ, ಅಷ್ಟರಲ್ಲಿ ಒಂದಷ್ಟು ದೂರದಲ್ಲಿ ನಾಗೇಶ ಹೆಗಡೆಯವರು ಒಂದು ಪುಟ್ಟ ಕೋಲು ಹಿಡಿದು ಬರುತ್ತಿದ್ದರು. ಕ್ಷಣಾರ್ಧದಲ್ಲಿ ಹಿಂದಿನಿಂದ ಓಡಿ ಬಂದ 'ಕಾಫಿ' ಬರ್ತ್ ಡೇ ವಿಷಯ ಅದಕ್ಕೂ ತಿಳಿದಿರುವಂತೆ, ತಾನೂ ವಿಶ್ ಮಾಡುತ್ತಿರುವಂತೆ ಹಿಂದೆ ಮುಂದೆ ಚುರುಕಾಗಿ ಓಡಿತ್ತು. ಬೆಂಗಳೂರಿಗೆ ಬಂದ ಹೊಸತರಲ್ಲಿ ಅಸುನೀಗಿದ ನಮ್ಮ 'ಸೋನಿ' ಇದ್ದಿದ್ದರೆ ಅದೂ ಹೀಗೇ ಚುರುಕಾಗಿ ಓಡಾಡಿಕೊಂಡಿರುತ್ತಿತ್ತೇನೋ ಎಂದು ಒಂದು ನಿಮಿಷ ಅನಿಸಿದ್ದುಂಟು.

ನಾಗೇಶ ಹೆಗಡೆಯವರ ಜೊತೆ ಮಾತನಾಡುತ್ತ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಹೆಚ್ಚು ಮಾತನಾಡುವುದು ನಾನೇನೆ.  ಹೀಗಾಗಿ ಅವರಿಗೆ ಸಮಯ ಹೋಗುವುದು ಕಷ್ಟವಾಗಬಹುದು, ನಾನು ಟೆಕ್ನಿಕಲ್ ವಿಷಯಗಳನ್ನು ವಿವರಿಸಲು ಹೊರಟುಬಿಟ್ಟರೆ. ಆದರೆ ಮೈತ್ರಿ ಫಾರ್ಮಿನ ವಾತಾವರಣ ಬರಹಗಾರರಿಗೆ ಹೇಳಿ ಮಾಡಿಸಿದಂತೆ. ಸಿಟಿ ಬಸ್ ಹೋದರೆ ಆ ಜಾಗ ಸಿಟಿಯೊಳಗೇ ಎನ್ನುವ ಲೆಕ್ಕ. ಈ ಲೆಕ್ಕಕ್ಕೆ ಮೈತ್ರಿ ಫಾರ್ಮ್ ಕೂಡ ಸಿಟಿ ಒಳಗೇ. ಬೆಂಗಳೂರ ಒಳಗೇ ಇಂತಹ ಜಾಗ, ಇವರು ಮಾಡುತ್ತಿರುವ ಪರಿಸರದ ಕೆಲಸ ಕಲ್ಪನೆಗೆ ಮೀರಿದ್ದು. ವಾಪಸ್ ಬರುವಾಗಲಂತೂ ಖಾಲಿ ರೋಡು, ಕತ್ತಲೆಯ ದಾರಿ, ಒಳ್ಳೆಯ ಗಾಳಿ - ಬೈಕಿನಲ್ಲಿ ಹೋಗೋವಾಗ ಖುಷಿ ಕೊಡುತ್ತದೆ. ಆ ಚೆಂದದ ಕತ್ತಲೆ ಕೂಡ ಪ್ರತಿ ಘಳಿಗೆಗೂ ಮನಸ್ಸನ್ನು ಗಟ್ಟಿಯಾಗಿಸುವ ಕ್ಷಮತೆಯುಳ್ಳದ್ದು. ದೂರದಲ್ಲಿ ಸೈಕಲ್ ಹಿಡಿದು ಸಂಪೂರ್ಣ ಕತ್ತಲೆಯಲ್ಲಿ ಬರುತ್ತಿದ್ದವನ ನೋಡಿ ಗಟ್ಟಿತನ ಏನೆಂಬುದು ತಿಳಿಯುವಂತಿತ್ತು.

ಮಾಗಡಿ ರೋಡಿಗೆ ಬಂದ ಕೂಡಲೆ ವೇಗವಾಗಿ ಮುನ್ನಡೆಯುವ ಬಯಕೆಯಾಗುವಷ್ಟು ಹೊಸ ರೋಡು. ಆದರೆ ನನ್ನ ಬೈಕಿಗೂ ವಯಸ್ಸಾಗಿರುವುದು ತಿಳಿದುಬಂದದ್ದು ಆಗಲೇ. ಎಪ್ಪತ್ತು ದಾಟದ ಬೈಕು, ಬ್ರೇಕು ನುರಿತ ಒಳ್ಳೆಯ ಬೈಕು ಅದು. ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಿ ಮೆಟ್ಟಲು ಹತ್ತುತ್ತಿರುವಾಗ, ನನಗೊಬ್ಬನಿಗೇ ಇಪ್ಪತ್ತಾರರ ವಯಸ್ಸಾದದ್ದಲ್ಲ, ನನ್ನ ಬೈಕು, ಕೈದೋಟದಲ್ಲಿರುವ ಗಿಡ, ಸುತ್ತಲ ಜನ, ಎಲ್ಲರೂ ನನ್ನೊಟ್ಟಿಗೇ ಹೊಸ ದಿನಗಳಿಗೆ ಕಾಲಿಡುತ್ತಿದ್ದಾರೆ, ತಮಗೆ ಬೇಕೋ ಬೇಡವೋ ತಮ್ಮ ವಯಸ್ಸಿಗೆ ದಿನಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ, ಸೇರಿಸಿಕೊಳ್ಳಲೇಬೇಕಾಗಿದೆ ಎಂಬ ಅರಿವು ಸಮಾಧಾನ ಹುಟ್ಟಿಸಿತ್ತು.

Rating
No votes yet

Comments