ನಾನು ಎಸ್ಸೆಸ್ಸಲ್ಸಿ ಪಾಸಾಗಲೇ ಬಾರದಿತ್ತು…!

ನಾನು ಎಸ್ಸೆಸ್ಸಲ್ಸಿ ಪಾಸಾಗಲೇ ಬಾರದಿತ್ತು…!

ನಾನು ಎಸ್ಸೆಸ್ಸಲ್ಸಿ ಪಾಸಾಗಲೇ ಬಾರದಿತ್ತು…!

ಹಾಯ್ ಕೋತಿ
ನಿನಗೆ ನಾನು ಪತ್ರ ಬರೆಯದೇ ತುಂಬಾ ದಿನಗಳೇ ಆಗಿಹೋಯಿತು ಮಾರಾಯಿತಿ. ಬರೀಬೇಕು ಅಂದುಕೊಂಡಿದ್ದೇ ಏನು ಮಾಡ್ತಿಯಾ ಹೇಳು ನಾನು ಬರೆಯಲಿಕ್ಕೆ ಅಂತಾ ಹೊರಟಾಗಲೆಲ್ಲಾ ನಮ್ಮ ಮನೆ ಬೆಕ್ಕು ಅಡ್ಡಬಂತು! ನೀನೇ ಹೇಳಿದ್ದೆ ಅಲ್ವಾ ಕೆಲಸಕ್ಕೆ ಮುಂಚೆ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಾ! ಬೆಕ್ಕು ಇಲ್ಲದ ಹೊತ್ತು ನೋಡಿಕೊಂಡು ಬರೆಯೋವಾಗ ಇಷ್ಟುದಿನ ಆಯಿತು ನೋಡು! ಹೋಗ್ಲಿ ಬಿಡು ಆ ಲಾಂಗ್ ಸ್ಟೋರಿಗಳೆಲ್ಲಾ ಈಗ್ಯಾಕೆ? ಮತ್ತೆ ಹೇಗಿದ್ದಿಯಾ? ಜೋಯ್ಸರು ಹೇಗಿದ್ದಾರೆ?!
ಅಂದಹಾಗೆ ತುಂಗಾ ನದಿಗೆ ಹಾರಿ ಸಾಯುವ ನಿನ್ನ ಪ್ರಾಜೆಕ್ಟ್ ಏನಾಯಿತು?! ಈ ಕಾಗದ ನಿನ್ನ ಕೈ ಸೇರುವುದರೊಳಗೆ ನೀನು ಸತ್ತ ಸುದ್ದಿ ನನ್ನ ಕಿವಿ ಮುಟ್ಟಿದ್ದರೂ ಅಚ್ಚರಿ ಇಲ್ವೆನೋ ಅಲ್ವೇನೇ?! ಸುಮ್ನೆ ತಮಾಶೆ ಮಾಡಿದೆ ಕಣೇ…ನೀನು ಸತ್ತರೆ ಮತ್ತೆ ನಾನಿನ್ನೆಲ್ಲಿ ಬದುಕಿರುತ್ತೀನಿ ಅಲ್ವಾ?! ಹಾಳಾದ ದುಡಿಮೆ ಅನ್ನೋದು ತುಂಬಾ ಬೇಜಾರು ಬರಿಸಿ ಬಿಟ್ಟಿದೆ ಕಣೇ. ಜೀವನವೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಅದ್ಯಾಕೋ ತಿರ್ಥಹಳ್ಳಿಯ ಕಾಡಲ್ಲಿ ಒಂದಿಷ್ಟು ದಿನ ಹಾಯಾಗಿ ಇರೋಣ ಅಂತಾ ಆಲೋಚನೆ ಮಾಡ್ತಾ ಇದೀನಿ. ಮಲೆನಾಡು ಕಾಡಿನ ಪರಿಚಯವೇ ಮರೆತಂತಾಗಿದೆ. ಏ ನಿನಗೆ ನೆನಪಿದೆಯೇನೇ….ನಾನು ಈ ಹಾಳು ನಗರಕ್ಕೆ ಬರುವ ಮೊದಲು ನಾನು ನೀನು ಗುಡ್ಡ ಸುತ್ತಾ ಇದ್ದಿದ್ದು….ನೆರಳೆ ಹಣ್ಣು, ಮುಳ್ಳು ಹಣ್ಣು, ಪರಗಿ ಹಣ್ಣು ಅಂತೆಲ್ಲಾ ಕಾಡಲ್ಲಿ ಸಿಕ್ಕಸಿಕ್ಕ ಹಣನ್ನೆಲ್ಲಾ ತಿಂತಾ ಇದ್ದಿದ್ದು…ಕೋತಿಗಳ ತರಹ ಕಚ್ಚಾಡ್ತಾ ಇದ್ದಿದ್ದು…ಎಷ್ಟು ಸಖತ್ತಾಗಿ ಇತ್ತು ಅಲ್ವಾ ಆ ದಿನಗಳು? ಇವತ್ತು ನಂಗೆ ಅದೇ ತರಹ ಆಟ ಆಡಬೇಕು ಅನ್ನಿಸ್ತಾ ಇದೆ. ಆದ್ರೆ ಈ ಹಾಳು ಸಮಾಜ ಅದನ್ನ ಒಪ್ಪೋದೇ ಇಲ್ಲ ಕಣೇ…ಅದರಲ್ಲೂ ನಿಮ್ಮೂರಿನ ಆ ಗಯ್ಯಾಳಿಗಳು ನಾವು ಈಗಲೂ ಆಟ ಆಡಿದರೆ ಹುಚ್ಚು ಹಿಡಿದಿದೆ ಇವರಿಗೆ ಅಂತಾ ದೊಡ್ಡ ಸುದ್ದಿ ಹಬ್ಬಿಸಿ ಬಿಡ್ತಾರೆ. ಅದನೆಲ್ಲಾ ನೆನಸಿಕೊಂಡರೆ ಕೋಪ ಬರತ್ತೆ…
ನಾನು ದೊಡ್ಡವನಾಗಲೇ ಬಾರದಿತ್ತು ಎಸ್ಸೆಸಲ್ಸಿಲೀ ಫೇಲಾಗಬೇಕಿತ್ತು ಅನ್ನಿಸತ್ತೆ ಎಷ್ಟೋ ಸಲ. ನಿನ್ನಜ್ಜಿ ನಿನ್ನಿಂದಲೇ ಆಗಿದ್ದು ಎಲ್ಲಾ, ಓದಬೇಕು ನೀನು, ಹಾಗಾಬೇಕು, ಇದಾಗಬೇಕು ಅಂತೆಲ್ಲಾ ಆವತ್ತು ಪುರಾಣ ನನ್ನ ತಲೆಗೆ ತುರುಕಿದವಳು, ನನ್ನನ್ನು ಕಾಲೇಜು ಮೆಟ್ಟಿಲು ಹತ್ತಿಸಿದವಳು ನೀನೇ ಬೇವರ್ಸಿ! ನಿಂಗೆ ನಿಮ್ಮಪ್ಪನಿಗಿಂತ ಕ್ರೂರ ಗಂಡ ಸಿಗಲಿ, ನಿನ್ನ ಗಂಡ ಕುಡಿಯುವವನು, ಇಸ್ಪೀಟ್ ಆಡುವವನು, ಅದಕ್ಕಿಂತಲೂ ಕ್ರೂರಿಯಾಗಿರಲಿ….ಕತ್ತೆ ನೀನು ನಾನು ಕಾಡಲಿ ಇರಬೇಕು ಅಂದುಕೊಂಡಿದ್ದನ್ನು ಹಾಳು ಮಾಡಿದವಳು….!!!!
ಮತ್ತೆ ಸಮಾಚಾರ ಜೋಯ್ಸರು ಏನು ಮಾಡ್ತಾ ಇದಾರೆ. ಈಗಂತೂ ಚುನಾವಣೆ…ಜೋಯ್ಸರ ಜ್ಯೋತಿಷ್ಯದ ಬಿಸಿನೆಸ್ ಫುಲ್ ಜೋರಾ? ಸೋಮಯಾಜಿ ನೆಕ್ಸ್ಟ್ ಜ್ಯೋಯ್ಸರೆ ಇರಬೇಕು ಅಲ್ವಾ ಸುಳ್ಳು ಸುಳ್ಳು ಶಕುನ ಹೇಳೋರು…?!ನಿಮ್ಮಪ್ಪ ನಂಗೆ ಹೇಳಿದ ಒಂದೇ ಒಂದೇ ಒಂದು ಸತ್ಯ ಅಂದ್ರೆ ನಿಂಗೆ ಒಬ್ಬ ಲಫಂಗನ ಮಗಳು ಸಿಕ್ತಾಳೆ ಅಂತಾ! ಅದೊಂದು ಮಾತ್ರ ಸಖತ್ತಾಗಿ ಹೇಳಿದಾರೆ ಕಣೇ!
ನಿನ್ನ ಜೊತೆ ನಿನ್ನ ಗ್ಯಾಂಗ್‌ನಲ್ಲಿ ಉರಿಯುತ್ತಿದ್ದ ಹುಡಿಗಿಯರೆಲ್ಲಾ ಹೇಗಿದಾರೆ ಈಗ? ಏ ಮೊನ್ನೆ ಯಾರೋ ಒಬ್ಬಳು ನಿನ್ನ ಜೊತೆ ಇದ್ದವಳು ಸಿಕ್ಕಿದ್ಲು. ನನ್ನ ನಿನ್ನ ಕ್ಲಾಸ್‌ಮೇಟ್ ಅಂತೆ ಪಿಯುಸಿಲಿ ನಂಗೊಂತು ಚೂರು ಗುರುತು ಸಿಕ್ಕಲಿಲ್ಲ. ಅವಳಾಗಿಯೇ ಮಾತಾಡಿಸಿದಳು ನಿನ್ನ ಹುಡುಗಿ ಫ್ರೆಂಡು ನಾನು ಅಂತಾ! ಏನೋ ಕಾಲೇಜು ಮುಗಿದ ಎಲ್ಲಾ ಮುಗೀತು. ಯಾರದ್ದು ಪರಿಚಯವೂ ಇಲ್ಲ ಏನೂ ಇಲ್ಲ. ನಮ್ಮದೊಂದು ತೀರ ಅವರದೊಂದು ತೀರ ಅಲ್ವಾ? ಅದನೆಲ್ಲಾ ನೆನೆಸಿಕೊಂಡರೆ ಯಾಕೋ ತುಂಬಾ ಬೇಜಾರಾಗತ್ತೆ. ನಮ್ಮ ಜೊತೆ ಕುಣಿದವರು ಕಿತ್ತಾಡಿದವರು ಯಾರು ಕೊನೆಗೆ ಸಿಗೋದೇ ಇಲ್ಲ…ಹೋಗ್ಲಿ ಬಿಡು ನನ್ನ ಜೊತೆ ಆವತ್ತಿಂದಲೂ ಜಗಳ ಆಡುತ್ತಿದ್ದ ನೀನಾದ್ರೂ ಇದಿಯಲ್ವಾ ಅಷ್ಟೆ ಸಮಧಾನ ನಂಗೆ. ಅಯ್ಯೋ ಆಫೀಸ್‌ಗೆ ಲೇಟಾಯಿತು …ಇನ್ನೊಂದು ಸಾರಿ ಮತ್ತೆ ಪತ್ರ ಬರಿತೀನಿ ಆಯಿತಾ…ಅಲ್ಲಿವರೆಗೂ ಬಾಯ್
ಕೋತಿಯಲ್ಲದವ

Rating
No votes yet

Comments