ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.

ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.

ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಕಳೆದ ಭಾನುವಾರ ಕುಂಟುಂಬ ಸಮೇತ ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿಗೆ ಹೋಗಿದ್ದೆವು, ಅಲ್ಲಿನ ವ್ಯವಸ್ಥೆ ಹೇಗಿದೆಂದ್ರೆ ಪ್ರವೇಶದಲ್ಲೆ ಸಂತೆಯ ವಾತಾವರಣ, ಕಬ್ಬಿನ ರಸವೆಂಬ ಕಸದ ರಸ ಮಾರುವವರ ಜನರೇಟರುಗಳ ಶಬ್ದ, ಅದರಿಂದ ಬರುವ ಸೀಮೆ ಎಣ್ಣೆ ವಾಸನೆಯ ದಟ್ಟ ಹೊಗೆ, ಮುಸುಕಿನ ಜೋಳ ಮಾರುವವರ ಸೌದೆಯ ಹೊಗೆ ಇವೆರಡರ ಜೊತೆಗೆ, ಮಾರಾಟಗಾರರ ಅರಚಾಟ. ಇದು ನ್ಯಾಶನಲ್ ಪಾರ್ಕಿಗೆ ಬರುವವರಿಗೆ ಸಿಗುವ ಆರಂಭಿಕ ಸ್ವಾಗತ. ಎತ್ತ ನೋಡಿದರು ಕಸದ ರಾಶಿ. ಅಪಾರ ಶಬ್ದ ಮಾಲಿನ್ಯ ಮೃಗಾಲಯದ ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಂತಿದೆ ಪ್ರವೇಶದ್ವಾರದ ವಾತಾವರಣ. ತಲಾ 125ರೂ.ತೆತ್ತು ಗ್ರಾಂಡ್ ಸಫಾರಿಗೆ ಟಿಕೇಟ್ ತೆಗೆದುಕೊಂಡು ಒಳ ಹೊಕ್ಕರೆ, ಆರಂಭದಲ್ಲೆ ಮೂಡ್ ಔಟ್. ಕಾರಣ ಕಿಕ್ಕಿರಿದ ಜನಸಂದಣಿ. ಎಷ್ಟೆ ಜನ ಬಂದರು ನಮ್ಮದಿಷ್ಟೆ ವ್ಯವಸ್ಥೆ ಎಂಬ ಧೋರಣೆ ಅಲ್ಲಿನ ಅಧಿಕಾರಿಗಳದ್ದು. ಇಲ್ಲಿಂದ ಮೊದಲ ಸೇವೆ ಆರಂಭ. ಸುಮಾರು 30x70 ಅಳತೆಯ ಜಾಗದಲ್ಲಿ ಜನಗಳನ್ನು ಜೋಡಿಸಿ ನಿಲ್ಲಿಸಲಾಗುತ್ತೆ. ಉಸಿರಾಡೋಕೆ ಧಾರಾಳವಾಗಿ ಸಿಗೋ ಬೆವರಿನ ವಾಸನೆ. ಅವರು ಬಿಟ್ಟ ಗಾಳಿ ಇವರಿಗೆ. ಇವರು ಬಿಟ್ಟ ಗಾಳಿ ಅವರಿಗೆ. ಇದು ಸುಮಾರು ಒಂದು ಘಂಟೆಯ ಸೇವೆ. ನಂತರ ಸಿಗುತ್ತೆ ಸಫಾರಿ ವಾಹನ. ಅದನ್ನ ಏರಿ ಕುಳಿತರೆ, ಹೆಲಿಕಾಪ್ಟರ್ನಲ್ಲಿ ಕುಳಿತ ಅನುಭವ. ಅದನ್ನು ನಾಚಿಸುವ ಅಲುಗಾಟ ಮತ್ತು ಶಬ್ದ. ಅರ್ಧ ಕಿಲೊಮೀಟರ್ ದೂರ ಸಾಗಿದರೆ ಸಿಗುತ್ತೆ, ನಾಗರೀಕತೆಯ ಪ್ರಾರಂಭದ ದಿನಗಳಲ್ಲಿದ್ದ ಚಿತ್ರಣ. ಬಹುಷಃ ಮೃಗಾಲಯದ ಅಧಿಕಾರಿಗಳಿಗೆ ಟಾರ್ ಎಂಬ ಪದದ ಪರಿಚಯವೆ ಇಲ್ಲವೇನೋ?
ರಸ್ತೆಯೇ ಇಲ್ಲದ ಕಡೆ ವಾಹನ ಚಲಿಸುತ್ತೆ. ಬಹುಷಃ ಇದೇ ಇರಬೇಕು ಗ್ರಾಂಡ್ ಸಫಾರಿ ಎಂಬ ಪದದ ಅರ್ಥ. ಈಗಾಗಲೇ ಬಂದವರಿಗೆ ರಕ್ತದ ಒತ್ತಡ ಏರಿ ಕೋಪ ಮುಖದಲ್ಲಿ ತಾಂಡವ ಆಡುತ್ತೆ. ಅಧಿಕಾರಗಳ ಮುಖಕ್ಕೆ ಕ್ಯಾಕರಿಸಿ ಉಗಿಬೇಕುಂತ ಅನ್ಸುತ್ತೆ. ಆದರೆ ಏನ್ ಮಾಡೋದು. ಬಂದಿರೋದು ವಿಹಾರಕ್ಕೆ. ಅದೂ ಹೆಂಡತಿ ಮಕ್ಕಳ ಜೊತೆ. ರಂಪಾಟ ಯಾಕೆಂತ ನಮಗೆ ನಾವೆ ಸುಮ್ಮನಾಗಬೇಕು. ಇದು ಎರಡನೆ ಸೇವೆ. ಇನ್ನು ಮೂರನೆ ಅತಿ ಸುಂದರ ಸೇವೆ. ಮೃಗಾಲಯದ ಪ್ರವೇಶ. ಯಾವುದೇ ಪಂಜರದ ಬಳಿ ಹೋದರು ಗಬ್ಬು ನಾರುವ ವಾಸನೆ. ಆ ಪ್ರಾಣಿ ಪಕ್ಷಿಗಳು ಇವರ ಕೈಗೆ ಸಿಗೋಕೆ ಅದ್ಯಾವ ಕರ್ಮ ಮಾಡಿತ್ತೋ. ಪಂಜರದೊಳಗೆ ಅವುಗಳ ಮಲಮೂತ್ರಗಳನ್ನು ಶುದ್ಧ ಮಾಡೋದೆ ಇಲ್ಲ ಅನ್ನೋದಕ್ಕೆ ಅವುಗಳ ನೆಲ ಮತ್ತು ಗೋಡೆಗೆ ಅಂಟಿಕೊಂಡು, ವಿವಿಧ ದೇಶಗಳ ನಕ್ಷೆಗಳ ರೀತಿ ಕಾಣಿಸೋದೇ ಸಾಕ್ಷಿ ಅಥವಾ ಇದೆಲ್ಲ ಅವರ ಕಲಾವಂತಿಕೆಯ ಕಲ್ಪನೆಗಳಿರಬಹುದು. ಅದೇ ಪಂಜರದೊಳಗೆ ಮೃಗಾಲಯದ ಅಧಿಕಾರಿಗಳನ್ನ ಕನಿಷ್ಟ ಮೂರುದಿನಗಳಾದರೂ ಕೂಡಿಹಾಕಬೇಕು. ಆಗಲೆ ನಮ್ಮ ಮನಸ್ಸಿಗೆ ಸಮಾಧಾನ ಎಂಬ ಸೇಡಿನ ಮನೋಸ್ಥಿತಿಗೆ ನಮ್ಮನ್ನ ಕೊಂಡೊಯ್ಯುತ್ತೆ ಅಲ್ಲಿನ ವಾತಾವರಣ. ಆ ಪ್ರಾಣಿಗಳು ಅಲ್ಲಿರೋದ್ರಿಂದ್ಲೆ ಅವರಿಗೆ ಕೆಲಸ. ಅದರಿಂದ ಅವರ ಕುಟುಂಬಕ್ಕೆ ಅನ್ನ, ಕೆಲಸದ ಕಡೆ ಕನಿಷ್ಟ ನಿಯತ್ತು ಇಲ್ಲದ ಇಂತಾ ಜನಗಳ ಕೈಗೆ ಮೃಗಾಲಯದ ಆಡಳಿತ ಒಪ್ಪಿಸಿರೋ ಸರ್ಕಾರದ ಬಗ್ಗೆ ಇನ್ನೂ ಏನಂತ ತಿಳಕೋಬೇಕೊ ಅರ್ಥವಾಗದ ಸ್ಥಿತಿ. ಬಹಳಷ್ಟು ಪ್ರಾಣಿಗಳಿಗೆ ಮಳೆಯಿಂದ ರಕ್ಷಣೆನೆ ಇಲ್ಲ. ಇನ್ನೂ ನಾಲ್ಕೈದು ದಿನಗಳಲ್ಲಿ ಸಾಯೋ ಸ್ಥಿತಿಯಲ್ಲಿರುವ, ಹೈನಾ, ಬಡಕಲು ಹುಲಿ, , ಸಿಂಹ, ಹಾವು, ಅವುಗಳನ್ನೆಲ್ಲಾ ನೋಡ್ತಿದ್ರೆ, ನಿಜಕ್ಕೂ ಅದಕ್ಕೆ ಆಹಾರ ಕೊಡ್ತಾರೆನೋ ಅನ್ನೋ ಅನುಮಾನ ನಮ್ಮನ್ನ ಕಾಡದೆ ಇರಲಾರದು. ಪೆಲಿಕನ್ ಮತ್ತಿತರ ಪಕ್ಷಿಗಳಿರೋ ಪಂಜರ ಮತ್ತು ನೀರು ಕುದುರೆ ಇರೋ ಸ್ಥಳಗಳ ಬಳಿ ಅಕ್ಷರಶಃ ಅಲ್ಲಿನ ವಾಸನೆಗೆ ತಲೆ ಸುತ್ತಿ ಬೀಳದೆ ಇದ್ದರೆ ಅದು ನಮ್ಮ ಅದೃಷ್ಟ. ಅವುಗಳನ್ನ ಸರಿಯಾದ ರೀತಿಯಲ್ಲಿ ಸಾಕೋ ಯೋಗ್ಯತೆ ಇಲ್ಲದ ಮೇಲೆ ಮೃಗಾಲಯ ಯಾಕೆ? ಇಷ್ಟಕ್ಕೂ ಸುಮಾರು ಪ್ರಾಣಿಗಳನ್ನು ದತ್ತು ನೀಡಿ, ದಾನಿಗಳಿಂದ ಹಣ ಸಂಗ್ರಹಿಸಿದ್ದಾರೆ. ಜೊತೆಗೆ ಪ್ರವೇಶಧನ, ಮೇಲುನೋಟಕ್ಕೆ ಹಣದ ಕೊರತೆ ಇಲ್ಲ ಅನ್ನೋದು ಕಾಣುತ್ತೆ. ಆದರೆ ಅಲ್ಲಿರೋ ಕೆಲಸಗಾರರಲ್ಲಿ ಕರ್ತವ್ಯದ ಬಗೆಗಿನ ನಿಷ್ಟೆ ಎಲ್ಲೆಲ್ಲೂ ಕಾಣುವುದಿಲ್ಲ. ಚಿಟ್ಟೆ ಪಾರ್ಕಿಗೆ 20 ರೂ. ಟಿಕೆಟ್, 20 ಚಿಟ್ಟೆಗಳು ಅಲ್ಲಲ್ಲಿ. ಒಟ್ಟಾರೆ ಮೃಗಾಲಯಕ್ಕೊಂದು ಮೇಜರ್ ಸರ್ಜರಿ ಆಗಬೇಕು. ಇಲ್ಲದಿದ್ದರೆ, ಆ ಪ್ರಾಣಿಗಳ ಶಾಪ ಅಲ್ಲಿನ ಕೆಲಸಗಾರರನ್ನು ಸುಮ್ಮನೆ ಬಿಡೋದಿಲ್ಲ.

ಸಹಿ
ಶಿವಕುಮಾರ್. ಬಿ.ಎಸ್.

Rating
No votes yet

Comments