ಪುಸ್ತಕನಿಧಿ:- 'ಈಶ ಸಂಕಲ್ಪ' - ಚಾಲುಕ್ಯ ಸಾಮ್ರಾಟ್ ಇಮ್ಮಡಿ ಪುಲಿಕೇಶಿ ಕುರಿತಾದ ಕಾದಂಬರಿ
ಇದು ಒಂದು ಪುಟ್ಟ ಅಂದರೆ 150 ಪುಟಗಳ ಒಂದು ಐತಿಹಾಸಿಕ ಕಾದಂಬರಿ. ಇದನ್ನು ಓದಲು pustaka.sanchaya.net ಅಂತರ್ಜಾಲತಾಣದಲ್ಲಿ 'ಈಶ ಸಂಕಲ್ಪ' ಎಂದು ಹುಡುಕಿದರೆ ಸಿಗುತ್ತದೆ.
ದಕ್ಷಿಣ ಭಾರತವನ್ನೆಲ್ಲ ಗೆದ್ದು ದಕ್ಷಿಣಾಪಥೇಶ್ವರ ಎಂದು ಕರೆಸಿಕೊಂಡ, ಕರ್ನಾಟಕ ಸಾಮ್ರಾಜ್ಯದ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯು ಉತ್ತರಾಪಥ (ಉತ್ತರ ಭಾರತ)ದ ಚಕ್ರವರ್ತಿ ಹರ್ಷವರ್ಧನನ ಜತೆಗೆ ತನ್ನ ಸಾಮ್ರಾಜ್ಯದ ಉತ್ತರದ ಸೀಮೆ ಗೋದಾವರಿ ನದಿಯಲ್ಲ ಆದರೆ ನರ್ಮದಾ ನದಿ ಎಂದು ಸಾಧಿಸಲು ಯುದ್ಧ ಮಾಡಿ ಯಶಸ್ವಿಯಾಗುತ್ತಾನೆ. ಈ ಯುದ್ಧದ ಕಥೆ ಮತ್ತು ಜೊತೆ ಜೊತೆಗೆ ಈತನ ಸೇನಾಪತಿಯ ಸೊಸೆಯು ಪುರುಷ ವೇಷದಲ್ಲಿ ಸಾಹಸ ಮಾಡಿ ಯುದ್ಧದ ಗೆಲುವಿಗೆ ಕಾರಣಳಾದ ಸಂಗತಿ ಮೊದಲ ಅರ್ಧಭಾಗದಲ್ಲಿದ್ದರೆ ನಂತರದ ಭಾಗದಲ್ಲಿ ಮುಂದಿನ ಸಾಮ್ರಾಟ್ ಯಾರು ಎಂದು ಅಧಿಕಾರಕ್ಕಾಗಿ ಅವನ ಮಕ್ಕಳ ನಡುವೆ ನಡೆದ ಜಗಳ, ಅದರಿಂದಾಗಿ ದಕ್ಷಿಣದ ಪಲ್ಲವ ರಾಜನು ಲಾಭ ಪಡೆದು ರಾಜಧಾನಿ ಬಾದಾಮಿಯನ್ನು ವಶಪಡಿಸಿಕೊಂಡು ನಾಶ ಮಾಡಿದನು. ಇಮ್ಮಡಿ ಪುಲಕೇಶಿಯು ಆಗ ಅರ್ಧಾಂಗ ವಾಯುವಿನಿಂದ ಹಾಸಿಗೆ ಹಿಡಿದಿದ್ದನು. ಆದ ಘಟನೆಗಳಿಗೆ ಈಶ ಸಂಕಲ್ಪವೇ ಹಾಗೆ ಇದೆ ಎಂದು ಸಮಾಧಾನ ಮಾಡಿಕೊಳ್ಳದೆ ಬೇರೆ ಹಾದಿಯೇ ಇಲ್ಲ!
ಈ ಪುಸ್ತಕದ ಮುನ್ನುಡಿಯಲ್ಲಿ ಇರಾಣದ ಚಕ್ರವರ್ತಿಯು ಇಮ್ಮಡಿ ಪುಲಕೇಶಿಯ ಸಹಾಯ ಕೋರಿದ ಸಂಗತಿ ಇದೆ. ಇದು ನನಗೆ ಗೊತ್ತಿರಲಿಲ್ಲ. ಇಮ್ಮಡಿ ಪುಲಕೇಶಿಯು 42 ವರ್ಷ ಈ ಸಾಮ್ರಾಜ್ಯವನ್ನು ಆಳಿದನಂತೆ.
ಈ ಕಾದಂಬರಿಯನ್ನು ಬರೆದವರು ನಾಗೇಶ ಎಂಬುವವರು. ಇವರೇ ಬರೆದ ಚಾಲುಕ್ಯರ ಕುರಿತಾದ ಇನ್ನೊಂದು ಕಾದಂಬರಿ 'ಸತ್ಯಮೇವ ಜಯತೆ' . ಇದೇ ಗಾತ್ರದ್ದು. ನನ್ನ ಮುಂದಿನ ಓದು ಅದು.