ಪುಸ್ತಕನಿಧಿ- ತೇಜಸ್ವಿಯವರ 'ನೆರೆಹೊರೆಯ ಗೆಳೆಯರು '

ಪುಸ್ತಕನಿಧಿ- ತೇಜಸ್ವಿಯವರ 'ನೆರೆಹೊರೆಯ ಗೆಳೆಯರು '

ಚಿತ್ರ

"ಭೂಮಿಯಿಂದ ಎರಡು ಲಕ್ಷ ಇಪ್ಪತ್ತನಾಲ್ಕು ಸಾವಿರ ಮೈಲಿ ದೂರದಲ್ಲಿ ಕತ್ತಲಾಗಿರುವ ಬಾಹ್ಯಾಕಾಶದಲ್ಲಿ ಚಂದ್ರನಡೆಗೆ ಸಾಗುತ್ತಾ ಹಿಂದಕ್ಕೆ ತಿರುಗಿ ನೋಡಿದಾಗ ಬಾಹ್ಯಾಕಾಶ ಯಾತ್ರಿಗಳಿಗೆ ಒಂದು ಅವಿಸ್ಮರಣೀಯ ದೃಶ್ಯ ಕಾಣಿಸಿತು. ನೀಲಿ, ಹಸಿರು, ಕೆಂಪು ವರ್ಣದ ಭೂಮಿ, ವಜ್ರದಂತೆ ಪ್ರಜ್ವಲಿಸುತ್ತಿತ್ತು, ಸುತ್ತ ಜೀವಕೋಟಿಯ ಸುಳಿವೂ ಇಲ್ಲದ ಚಂದ್ರ ಹಾಗೂ ಮತ್ತಿತರ ಬಂಜರು ಗ್ರಹಗಳು! ಮುಂದೆ ಅನಂತವಾಗಿ ಹಬ್ಬಿರುವ ಕರಿಯ ಶೂನ್ಯ ಆಕಾಶ! ಜೀವದ ಸುಳಿವಿಲ್ಲದ ಸೌರಮಂಡಲದ ನಡುವೆ ಹೊಳೆಯುತ್ತಿರುವ ನೀಲಿಯ ಏಕಮಾತ್ರ ಗ್ರಹ ಭೂಮಿ, ಇದಕ್ಕಿಂತ ಅನರ್ಘವಾದದ್ದು, ಅಮೂಲ್ಯವಾದುದು ಏನೂ ಇಲ್ಲ ಎನ್ನಿಸಿತು ಆ ಗಗನ ಯಾತ್ರಿಗಳಿಗೆ .   ನಮ್ಮ ಸೀಬೆ ಗಿಡದ ಮೇಲಿನ ಅಳಿಲು,  ಮುಬಿಯಾ ನದಿ ತೀರದ ಕಪ್ಪೆ,  ಹಳ್ಳದ ಪಕ್ಕ ಅಡ್ಡಡ್ಡ ಓಡಾಡುವ ವಿಚಿತ್ರ ಏಡಿ, ಆಫ್ರಿಕದ ಯಾವುದೋ ಕಾಡಿನ ಗಾಳಿಯಲ್ಲಿ ತೇಲಾಡುವ ಇಲಿ, ಕೆರೆಯ ಕಲ್ಲಿನ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಆಮೆ, ಇವೆಲ್ಲದರ ಸಂಯೋಜನೆ ಭೂಮಿಯಿಂದ ಎರಡು ಲಕ್ಷ ಮೈಲು ದೂರದಲ್ಲಿ ಗಗನ ಯಾತ್ರಿಗಳು ಕಂಡ ಕಾಣ್ಕೆ.  ಈ ಸತ್ಯವನ್ನು ಅಷ್ಟು ದೂರ ಹೋಗದೆ   ಸಾಕ್ಷಾತ್ಕರಿಸಿಕೊಂಡವರು"  ನಮ್ಮ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಂಥವರು.   ಭೂಮಿಯ ಅತಿ ಸಾಮಾನ್ಯವಾದುದು, ಸರಳವಾದುದು ಸಹ ಅತ್ಯಮೋಘ, ಅಸಾಮಾನ್ಯ ಎಂದು ನಾವು ತಿಳಿದಿರುವುದಷ್ಟೇ ವಿಶ್ವಮಾನ್ಯ ಎಂದು ನಮಗೆ ಅವರು ತೋರಿಸಿಕೊಡುತ್ತಾರೆ. 

ಅವರ  ಮಿಲೆನಿಯಂ ಸರಣಿಯ ಪುಸ್ತಕಗಳಲ್ಲಿ ಒಂದಾದ 'ನೆರೆಹೊರೆಯ ಗೆಳೆಯರು' ಅನ್ನು  ಇತ್ತೀಚೆಗೆ ಓದಿದೆ. ಪುಸ್ತಕದ ಗಾತ್ರ ಒಂದು ನೂರು ಪುಟಗಳು. ಆದರೆ ತುಂಬಾ ಚೆನ್ನಾದ ಪುಸ್ತಕ. ಮನುಷ್ಯರಾದ ನಾವುಗಳು ತುಂಬಾ ಸ್ವಾರ್ಥಿಯಾಗಿ ನಮ್ಮನ್ನೇ ಕೇಂದ್ರದಲ್ಲಿ ಇಟ್ಟುಕೊಂಡು ಬದುಕುತ್ತೇವೆ. ಆದರೆ ಈ ಭೂಮಿಯ ಮೇಲಿನ ಜೀವಗಳು ಹೇಗೆಲ್ಲ ಬದುಕಿವೆ? ಹೇಗೆ ತಮ್ಮ  ಕುಲವನ್ನು ಬೆಳೆಸುತ್ತವೆ? ಹೇಗೆಲ್ಲಾ ಸಾಯುತ್ತವೆ?  ಸ್ವಾರ್ಥಿಮನುಷ್ಯನಿಂದಾಗಿ ಹೇಗೆ ನಿರ್ನಾಮದ ಅಂಚಿಗೆ ಹೋಗುತ್ತವೆ? ಕೊಲ್ಲುವ ಕೈ ಒಂದು, ಕಾಯುವ ಕೈ ಒಂದು ಅನ್ನುವ ಹಾಗೆ ಎಷ್ಟೋ ಜನರು ತಮ್ಮ ಲಾಭಕ್ಕಾಗಿ  ಅವುಗಳನ್ನು ಕೊಲ್ಲುತ್ತಿದ್ದರೆ, ಅವುಗಳನ್ನು ಕಾಪಾಡಲೂ ಇನ್ನಷ್ಟು ಜನರು ಪ್ರಯತ್ನಿಸುತ್ತ ಇರುತ್ತಾರೆ.

ನಮ್ಮ ಆತ್ಮಕೇಂದ್ರಿತ ಬದುಕಿನಿಂದ ಹೊರಬಂದು ಲೋಕವನ್ನು ತಿಳಿಯಲು ಇಂಥ ಪುಸ್ತಕಗಳು ಪ್ರೇರೇಪಿಸುತ್ತವೆ.

ಬ್ಲಾಗ್ ವರ್ಗಗಳು
Rating
Average: 4 (1 vote)