ಪುಸ್ತಕನಿಧಿ - 2. ಕೈಲಾಸಂ ಅವರ 'ಪರ್ಪಸ್' , ಜಿ ಪಿ ರಾಜರತ್ನಂ ಅವರ 'ಏಕಲವ್ಯ' - ನಾವು ಮಾಡುವ ಕೆಲಸದ ಉದ್ದೇಶ

ಪುಸ್ತಕನಿಧಿ - 2. ಕೈಲಾಸಂ ಅವರ 'ಪರ್ಪಸ್' , ಜಿ ಪಿ ರಾಜರತ್ನಂ ಅವರ 'ಏಕಲವ್ಯ' - ನಾವು ಮಾಡುವ ಕೆಲಸದ ಉದ್ದೇಶ

ಚಿತ್ರ

ಮಹಾಭಾರತದಲ್ಲಿ ಏಕಲವ್ಯನ ಕಥೆ ತುಂಬಾ ಸಂಕ್ಷಿಪ್ತವಾಗಿದೆ.   ಆತನ ಭವ್ಯ ಜೀವನದ ದರ್ಶನವನ್ನು ನಮಗೆ ಕೈಲಾಸಂ ತಮ್ಮ 'ಪರ್ಪಸ್' ಎಂಬ ಇಂಗ್ಲಿಷ್ ನಾಟಕದ ಮೂಲಕ ಮಾಡಿಸುತ್ತಾರೆ. 

ನಾನು ಪರಿಚಯಿಸುತ್ತಿರುವ ಈ ಪುಸ್ತಕವು ಕೈಲಾಸಂ ಅವರು ಇಂಗ್ಲಿಷ್ನಲ್ಲಿ ಬರೆದಿರುವ  ಪರ್ಪಸ್  ಎಂಬ ನಾಟಕದ    'ಸಾರವಿಸ್ತಾರ' - .ಜಿ ಪಿ ರಾಜರತ್ನಂ ಅವರು ಮಾಡಿರೋದು. ಈ ಪುಸ್ತಕ ಇಲ್ಲಿ ಇದೆ-  https://archive.org/details/unset0000unse_y9a4/mode/2up

ಸಂಸ್ಕೃತದ ಕವಿಯಾದ ಭಾಸನು ಮಹಾಭಾರತ ರಾಮಾಯಣದ ಕಥೆಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿದ್ದರೂ ಕೂಡ ಪಾತ್ರಗಳಿಗೆ ಅಪಚಾರವಾಗದಂತೆ ಎಚ್ಚರವಹಿಸಿದ್ದಾನೆ, ಅಷ್ಟೇಕೆ ಕೆಲವಡೆ ಮೂಲ ಪಾತ್ರಗಳ ಔನ್ನತ್ಯ ಇನ್ನು ಹೆಚ್ಚಾಗುವಂತೆ ಮಾಡಿದ್ದಾನೆ.  ಸಂಸ್ಕೃತದಲ್ಲಿ ಹಾಸ್ಯಕ್ಕೆ ಅವನೇ ಪ್ರವರ್ತಕ. ಆದ ಕಾರಣ ಭಾಸೋ ಹಾಸ: , ಕವಿತಾ ಕಾಮಿನಿಯ ಮುಗುಳುನಗೆ  ಎಂದು ಸಂಸ್ಕೃತದ ಮಟ್ಟಿಗೆ ಹೇಳಿದ್ದಾರೆ. ಹಾಗೆಯೇ ಕೈಲಾಸಂ ಕನ್ನಡದ ಹಾಸ.

ಕೈಲಾಸಮ್ ಅವರ ಪುರಾಣ ಪಾತ್ರಗಳು ವ್ಯಾಸ ವಾಲ್ಮೀಕಿಗಳ ತಪಸ್ಸಿದ್ಧಿಯ ಸಾಕ್ಷಾತ್ಕಾರಗಳು.

ಕೈಲಾಸಮ್ ಅವರ ಏಕಲವ್ಯ ತಂದೆಯನ್ನು ಕಳೆದುಕೊಂಡವನು.  ಅವನು ಮತ್ತು ಅವನ ತಾಯಿ ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡದೆ ಕಾಡಿನಲ್ಲಿರುವ ಹಣ್ಣು-ಹಂಪಲುಗಳಿಂದ ಬದುಕಿದ್ದಾರೆ. ಅವನಿಗೆ ಜಿಂಕೆ, ಜಿಂಕೆ ಮರಿಗಳಲ್ಲಿ ಮೈತ್ರಿ ಉಂಟಾಯಿತು. ಆ ಜಿಂಕೆಗಳನ್ನು ಹಿಂಸಿಸಿ ಕೊಲ್ಲುತ್ತಿದ್ದ ತೋಳಗಳಲ್ಲಿ ದ್ವೇಷ ಉಂಟಾಯಿತು.  ಜಿಂಕೆಗಳ ಕುರಿತು ಕರುಣೆ ಉಂಟಾಯಿತು.  ಜಿಂಕೆಗಳನ್ನು ಕೊಲ್ಲುವುದು ತೋಳಗಳ ಹುಟ್ಟುಗುಣ, ಆದರೆ ತೋಳಗಳನ್ನು ಕೊಂದು ಜಿಂಕೆಗಳನ್ನು ರಕ್ಷಿಸುವುದು ಬೇಟೆಗಾರನಾದ ತನ್ನ ಹುಟ್ಟುಗುಣ ಎಂದುಕೊಂಡು ಜಿಂಕೆಗಳನ್ನು ತೋಳಗಳಿಂದ ರಕ್ಷಿಸಲು ಅವನಿಗೆ ಬಿಲ್ಲುವಿದ್ಯೆ ಕಲಿಯಬೇಕಾಯಿತು. 

ಆದರೆ ತಾಯಿಯು 'ನೀನು ಯಾರನ್ನಾದರೂ ಕೊಲ್ಲುವ ಮೊದಲು ಅವರಿಗೂ ನನ್ನ ಹಾಗೆ ತಾಯಿ ಇರುವುದನ್ನು ನೆನಪಿಸಿಕೋ ನಿನ್ನನ್ನು ಕಳೆದುಕೊಂಡರೆ ನನಗೆ ದುಃಖ ವಾಗುವ ಹಾಗೆ ಅವಳಿಗೂ ಆಗುತ್ತದೆ ಎಂದು ನೆನಪಿಟ್ಟುಕೋ' ಎಂದು ಕರುಣೆಯನ್ನು ಬೋಧಿಸುತ್ತಿದ್ದಳು.

ಅಲ್ಲೊಬ್ಬ ಋಷಿ ಇದ್ದ , ಅವನು ಆಶ್ರಮ ಪ್ರದೇಶವನ್ನು ಪ್ರವೇಶಿಸಿದ ತೋಳಗಳು ಜಿಂಕೆಗಳ ಮೇಲಿನ ದ್ವೇಷವನ್ನು ಬಿಟ್ಟು ಜಿಂಕೆ ಮರಿಗಳಿಗೆ ಹಾಲು ಕುಡಿಸುತ್ತಿದ್ದವು. ಇದಕ್ಕೆ ಆ ಋಷಿಯ ತಪಸ್ಸಿನ ಪ್ರಭಾವವೇ ಕಾರಣ ಎಂದು ತಾಯಿಯಿಂದ ಅರಿತುಕೊಂಡ ಏಕಲವ್ಯನು ತಾನು ಕೂಡ ಆ ಋಷಿಯಂತೆ ಪ್ರಭಾವಿ ಆಗಲು ಆಸೆಪಟ್ಟನು. ಅದು ನಿನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲಪ್ಪ, ನೀನು ಬೇಡನಾಗಿ ಹುಟ್ಟಿದವನು, ಬೇಡನ ಸಹಜ ಗುಣಕ್ಕೆ ತಕ್ಕಂತೆ ನೀನು ತೋಳಗಳನ್ನು ಬಿಲ್ಲುವಿದ್ಯೆಯಿಂದ ಕೊಂದು ಜಿಂಕೆಗಳನ್ನು ಕಾಪಾಡುಬಲ್ಲೆ. ಮುಂದೊಂದು ಜನ್ಮದಲ್ಲಿ ಋಷಿಯಾಗಿ ಹುಟ್ಟಿ ಎಲ್ಲ ಪ್ರಾಣಿಗಳನ್ನು ಕಾಪಾಡಬಲ್ಲೆ, ಆದರೆ ಈ ಜನ್ಮದಲ್ಲಿ ತೋಳಗಳನ್ನು ಕೊಂದು ಜಿಂಕೆಗಳನ್ನು ಕಾಪಾಡುವುದು ನಿನ್ನ ಸಹಜ ಧರ್ಮ ಎಂದು ತಿಳಿಸಿದಳು.

ತಾನು ಈ ಜಗತ್ತಿನ ಎಲ್ಲಾ ಜಿಂಕೆಗಳನ್ನು ರಕ್ಷಿಸಲು ಎಲ್ಲಾ ತೋಳಗಳನ್ನು ಕೊಲ್ಲಲು ಶ್ರೇಷ್ಠ ಬಿಲ್ಲುಗಾರ ಆಗಬೇಕೆಂದು ಅವನು ಬಯಸಿದನು. ಅಂತಹ ವಿದ್ಯೆಯನ್ನು ಗುರುಮುಖದಿಂದ ಮಾತ್ರ ಕಲಿಯಲು ಸಾಧ್ಯ ಎಂದು ಹೇಳಿ
 ದ್ರೋಣಾಚಾರ್ಯರ ಬಳಿಗೆ ಕಳುಹಿಸಿದಳು.

ಹೀಗೆ ಇವನು ಉದ್ದೇಶವು ಸ್ವಾರ್ಥದ್ದಾಗಿರಲಿಲ್ಲ, ಪರಾರ್ಥ ದ್ದಾಗಿತ್ತು.

ಆದರೆ ಅರ್ಜುನನದು ತಾನೇ ಜಗತ್ತಿನ ಏಕೈಕ ಶ್ರೇಷ್ಠ ಬಿಲ್ಲುಗಾರ,  ಆಗಬೇಕೆಂದು  ಕೀರ್ತಿಯ ಸ್ವಾರ್ಥದ ಉದ್ದೇಶವನ್ನು ಹೊಂದಿದ್ದ.  

ಮತ್ತೆ ದ್ರೋಣಾಚಾರ್ಯ ? ಈತ ಬ್ರಾಹ್ಮಣ, ಅಧ್ಯಯನ ಅಧ್ಯಾಪನ ಇವನ ಧರ್ಮ, ತಾನು ಕಲಿತದ್ದನ್ನು ಇನ್ನೊಬ್ಬರಿಗೆ ಕಲಿಸಬೇಕೆಂದು ಇವನ ಗುರಿ. ಕರ್ಮಕ್ಕಾಗಿ ಕರ್ಮ ಮಾಡುವವನು ಈತ. ಇದರಿಂದ ತನಗಾಗಲಿ ಇತರರಿಗಾಗಿ ಆಗಲಿ ಏನು ಫಲ ಎಂದು ತಲೆಕೆಡಿಸಿಕೊಳ್ಳುವವನಲ್ಲ.

ಹೀಗೆ ನಮ್ಮ ಕರ್ಮದಲ್ಲಿ ಉದ್ದೇಶ ಉತ್ತಮವಾದದ್ದಾಗಿರಬೇಕು, ಉದಾತ್ತವಾಗಿರಬೇಕು.

ನೋವು ಯಾರಿಗೂ ತಪ್ಪಿದ್ದಲ್ಲ. ಮೃದು ಹೃದಯದವನು ಇತರರ ನೋವಿಗೆ ನೋಯುತ್ತಾನೆ, ನಿಷ್ಕರುಣಿಯು ತನ್ನ ನೋವಿಗೆ ನರಳುತ್ತಾನೆ. 

ಇಲ್ಲಿ ಏಕಲವ್ಯನ ಶ್ರೇಷ್ಠ  ಕರ್ಮ, ದ್ರೋಣನದು ಮಧ್ಯಮ ಕರ್ಮ, ಅರ್ಜುನನದು ಕೀಳು ಕರ್ಮ.

ಮತ್ತೆ ಭೀಷ್ಮನದು ? ಅವನು ಎಲ್ಲರಿಗೂ ಹೆಚ್ಚಿನವನು. ತನ್ನ ಕರ್ಮದ ಉದ್ದೇಶ ಅರಿಯನು. ಅದನ್ನು ದೇವರು ಮಾತ್ರ ಬಲ್ಲನು ಎಂದು ಅರಿತವನು. ಕರ್ಮದ ಫಲ ಅವನದು ಕರ್ಮ ಮಾತ್ರ ತನ್ನದು . ಉತ್ತು ಬಿತ್ತುವುದು ತನ್ನ ಕೆಲಸ,  ಕುಯಿಲು ಮಾತ್ರ ಆತನದು ಎಂಬ ತಿಳುವಳಿಕೆ ಆತನಿಗೆ ‌ಇದೆ.

ಕೃಷ್ಣನನ್ನು ಬಿಟ್ಟರೆ ಭೀಷ್ಮನಷ್ಟು ಎತ್ತರಕ್ಕೆ ಏರಿದ ವ್ಯಕ್ತಿ ಬೇರೆ ಇಲ್ಲವಂತೆ. 

( ಈ ಬರಹ ನಿಮಗೆ ಸರಿ ಇಲ್ಲ ಎನಿಸಿದರೆ ಮೂಲ ಪುಸ್ತಕವನ್ನು ಓದಿ, ನಾನು ಮಾಡಿದ ಸಂಗ್ರಹ ಸರಿಯಾಗಿರಲಿಕ್ಕಿಲ್ಲ, ನಮ್ಮ ಕೆಲಸದ ಉದ್ದೇಶದ ಕುರಿತಾದ ಈ ನಾಟಕದತ್ತ ಗಮನಸೆಳೆಯುವುದು ನನ್ನ ಉದ್ದೇಶ. ಅದು  ಸಾಧಿಸಿದರೆ ಸಾಕು!) 

ಈ ಕೃತಿಯು ಕೈಲಾಸಂ ಕೃತಿಗಳಲ್ಲಿ ಕಳಸವಂತೆ. ಇದು  ಇಂಗ್ಲೀಷ್ನಲ್ಲಿ ಇದ್ದ ಕಾರಣ ಸ್ವಲ್ಪ ಜನರ ಭಾಗ್ಯವನ್ನು  ಬಹುಜನರ ಭಾಗ್ಯವನ್ನಾಗಿ ಮಾಡುವ ಪ್ರಯತ್ನ ಜಿ.ಪಿ. ರಾಜರತ್ನಂ ಅವರದ್ದು. ಅವರ ಉದ್ದೇಶವು ಸ್ವಾರ್ಥದ್ದಲ್ಲ, ಪರಾರ್ಥದ್ದು, ಎಂಬುದನ್ನು ಗಮನಿಸಿ ! .

 

Rating
Average: 4 (3 votes)