ಪುಸ್ತಕನಿಧಿ- 25. ಮಹಾಭಾರತದ ಸಭಾಪರ್ವದೊಳಗಿನ ರಹಸ್ಯಗಳು- ಗಳಗನಾಥ .
ಈ ಪುಸ್ತಕದಿಂದ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳು ಇಲ್ಲಿವೆ.
ಇಲ್ಲಿನವು ಭಾರತದ ಹಿತಕಾರಕ ರಹಸ್ಯಗಳು. ಧರ್ಮಕ್ಕೆ ಅಂತರಂಗ ಬಹಿರಂಗ ಎಂಬ ಎರಡು ಅಂಗಗಳು ಇರುವವು. ಧರ್ಮದ ಅಂತರಂಗವು ಜಗದ್ ಕಾರಣನಾದ ದೇವರ ಪ್ರೀತಿಗೆ ಸಂಬಂಧ ಇರುವುದು. ಧರ್ಮದ ಬಹಿರಂಗವು ಜಗತ್ತಿನ ಸುಖದ ಪ್ರಾಪ್ತಿಗೆ ಸಂಬಂಧಿಸಿದ್ದಾಗಿರುವುದು. ಧರ್ಮದ ಅಂತರಂಗವು ಶಾಶ್ವತವಾಗಿ ಇರುವುದು. ಜಗತ್ತು ಯಾವಾಗಲೂ ರೂಪಾಂತರ ಹೊಂದತಕ್ಕದ್ದಾಗಿದ್ದು ಈ ಜಗತ್ತು ಚಂಚಲವಾಗಿರುವುದರಿಂದ ಜಗತ್ತಿನ ಸುಖದ ಪ್ರಾಪ್ತಿಗೆ ಕಾರಣವಾದ ಲೌಕಿಕ ಆಚಾರ ಮಯನಿಸುವ ಧರ್ಮದ ಬಹಿರಂಗವೂ ಚಂಚಲವೇ. ಅಂದರೆ ದೇಶಕಾಲ ಪರಿಸ್ಥಿತಿಗೆ ಅನುರೂಪವಾಗಿ ಹೆಚ್ಚು ಕಡಿಮೆ ಆಗತಕ್ಕದ್ದೇ ಆಗಿರುವುದು. ಧರ್ಮದ ಮುಖ್ಯ ಅಂಶವಾದ ಧರ್ಮದ ಅಂತರಂಗದ ರಕ್ಷಣಕ್ಕೆ ಧರ್ಮದ ಬಹಿರಂಗವು ಬೇಲಿಯಂತೆ ಇರುತ್ತದೆ. ಧರ್ಮದ ಬಹಿರಂಗದ ರೂಪಾಂತರವು ಅಧಿಕಾರ ಸಂಪನ್ನರಾದ ನಿಸ್ಪ್ರಹ ವೃತ್ತಿಯ ಅಲೌಕಿಕ ಶಕ್ತಿಯ ಮಹಾಜ್ಞಾನಿಗಳ ಶಾಸನ ರೂಪದಿಂದ ಆಗುತ್ತದೆ. ಅವರು ಮನುಷ್ಯನ ವಿಷಯ ಆಸಕ್ತಿಯನ್ನು ನಿಯಂತ್ರಿಸುತ್ತಾರೆ.
ಧರ್ಮಾಂತರವು ಯಾವಾಗ ಸರಿ ಎಂಬುದನ್ನು ಲೇಖಕರು ಹೇಳಿದ್ದಾರೆ. ಆಮಿಷ, ಒತ್ತಾಯಗಳ ಧರ್ಮಾಂತರವು ತಪ್ಪು. ಯೋಗ್ಯ ರೀತಿಯಿಂದಾದ ಧರ್ಮಾಂತರವು ಧರ್ಮದ ರಕ್ಷಣೆಯೇ ಆಗಿರುವುದು. ಸ್ಪಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಇವು ಧರ್ಮಿಷ್ಠರ ಅಗತ್ಯ ಗುಣಗಳು.
ತನ್ನ ಹಿತವು ಸ್ವಾರ್ಥವಾಗಿರುವಂತೆ ತನ್ನವರ, ತನ್ನ ಸಮಾಜದ, ತನ್ನ ರಾಷ್ಟ್ರದ ಹಿತವು ಕೂಡ ಸ್ವಾರ್ಥವೇ ಆಗಿರುತ್ತದೆ. ಕೇವಲ ನೀತಿಯ ಆಚರಣೆಯಿಂದ ಜಗತ್ತಿನ ಧಾರಣೆ ಆಗಲಿಕ್ಕಿಲ್ಲ. ಯಾಕೆಂದರೆ ಜಗತ್ತನ್ನು ಪರಮೇಶ್ವರನು ನೀತಿ - ಅನೀತಿ ಪಾಪ- ಪುಣ್ಯ ಒಳಿತು- ಕೆಡುಕು ಇವುಗಳಿಂದ ಮಾಡಿರುವುದರಿಂದ ಕೇವಲ ನೀತಿಯನ್ನಾಗಲಿ ಅನೀತಿಯನ್ನಾಗಲಿ ಆಚರಿಸುವುದರಿಂದ ಜಗತ್ತು ಉಳಿಯಲಿಕ್ಕಿಲ್ಲ ಆದರೆ ಧರ್ಮಾಚರಣೆಯಿಂದ ಜಗತ್ತಿನ ಧಾರಣೆ ಆಗುತ್ತದೆ.
ಧಾರ್ಮಿಕರು ಕೇವಲ ತಮ್ಮ ಕರ್ತವ್ಯ ಬುದ್ಧಿಯಿಂದ ಧರ್ಮದಂತೆ ನಡೆಯುವರು. ಅವರು ತಮ್ಮ ಸೌಜನ್ಯವನ್ನು ಧರ್ಮದ ದೃಷ್ಟಿಯಿಂದ ತೋರಿಸುವವರಲ್ಲದೆ ಸ್ವಾರ್ಥ ದೃಷ್ಟಿಯಿಂದ ಅಂದರೆ ಅನ್ಯರ ಭಯದಿಂದ ಅಥವಾ ಅನ್ಯರಿಗೆ ಪ್ರಿಯರಾಗುವ ಇಚ್ಛೆಯಿಂದ ಅಥವಾ ಅನ್ಯ ರಿಂದ ಏನನ್ನಾದರೂ ಸಂಪಾದಿಸುವುದಕ್ಕಾಗಿ ಸೌಜನ್ಯವನ್ನು ತೋರಿಸುವುದಿಲ್ಲ.
ಕೃಷ್ಣ ದುರ್ಯೋಧನ ಧರ್ಮರಾಯ ಇವರುಗಳ ನಡತೆಯ ವಿಮರ್ಶೆ ಇಲ್ಲಿದೆ.
ಸಂಸಾರಿಕ ಮನುಷ್ಯನು ಬೆಳಗಿನಲ್ಲಿ ನಿತ್ಯನೈಮಿತ್ತಿಕ ಕಾರ್ಯಗಳನ್ನು ಮಾಡಬೇಕು. ಮಧ್ಯಾಹ್ನ ಹಣದ ಗಳಿಕೆ ಮುಂತಾದವುಗಳನ್ನು ಮಾಡಬೇಕು. ಸಂಜೆ ಸುಖವನ್ನು ಬೋಗಿಸಬೇಕು ಅಂತ ಮಹಾಭಾರತದಲ್ಲಿ ನಾರದರು ಹೇಳಿದ್ದಾರಂತೆ.
ದೇವತೆಗಳಿಗೂ ಪ್ರಾಣಿಗಳಿಗೂ ಕರ್ಮದ ಅಧಿಕಾರವಿಲ್ಲ. ಕೇವಲ ಸುಖ-ದುಃಖಗಳನ್ನು ಭೋಗಿಸುವ ಅಧಿಕಾರ ಇದೆ . ಆದರೆ ಮನುಷ್ಯರಿಗೆ ಮಾತ್ರ ಪಾಪ ಪುಣ್ಯ ಸಂಪಾದನೆಯ ಕರ್ಮಗಳನ್ನು ಮಾಡುವ ಅಧಿಕಾರವಿದೆ. ಮನುಷ್ಯನು ಪುಣ್ಯಗಳನ್ನು ಹೆಚ್ಚಾಗಿ ಸಂಪಾದಿಸಿದರೆ ಮುಂದಿನ ಜನ್ಮದಲ್ಲಿ ದೇವತೆಯಾಗಿ ಹೆಚ್ಚು ಸುಖವನ್ನು, ಪಾಪಗಳನ್ನು ಹೆಚ್ಚು ಮಾಡಿದರೆ ಪ್ರಾಣಿಯಾಗಿ ಹೆಚ್ಚು ದುಃಖವನ್ನು ಅನುಭವಿಸುವರು, ಪಾಪ ಪುಣ್ಯಗಳನ್ನು ಸಮನಾಗಿ ಮಾಡಿದರೆ ಮನುಷ್ಯ ಜನ್ಮವನ್ನು ಹೊಂದುವರು. ಪಾಪು ಪುಣ್ಯಗಳ ಇಚ್ಛೆ ಇಲ್ಲದೆ ಈಶ್ವರಾರ್ಪಣ ಬುದ್ಧಿಯಿಂದ ನಿಷ್ಕಾಮಕರ್ಮವನ್ನು ಮಾಡಿ ಮೋಕ್ಷವನ್ನು ಸಾಧಿಸುವರು. ಇಂಥ ಸ್ವಾತಂತ್ರ್ಯವು ಮನುಷ್ಯನಿಗೆ ಇರುವುದರಿಂದ ದೇವತೆಗಳು ಕೂಡ ಮಾನವ ಜನ್ಮವನ್ನು ಬಯಸುತ್ತಾರೆ.
ಸಮಾಜದಲ್ಲಿ ಯಾರ್ಯಾರು ಏನೇನು ಮಾಡಬೇಕು ಎಂದು ಈ ಪುಸ್ತಕದಲ್ಲಿ ಹೇಳಿದ್ದಾರೆ.
ಈ ಪುಸ್ತಕದ 30 ನೇ ಪುಟದಲ್ಲಿ ಮಹಾತ್ಮರು ಎಂಬುವವರ ಅಸ್ಪೃಶ್ಯತಾ ನಿವಾರಣೆ ಆಂದೋಲನವನ್ನು ಖಂಡಿಸಿದ್ದಾರೆ.
ಈ ಪುಸ್ತಕವನ್ನು https://archive.org/details/dli.osmania.4764 ಈ ಕೊಂಡಿಯಲ್ಲಿ ಓದಬಹುದು.