ಬದುಕು ಹೀಗೆ ಇರಲಿ ಗೆಳೆಯ .........

ಬದುಕು ಹೀಗೆ ಇರಲಿ ಗೆಳೆಯ .........

ಬದುಕು ಹೀಗೆ ಇರಲಿ ಗೆಳೆಯ .........
ತುತ್ತು ಕೂಳಿಗೂ ಗತಿ ಇಲ್ಲದ ಹೊತ್ತು
ಮೆತ್ತನೆಯ ಕನಸು ಕಾಣಲು ಸಮಯವೆಲ್ಲಿದೆ ಹೇಳು ?
ನೆತ್ತಿ ಮೇಲಿನ ಸೂರಿನಲ್ಲಿಯ ಹತ್ತಾರು ರಂದ್ರದಲ್ಲಿ ಇಳಿವ ..
ಉರಿಯ ತಾಪವ ಎದೆಯಲ್ಲೆ ಹೊತ್ತು
ಮತ್ತೆ ಕೆಲ ಸಮಯದಲ್ಲೇ ತೊಟ್ಟಿಕ್ಕುವ ಹನಿಯ ಹಿಡಿಯುವ ಹರಸಾಹಸದಲ್ಲಿ
ನಿನ್ನ ನೆನಪುಗಳು ಚಿತ್ತವನು ಹೊಕ್ಕು ಕಲಕುವುದು ಬೇಡ .
ಹಸಿದ ಹೊಟ್ಟೆಗೆ ಹಿಟ್ಟು ಗಂಜಿ ಎದುರಿಗೆ ಇಟ್ಟು
ಮೊಣಕೈ ಮುಂಗಾಲಿಗೆ ಅಂಗೈ ಗಲ್ಲಕೆ ಕೊಟ್ಟು
ಕ್ಷಣದಲ್ಲೆ ಕೈ ಹಿಡಿದು ಕರೆದೊಯ್ದೆನ್ನ ಮಾಡಿಬಿಡುವೆ
ನಿನ್ನಾಸೆಯರಮನೆಗೆ ಒಡತಿಯಾಗಿ,ಕಣ್ಮುಚ್ಚಿ ಲೊಚಲೊಚನೆ
ಮುತ್ತಿನಲಿ ಸಿಂಗರಿಸಿ ,ಕಣ್ಬಿಟ್ಟು ನೋಡುವುದರೋಳಗಾಗಿ
ಎದುರಿಗಿರುವ ಗಂಜಿಎಲ್ಲ ನಾಯಿ ನೈವೇದ್ಯ
ಹಸಿದ ಹೊಟ್ಟೆಯ ಮೇಲೆ ಹಸಿಯ ಅರಿವೆಯ ಹರವಿ
ಬಿಸಿಯುಸಿರು ಬಿಟ್ಟು ಸುಮ್ಮನಾಗುವುದು ಬೇಡ.
ನಿನ್ನ ಮಾತಿಗೆ ನಲಿದು ,ನಿನ್ನ ಪ್ರೀತಿಗೆ ಒಲಿದು
ಕನಸು ಕಲ್ಪನೆಗಳಿಗೆಲ್ಲ ಬಳಿ ಕರೆದು ಒಳ ತೆರೆದು
ತಳಬಿರಿದ ಅಡಿಪಾಯದ ಮೇಲೆ ಆಸೆ ಆಲಯ ಕಟ್ಟಿ
ನಿರಾಸೆಯ ರಾಕ್ಷಸ ಬಾಹುಗಳಿಗೆ ಸಿಲುಕಿ ನುಚ್ಚು ನೂರಾಗುವುದು ಬೇಡ.
ಎಂದಾದರೂ ಬಂದಾನು ನನ್ನನ್ನು ನನ್ನಂತೆ ಸ್ವೀಕರಿಸಲು
ನನ್ನಿಚ್ಚೆಯನ್ನರಿತು ಸಹಕರಿಸಲು ಎಂಬೊಂದು ಆಸೆಯಲಿ
ಕಷ್ಟವೆಲ್ಲವ ಸಹಿಸಿ ಕಣ್ಣು ತೆರೆದಿಟ್ಟು ಕಾಯುವೆನು ...ನನ್ನಿನಿಯನಿಗೆ
ಅಲ್ಲಿಯವರೆಗೂ ನಾವು ಹೀಗೆಯೇ ಇರುವ
ಬದುಕು ಹೀಗೆ ಇರಲಿ ಗೆಳೆಯ ..........

ರಾಘವೇಂದ್ರ ಆಚಾರ್
ನಾಯಕವಾಡಿ .

(ಒಂದಿಷ್ಟು ವರ್ಷಗಳ ಹಿಂದೆ ನನ್ನೊಳಗಿನ ಹೆಣ್ಣು ಮನಸ್ಸೊಂದು ಹೇಳಿಕೊಂಡಿದ್ದು .)

Rating
No votes yet

Comments