ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!

ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!

ರಿಲಾಯನ್ಸ್ ನವರು ಬಿಗ್ ಟಿ.ವಿ ಅನ್ನೋ ಡಿ.ಟಿ.ಎಚ್ ಸೇವೆ ಶುರು ಮಾಡ್ತಾ ಇದ್ದಾರಂತೆ, ಅವರ ಸೇವೆಯಲ್ಲಿ ಕನ್ನಡಕ್ಕೆ ಒಳ್ಳೆ ಆದ್ಯತೆ ಕೊಟ್ಟಿದ್ದಾರೆ ಅಂತೆ ಅನ್ನುವ ಅಂತೆ-ಕಂತೆ ಕೇಳಿ ಸಕತ್ ಖುಷಿ ಆದೋರಲ್ಲಿ ನಾನು ಒಬ್ಬ. ಅಷ್ಟೇ ಅಲ್ಲದೇ, ರಿಲಾಯನ್ಸ್ ಅವರು ೨೪ ಗಂಟೆಗಳ ಕನ್ನಡ ಚಿತ್ರಗಳಿಗೆ ಮೀಸಲಾದ ಒಂದು ಚಾನಲ್ ಮಾಡ್ತಾರಂತೆ ಅನ್ನೋ ವರದಿ ನೋಡಿ, ಕಡೆಗೂ ಕನ್ನಡಕ್ಕಿರೋ ದುಡ್ಡು ಮಾಡೋ ಸಾಮರ್ಥ್ಯ ಈ ಮಂಕು ದಿಣ್ಣೆಗಳಿಗೆ ಅರ್ಥ ಆಯ್ತಲ್ಲ ಅಂತ ಅಂದಕೊಂಡಿದ್ದೆ.

ಮೊನ್ನೆ ಊರಿಗೆ ಹೋದಾಗ, ಅಪ್ಪ ಕೇಬಲ್ಲಿನವನ ಆಟಕ್ಕೆ ಬೇಸತ್ತು, ರಿಲಾಯನ್ಸ್ ನ ಜಾಹೀರಾತು ನೋಡಿ ೨೭೦೦ ರೂ ಕೊಟ್ಟು ಬಿಗ್ ಟಿ.ವಿಯ ಡಿ.ಟಿ.ಎಚ್ ಬಾಕ್ಸ್ ತಂದಿದ್ರು. ಆದ್ರೆ ಅದಕ್ಕೆ ಅಂಟೆನಾ ಕೂರ್ಸೋಕೆ ೪೮ ಗಂಟೆಲಿ ಬರ್ತಿನಿ ಅಂದಿದ್ದ ರಿಲಾಯನ್ಸ್ ನ ಸರ್ವೀಸ್ ಇಂಜಿನಿಯರ್ ೧೫ ದಿನ ಆದ್ರೂ ಪತ್ತೆನೇ ಇಲ್ಲ ಅಂತ ಅಪ್ಪ ಅಂದ್ರು. " ಇದನ್ನ ಕೇಳೋಣ ಅಂತ ರಿಲಾಯನ್ಸ್ ನ ಕಾಲ್ ಸೆಂಟರ್ ಗೆ ಫೋನ್ ಮಾಡಿದ್ದೆ, ಆದ್ರೆ ಅಲ್ಲಿ ಬರೀ ಹಿಂದಿ, ಇಂಗ್ಲೀಷ್ ಎರಡೇ ಭಾಷೆ ಆಯ್ಕೆ ಇರೋದು, ನನಗೆ ಅವೆರಡು ಬರ್ದಿರೋ ಕಾರಣ, ನೀನು ಬರಲಿ ಅಂತ ಕಾಯ್ತಾ ಇದ್ದೆ " ಅಂತ ಅಪ್ಪ ಅಂದ್ರು. ನನಗೆ ಎಲ್ಲಿಲ್ಲದ ಸಿಟ್ಟು ಬಂತು. ಕೂಡಲೇ ರಿಲಾಯನ್ಸ್ ಕಾಲ್ ಸೆಂಟರ್ ಗೆ ಫೋನ್ ಮಾಡಿದೆ. ಹಿಂದಿ/ಇಂಗ್ಲೀಷ್ ಬಿಟ್ಟು ಅಲ್ಲಿ ಬೇರಾವುದೇ ಆಯ್ಕೆ ಇರಲಿಲ್ಲ. ನಾನು ಇಂಗ್ಲೀಷ್ ಆಯ್ದುಕೊಂಡು, ಇವರಿಗೆ ಗ್ರಾಚಾರ ಬಿಡಸೋಣ ಅಂತ ಕಾಯೋಕೆ ಶುರು ಮಾಡಿದೆ, ಸರಿ ಸುಮಾರು ೧೬ ನಿಮಿಷದ ನಂತರ ಒಬ್ಬಳ್ಯಾರೋ ಎತ್ತಿಕೊಂಡು ಹೇಗೆ ಸಹಾಯ ಮಾಡಲಿ ಅಂದ್ಲು, ಅದಕ್ಕೆ ಯಾಕವ್ವ, ನಿಮ್ಮ ಕಾಲ್ ಸೆಂಟರ್ ಕನ್ನಡದಲ್ಲಿ ಇಲ್ಲ? ೫ ಕೋಟಿ ಕನ್ನಡ ಮಾತಾಡೋ ಜನರಿಗೆ ನಿಮ್ಮ ಪ್ರಾಡಕ್ಟ್ ಮಾರ್ತಿರಾ, ಅವರ ಭಾಷೆ ಮಾತ್ರಾ ಬೇಡ ಅಂದ್ರೆ ಹೇಂಗವ್ವ ಅಂದೆ, ಅದಕ್ಕೆ "ಸರ್ ಹಿಂದಿ ನಮ್ಮ ರಾಷ್ಟ್ರ ಭಾಷೆ, ಅದನ್ನ ಎಲ್ಲರೂ ಕಲಿಬೇಕು" ಅಂತಾ ಉಲಿಲಿಕ್ಕೆ ಶುರು ಹಚ್ಚಿದ್ಲು, !!! ಅವಳಿಗೆ ಸರಿಯಾಗಿ ಜಾಡಿಸಿ, ನಿನ್ನ ಕಥೆ ನಿನ್ನ ಹತ್ರಾನೇ ಇಟ್ಕೋ, ನಿನ್ನ ೨ ಸಾವಿರ ರೂಪಾಯಿ ಪ್ರಾಡಕ್ಟಗಾಗಿ ನಮ್ಮ ತಂದೆ-ತಾಯಿ ಇನ್ನೂ ಹಿಂದಿ/ಇಂಗ್ಲೀಷ್ ಕಲಿಬೇಕಾ? ಮೊದಲು ೫ ಕೋಟಿ ಜನಾ ಆಡೋ ಭಾಷೆಗೆ, ಭಾಷಿಕರಿಗೆ ಮರ್ಯಾದೆ ಕೊಡೋದು ಕಲಿ, ನಿನ್ನ ಹಿಂ(ಹಂ)ದಿ ಮರಿ ಕಥೆ ಪುರ್ಸೊತ್ತು ಇದ್ದಾಗ ಅಂಬಾನಿ ಸಾಹೇಬ್ರಿಗೆ ಹೇಳು ಅಂತಾ ಫೋನ್ ಕುಕ್ಕಿದೆ. ಹಿಂದಿ ರಾಷ್ಟ್ರ ಭಾಷೆ ಅನ್ನೊ ಸುಳ್ಳು ಯಾರನ್ನು ಬಿಡದೇ ವ್ಯಾಪಿಸಿಕೊಂಡಿದೆಯಲ್ಲ ಅಂತ ಅಚ್ಚರಿ ಆಯ್ತು...

ಇವರಿಗೆಲ್ಲ ಯಾವಾಗ ಬುದ್ಧಿ ಬರುತ್ತೆ ಅಂತೀನಿ..... !

ಹಿಂದಿ ಹೇರಿಕೆಗೆ ಸೊಪ್ಪು ಹಾಕದೇ ಇರೋದು ಹೇಗೆ ಗೆಳೆಯರೇ ?? ನಮ್ಮ ಏನ್ ಗುರು ಹೇಳಿದ್ದು ಇಲ್ಲಿದೆ:
http://enguru.blogspot.com/2007/09/blog-post_13.html

ನೀವೆನ್ ಅಂತೀರಾ??

Rating
No votes yet

Comments