ಭಾಗ - ೧೬ ಭೀಷ್ಮ ಯುಧಿಷ್ಠಿರ ಸಂವಾದ: ನಾಡೀಜಂಘನ ಉಪಾಖ್ಯಾನ

ಭಾಗ - ೧೬ ಭೀಷ್ಮ ಯುಧಿಷ್ಠಿರ ಸಂವಾದ: ನಾಡೀಜಂಘನ ಉಪಾಖ್ಯಾನ

ಚಿತ್ರ

        ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುಧಿಷ್ಠಿರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
        ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಬ್ರಹ್ಮಹತ್ಯೆಗೂ ಕೂಡಾ ಪರಿಹಾರವಿದೆಯೋ ಏನೋ ಆದರೆ ಮಿತ್ರದ್ರೋಹಿಯಾದ ಕೃತಘ್ನನಿಗೆ ಪ್ರಾಯಶ್ಚಿತ್ತವಿಲ್ಲವೆಂದು ನೀವು ಹೇಳಿರುವಿರಿ. ಮಾನವನಾಗಿ ಜನಿಸಿದವನು ಕೃತಜ್ಞತೆ ಎನ್ನುವ ಗುಣವನ್ನು ರಕ್ತಗತ ಮಾಡಿಕೊಳ್ಳಬೇಕು ಮತ್ತು ತನ್ನ ಒಳಿತನ್ನು ಬಯಸುವ ಮಿತ್ರರ ಶ್ರೇಯಸ್ಸನ್ನು ಅಭಿಲಾಷಿಸಬೇಕೆಂದು ಹೇಳಿರುತ್ತೀರಿ. ನಿಜವಾಗಿ ಹೇಳಬೇಕೆಂದರೆ ಕೃತಘ್ನನಾದ ವ್ಯಕ್ತಿಯು ತನ್ನ ಮಿತ್ರರನ್ನೂ ಹತ್ಯೆಗೈಯ್ಯಲು ಶಂಕಿಸುವವನಲ್ಲ. ಅಂತಹವರ ಮೇಲೆ ಒಂದು ಕಣ್ಣಿಟ್ಟಿರಬೇಕಲ್ಲವೆ? ಮಿತ್ರದ್ರೋಹಿಗಳನ್ನು ಗುರುತಿಸಲು ಸಹಾಯಕವಾದ ವಿಷಯಗಳನ್ನು ನನಗೆ ಉಪದೇಶಿಸುವಂತವರಾಗಿ ಎಂದು ಬಿನ್ನವಿಸುತ್ತದ್ದೇನೆ" 
        ಭೀಷ್ಮನು ಅದಕ್ಕೆ ಪ್ರತಿಯಾಗಿ ಹೇಳಿದನು, "ಧರ್ಮಜ, ಕೃತಘ್ನ, ಮಿತ್ರದ್ರೋಹಿ, ಕುಲಘಾತುಕ ಮತ್ತು ಪಾಪಾತ್ಮರಾದ ಅಧಮರನ್ನು ಸಜ್ಜನನಾದವನು ದೂರವಿಡಬೇಕು, ಅವನನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ’ಉಂಡ ಮನೆಯ ಗಳ ಹಿರಿ’ಯುವವರ ಸಂಗತಿ ಹೇಗೆ ಇರುತ್ತದೆಯೋ ಎನ್ನುವದನ್ನು ತಿಳಿಹೇಳುವುದಕ್ಕಾಗಿ ಇರುವ ವೃತ್ತಾಂತವೊಂದನ್ನು ನಿನಗೆ ಹೇಳುತ್ತೇನೆ, ಕೇಳುವಂತವನಾಗು". 
      ಗೌತಮ ಎನ್ನುವ ಹೆಸರಿನ ವಿಪ್ರನೊಬ್ಬನಿದ್ದನು. ಅವನು ಕುಲವೃತ್ತಿಯನ್ನು ಬಿಟ್ಟು ಒಬ್ಬ ನಿಷಾದ ಸ್ತ್ರೀಯೊಂದಿಗೆ ಸಂಸಾರ ಮಾಡುತ್ತಾ ಭೇಟೆಯಾಡುತ್ತಾ ಮಾಂಸಾಹಾರವನ್ನು ಸೇವಿಸಿ ಜೀವಿಸುತ್ತಿದ್ದನು. ಸ್ವಲ್ಪ ದಿನಗಳ ನಂತರ ಅವನಿಗೆ ಹಣ ಸಂಪಾದಿಸಬೇಕೆಂಬ ಬಯಕೆಯುಂಟಾಯಿತು ಅದರ ನಿಮಿತ್ತವಾಗಿ ಅವನು ಒಂದು ವ್ಯಾಪಾರಿಗಳ ಗುಂಪನ್ನು ಸೇರಿಕೊಂಡು ದೇಶಾಂತರ ಹೊರಟನು. ಮಾರ್ಗ ಮಧ್ಯದಲ್ಲಿ ಅವರಿಗೆ ಒಂದು ಅಡವಿಯು ಎದುರಾಯಿತು. ಆ ಅಡವಿಯಲ್ಲಿದ್ದ ಒಂದು ಮದಗಜವು ಇವರ ಮೇಲೆ ದಾಳಿ ಮಾಡಿತು. ಅದರ ಉಪಟಳದಿಂದಾಗಿ ಆ ವ್ಯಾಪಾರಿಗಳ ಗುಂಪು ದಿಕ್ಕಾಪಾಲಾಯಿತು. ಗೌತಮನು ಉತ್ತರ ದಿಶೆಯಲ್ಲಿ ಹೊರಟು ಒಂದು ಆಲದ ಮರದ ಬುಡವನ್ನು ಸೇರಿದನು. ಅಲ್ಲಿಗೆ ಒಂದು ದೊಡ್ಡದಾದ ಬಕಪಕ್ಷಿಯು (ಕೊಕ್ಕರೆ) ಬಂದಿತು. ಅದರ ಹೆಸರು ನಾಡೀಜಂಘ. ಅದು ಆ ಆಲದ ಮರದಲ್ಲಿ ತನ್ನ ಹೆಂಡತಿಯೊಂದಿಗೆ ವಾಸಿಸುತ್ತಿತ್ತು. ಅದು ಗೌತಮನನ್ನು ನೋಡಿ ಕನಿಕರಗೊಂಡು, "ಸ್ವಾಮಿ, ಇದೇನು ಈ ಕಡೆ ಬಂದಿದ್ದೀರಿ. ನಿಮ್ಮ ಪರಿಸ್ಥಿತಿ ಹೀಗೇಕಾಯಿತು? ಎಂದು ಪ್ರಶ್ನಿಸಿತು. ಗೌತಮನು ತನ್ನ ಕಷ್ಟವನ್ನು ಅದರ ಮುಂದೆ ಹೇಳಿಕೊಂಡ. ಆಗ ಆ ಬಕವು ಗೌತಮನನ್ನುದ್ದೇಶಿಸಿ, "ಅಯ್ಯಾ, ಚಿಂತಿಸದಿರು. ಮೊದಲು ಹಸಿವೆಯನ್ನು ನೀಗಿಸಿಕೊ" ಎಂದು ಹೇಳಿ ಸೊಗಸಾದ ಔತಣವನ್ನೇರ್ಪಡಿಸಿತು. ಅವನು ವಿಶ್ರಮಿಸಲು ಸಹ ಸೂಕ್ತ ವ್ಯವಸ್ಥೆಯನ್ನು ಮಾಡಿತು. ಅವರಿಬ್ಬರೂ ಲೋಕಾಭಿರಾವಾಗಿ ಮಾತನಾಡುತ್ತಾ ಅಂದಿನ ರಾತ್ರಿಯನ್ನು ಕಳೆದರು. 
       ಮರುದಿನ ಬೆಳಿಗ್ಗೆ ನಾಡೀಜಂಘವು ಗೌತಮನಿಗೆ ಒಂದು ಸಲಹೆಯನ್ನಿತ್ತಿತು. "ಅಯ್ಯಾ! ವಿರೂಪಾಕ್ಷ ಎನ್ನುವ ಹೆಸರುಳ್ಳ ರಾಕ್ಷಸನೋರ್ವನು ನನ್ನ ಮಿತ್ರನಾಗಿದ್ದಾನೆ. ನೀನು ಆ ಅಸುರ ರಾಜನ ಬಳಿಗೆ ಹೋಗಿ ನಾನು ಕಳುಹಿಸಿರುವೆನೆಂದು ಹೇಳು. ನನ್ನ ಮಿತ್ರನೆಂದು ಹೇಳಿದರೆ ಸಾಕು, ವಿರೂಪಾಕ್ಷನು ನಿನ್ನ ದಾರಿದ್ರ್ಯವನ್ನು ನೀಗಿಸುತ್ತಾನೆ". ಗೌತಮನು ನಾಡೀಜಂಘನು ಹೇಳಿದ ಗುರುತುಗಳನ್ನು ಅನುಸರಿಸಿ ವಿರೂಪಾಕ್ಷನ ಅರಮನೆಗೆ ಹೋದನು. ತನ್ನ ಮಿತ್ರನು ಕಳುಹಿಸಿದ ವ್ಯಕ್ತಿಯೆಂದು ಹೇಳುತ್ತಲೇ ವಿರೂಪಾಕ್ಷನು ಗೌತಮನನ್ನು ಅತ್ಯಂತ ಸ್ನೇಹಾದರಗಳಿಂದ ಉಪಚರಿಸಿದನು. ಆದರೆ, ಗೌತಮನ ಸ್ವರೂಪ, ಅವನು ಮಾತನಾಡುವ ರೀತಿ, ಮುಖಕವಳಿಕೆಗಳನ್ನು ಗಮನಿಸಿದ ವಿರೂಪಾಕ್ಷನಿಗೆ ಅದೇತಕೋ ಅವನ ಮೇಲೆ ಸದಭಿಪ್ರಾಯವು ಉಂಟಾಗಲಿಲ್ಲ. ಆದರೇನು? ತನ್ನ ಮಿತ್ರನು ಕಳುಹಿಸಿರುವನೆಂಬ ಏಕೈಕ ಕಾರಣಕ್ಕೆ ಅವನನ್ನೂ ಸಹ ತನ್ನ ಮಿತ್ರನಂತೆಯೇ ಭಾವಿಸಿ ಅವನ ವೃತ್ತಾಂತವನ್ನೆಲ್ಲಾ ಕೇಳಿ ತಿಳಿದುಕೊಂಡು, ಅವನಿಗೆ ಭೋಜನಾದಿಗಳ ವ್ಯವಸ್ಥೆ ಮಾಡಿದ. ಅನಂತರ, ಅವನಿಗೆ ಬಂಗಾರದ ಹರಿವಾಣಗಳಲ್ಲಿ ಮಣಿಮಾಣಿಕ್ಯಗಳ ರಾಶಿಯನ್ನು ಕಾಣಿಕೆಯಾಗಿ ಇತ್ತ. ಆ ನವರತ್ನಗಳ ರಾಶಿಯನ್ನು ಹೊರಲಾರದೆ ಹೊತ್ತುಕೊಂಡು ಗೌತಮನು ಆ ಆಲದ ಮರದ ಬಳಿಗೆ ಹಿಂದಿರುಗಿ ಬಂದನು. 
           ನಾಡೀಜಂಘನು ಗೌತಮನನ್ನು ನೋಡಿ ಬಹುವಾಗಿ ಸಂತೋಷಿಸಿದನು. ತನ್ನ ರೆಕ್ಕೆಗಳಿಂದ ಅವನ ಆಯಾಸವು ಶಮನವಾಗುವಂತೆ ಅವನಿಗೆ ಗಾಳಿ ಬೀಸಿ, ಊಟದ ವ್ಯವಸ್ಥೆಯನ್ನು ಏರ್ಪಡಿಸಿ, ಹಾಯಾಗಿ ನಿದ್ರಿಸು ಮಿತ್ರಮಾ ಎಂದು ಹೇಳಿ ತಾನೂ ನಿದ್ರೆಗೆ ಜಾರಿದನು. 
        ಗೌತಮನು ಕಣ್ಣುಮುಚ್ಚಿಕೊಂಡಿದ್ದನೇ ಹೊರತು ನಿದ್ದೆಯು ಅವನ ಹತ್ತಿರಕ್ಕೂ ಸುಳಿಯಲಿಲ್ಲ. "ಈ ಹೊತ್ತು ಆಹಾರವಂತೂ ದೊರಕಿತು. ಹಾಗಾದರೆ ನಾಳೆಯ ಸಂಗತಿ ಏನು? ಅದರ ಕುರಿತು ಆಲೋಚಿಸದಿದ್ದರೆ ಹೇಗೆ? ಈ ಬಕವು ಬಹಳ ದಷ್ಟಪುಷ್ಟವಾಗಿದೆ. ಇದರ ಮೈಯ್ಯಲ್ಲಿ ಮಾಂಸವು ಪುಷ್ಕಳವಾಗಿ ಇರುವಂತಿದೆ. ಇದು ಎಚ್ಚರವಿಲ್ಲದಂತೆ ಮಲಗಿ ನಿದ್ರಿಸುವಾಗ ಅದರ ಸಂಗತಿಯನ್ನು ನೋಡೋಣ!" ಎಂದು ಆಲೋಚಿಸಿದ ಆ ದುಷ್ಟ. ಆ ದ್ರೋಹಿಯು ಕೂಡಲೇ ಎದ್ದವನೇ, ತನ್ನ ಪಂಚೆಯನ್ನು ಎತ್ತಿ ಕಟ್ಟಿಕೊಂಡನು. ಒಂದು ದೊಡ್ಡ ದೊಣ್ಣೆಯನ್ನು ತೆಗೆದುಕೊಂಡವನೇ ತನ್ನ ಎರಡೂ ಕೈಗಳಿಂದ ಬಲವಾಗಿ ಆ ಬಕ ಪಕ್ಷಿಯ ತಲೆಯ ಮೇಲೆ ಹೊಡೆದನು. ಅದರ ರೆಕ್ಕೆಪುಕ್ಕಗಳನ್ನೆಲ್ಲಾ ಕಿತ್ತು ಹಾಕಿದನು. ಅದರ ಹೊಟ್ಟೆಯನ್ನು ಸೀಳಿ, ಅದರ ಕರಳುಗಳನ್ನು ಹೊರಹಾಕಿ ಅದರ ಮಾಂಸವನ್ನು ಮುದ್ದೆಯಾಗಿಸಿ, ತನ್ನ ಭುಜದ ಮೇಲೆ ಹೊತ್ತು ಸಾಗಿದನು. 
        ಇತ್ತಕಡೆ ವಿರೂಪಾಕ್ಷನಿಗೆ ದುಃಸ್ವಪ್ನವು ಬಿದ್ದಿತು. ಅವನು ಎದ್ದು ಕುಳಿತನು. ನನ್ನ ಪ್ರಿಯ ಮಿತ್ರನಾದ ನಾಡೀಜಂಘನು ಹೇಗಿರುವನೋ ಏನೋ ಎಂದು ಕಳವಳಗೊಂಡನು. ತಕ್ಷಣವೇ ಅವನು ತನ್ನ ಸೇವಕರನ್ನು ನಾಡೀಜಂಘನು ವಾಸಿಸುತ್ತಿದ್ದ ಆಲದ ಮರದ ಬಳಿಗೆ ಕಳುಹಿಸಿದನು. ಅವರು ಅಲ್ಲಿಗೆ ಹೋದವರೇ ನಾಡೀಜಂಘನ ದೇಹದ ಮಾಂಸದೊಂದಿಗೆ ತಪ್ಪಿಸುಕೊಂಡು ಹೋಗುತ್ತಿದ್ದ ಗೌತಮನನ್ನು ಹಿಡಿದು, ಹೆಡೆಮುರಿ ಕಟ್ಟಿ ಬಂಧಿಸಿ, ವಿರೂಪಾಕ್ಷನ ಮುಂದೆ ತಂದು ನಿಲ್ಲಿಸಿದರು. ಗೌತಮನನ್ನು ಆ ಸ್ಥಿತಿಯಲ್ಲಿ ನೋಡುತ್ತಿದ್ದಂತೆಯೇ ವಿರೂಪಾಕ್ಷನಿಗೆ ನಡೆದ ವೃತ್ತಾಂತವೆಲ್ಲವೂ ಅರ್ಥವಾಯಿತು. 
          "ಛೀ! ಈ ಕೃತಘ್ನನನ್ನು ನನ್ನ ಕಣ್ಣುಗಳಿಂದ ದೂರಕ್ಕೆ ಎಳೆದುಕೊಂಡು ಹೋಗಿರಿ. ಇವನನ್ನು ತುಂಡು ತುಂಡಾಗಿ ಕತ್ತರಿಸಿ ಆ ಮಾಂಸವನ್ನು ತಿನ್ನಿ!" ಎಂದು ಆಜ್ಞಾಪಿಸಿದನು. 
          "ಮಹಾಪ್ರಭು, ಈ ಕೃತಘ್ನನ ಮಾಂಸವನ್ನು ನಾವು ತಿಂದದ್ದೇ ಆದರೆ ನಮಗೂ ಸಹ ಆ ಪಾಪವು ತಟ್ಟುತ್ತದೆ. ನಮಗೆ ಆ ಕೆಲಸವನ್ನು ಒಪ್ಪಿಸಬೇಡಿ" ಎಂದು ಸೇವಕರು ಹೇಳಿದರು. 
          "ನೀವು ತಿನ್ನಿ ಅಥವಾ ತಿನ್ನದಿರಿ, ಅಥವಾ ಏನಾದರೂ ಮಾಡಿ. ಮೊದಲು ಇವನನ್ನು ನನ್ನ ಕಣ್ಣಿಂದ ದೂರ ಎಳೆದೊಯ್ಯಿರಿ" ಎಂದನಾ ರಾಕ್ಷಸಾಧಿಪತಿ. 
         ಸೇವಕರು ಗೌತಮನನ್ನು ಊರ ಹೊರಕ್ಕೆ ಕರೆದೊಯ್ದು ಅವನ ಶಿರವನ್ನು ಕಡಿದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರು. ಆ ಮಾಂಸವನ್ನು ಹದ್ದು ಕಾಗೆಗಳಿಗೆ ಆಹಾರವಾಗಿ ಹಾಕಿದರು. ನಾಯಿಗಳ ಗುಂಪೊಂದು ಬಂದು ಆ ಮಾಂಸವನ್ನು ತಿನ್ನಲು ಹವಣಿಸಿದವು... ಆದರೆ ಅವು ಕೂಡಲೇ ಹಿಂದೆ ಸರಿದವು. ಆ ನಾಯಿಗಳು ಹಸಿವೆಯಿಂದ ಬಳಲುತ್ತಿದ್ದರೂ ಸಹ ಕೃತಘ್ನನಾದ ಗೌತಮನ ಮಾಂಸವನ್ನು ಮೂಸಿಯೂ ನೋಡಲಿಲ್ಲ. 
          "ಅದಕ್ಕೇ ಕೃತಘ್ನನಾದ ವ್ಯಕ್ತಿಯನ್ನು ದೂರವಿಡಬೇಕೆಂದು ಹೇಳಲಾಗಿರುವುದು. ’ಉಂಡ ಮನೆಗೆ ಎರಡು ಬಗೆ’ಯುವವನು, ’ಹೊಳೆ ದಾಟಿದ ನಂತರ ತೆಪ್ಪ’ವನ್ನು ಕಾಲಿನಿಂದ ಒದೆಯುವಂತಹ ಮಿತ್ರದ್ರೋಹಿಗಳ ಮುಖವನ್ನು ನೋಡುವುದೂ ಸಹ ಪಾಪಕಾರ್ಯವಾಗುತ್ತದೆ" ಎಂದು ಹೇಳಿ ಮುಗಿಸಿದರು ಭೀಷ್ಮರು. 
       ದ್ರೋಹಬುದ್ಧಿ ಎನ್ನುವುದು ಹಲವರಿಗೆ ಇರುತ್ತದೆ. ಅವರು ಆ ದ್ರೋಹಬುದ್ಧಿಯನ್ನು ಯಾರ ಮೇಲಾದರೂ ಪ್ರಯೋಗಿಸಬಹುದು. ಕೃತಘ್ನತೆಯನ್ನು ಕೇವಲ ಸ್ನೇಹಿತರ ಮೇಲಷ್ಟೇ ಅಲ್ಲ ತಾವು ಜನಿಸಿದ ದೇಶಕ್ಕೂ ತೋರುವವರೂ ಇರುತ್ತಾರೆ ಅವರನ್ನೇ ದೇಶದ್ರೋಹಿಗಳೆಂದು ಕರೆಯುವುದು.  ತಮ್ಮ ಜನನಕ್ಕೆ, ತಮ್ಮ ಅಭಿವೃದ್ಧಿಗೆ, ತಮ್ಮ ಯಶಸ್ಸು ಕೀರ್ತಿಗಳಿಗೆ ಕಾರಣೀಭೂತವಾದ ದೇಶವನ್ನು ತಾಯಿಯಂತೆಯೂ ಸಹ ಗೌರವಿಸರು ಇಂತಹ ದ್ರೋಹಿಗಳು. ಅಷ್ಟೇ ಅಲ್ಲ ಮಾತೃದೇಶವನ್ನು ವಿದೇಶಿಯರಿಗೆ ಅಡವಿಡುವ ದೇಶದದ್ರೋಹಿಗಳೂ ಇರುತ್ತಾರೆ. ಇವರೆಲ್ಲರ ವಿಷಯದಲ್ಲೂ ನಾಡೀಜಂಘನ ವೃತ್ತಾಂತವನ್ನು ನಾವು ಅನ್ವಯಿಸಿಕೊಂಡು ಎಚ್ಚರದಿಂದಿರಬೇಕು. 
*****
         (ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
 
ಹಿಂದಿನ ಲೇಖನ ಭಾಗ - ೧೫ ಭೀಷ್ಮ ಯುಧಿಷ್ಠಿರ ಸಂವಾದ: ಕಪೋಲವ್ಯಾಖ್ಯಾನ ಅರ್ಥಾತ್ ಶರಣಾಗತ ರಕ್ಷಣ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AB-...
 

Rating
No votes yet

Comments

Submitted by makara Sat, 10/13/2018 - 17:58

ಈ ಲೇಖನದ ಮುಂದಿನ ಭಾಗ - ೧೭ ಭೀಷ್ಮ ಯುಧಿಷ್ಠಿರ ಸಂವಾದ: ಮಂಕಿ ಮುನಿಯ ಉಪಾಖ್ಯಾನ ಅಥವಾ ನಿಷ್ಕಾಮ ಭಾವನೆ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AD-...