ಭಾಗ - ೧೭ ಭೀಷ್ಮ ಯುಧಿಷ್ಠಿರ ಸಂವಾದ: ಮಂಕಿ ಮುನಿಯ ಉಪಾಖ್ಯಾನ ಅಥವಾ ನಿಷ್ಕಾಮ ಭಾವನೆ!

ಭಾಗ - ೧೭ ಭೀಷ್ಮ ಯುಧಿಷ್ಠಿರ ಸಂವಾದ: ಮಂಕಿ ಮುನಿಯ ಉಪಾಖ್ಯಾನ ಅಥವಾ ನಿಷ್ಕಾಮ ಭಾವನೆ!

ಚಿತ್ರ

        ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
     ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಧನದಾಹ, ಅಧಿಕಾರ ಮೋಹಗಳು ಅಧಿಕವಾಗಿರುವವರಲ್ಲಿ ಸುಖಪಡುವುದು ಒತ್ತಟ್ಟಿಗಿರಲಿ, ಮನಶ್ಶಾಂತಿ ಎಂಬುದೇ ಮರೀಚಿಕೆಯಾಗಿ ದುಃಖವೇ ಪ್ರಾಪ್ತವಾಗುವುದು. ಆದರೂ ಸಹ ಧನಾಕಾಂಕ್ಷೆಯಿಂದ, ಅಧಿಕಾರದಾಹದಿಂದ ಜನರು ಆಕರ್ಷಿತರಾಗಿ ಸುಖಪ್ರಾಪ್ತಿಗಾಗಿ ಪ್ರಯತ್ನವನ್ನು ಮಾಡುತ್ತಲೇ ಇರುವುರು. ಆದ್ದರಿಂದ, ಸುಖವನ್ನು ಹೊಂದಬಯಸುವವರು ಯಾವ ವಿಧವಾದ ಕೆಲಸಗಳನ್ನು ಮಾಡಬೇಕು? ದಯೆಯಿಟ್ಟು ಪೇಳುವಂತಹವರಾಗಿ" 
      ಭೀಷ್ಮನು ಹೀಗೆ ಉತ್ತರಿಸಿದನು. "ಧರ್ಮನಂದನನೇ! ನಿಜವಾದ ಸುಖವನ್ನು ಹೊಂದಬಯಸುವ ಮನುಜನು ಧನ, ಅಧಿಕಾರಗಳ ಬೆನ್ನುಹತ್ತಿದರೆ ಅದರಿಂದ ಪ್ರಯೋಜನವುಂಟಾಗದು. ಸುಖಾಭಿಲಾಷೆಯನ್ನು ಹೊಂದಲುಪಕ್ರಮಿಸುವ ವ್ಯಕ್ತಿಯು ಐದು ವಿಧವಾದ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅದರಲ್ಲಿ ಸಮದರ್ಶನವು ಮೊದಲನೆಯದು. ವ್ಯರ್ಥಪ್ರಯತ್ನಗಳನ್ನು ಕೈಬಿಡುವುದು ಎರಡನೆಯದು. ಸತ್ಯ, ವೈರಾಗ್ಯ ಮತ್ತು ನಿಷ್ಕಾಮ ಭಾವನೆ ಉಳಿದವುಗಳು. ಇವು ಶಾಂತಿಗೆ ಸೋಪಾನಗಳು. ಈ ವಿಷಯದ ಕುರಿತು ಇರುವ ಪ್ರಾಚೀನವಾದ ಒಂದು ಕಥೆಯನ್ನು ಹೇಳುತ್ತೇನೆ, ಆಲಿಸುವಂತಹವನಾಗು"
     "ಬಹು ಹಿಂದೆ ಮಂಕಿ ಎನ್ನುವ ಮುನೀಶ್ವರನೊಬ್ಬನಿದ್ದನು. ಅವನಿಗೆ ಧನೋಪಾರ್ಜನೆ ಮಾಡಬೇಕೆಂಬ ಅಭಿಲಾಷೆಯುಂಟಾಯಿತು. ಹಲವು ವಿಧಗಳಲ್ಲಿ ಹಣವನ್ನು ಸಂಪಾದಿಸಬೇಕೆಂದು ಪ್ರಯತ್ನಿಸಿದ, ಆದರೆ ಅವನ ಪ್ರಯತ್ನಗಳೆಲ್ಲ ವಿಫಲವಾದವು. ಅವನು ಅಷ್ಟೋ, ಇಷ್ಟೋ ಸಂಗ್ರಹಿಸಿಟ್ಟುಕೊಂಡಿದ್ದ ಹಣವೂ ಕೂಡಾ ಕರಗತೊಡಗಿತು. ಇರುವಷ್ಟು ಅಲ್ಪ ಹಣವೂ ಕೈಜಾರಿ ಹೋಗುವುದೆಂದು ಭಾವಿಸಿದ ಮುನಿಯು ಆ ಹಣದಿಂದ ಎರಡು ಹೋರಿ ಕರುಗಳನ್ನು ಕೊಂಡುಕೊಂಡ."
       "ಆ ಹೋರಿ ಕರುಗಳನ್ನು ರಂಟೆ, ಕುಂಟೆ, ಮೊದಲಾದ ವ್ಯವಸಾಯ ಕಾರ್ಯಗಳನ್ನು ಮಾಡಲು ಸಂಸಿದ್ಧತೆಗೊಳಿಸಲು ಮುನಿಯು ಬಯಸಿದ. ಒಂದು ದಿನ ಅವನು ಆ ಎರಡೂ ಕರುಗಳಿಗೆ ಹಗ್ಗವೊಂದನ್ನು ಕಟ್ಟಿ ಅವನ್ನು ಹೊಲಕ್ಕೆ ಹೊಡೆದುಕೊಂಡು ಹೊರಟ. ಆ ಹೋರಿ ಕರುಗಳು ಊರಿನ ಹೊರವಲಯವನ್ನು ದಾಟಿದ ನಂತರ ಹಗ್ಗದಿಂದ ಕಟ್ಟಲ್ಪಟ್ಟಿದ್ದ ಅವು ಹೊಲದ ಹಾದಿಯಲ್ಲಿ ಮುಂದೆ, ಮುಂದೆ ವೇಗವಾಗಿ ಸಾಗುತ್ತಿದ್ದರೆ ನಿಧಾನವಾಗಿ ಅವುಗಳ ಹಿಂದೆ ಸ್ವಲ್ಪ ದೂರದಲ್ಲಿ ಅವುಗಳ ಒಡೆಯನಾದ ಮುನಿಯು ನಡೆದುಕೊಂಡು ಬರುತ್ತಿದ್ದ. ದಾರಿಗೆ ಅಡ್ಡವಾಗಿ ಒಂದು ದೊಡ್ಡ ಒಂಟೆಯು ಮಲಗಿಕೊಂಡಿತ್ತು. ಅದು ಮಲಗಿಕೊಂಡಿದ್ದರೂ ಸಹ ಅದು ಎತ್ತರವಾಗಿಯೇ ಇತ್ತು. ಈ ಹೋರಿಗಳೂ ಸಹ ಎತ್ತರವಾಗಿರುವಂತಹವುಗಳೆ. ಆ ಒಂಟೆಯ ಕುತ್ತಿಗೆ ಬಹಳ ಉದ್ದವಾಗಿತ್ತು ಮತ್ತು ಅದರ ಉಬ್ಬಿದ ಡುಬ್ಬವು ಅದಕ್ಕೆ ಒಂದು ವಿಧವಾದ ಮೆರುಗನ್ನು ನೀಡಿತ್ತು" 
        "ಆ ಒಂಟೆಯು ಮಾರ್ಗದ ನಟ್ಟನಡುವೆ ಮಲಗಿಕೊಂಡಿತ್ತು. ಆ ಹೋರಿಗಳು ದಾರಿಯ ಆ ಕಡೆ ಈ ಕಡೆ ಅಂಚುಗಳಲ್ಲಿ ಜೊತೆಯಾಗಿ ನಡೆದುಕೊಂಡು ಬರುತ್ತಿದ್ದವು. ಒಂಟೆ ದಾರಿಯಲ್ಲಿ ಮಲಗಿಕೊಂಡಿರುವಾಗಲೆ ಅದನ್ನು ದಾಟಿಕೊಂಡು ಹೋಗಲು ಆ ಜೋಡಿ ಹೋರಿಗಳೆರಡೂ ಜೋರಾಗಿ ಓಡತೊಡಗಿದವು. ಆ ಎರಡೂ ಹೋರಿಗಳ ಕುತ್ತಿಗೆಗೆ ಕಟ್ಟಲ್ಪಟ್ಟಿದ ಹಗ್ಗವು ಮಲಗಿಕೊಂಡಿದ್ದ ಒಂಟೆಯ ಡುಬ್ಬವನ್ನು ದಾಟಿ ಅದರ ಕುತ್ತಿಗೆಗೆ ಜೋರಾಗಿ ತಗುಲಿತು. ಒಂಟೆಯ ಕುತ್ತಿಗೆಯು ಬಹಳಷ್ಟು ಉದ್ದವಾಗಿದ್ದುದರಿಂದ ಮತ್ತು ಹೋರಿಗಳಿಗೆ ಕಟ್ಟಿದ್ದ ಹಗ್ಗವು ಸಾಕಷ್ಟು ಉದ್ದವಿರದೇ ಇದ್ದುದರಿಂದ ಓಡುತ್ತಿದ್ದ ಆ ಹೋರಿಗಳು ಗಭಕ್ಕನೆ ನಿಲ್ಲಬೇಕಾಯಿತು. ಆ ಹೋರಿಗಳು ಓಡಿಬಂದ ರಭಸಕ್ಕೆ ಅವುಗಳಿಗೆ ಕಟ್ಟಿದ್ದ ಹಗ್ಗದಿಂದ ಒಂಟೆಯ ಶರೀರಕ್ಕೆ ಏಟುಬಿತ್ತು. ಒಂಟೆಯು ಆ ಏಟಿನಿಂದ ಉಂಟಾದ ನೋವನ್ನು ತಾಳಲಾರದೆ ಥಟ್ಟನೇ  ಎದ್ದು ನಿಂತು ಓಡಲಾರಂಭಿಸಿತು. ಒಂಟೆಯು ಎದ್ದು ನಿಂತದ್ದರಿಂದ ಆ ಹೋರಿಗಳ ಕುತ್ತಿಗೆಗೆ ಕಟ್ಟಿದ್ದ ಹಗ್ಗವು ಅವುಗಳ ಕೊರಳುಗಳಿಗೆ ಗಟ್ಟಿಯಾಗಿ ಬಿಗಿದುಕೊಂಡಿತು. ಅಷ್ಟೇ ಅಲ್ಲದೆ ಕಣ್ಣೆವೆಯಿಕ್ಕುವುದರೊಳಗೆ ಆ ಹೋರಿಗಳ ಪ್ರಾಣಪಕ್ಷಿಗಳು ಹಾರಿಹೋದವು."
        "ಇದನ್ನೆಲ್ಲಾ ಹಿಂದೆ ನಡೆದು ಬರುತ್ತಿದ್ದ ಮುನಿ ನೋಡುತ್ತಲೇ ಇದ್ದ. ಅವನು ಹೀಗೆ ಅಂದುಕೊಂಡ - "ಏನಿದು, ನಾನು ಎಷ್ಟೊಂದು ಬುದ್ಧಿ ಉಪಯೋಗಿಸಿ ದುಡ್ಡು ಸಂಪಾದಿಸಬೇಕೆಂದುಕೊಂಡೆ. ಆದರೆ ಅದು ನನ್ನ ಹಣೆಯಲ್ಲಿ ಬರೆದಿಲ್ಲ. ಹಣೆಯಲ್ಲಿ ಬರೆದಿಲ್ಲವೆಂದ ಮೇಲೆ ಹಣವಾದರೂ ಎಲ್ಲಿಂದ ಬಂದೀತು? ಈ ಎರಡೂ ಹೋರಿಗಳು ಕ್ಷಣಮಾತ್ರದಲ್ಲಿ ಸತ್ತುಹೋದವು. ಇವು ಕಾಕತಾಳೀಯವಾಗಿ ಸತ್ತವೆಂದು ಭಾವಿಸಲೆ ಅಥವಾ ನನ್ನ ಭಾಗ್ಯದಲ್ಲಿ ಬರೆದಿರುವುದೇ ಇಷ್ಟೇ ಎಂದು ಭಾವಿಸಲೆ?"
      "ಪುರುಷ ಪ್ರಯತ್ನಕ್ಕೆ ದೈವಾನುಗ್ರಹವು ಅನುಕೂಲಿಸದಿದ್ದರೆ ವಿಜಯವು ಲಭಿಸದು ಎಂದು ಅದಕ್ಕಾಗಿಯೇ ದೊಡ್ಡವರು ಹೇಳಿರುವುದು. ಅಸಲಿಗೆ ಪುರುಷಪ್ರಯತ್ನವನ್ನೂ ಪರಿಶೀಲಿಸಿ ನೋಡಿದಾಗ ಇದರಲ್ಲೂ ದೈವಲೀಲೆಯೇ ಕಂಡುಬರುತ್ತದೆ. ಇಲ್ಲದಿದ್ದರೆ ಈ ಹೋರಿಗಳು ಹೀಗೆ ಆಕಸ್ಮಿಕವಾಗಿ ನನ್ನ ಕಣ್ಣಮುಂದೆಯೇ ಅಸುನೀಗುತ್ತಿದ್ದವೇ?"
         "ಏನಾದರೇನು? ನನಗಿದ್ದ ಅಲ್ಪಸ್ವಲ್ಪ ಸಂಪದವೂ ಈ ವಿಧವಾಗಿ ನಾಶವಾಗಿದ್ದರಿಂದ ಒಂದು ವಿಧವಾಗಿ ಒಳಿತೇ ಆಯಿತು. ಇದರಿಂದ ನನಗೆ ವೈರಾಗ್ಯ ಪ್ರಾಪ್ತಿಯಾಯಿತು."
         "ಮಾನವನು ಯಾವ ಯಾವ ಕೋರಿಕೆಗಳನ್ನು ಕೈಬಿಡುತ್ತಾನೊ, ಆಗ ಆಯಾ ದಶೆಗಳಲ್ಲಿ ಸುಖವು ಲಭಿಸುತ್ತದೆ. ಕಾಮಕ್ರೋಧಗಳ ಕಾರಣದಿಂದಲೇ ದುಃಖವು ಉಂಟಾಗುತ್ತದೆ. ನಿರ್ಲಜ್ಜತೆ ಏರ್ಪಡುತ್ತದೆ. ಮನಶ್ಶಾಂತಿ ನಶಿಸುತ್ತದೆ".
        "ಗ್ರೀಷ್ಮಕಾಲದಲ್ಲಿ ತಣ್ಣನೆಯ ನೀರಿರುವ ಸರೋವರ ಪ್ರಾಂತಗಳನ್ನು ಹುಡುಕಿಕೊಂಡು ಜನರು ಹೋಗುವಂತೆ, ನಾನು ಕೂಡಾ ಮನಸ್ಸು ಬ್ರಹ್ಮದಲ್ಲಿ ನೆಲೆಗೊಳ್ಳುವಂತೆ ಪ್ರಯತ್ನಿಸುತ್ತೇನೆ. ಅದರಿಂದ ನನಗೆ ಶಾಂತಿಯು ಲಭಿಸುತ್ತದೆ. ಆಗ ನನಗೆ ಎಣೆಯಿಲ್ಲದ ಸುಖವುಂಟಾಗುತ್ತದೆ" ಎಂದು ಆ ಮುನೀಶ್ವರನು ಮನಸ್ಸಿನಲ್ಲಿ ಅಂದುಕೊಂಡನು. 
          "ಆದ್ದರಿಂದ ಧರ್ಮನಂದನನೇ! ಪ್ರಪಂಚದಲ್ಲಿ ಇದ್ದುಕೊಂಡೂ ಎಲ್ಲಾ ಕಾರ್ಯಗಳಲ್ಲಿ ಕೌಶಲ್ಯದಿಂದ ವ್ಯವಹರಿಸುತ್ತಾ ಇದ್ದಾಗಲೂ ಸಹ ಮನುಷ್ಯನು ಸುಖವಾಗಿ ಇರಬೇಕೆಂದರೆ ನಿಷ್ಕಾಮ ಭಾವನೆಯನ್ನು ರೂಢಿಸಿಕೊಳ್ಳಬೇಕು" 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಗಳಕೃಪೆ:  ಗೂಗಲ್
 
ಹಿಂದಿನ ಲೇಖನ ಭಾಗ - ೧೬ ಭೀಷ್ಮ ಯುಧಿಷ್ಠಿರ ಸಂವಾದ: ನಾಡೀಜಂಘನ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AC-...
 

Rating
No votes yet

Comments

Submitted by makara Sun, 10/14/2018 - 20:15

ಈ ಲೇಖನದ ಮುಂದಿನ ಭಾಗ - ೧೮ ಭೀಷ್ಮ ಯುಧಿಷ್ಠಿರ ಸಂವಾದ: ಬ್ರಹ್ಮದತ್ತ ಪೂಜನಿ ಸಂವಾದ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AE-...